ಚಿತ್ರ: ಯುವರತ್ನ (ಕನ್ನಡ)
ನಿರ್ಮಾಣ: ವಿಜಯ್ ಕಿರಗಂದೂರ್
ನಿರ್ದೇಶನ: ಸಂತೋಷ್ ಆನಂದ್‌ರಾಮ್
ತಾರಾಗಣ: ಪುನೀತ್ ರಾಜ್‌ಕುಮಾರ್, ಸಯೇಶಾ, ಡಾಲಿ ಧನಂಜಯ್, ಪ್ರಕಾಶ್ ರೈ, ಸಾಯಿಕುಮಾರ್, ಅಚ್ಯುತ್ ಕುಮಾರ್, ಅವಿನಾಶ್, ರಂಗಾಯಣ ರಘು.
‘ಫಸ್ಟ್ ಬೆಂಚಲ್ಲಿ ಕೂತರೆ ಬರೀ ಬೋರ್ಡ್ ಕಾಣತ್ತೆ. ಲಾಸ್ಟ್ ಬೆಂಚಲ್ಲಿ ವರ್ಲ್ಡೇ ಕಾಣತ್ತೆ’ ನಾಯಕ ಹೊಡೆಯುವ ಸಂಭಾಷಣೆಯ ಈ ತುಣುಕು ಕರತಾಡನಕ್ಕೆ ಪಕ್ಕಾಗುವ ಮಿಂಚುಮಾತಷ್ಟೇ ಅಲ್ಲ, ಬದುಕಿನ ಮೌಲ್ಯವೊಂದನ್ನು ಅರುಹುವ ನುಡಿಮುತ್ತೂ ಹೌದು. ರಾಜ್‌ಕುಮಾರ್ ಚಿತ್ರಗಳಲ್ಲಿ ‘ಸಂದೇಶ ಪ್ರಜ್ಞೆ’ಯೊಂದು ಇರುತ್ತಿದ್ದುದನ್ನು ಕಂಡಿದ್ದೇವೆ. ಪುನೀತ್ ರಾಜ್‌ಕುಮಾರ್ ಕೂಡ ಪ್ರಜ್ಞಾಪೂರ್ವಕವಾಗಿ ಅಂಥದೊಂದು ಹೊಣೆಗಾರಿಕೆಯ ಮೆರವಣಿಗೆಗೆ ತಮ್ಮನ್ನು ಒಡ್ಡಿಕೊಂಡಿರುವ ಸಂಗತಿ ‘ಯುವರತ್ನ’ದಲ್ಲಿ ಢಾಳಾಗಿ ಕಾಣುತ್ತದೆ. ಫೋಕಸ್ ಲೈಟ್ ಅಡಿ ಜನಪ್ರಿಯ ನಾಯಕನೊಬ್ಬನನ್ನು ನಿಲ್ಲಿಸಿ, ಭಾವತೀವ್ರತೆಯ ಚಿತ್ರಕಥೆಯನ್ನು ಹೇಗೆ ಕಟ್ಟಬೇಕು ಎಂಬ ಇನ್ನೊಂದು ಪ್ರಾತ್ಯಕ್ಷಿಕೆಯನ್ನು ನಿರ್ದೇಶಕ ಸಂತೋಷ್ ಆನಂದ್‌ರಾಮ್ ನೀಡಿದ್ದಾರೆ.
