ತಂದೆ ಎಂಬ ಪಾತ್ರವನ್ನು ಮುಖ್ಯಭೂಮಿಕೆಯಲ್ಲಿಟ್ಟುಕೊಂಡು ಅದರ ಸುತ್ತ ಸಿನಿಮಾಗಳನ್ನು ಹೆಣೆದವರು ಸಂತೋಷ್ ಆನಂದ್‌ರಾಮ್. ‘ಯುವ’ ಚಿತ್ರವೂ ಇಂತಹದೇ ಕಥೆಯೊಂದನ್ನು ಹೊತ್ತುಬಂದಿದೆ. ಆದರೆ ಸದೃಢವಾದ ಕಥೆಯೊಂದಿಲ್ಲದೆ ಹಲವು ಸಿನಿಮಾಗಳ ಮಿಶ್ರಣದಂತೆ ಇದು ಭಾಸವಾಗುತ್ತದೆ. ಭಾವನಾತ್ಮಕ ವಿಷಯಗಳು ಸಿನಿಮಾದಲ್ಲಿದ್ದರೂ ಅತಿಯಾದ ಹೊಡೆದಾಟ ಚಿತ್ರದ ಕಥೆಯನ್ನು ಹಳಿತಪ್ಪಿಸಿದೆ.
ಚಿತ್ರದ ನಾಯಕ ‘ಯುವ’(ಯುವ ರಾಜ್‌ಕುಮಾರ್) ಮಧ್ಯಮ ವರ್ಗದ ಯುವಕ. ಮಂಗಳೂರಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿ. ಆತನ ಪ್ರೇಯಸಿ ‘ಸಿರಿ’(ಸಪ್ತಮಿ ಗೌಡ). ಅಲ್ಲಿ ಸ್ಥಳೀಯ ಹುಡುಗರಿಗೂ, ಹಾಸ್ಟೆಲ್‌ನಲ್ಲಿರುವ ಹೊರಜಿಲ್ಲೆಯ ಹುಡುಗರ ನಡುವೆ ಜಗಳ. ತನ್ನ ಐಷಾರಾಮಿ ಬೈಕ್ ಹಾನಿಗೊಳಿಸಿದ ಸ್ಥಳೀಯ ವಿದ್ಯಾರ್ಥಿಗಳ ಮೇಲೆ ‘ಯುವ’ ಮುಗಿಬೀಳುತ್ತಾನೆ. ಇಲ್ಲಿಂದ ಗ್ಯಾಂಗ್‌ವಾರ್. ಹಾಸ್ಟೆಲ್ ಹುಡುಗರಿಗೆ ‘ಯುವ’ ನಾಯಕ. ಧೂಮಪಾನ, ಮದ್ಯಪಾನ ಇಲ್ಲಿ ಅನಿಯಮಿತ. ಕುಸ್ತಿಪಟುವಾಗಿದ್ದ ‘ಯುವ’ ಏಕೆ ಹೀಗಾಗುತ್ತಾನೆ? ಸನ್ನಿವೇಷವೊಂದು ಆತನನ್ನು ಬದಲಾಯಿಸುತ್ತದೆಯೇ? ಎನ್ನುವುದು ಚಿತ್ರದ ಮುಂದಿನ ಕಥೆ.
ನಿರ್ದೇಶಕರು ‘ಯುವ’ ಎಂಬ ಪಾತ್ರವನ್ನು ತೆರೆಯಲ್ಲಿ ಸ್ಥಾಪಿಸಲು ಬರೆದ ಚಿತ್ರಕಥೆಯು ಚಿತ್ರದ ಮೊದಲಾರ್ಧ. ಇದು ಬರೀ ಹೊಡೆದಾಟದಿಂದ ಕೂಡಿದೆ. ಸೂತ್ರ ಕಿತ್ತ ಗಾಳಿಪಟದಂತೆ ಚಿತ್ರಕಥೆ ಎತ್ತೆತ್ತಲೋ ಸಾಗುತ್ತದೆ. ಹಿನ್ನೆಲೆ ಸಂಗೀತ, ಸಂಭಾಷಣೆಗಳಿಗಿಂತ ಹೆಚ್ಚು ಕಿವಿಗಪ್ಪಳಿಸುತ್ತವೆ. ಪಾತ್ರಗಳು ಕಿರುಚುತ್ತಲೇ ಇರುತ್ತವೆ. ಮಂಗಳೂರಿನ ಸ್ಲ್ಯಾಂಗ್ ಬಳಕೆ, ದೇಹಭಾಷೆ ವಾಸ್ತವಕ್ಕಿಂತ ಭಿನ್ನ.
