ತಮಿಳು ಚಿತ್ರರಂಗದ ಯಶಸ್ವಿ ಚಿತ್ರನಿರ್ದೇಶಕ ಎ.ಆರ್.ಮುರುಗದಾಸ್‌ಗೆ ಮಂಗಳವಾರ 44 ತುಂಬಿತು. ವಿಜಯ್ ಅಭಿನಯದ ‘ಸರ್ಕಾರ್’ ಚಿತ್ರದಲ್ಲಿ ಮುಳುಗಿರುವ ಮುರುಗದಾಸ್ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಮುಂಜಾನೆಯಿಂದಲೂ ಸಾವಿರಾರು ಮಂದಿ ನೆನಪಿಸಿಕೊಳ್ಳುತ್ತಿದ್ದಾರೆ.
‘ಸರ್ಕಾರ್’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿರುವ ನಟಿ ವರಲಕ್ಷ್ಮಿ ಚಿತ್ರೀಕರಣದ ವೇಳೆ ತೆಗೆಸಿಕೊಂಡ ಕೆಲ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.ವಿಜಯ್, ಕೀರ್ತಿ ಸುರೇಶ್ ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು ಗ್ರೂಪ್ ಫೋಟೊದಲ್ಲಿ ಕಾಣಿಸಿಕೊಂಡಿದ್ದಾರೆ. ಮುರುಗದಾಸ್ ಸಹ ವರಲಕ್ಷ್ಮಿಗೆ ಟ್ವಿಟರ್‌ನಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.
ವಿಜಯ್ ಮತ್ತು ಮುರುಗದಾಸ್ ಜತೆಗೂಡಿರುವ ಮೂರನೇ ಚಿತ್ರ ‘ಸರ್ಕಾರ್’. ಇದೊಂದು ಪೊಲಿಟಿಕಲರ್ ಥ್ರಿಲ್ಲರ್ ಆಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ವಿಜಯ್ ಎದುರಾಳಿಯಾಗಿ ರಾಜಕಾರಿಣಿ ಪಾಲ ಕುರುಪಯ್ಯ ಬಣ್ಣ ಹಚ್ಚಿದ್ದಾರೆ. ಸಂಗೀತ ಎ.ಆರ್.ರೆಹಮಾನ್ ಅವರದು.ನಿನ್ನೆ (ಸೆ.24) ಯುಟ್ಯೂಬ್‌ಗೆ ಅಪ್‌ಲೋಡ್ ಆದ ಮೊದಲ ಹಾಡು ‘ಸಿಂತಂಗಾರನ್’ಗೆ ಅಭಿಮಾನಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಒಂದೇ ದಿನದಲ್ಲಿ 48 ಲಕ್ಷ ವ್ಯೂಸ್ ಪಡೆದುಕೊಂಡಿದ್ದು, ಸಾವಿರಾರು ಮೆಚ್ಚುಗೆಯ ಕಾಮೆಂಟ್‌ಗಳು ಹರಿದುಬಂದಿವೆ.
ಬಾಲ್ಯದಿಂದಲೂ ಬಣ್ಣದ ಕನಸು
ಚೆನ್ನೈನಿಂದ 238 ಕಿ.ಮೀ. ದೂರದಲ್ಲಿ ಕಲ್ಲಕುರಿಚಿ ಎಂಬ ಹಳ್ಳಿ. ಅಲ್ಲಿ ಪಾತ್ರೆ ಅಂಗಡಿ ಇಟ್ಟುಕೊಂಡಿದ್ದವರು ಅರುಣಾಚಲಂ. ಅವರಿಗೆ ಏಳು ಮಕ್ಕಳು. ಮೊದಲ ನಾಲ್ವರು ಹೆಣ್ಣು. ಕೊನೆಯ ಮೂವರು ಗಂಡು. ಮೊದಲನೆಯ ಮಗನ ಹೆಸರು ಮುರುಗದಾಸ್. ಅವನಿಗಿನ್ನೂ ಒಂಬತ್ತು ವರ್ಷವಾಗಿತ್ತು; ತರಗತಿಯ ಮಕ್ಕಳನ್ನು ದೊಡ್ಡವರಾದ ಮೇಲೆ ಏನಾಗುವಿರಿ ಎಂದು ಕೇಳಿದಾಗ. ಉಳಿದ ಮಕ್ಕಳು ವೈದ್ಯ, ವಕೀಲ, ಎಂಜಿನಿಯರ್, ಮೇಷ್ಟರು ಆಗುವುದಾಗಿ ಹೇಳಿದರೆ, ಮುರುಗದಾಸ್ ‘ಸಿನಿಮಾ ನಿರ್ದೇಶಕ ಆಗುವೆ’ ಎಂದು ಹೇಳಿದ. ಮೇಷ್ಟರಿಗೆ ಅಚ್ಚರಿ. ಅವನ ಅಪ್ಪನಿಗೆ ಆ ವಿಷಯ ಮುಟ್ಟಿಸಿ, ಮಗನಿಗೆ ಬುದ್ಧಿ ಹೇಳುವಂತೆ ತಾಕೀತು ಮಾಡಿದರು. ಅರುಣಾಚಲಂ ಎಲ್ಲ ತಂದೆಯರಂತೆ ಅಲ್ಲ. ಮಗನ ತಲೆ ನೇವರಿಸಿ, ‘ಸಿನಿಮಾ ಮಾಡುವೆಯಾ? ಮೊದಲು ಸಿನಿಮಾಗಳನ್ನು ನೋಡು. ಕಥೆಗಳನ್ನು ಬರೆ’ ಎಂದು ಕಿಡಿ ಹಚ್ಚಿದರು. 23 ಕಥೆಗಳನ್ನು ಹುಡುಗ ಬರೆದ. ಸಣ್ಣ ಪತ್ರಿಕೆಗಳಲ್ಲಿ ಅವು ಪ್ರಕಟವೂ ಆದವು.