ಚಿತ್ರದ ಮೊದಲರ್ಧದಲ್ಲಿ ಹಾಡು, ಕುಣಿತ, ಹೊಡೆದಾಟ, ಸಸ್ಪೆನ್ಸ್, ಪ್ರೇಮಪಲ್ಲವಿಯಂಥ ಒಗ್ಗರಣೆಯ ಘಮ ಮೂಗಿಗೆ ಅಡರುತ್ತದೆ. ಎರಡನೇ ಭಾಗ ಅನಾವರಣಗೊಳಿಸುವುದು ಅಸಲಿ ಖಾದ್ಯದ ರುಚಿಯನ್ನು. ಮೊದಲು ಬಿಜಿಎಂನ ದೊಡ್ಡ ಸದ್ದು ಕೇಳಿಸಿಕೊಂಡ ಕಿವಿಗಳಿಗೆ ಎರಡನೇ ಅರ್ಧದಲ್ಲಿ ನಾಕುತಂತಿಯ ನಾದದಲೆ. ತೆರೆತುಂಬ ನಾಯಕನೇ ಆವರಿಸಿಕೊಳ್ಳುವಂತೆ ತೋರಿಸಿ, ಪ್ರೇಕ್ಷಕರನ್ನು ಕುರ್ಚಿ ಮೇಲೆ ಭದ್ರವಾಗಿ ಕೂರುವಂತೆ ಮಾಡಿ, ಆಮೇಲೆ ಶೈಕ್ಷಣಿಕ ಸಮಸ್ಯೆಯೊಂದರ ಭಾವುಕ ಕಥೆಯನ್ನು ತಲೆನೇವರಿಸುವಂತೆ ಹೇಳುವ ಚಿತ್ರಕಥಾ ವಿನ್ಯಾಸವನ್ನು ನಿರ್ದೇಶಕರು ಮಾಡಿದ್ದಾರೆ. ಮುನ್ನುಡಿಯಲ್ಲಿ ಎದ್ದುಕಾಣುವ ನಾಯಕ, ನಡುಘಟ್ಟದಲ್ಲಿ ಎರಡು ಹೆಜ್ಜೆ ಹಿಂದೆ ನಿಂತು ಉಳಿದ ಪಾತ್ರಗಳಿಗೆ ನೆರಳಾಗುವ ಕಥನಕ್ರಮ ಆಸಕ್ತಿಕರ. ಪಂಚ್ ಡೈಲಾಗ್ ಹೊಡೆಸುವುದರಲ್ಲೂ ನಿರ್ದೇಶಕರದ್ದು ನಿಯಂತ್ರಿತ ಆಟ. ಅಣ್ಣಾವ್ರು, ಚಿ. ಉದಯಶಂಕರ್ ಅವರ ಹಳೆಕಾಲದ ನೆನಪುಗಳನ್ನು ಈ ಹೊತ್ತಿನ ಸಂಭಾಷಣೆಗೆ ಸಮೀಕರಿಸುವ, ಶಿವಣ್ಣನ ‘ಓಂ’ ಚಿತ್ರದ ಗುಂಗನ್ನು ಈ ಕ್ಷಣಕ್ಕೆ ಸಂಪರ್ಕಿಸುವ ಹೃದಯಂಗಮ ಯತ್ನವೂ ಸಂಭಾಷಣೆಗಳಲ್ಲಿದೆ.
ವಿದ್ಯಾರ್ಥಿಯಾಗಿ ಕಾಲೇಜು ಪ್ರವೇಶಿಸುವ ನಾಯಕ, ಶಿಕ್ಷಣ ವ್ಯವಸ್ಥೆಯ ದೊಡ್ಡ ಸಮಸ್ಯೆಯೊಂದರ ಸಿಕ್ಕುಗಳನ್ನು ಬಿಡಿಸುತ್ತಾ ಬೇರೆಯದೇ ಛಾಯೆಗೆ ಹೊರಳಿಕೊಳ್ಳುವ ಬೃಹತ್ ಭಿತ್ತಿಯ ಚಿತ್ರಕಥೆಯ ಸಿನಿಮಾ ಇದು. ಅದರಲ್ಲೇ ಸಸ್ಪೆನ್ಸ್, ನಗೆಚಟಾಕಿ, ನಾಯಕಿಯ ಮುಗ್ಧ ಮುಖ, ಖಳರ ಕೃತ್ರಿಮ, ಪೋಷಕರಿಗೂ ವಿದ್ಯಾರ್ಥಿಗಳಿಗೂ ಬೋಧನೆ, ಮೆಲೋಡ್ರಾಮಾ ಎಲ್ಲದರ ದರ್ಶನವಾಗುತ್ತದೆ.