ಮಧ್ಯಂತರದ ಬಳಿಕ ಸಿನಿಮಾದ ಚಿತ್ರಣ ಬದಲಾಗುತ್ತದೆ. ಭಾವಾನತ್ಮಕ ಕಥೆಯೊಂದು ಪಾತ್ರಗಳನ್ನು ನಡೆಸಿಕೊಂಡು ಹೋಗುತ್ತದೆ. ದ್ವಿತೀಯಾರ್ಧದಲ್ಲಿ ಲಾಜಿಕ್ ಇಲ್ಲದ ಕೆಲ ದೃಶ್ಯಗಳು ಇದ್ದರೂ, ಕಥೆಯ ಕಾರಣದಿಂದ ಸಿನಿಮಾ ಹಳಿಗೆ ಬರುತ್ತದೆ. ಫುಡ್ ಡೆಲಿವರಿ ಬಾಯ್ಸ್ ಕಥೆ, ವ್ಯಥೆ ಮೂಲಕ ನಿರುದ್ಯೋಗದ ಅಂಶವನ್ನು ಉಲ್ಲೇಖಿಸಲಾಗಿದೆ. ಚಿತ್ರದ ನಾಯಕ ಕುಸ್ತಿಪಟು ಆಗಿದ್ದರೂ ಅದನ್ನು ಸೂಕ್ತವಾಗಿ ತೋರ್ಪಡಿಸುವ ದೃಶ್ಯಗಳಿಲ್ಲ. ಕ್ಲೈಮ್ಯಾಕ್ಸ್‌ನಲ್ಲಿ ಕುಸ್ತಿ ಪಂದ್ಯದ ದೃಶ್ಯಗಳಿದ್ದರೂ ಆಸ್ವಾದಿಸುವ ಅಂಶಗಳು ಅದರಲ್ಲಿ ಇಲ್ಲ. ‘ತೋರಿಸಬೇಕು’ ಎನ್ನುವುದಕ್ಕಷ್ಟೇ ಇದು ಸೀಮಿತವಾಗಿದೆ. ‘ದಂಗಲ್’ನ ಕ್ಲೈಮ್ಯಾಕ್ಸ್‌ಗೆ ಇದು ಹೋಲಿಕೆಯಾಗುತ್ತದೆ. ಚಿತ್ರದಲ್ಲಿ ಹಾಸ್ಯದ ಕೊರತೆಯಿದೆ. ಕ್ಯಾಂಪಸ್ ದೃಶ್ಯಗಳಿದ್ದರೂ, ಅವು ಕೇವಲ ಹೊಡೆದಾಟಕ್ಕೆ ಬಳಕೆಯಾಗಿವೆ. ಅಂತಹ ಸಂದರ್ಭದಲ್ಲೂ ಕಾಲೇಜಿನ ಪ್ರಾಂಶುಪಾಲರಾಗಿ ಗೋಪಾಲ್ ದೇಶಪಾಂಡೆ ದೃಶ್ಯವೊಂದರಲ್ಲಿ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತಾರೆ.
ಅಪ್ಪನ ಪಾತ್ರದಲ್ಲಿ ಅಚ್ಯುತ್ ಕುಮಾರ್ ಜೀವಿಸಿದ್ದಾರೆ. ಅದು ಅವರಿಗೆ ಹೊಸದೇನಲ್ಲ ಎನಿಸುವಂತಿದೆ. ಯುವ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅವರಿಗೆ ಆ್ಯಕ್ಷನ್ ಜಾನರ್ ಸಿನಿಮಾಗಳಲ್ಲಿ ಭವಿಷ್ಯವಿದೆ ಎನ್ನುವುದಕ್ಕೆ ಸಾಕ್ಷ್ಯದಂತಿದೆ ‘ಯುವ’ ಸಿನಿಮಾ. ಪುನೀತ್ ರಾಜ್‌ಕುಮಾರ್ ಅವರ ಸಿಗ್ನೇಚರ್ ಫೈಟ್ಸ್ ಹಾಗೂ ಆ್ಯಕ್ಷನ್‌ಗಳನ್ನು ಇಲ್ಲಿ ಕಾಣಬಹುದು. ‘ಅಪ್ಪು’ವಿಗೆ ಕನೆಕ್ಟ್ ಆಗುವ ಅಂಶಗಳೂ ಸಿನಿಮಾದಲ್ಲಿವೆ. ಈ ಸಿನಿಮಾದಲ್ಲಿ ಗಟ್ಟಿಯಾದ ಕಥೆಯಿಲ್ಲದ ಕಾರಣ ಪೂರ್ಣಪ್ರಮಾಣದ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಲು ಅವರಿಗಿಲ್ಲಿ ಸಾಧ್ಯವಾಗಿಲ್ಲ ಎಂಬಂತೆ ಭಾಸವಾಗುತ್ತದೆ. ಸಪ್ತಮಿ, ಸುಧಾರಾಣಿ, ಹಿತಾ, ಗೋಪಾಲ್ ದೇಶಪಾಂಡೆ, ಗಿರಿರಾಜ್ ತಮ್ಮ ಪಾತ್ರಗಳನ್ನು ಸೂಕ್ತವಾಗಿ ನಿಭಾಯಿಸಿದ್ದಾರೆ. ‘ಅಪ್ಪುಗೆ’ ಹಾಗೂ ‘ಕವಿತೆ..ಕವಿತೆ..’ ಹಾಡುಗಳು ಅರ್ಥಗರ್ಭಿತವಾಗಿ, ಇಂಪಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.