ಪದವಿ ಆದಮೇಲೆ ಮುರುಗದಾಸ್ ಚೆನ್ನೈಗೆ ಗಂಟೂಮೂಟೆ ಕಟ್ಟಿ ನಿಂತರು. ಅಪ್ಪ ತಿಂಗಳ ಖರ್ಚಿಗೆ ಕೊಡುತ್ತಿದ್ದುದು ನಾನೂರು ರೂಪಾಯಿ. ಮದ್ರಾಸ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ಗೆ ಸೇರುವ ಕನಸು ನನಸಾಗಲಿಲ್ಲ. ಧೃತಿಗೆಡದ ಮುರುಗದಾಸ್ ಒಂದು ವರ್ಷ ಕಷ್ಟಪಟ್ಟರು. ಆಮೇಲೆ ಒಂದು ಸಿನಿಮಾಗೆ ಸಹಾಯಕ ನಿರ್ದೇಶಕ ಆಗುವ ಅವಕಾಶ ಸಿಕ್ಕಿತು. ಆಗ ಪರಿಚಿತರಾದವರು ಹೆಸರಾಂತ ಚಿತ್ರ ಬರಹಗಾರ ಪಿ.ಕಲೈಮಾಮಣಿ. ಚಿತ್ರಕಥೆಗಳ ಚರ್ಚೆ ನಡೆಸುವಾಗ ಅದರ ಸಾರಾಂಶ ಬರೆದುಕೊಳ್ಳುವ ಕೆಲಸವನ್ನು ಅವರು ಕೊಟ್ಟರು. ಅರುವತ್ತು ದಾಟಿದ ಹಿರಿಯ ಸಿನಿಮಾ ಚಿಂತಕರೆಲ್ಲಾ ಕುರ್ಚಿಗಳ ಮೇಲೆ ಕುಳಿತು ಮಾತನಾಡುವುದನ್ನು ಕೇಳಿಸಿಕೊಂಡು, ಮುರುಗದಾಸ್ ನೆಲದ ಮೇಲೆ ಕುಳಿತು ಬರೆದುಕೊಳ್ಳಬೇಕಿತ್ತು. ಅವರಿಗೆಲ್ಲಾ ಚಹಾ, ಮದ್ಯಪಾನ, ಕುರುಕಲು ಪೂರೈಸಬೇಕಿತ್ತು. ಎಲ್ಲವನ್ನೂ ಸಹಿಸಿಕೊಂಡ ಮುರುಗದಾಸ್, ಕಮರ್ಷಿಯಲ್ ಸಿನಿಮಾ ವ್ಯಾಕರಣ ಕಲಿತುಕೊಂಡರು.
ಮುರುಗದಾಸ್ ಜೊತೆ ರೂಮ್ ವಾಸಿಯಾಗಿದ್ದ ಉದಯ್ ಶಂಕರ್ ಕೂಡ ನಿರ್ದೇಶಕರಾದರು. ಅವರ ಸಿನಿಮಾದಲ್ಲಿ ಸಹಾಯಕರಾಗಿ ಸ್ವಲ್ಪ ದಿನ ದುಡಿದ ಮೇಲೆ, ಎಸ್.ಜೆ. ಸೂರ್ಯ ತಮಗೆ ನೆರವು ನೀಡಲು ಬುಲಾವು ಕೊಟ್ಟರು. ಅಷ್ಟು ಹೊತ್ತಿಗೆ ‘ದೀನ’ ತಮಿಳು ಸಿನಿಮಾ ಸ್ಕ್ರಿಪ್ಟ್ ಕೈಯಲ್ಲಿತ್ತು. ನಟ ಅಜಿತ್ ಕುಮಾರ್ ಅದನ್ನು ಓದಿದ್ದೇ ಕಾಲ್‌ಷೀಟ್ ಕೊಟ್ಟರು.
ಶಾಲೆಯಲ್ಲಿ ಮೇಷ್ಟರಿಗೆ ತಾನು ಏನಾಗುವೆ ಎಂದು ಹುಡುಗ ಹೇಳಿದ್ದನೋ ಅದು ಆಗಿಯೇ ಸಾಧಿಸಿದ. ‘ಗಜಿನಿ’ (ತಮಿಳು, ಹಿಂದಿ), ‘7ಆಮ್ ಅರಿವು’, ‘ತುಪಾಕಿ’ ಮೇಲಿಂದ ಮೇಲೆ ಹಿಟ್ ಚಿತ್ರಗಳು ಮುರುಗದಾಸ್ ಬಡತನ ನೀಗಿದವು. ನಾಲ್ವರೂ ಅಕ್ಕಂದಿರಿಗೆ ಮದುವೆ ಮಾಡಿ, ಇಬ್ಬರು ತಮ್ಮಂದಿರಿಗೆ ಅಂಗಡಿಗಳನ್ನು ಇಟ್ಟುಕೊಟ್ಟು, ಅಪ್ಪ ಮಾಡಿದ ಸಾಲ ತೀರಿಸಿದ ಮುರುಗದಾಸ್ ಪಾಲಿಗೆ ಈಗಲೂ ತಂದೆಯೇ ನಾಯಕ. 1997ರಲ್ಲಿ ಅಪ್ಪ ಸತ್ತಾಗ ಅವರ ಅಂತ್ಯ ಸಂಸ್ಕಾರಕ್ಕೆ ಹಣ ಹೊಂದಿಸಲು ಕೂಡ ಮುರುಗದಾಸ್ ಕಷ್ಟ ಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.