ವೆಂಕಟೇಶ್ ಅಂಗುರಾಜ್ ಸಿನಿಮಾಟೊಗ್ರಫಿ ದೃಶ್ಯಗಳ ಅರ್ಥವಂತಿಕೆಯನ್ನು ಹೆಚ್ಚಿಸಿದೆ. ಥಮನ್ ಸ್ವರ ಸಂಯೋಜನೆಯಲ್ಲಿ ‘ಅಲಾ ವೈಕುಂಠಪುರಮುಲೋ’ ತೆಲುಗು ಚಿತ್ರದ ಪಲುಕುಗಳು ಅಲ್ಲಲ್ಲಿ ಕಾಣಿಸಿದರೂ ಲಾಲಿತ್ಯಕ್ಕೇನೂ ಕೊರತೆಯಿಲ್ಲ. ಪ್ರಕಾಶ್ ರೈ ಅಭಿನಯದ ಮೂಲಕ ಆವರಿಸಿಕೊಂಡರೆ, ಕುಣಿತ, ಹೊಡೆದಾಟವಷ್ಟೇ ಅಲ್ಲದೆ ನಟನೆಯಲ್ಲಿಯೂ ಪುನೀತ್ ಉತ್ಸಾಹದ ಒರತೆಯಾಗಿ ಹಿಡಿದಿಟ್ಟುಕೊಳ್ಳುತ್ತಾರೆ. ಧನಂಜಯ ಕೊಡುವ ಮಾತಿನ ಪಂಚ್‌ಗಳು ಉಪ್ಪಿನಕಾಯಿಯಂತೆ ರುಚಿಕರ. ನಾಯಕಿ ಸಯೇಶಾ ಸುಂದರವದನದಲ್ಲಿ ಭಾವದ ಗೆರೆಗಳು ಕೊಂಕುವುದಿಲ್ಲ. ನೃತ್ಯದಲ್ಲಿ ಅವರು ನಾಯಕನಿಗೆ ಸರಿಸಮ. ಸಾಯಿಕುಮಾರ್, ಅಚ್ಯುತ್ ಕುಮಾರ್, ರಂಗಾಯಣ ರಘು, ಪ್ರಕಾಶ್ ಬೆಳವಾಡಿ ನಿರ್ವಹಿಸಿರುವ ಸಣ್ಣ ಪಾತ್ರಗಳೂ ರುಜು ಹಾಕುತ್ತವೆ.
ಚಿತ್ರದ ಅಂತಿಮ ಘಟ್ಟದಲ್ಲಿ ಕಾಲೇಜಿನ ಬೆಲ್ಲು ಹೊಡೆಯುವ ಪಾತ್ರಧಾರಿಯನ್ನು ನಾಯಕ ಪುನೀತ್ ಬಿಗಿಯಾಗಿ ತಬ್ಬಿಕೊಳ್ಳುತ್ತಾರೆ. ಜನಪ್ರಿಯ ಚಿತ್ರವೊಂದು ಹೀಗೂ ಬೆಚ್ಚಗಿನ ಅನುಭವ ನೀಡಬಲ್ಲದು ಎನ್ನುವುದಕ್ಕೆ ಸಾಕ್ಷಿಯಾಗುವ ದೃಶ್ಯವಿದು. ಇಂತಹ ಹಲವು ಖುಷಿ ಕೊಡುವ, ಮನ ಅರಳಿಸುವ ಸಂಗತಿಗಳು ಚಿತ್ರದಲ್ಲಿವೆ. ಅನುಕೂಲಸಿಂಧುತ್ವದ ಹಂಗು, ಮೆಲೋಡ್ರಾಮಾದ ಗುಂಗಿನ ಹೊರತಾಗಿಯೂ ಅವೆಲ್ಲ ಜೀರ್ಣವಾಗುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.