ಮಾರ್ಚ್ 27 ವಿಶ್ವ ರಂಗಭೂಮಿ ದಿನದಂದು ಕೆ.ಎಚ್. ಕಲಾಸೌಧದಲ್ಲಿ `ರಬ್ಡಿ' ಎಂಬ ಕನ್ನಡ ನಾಟಕವೊಂದು ಪ್ರದರ್ಶನವಾಯಿತು. ಗುಜರಾತಿ ಮತ್ತು ಹಿಂದಿ ಬರಹಗಾರ, ನಾಟಕಕಾರ, ನಿರ್ದೇಶಕ ನೌಶೀಲ್ ಮೆಹತಾ ಹಿಂದಿಯಲ್ಲಿ ಬರೆದ ಸಣ್ಣಕಥೆಯನ್ನು ಅವರೇ ಅರ್ಧ ತಾಸಿನ ನಾಟಕರೂಪ ಮಾಡಿದ್ದರು. ಅದನ್ನು ಇನ್ನೂ ಹಿಗ್ಗಿಸಿ ಕನ್ನಡಕ್ಕೆ ಅನುವಾದಿಸಿ, ಅಳವಡಿಸಿಕೊಂಡಿದ್ದಾರೆ ಹೇಮಲತಾ ಲೋಕೇಶ್ ಮತ್ತು ಎಸ್. ನಿತೀಶ್.
ನಿರ್ದೇಶನದ ಜವಾಬ್ದಾರಿಯ ಜೊತೆಗೆ ಅಭಿನಯವನ್ನೂ ಮಾಡಿದ್ದಾರೆ ಎಸ್. ನಿತೀಶ್. ಇದನ್ನು ರಂಗದ ಮೇಲೆ ಸಾಕಾರಗೊಳಿಸಿದವರು ರಂಗವರ್ತುಲ ತಂಡದವರು. ಈಗಾಗಲೇ ಅವರು ಪ್ರಸನ್ನ ಅವರ `ಕೊಂದವರಾರು', ರಾಘವೇಂದ್ರ ಪಾಟೀಲರ `ತುದಿಯೆಂಬೋ ತುದಿಯಿಲ್ಲ', ಜಯಂತ ಕಾಯ್ಕಿಣಿಯವರ `ಸೇವಂತಿ ಪ್ರಸಂಗ', `ಶಾಲ್ಮಲ', `ಮೋಜಿನ ಸೀಮೆಯಾಚೆ ಒಂದೂರು', `ಊರುಭಂಗ' ಹಾಗೂ `ರಾವಿ ನದಿಯ ದಂಡೆಯಲ್ಲಿ' ಮೊದಲಾದ ಪ್ರಯೋಗಗಳನ್ನು ಮಾಡಿದ್ದಾರೆ.
ಆಧುನಿಕತೆಯ ಉತ್ತುಂಗದಲ್ಲಿ ತೊನೆಯುತ್ತಿರುವ ಮಹಾನಗರಗಳ ಎರಡು ಭಿನ್ನ ವರ್ಗಗಳ ಮುಖಾಮುಖಿಯನ್ನು ಲಘು ಹಾಸ್ಯದ ಮುಖೇನ `ರಬ್ಡಿ' ನಾಟಕ ಸಶಕ್ತವಾಗಿ ಪ್ರೇಕ್ಷಕರಿಗೆ ಮುಟ್ಟಿಸುತ್ತದೆ. ಮಾಹಿತಿ ತಂತ್ರಜ್ಞಾನದಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ದೊಡ್ಡದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತ ಅಗತ್ಯಕ್ಕಿಂತ ಹೆಚ್ಚಿನ ಸಂಬಳ ಪಡೆಯತ್ತಿರುವ ಕಂಪ್ಯೂಟರ್ ಎಂಜಿನಿಯರ್ ದಂಪತಿ, ಮನೆಯ ಒಳಗೆ ತಮ್ಮ ಒಳಗನ್ನೇ ಪರಸ್ಪರ ತಲುಪಲಾಗದೆ ಚಡಪಡಿಸುತ್ತಾರೆ. ವಸ್ತು ಸಂಸ್ಕೃತಿಯ ಭೋಗಾನಂದದಲ್ಲಿ ಜೀವಿಗಳೊಂದಿಗಿನ ಒಡನಾಟವೇ ಅವರಿಗೆ ಇರಿಸುಮುರಿಸು ತರಿಸುತ್ತದೆ; ಉಸಿರುಗಟ್ಟಿಸುತ್ತದೆ.
