ಜಗತ್ತಿನ ಕೆಲವು ಭಾಷೆಗಳ ಉತ್ತಮ ಕಥೆಗಳ ಒಂದು ಕಥಾ ಸಂಗ್ರಹ ಮಾಡಿದಾಗ ಅಲ್ಲಿ ಎಲ್ಲಾ ಭಾಷೆಗಳಿಗೆ ಸರಿಸಮಾನವಾದ ಒಂದು ಸಣ್ಣ ಕಥೆಯನ್ನು ತುಳುವಿನಿಂದ ಆರಿಸಿ ಕೊಡಿ ಎಂದು ಯಾರಾದರೂ ಕೇಳಿದರೆ ಆ ಸಂಗ್ರಹಕ್ಕೆ ತುಳು ಭಾಷೆಯಲ್ಲಿ ಪ್ರೋಫೆಸರ್ ರಾಧಾಕೃಷ್ಣ ಅವರ ‘ಶಾರ್ದೋ' (ಶ್ರಾದ್ಧ)ಕಥೆಯನ್ನು ಆರಿಸಿಕೊಂಡರೆ ಆಶ್ಚರ್ಯವಿಲ್ಲ. ಶಾರ್ದೊ ಇಂದಿನ ತುಳು ಸಾಹಿತ್ಯದ ಪ್ರಬುದ್ಧ ಕತೆ.
ಈ ಕಥೆಯಲ್ಲಿ ಅರುವತ್ತು ಎಪ್ಪತ್ತು ವರ್ಷಗಳ ಹಿಂದಿನ ಜೀವನಕ್ರಮವನ್ನು ಇಂದಿನ ಕಣ್ಣಿನಿಂದ ನೋಡುವ ಪ್ರಯತ್ನ ನಡೆದಿದೆ.
ಇತಿಹಾಸ ವರ್ತಮಾನಗಳ ತಾಕಲಾಟ ಭವಿಷ್ಯಕ್ಕೊಂದು ಸಂದೇಶವನ್ನು ಅಳವಡಿಸಿಕೊಂಡ ಪ್ರಯತ್ನ ಶಾರ್ದೊ ಕೃತಿಯೆಂದಾದರೆ ಅದರ ನಾಟಕ ರೂಪಾಂತರ ಇನ್ನೊಂದು ಒಳನೋಟ ಮತ್ತು ವರ್ತಮಾನ - ಇತಿಹಾಸಗಳ ಮುಖಾಮುಖಿಯನ್ನು ತೋರಿಸಲು ಹೊರಟಿದೆ.
ಶಾರ್ದೊ ನಾಟಕ ಶಿವಳ್ಳಿ ತುಳುವನ್ನು ಬಳಸಿಕೊಂಡು ತುಳುವಿನ ವೈವಿದ್ಯತೆಯನ್ನು ತೋರಿಸಿಕೊಟ್ಟಿದೆ. ತುಳು ರಂಗಭೂಮಿಗೆ ಒಂದು ಹೊಸ ಪ್ರಬುದ್ಧತೆಯನ್ನು ತೋರಿಸಿಕೊಟ್ಟಿದೆ ಎಂದರೆ ತಪ್ಪಲ್ಲ.
