ಐದು ವರ್ಷ ಬೆಳ್ಳಿತೆರೆಯಿಂದ ದೂರವಿದ್ದ ನಟ ಕೋಮಲ್ ತೆರೆಯಲ್ಲಿ ಎರಡನೇ ಇನಿಂಗ್ಸ್ ಆರಂಭಿಸಿದ್ದಾರೆ. ಹಾಸ್ಯಪಾತ್ರಗಳಿಂದ, ತಮ್ಮ ಹಾವಭಾವಗಳಿಂದಲೇ ಪ್ರೇಕ್ಷಕರನ್ನು ಸೆಳೆಯುತ್ತಿದ್ದ ಕೋಮಲ್ ಎರಡನೇ ಇನಿಂಗ್ಸ್‌ನ ಮೊದಲ ಚಿತ್ರದಲ್ಲಿ ಪ್ರೇಕ್ಷಕರ ಚಪ್ಪಾಳೆಯ ರನ್ ಗಿಟ್ಟಿಸಲು ಪ್ರಯತ್ನಿಸಿದ್ದಾರೆ.
ಧರಣಿ ಮಂಡಲ ಎಂಬ ಗ್ರಾಮ ನಾಯಕ ‘ಸತ್ಯ ಹರಿಶ್ಚಂದ್ರ’ನ (ಕೋಮಲ್ ಕುಮಾರ್) ಹುಟ್ಟೂರು. ಹೆಸರಿಗೆ ತದ್ವಿರುದ್ಧವಾಗಿದೆ ಈತನ ಗುಣ. ಬಾಯಿ ತೆಗೆದರೆ ಸುಳ್ಳು ಹೇಳುವ, ಕಪಟ ಬುದ್ಧಿಯ ಈತ ಕೆ.ಡಿ.ನಾಗಪ್ಪನ ಪುತ್ರ. ಕೆ.ಡಿ.ನಾಗಪ್ಪ ನಟ ವಜ್ರಮುನಿ ನಿಭಾಯಿಸಿದಂತಹ ಪಾತ್ರದ ಗುಣಗಳುಳ್ಳ ವ್ಯಕ್ತಿ. ಅದೇ ಗ್ರಾಮಕ್ಕೆ ಪಶುವೈದ್ಯೆಯಾಗಿ ಬರುವ ನಾಯಕಿಯ ಜೊತೆ ಸತ್ಯ ಹರಿಶ್ಚಂದ್ರ ಪ್ರೀತಿಯಲ್ಲಿ ಬೀಳುತ್ತಾನೆ. ಕಪಟ ಬುದ್ಧಿಗೆ ಹೆಸರು ಮಾಡಿರುವ ಸತ್ಯ ಹರಿಶ್ಚಂದ್ರನಿಗೆ ಕನಸಿನಲ್ಲಿ ಊರ ಗ್ರಾಮ ದೇವತೆ ಬಂದು ‘ಸುಳ್ಳು ಹೇಳಿದರೆ ನೀನು ಪ್ರೀತಿಸುವವರು ಸಾಯುತ್ತಾರೆ’ ಎಂದು ಶಪಿಸಿದ ಬಳಿಕ ಚಿತ್ರದ ಕಥೆ ತಿರುವು ಪಡೆಯುತ್ತದೆ.
ಇದು ಸಿದ್ಧಸೂತ್ರಗಳನ್ನು ಇಟ್ಟುಕೊಂಡು ಹೆಣೆದ ಸಿನಿಮಾ. ಮೂರ್ನಾಲ್ಕು ಫೈಟ್ಸ್, ಒಂದು ಪ್ಯಾಥೋ ಹಾಡು, ಡ್ಯುಯೆಟ್ ಹಾಡು, ಡಬಲ್ ಮೀನಿಂಗ್ ಸಂಭಾಷಣೆ ಎಂಬ ಸಿದ್ಧಸೂತ್ರ ಬಿಟ್ಟು ನಿರ್ದೇಶಕರು ಹೊಸ ಹೆಜ್ಜೆ ಇಟ್ಟಿಲ್ಲ. ಹಾಸ್ಯ ಪ್ರಧಾನ ಚಿತ್ರವಾದರೂ ನಗು ಉಕ್ಕಿಬರುವಂತಹ ಸಂಭಾಷಣೆಗಳಾಗಲಿ ಅಥವಾ ದೃಶ್ಯಗಳ ಸಂಖ್ಯೆ ಇಲ್ಲಿ ವಿರಳ. ಮೊದಲಾರ್ಧದಲ್ಲಿ ಗ್ರಾಮಕ್ಕೆ ಶಾಸಕರನ್ನು ಕರೆತರುವ ದೃಶ್ಯಗಳು, ಬಳಿಕದ ಚಿತ್ರಕಥೆಯನ್ನು ಎಳೆದಾಡಲಾಗಿದೆ. ಇದರಿಂದ ಕಥೆಯೇ ಹಾದಿತಪ್ಪಿದ ಅನುಭವ. ಚಿತ್ರದುದ್ದಕ್ಕೂ ಡಬಲ್ ಮೀನಿಂಗ್ ಸಂಭಾಷಣೆಗಳನ್ನು ಅನಗತ್ಯವಾಗಿ ತುರುಕಲಾಗಿದೆ. ಶಿವರಾಜ್ ಕೆ.ಆರ್.ಪೇಟೆ ಹಾಗೂ ಕೋಮಲ್ ಇರುವ ಮದುವೆ ಮಾತುಕತೆ ದೃಶ್ಯವೊಂದು ಹಾಸ್ಯಮಯವಾಗಿ ಮೂಡಿಬಂದಿದೆ.
ಕೆ.ಡಿ.ನಾಗಪ್ಪ ಎಂಬ ವಜ್ರಮುನಿಯ ಪಾತ್ರದಲ್ಲಿ ಕೋಮಲ್ ಜೀವಿಸಿದ್ದಾರೆ. ವಜ್ರಮುನಿಯಂತೆ ಕೋಮಲ್ ಅವರ ಹಾವಭಾವಗಳು ಮೂಡಿಬಂದಿದೆ. ಆ ಪಾತ್ರಕ್ಕೆ ಮಾತಿನ ಪೋಣಿಕೆಯೂ ಸೂಕ್ತವಾಗಿದೆ. ಅಸ್ಪೃಶ್ಯತೆ, ಜಾತಿ ತಾರತಮ್ಯ, ಆಸ್ತಿಕ–ನಾಸ್ತಿಕ, ಗ್ರಾಮದೊಳಗಿನ ರಾಜಕೀಯ ಮುಂತಾದ ವಿಷಯಗಳನ್ನು ಚರ್ಚಿಸುವ ಪ್ರಯತ್ನವನ್ನು ನಿರ್ದೇಶಕರು ಇಲ್ಲಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.