ನಾಟಕದಲ್ಲಿ ಅಂತಹ ದಂಪತಿ ಒಂದು ಕಡೆಯಾದರೆ, ಹೊಟ್ಟೆಹೊರೆಯುವ ಸಲುವಾಗಿ ದೂರದ ಉತ್ತರ ಕರ್ನಾಟಕದ ಹಳ್ಳಿಯಿಂದ ಗಂಡ, ಅತ್ತೆ ಹಾಗೂ ಮನೆಯಿಂದ ಹೊರದಬ್ಬಿಸಿಕೊಂಡು, ಮಾನಸಿಕವಾಗಿ ಅಸ್ವಸ್ಥಳಾದ ತನ್ನ ವಿಶೇಷ ಮಗು ಪುಟ್ಟಕ್ಕನೊಂದಿಗೆ ಬೆಂಗಳೂರೆಂಬ ಮಹಾನಗರಿಗೆ ಬಂದು ಕಟ್ಟಡ ಕೆಲಸ ಮಾಡುತ್ತಿರುವ ಸಾವಂತ್ರಿ ಇನ್ನೊಂದು ಕಡೆ. ವೃತ್ತಿ ಬದುಕಿನ ತೊಯ್ದೊಟದಲ್ಲಿ ತನ್ನ ಸ್ವಂತ ಮಗುವನ್ನು ತನ್ನ ಬಸಿರಲ್ಲಿ ಹೊರಲಿಚ್ಛಿಸದೆ, ಅದನ್ನು ಹೊತ್ತು ಹೆತ್ತು ಕೊಡುವ ಬಾಡಿಗೆ ತಾಯಿಯ ಹುಡುಕಾಟದಲ್ಲಿರುವಾಗ ಅವರಿಗೆ ಸಿಗುವುದು ಸಾವಂತ್ರಿ.
ಸಾವಂತ್ರಿ ತನ್ನ ವಿಶೇಷ ಮಗು ಪುಟ್ಟಕ್ಕನನ್ನು ವಿಶೇಷ ಶಾಲೆಗೆ ಸೇರಿಸಲು ಬೇಕಾದ ಹಣದ ಸಲುವಾಗಿ ಬಾಡಿಗೆ ತಾಯಿಯಾಗಲು ಒಪ್ಪುತ್ತಾಳೆ. ಬಾಡಿಗೆ ಮಗುವನ್ನು ತನ್ನ ಸ್ವಂತ ಮಗುವೇ ಎಂಬಂತೆ ಬಸಿರಲ್ಲಿ ಹೊತ್ತ ಸಾವಂತ್ರಿಯ ಜೀವನೋತ್ಸಾಹವನ್ನು ಕಂಡ ಮಗುವಿನ ಮಾಲೀಕಳು ಕರುಬುತ್ತಾಳೆ; ಬದುಕಿನ ಯಾವುದೋ ಅದಮ್ಯ ಕ್ಷಣಗಳನ್ನು ತಾನು ಕಳೆದುಕೊಳ್ಳುತ್ತಿದ್ದೇನೆಯೇ ಎಂದು ಕಳವಳಗೊಳ್ಳುತ್ತಾಳೆ. ಕಡೆಗೂ ಸಾವಂತ್ರಿ ಮಗುವನ್ನು ಹೆರುತ್ತಾಳೆ; ವಿಪರ್ಯಾಸವೆಂದರೆ ಅದೂ ಕೂಡ ವಿಶೇಷ ಮಗುವೇ ಆಗಿರುತ್ತದೆ! ಮಗು ವಿಶೇಷವಾದದ್ದು ಎಂದು ಯಾವಾಗ ತಿಳಿಯುತ್ತದೋ ಅದರ ಶ್ರೀಮಂತ ತಂದೆತಾಯಿಗಳು ಮಗುವಿನ ಮುಖವನ್ನೂ ನೋಡಲಿಚ್ಛಿಸದೆ ತಮ್ಮ ಹಣಬಲದಿಂದ ಆಸ್ಪತ್ರೆಯಿಂದಲೇ ಅದನ್ನು ವಿಲೇವಾರಿ ಮಾಡಿಬಿಡುವ ವ್ಯವಸ್ಥೆ ಮಾಡುತ್ತಾರೆ.
