ಬೆಂಗಳೂರು: ಸಿನಿಮಾ ನಟಿ ಹಾಗೂ ಕನ್ನಡತಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೊಗೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರು ವ್ಯಕ್ತಿಯೊಬ್ಬನನ್ನು ಶನಿವಾರ ಬಂಧಿಸಿದ್ದಾರೆ.
ಆದರೆ ಆರೋಪಿತ ವ್ಯಕ್ತಿಯ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೊಗೆ ಕಾರಣರಾದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ವ್ಯಕ್ತಿಯನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿದ್ದು ಆತನನ್ನು ದೆಹಲಿಗೆ ಕರೆತರಲಾಗುತ್ತಿದೆ ಎಂದು ವರದಿಯಾಗಿದೆ.
ಕಳೆದ ನವೆಂಬರ್‌ನಲ್ಲಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಈ ಬಗ್ಗೆ ರಶ್ಮಿಕಾ ಮಂದಣ್ಣ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಹೊರದೇಶದಲ್ಲಿರುವ ಭಾರತೀಯ ಮೂಲದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೇನ್ಸರ್ ಝಾರಾ ಪಟೇಲ್ ಲಿಫ್ಟ್‌ಗೆ ಪ್ರವೇಶ ಮಾಡುತ್ತಿರುವ ವಿಡಿಯೊ ಇಟ್ಟುಕೊಂಡು ರಶ್ಮಿಕಾ ಮಂದಣ್ಣ ಮುಖ ಜೋಡಿಸಿ ವಿಡಿಯೊ ಮಾಡಿ ಹರಿಬಿಟ್ಟಿದ್ದರು.
ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೊ ಬಗ್ಗೆ ಆಘಾತ ವ್ಯಕ್ತಪಡಿಸಿ ಝಾರಾ ಪಟೇಲ್ ಅವರು, ‘ವಿಡಿಯೊ ನೋಡಿ ನನ್ನ ಮನಸ್ಸು ತೀವ್ರ ಆಘಾತಗೊಂಡಿದೆ’ ಎಂದಿದ್ದಾರೆ. ‘ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರು ಮತ್ತು ಯುವತಿಯರ ಭವಿಷ್ಯದ ಬಗೆಗಿನ ಚಿಂತೆಯನ್ನು ಈ ವಿಡಿಯೊ ಹುಟ್ಟುಹಾಕಿದೆ. ಭವಿಷ್ಯ ನೋಡಿದರೆ ತುಂಬಾ ಭಯವಾಗುತ್ತಿದೆ’ ಎಂದು ಅವರು ಪೋಸ್ಟ್ ಹಂಚಿಕೊಂಡಿದ್ದರು.
ಈ ಬಗ್ಗೆ ರಶ್ಮಿಕಾ ಮಂದಣ್ಣ ಕೂಡ ತೀವ್ರ ಅಸಮಾಧಾನ ಹಾಗೂ ಆಘಾತ ವ್ಯಕ್ತಪಡಿಸಿ ಕ್ರಮಕ್ಕೆ ಆಗ್ರಹಿಸಿದ್ದರು. ಈ ರೀತಿಯ ವಿಡಿಯೊದಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ ಎಂದು X ಹಾಗೂ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.
ತಂತ್ರಜ್ಞಾನವನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ಇದನ್ನು ನೋಡಿದರೆ ಗೊತ್ತಾಗುತ್ತದೆ. ಈ ವಿಚಾರ ನಮ್ಮಲ್ಲಿ ಪ್ರತಿಯೊಬ್ಬರಿಗೂ ಭಯ ತರಿಸಿದೆ ಎಂದಿದ್ದರು. ಶಾಲೆ ಅಥವಾ ಕಾಲೇಜಿನಲ್ಲಿದ್ದಾಗ ಇದು ಸಂಭವಿಸಿದ್ದರೇ ನಾನು ಇದನ್ನು ಹೇಗೆ ನಿಭಾಯಿಸಬಹುದುದಿತ್ತು ಎಂಬುದನ್ನು ನಿಜವಾಗಿಯೂ ಊಹಿಸಲು ಸಾಧ್ಯವಿಲ್ಲ ಎಂದು ಅವರು ಈ ಹಿಂದೆ ಆತಂಕ ವ್ಯಕ್ತಪಡಿಸಿದ್ದರು.
ಡೀಪ್‌ಫೇಕ್ ವಿಡಿಯೊಗಳ ಬಗ್ಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದ್ದರು. ಇಂತಹ ಕೃತ್ಯಗಳನ್ನು ತಡೆಯಲು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕಠಿಣ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದು ಹೇಳಿದ್ದರು.
ಈ ಘಟನೆ ಬಳಿಕ ನಟಿ ಕತ್ರಿನಾ ಕೈಫ್, ಸಾರಾ ತೆಂಡಲ್ಕೂರ್ ಸೇರಿದಂತೆ ಹಲವು ಸೆಲೆಬ್ರಿಟಿಗಳ ಡೀಪ್‌ಫೇಕ್ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.