ಇದರಿಂದ ಕುದ್ದುಹೋದ ಸಾವಂತ್ರಿ ಈಗಾಗಲೇ ಇರುವ ಮಗುವಿನೊಂದಿಗೆ ಇದನ್ನೂ ಪೊರೆಯುವ ದಿಟ್ಟ ತೀರ್ಮಾನ ತೆಗೆದುಕೊಳ್ಳುತ್ತಾಳೆ. ನಾಲ್ಕು ವರ್ಷಗಳ ಬಳಿಕ ಆ ಮಗುವನ್ನು ಶಾಲೆಗೆ ಸೇರಿಸಲು ಹಣ ಹೊಂದಿಸುವ ಸಲುವಾಗಿ ಮತ್ತೆ ಬಾಡಿಗೆ ತಾಯಿಯಾಗಲು ಆಸ್ಪತ್ರೆಗೆ ಬಂದು ನಿಲ್ಲುವಲ್ಲಿಗೆ ನಾಟಕ ಮುಗಿಯುತ್ತದೆ.
ನಗುನಗಿಸುತ್ತಲೇ ಬದುಕಿನ ಘೋರತೆಯನ್ನು ತೋರಿಸುವ ಪ್ರಯೋಗ, ಅದರ ನವೀನ ವಸ್ತುವಿನಿಂದ, ಸಂಘರ್ಷದಿಂದ, ತಾಯ್ಗರುಳಿನಿಂದ ಮತ್ತು ಮುದಗೊಡುವ ಮಾತುಗಾರಿಕೆಯಿಂದ ಪ್ರೇಕ್ಷಕರಿಗೆ ತಟ್ಟುತ್ತವೆ. ಆದರೆ ಇನ್ನುಳಿದ ವಿಭಾಗಗಳಲ್ಲಿ ಪ್ರಯೋಗ ಇನ್ನೂ ಹರಳುಗಟ್ಟಬೇಕು.
ರಂಗಸಜ್ಜಿಕೆಯಲ್ಲಿ ಹೊಸತನವಿದ್ದರೂ ಒಂದು ಸಮಗ್ರತೆಯಿಲ್ಲ. ಬರಿ ಚಂದಗಾಣಿಸುವ ಸಲುವಾಗಿ ರಂಗದ ಮೇಲೆ ಚಿತ್ರಿಕೆಗಳನ್ನು, ಪೀಠೋಪಕರಣಗಳನ್ನು ಬಳಸಿಕೊಳ್ಳುವುದಲ್ಲ. ರಂಗಸಜ್ಜಿಕೆಯ ಪ್ರತಿಯೊಂದು ವಸ್ತುವೂ, ವಸ್ತು-ಸಂಘರ್ಷಕ್ಕಂತಲೇ ವಿಶೇಷವಾಗಿ ಆಯ್ದು ಹೆಕ್ಕಿದ್ದಾಗಿರಬೇಕು. ಇನ್ನು ಪ್ರಯೋಗದ ಭಾಷೆಯ ಬಗ್ಗೆ ಇನ್ನಷ್ಟು ಸಮರ್ಪಕತೆಯನ್ನು ಹೊಂದಿದ್ದರೆ ಚೆನ್ನಾಗಿತ್ತು. ಮಂಡ್ಯ, ಉತ್ತರ ಕರ್ನಾಟಕದ ಭಾಷಾ ಸೊಗಡನ್ನು ಇವತ್ತಿನ ಟೀವಿ, ಸಿನಿಮಾಗಳು ಕೇವಲ ಪಾತ್ರಗಳ ವೈಶಿಷ್ಟ್ಯದ ಸಲುವಾಗಿ ಬಳಸಿಕೊಳ್ಳುತ್ತಿವೆಯೇ ಹೊರತು, ಆ ಭಾಷಾ ವೈಖರಿಯನ್ನು ಆಡುವುದರಲ್ಲಿ, ನುಡಿಯುವುದರಲ್ಲಿ ಯಾವ ತಯಾರಿಯನ್ನೂ ನಡೆಸುವುದಿಲ್ಲ. ರಂಗಭೂಮಿಯೂ ಇದೇ ಜಾಡನ್ನು ಹಿಡಿದುಬಿಟ್ಟರೆ ಅದಕ್ಕೂ ಇದಕ್ಕೂ ಏನು ವ್ಯತ್ಯಾಸ ಉಳಿದಂತಾಯಿತು. ಹಾಗಾಗಿ ಸಾಧ್ಯವಾದಷ್ಟು ಆ ಭಾಷೆಯನ್ನು, ಅದರ ಕಾಕುಗಳನ್ನು ಅದರ ಹಿಂದಿನ ಮನಸ್ಥಿತಿಯನ್ನು, ಸಂಸ್ಕೃತಿಯನ್ನು ಆಮೂಲಾಗ್ರವಾಗಿ ಹಿಡಿಯಲು ಯತ್ನಿಸಬೇಕು.
ಮೇಘನಾ ವೆಂಕಟೇಶ್ ಮತ್ತು ಸ್ಪರ್ಶಾ ಕಂಠದಿಂದ ಹೊಮ್ಮಿದ ಹಾಡುಗಾರಿಕೆ (ಸಂಗೀತ) ಹಿತಮಿತವಾಗಿದೆಯಾದರೂ ಸುಗಮಸಂಗೀತದ ಏಕತಾನತೆಯಿಂದ ಬಿಡಿಸಿಕೊಳ್ಳುವಲ್ಲಿ ಯತ್ನಿಸಿದರೆ ಒಳ್ಳೆಯದು.
ಇನ್ನು ಪ್ರಯೋಗದ ಅತಿಮುಖ್ಯ ಅಂಶವೆಂದರೆ ಅದು ನಟರ ಪ್ರದರ್ಶನ-ಅಭಿನಯ. ಎಂಜಿನಿಯರ್ ದಂಪತಿಯಾಗಿ ಶ್ರೀರಕ್ಷಾ ಮತ್ತು ನಿತೀಶ್ ಎಸ್, ಡಾಕ್ಟರ್‌ಗಳಾಗಿ ದೀಪ್ತಿ ಶ್ರೀನಾಥ್ ಮತ್ತು ನಿತಿನ್ ಕೆ. ಶೆಟ್ಟಿ, ಪುಟ್ಟಕ್ಕನಾಗಿ ಪ್ರಕೃತಿ, ವಾರ್ಡ್‌ಬಾಯ್ ಆಗಿ ವಿಜಯಕುಮಾರ್ ಮತ್ತು ಮುಖ್ಯ ಪಾತ್ರವಾದ ಬಾಡಿಗೆ ತಾಯಿ ಸಾವಂತ್ರಿಯಾಗಿ ದೀಪಾ ಅಭಿನಯಿಸಿದರು. ಒಳ್ಳೆಯ ಸಂದೇಶವನ್ನು ಹೊಂದಿರುವ ನಾಟಕ ಇನ್ನೂ ಹೆಚ್ಚುಹೆಚ್ಚು ಪ್ರದರ್ಶನಗಳನ್ನು ಕಾಣುವಂತಾಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.