ಪ್ರೊ. ರಾಧಾಕೃಷ್ಣ ಅವರ ಕಥೆಗೆ ರಂಗರೂಪ ಕೊಡುವಾಗ ಎಲ್ಲಿ ಕೃಷ್ಣಮೂರ್ತಿ ಕವತ್ತಾರ್ ಕಥೆಯ ಸತ್ವವನ್ನು ಕಳೆದುಕೊಂಡು ಬಿಡುತ್ತಾರೋ ಎನ್ನುವ ಅಳುಕು ನನ್ನಲ್ಲಿತ್ತು. ಆದರೆ ನಾಟಕ ನೋಡಿದ ಮೇಲೆ ಕವತ್ತಾರರ ಮೇಲಿಟ್ಟಿದ್ದ ನಂಬಿಕೆ ವ್ಯರ್ಥವಾಗಿಲ್ಲ ಎಂದು ಅನಿಸಿತು. ಕವತ್ತಾರ್ ಈಗಾಗಲೇ ಹಲವಾರು ಸಣ್ಣ ಕಥೆಗಳಿಗೆ ರಂಗರೂಪ ಕೊಟ್ಟು ರಂಗದ ಮೇಲಿರುವ ಕೌಶಲ್ಯ ಮತ್ತು ತಂತ್ರಗಾರಿಕೆಯನ್ನು ಮೆರೆದು ಮೆಚ್ಚುಗೆ ಪಡೆದಿದ್ದಾರೆ. ಉದಾಹರಣೆಗೆ ಕರಿಯಜ್ಜನ ಕಥೆಗಳು. ಆದರೆ ಶಾರ್ದೊ ಅಷ್ಟು ನೇರ ಕಥೆಯಲ್ಲ. ಶಾರ್ದೊ ವರ್ತಮಾನ ಮತ್ತು ಇತಿಹಾಸದ ಮುಖಾಮುಖಿ ಎನಿಸಿದ ಕಥೆ.
ಶ್ರೀಕೃಷ್ಣನ ಅಜ್ಜನ ಪರಿಸರದಲ್ಲಿ ಬೆಳೆದು ಮಂತ್ರ ತಂತ್ರ ಪೂಜೆಗಳ ಮನಸ್ಸಿನ ಮಧ್ಯೆ ಬೆಳೆದು ಆವೃತ್ತದಿಂದ ಹೊರಬಂದು ದೂರದ ಮುಂಬೈಯಲ್ಲಿ ಸಮಾಜದ ಕಟ್ಟುಪಾಡುಗಳನ್ನು ದಿಕ್ಕರಿಸಿ ವಿಧವೆಯನ್ನು ಮದುವೆಯಾಗಿ ಯಜ್ಞೋಪವೀತವನ್ನು ಬಿಸಾಡಿ ಹೊಸತನ್ನು ಅಪ್ಪಿಕೊಂಡ ಮಾಣಿ ಶ್ರೀಕೃಷ್ಣನನ್ನು ಅಜ್ಜನ ಶಾರ್ದೊ ದಶಕರ್ಮ ಕ್ರಿಯೆಗೆ ಆಹ್ವಾನಿಸಿದಾಗ ಅಳುಕದೆ ಅಜ್ಜನ ಋಣ ಸಂದಾಯ ಮಾಡಲು ಶಾರ್ದೊದ ಕಾರ್ಯಕ್ರಿಯೆಯಲ್ಲಿ ಭಾಗವಹಿಸುತ್ತಾನೆ.
ಆ ಕ್ರಿಯೆಯ ಒಂದೊಂದು ಮಂತ್ರಗಳು ಶ್ರೀಕೃಷ್ಣನಿಗೆ ಅಜ್ಜ ಬಾರಿತ್ತಾಯರ ನಿಗೂಢ ಸತ್ಯಗಳನ್ನು ಕಣ್ಣ ಮುಂದೆ ತರುತ್ತಿದ್ದಂತೆಯೇ ಪ್ರೇಕ್ಷಕರ ಮುಂದೆ ಅಜ್ಜನ ಜೀವನ ಅನಾವರಣಗೊಳ್ಳುತ್ತದೆ. ಅಜ್ಜ ಮತ್ತು ನಾರಾಯಣನ (ನಾರಾಯಣ ಭೂತಕಟ್ಟುವ ಪಂಬದನೊ, ಪರವನೋ ಇರಬೇಕು) ತೊಳಲಾಟ ತಾಕಲಾಟಗಳ ಮುಂದೆ ಅಜ್ಜ ಬಾರಿತ್ತಾಯರು ಮತ್ತು ಶಾಂಭವಿಯ ಗುಟ್ಟಿನ ರತಿಕೇಳಿ, ಕೃಷ್ಣನ ಗೆಳತಿ ವಿನುತಾಳಿಂದ ಅವನಿಗೆ ಕಾಮಪ್ರೇಮದ ಮೊದಲ ಪಾಠ ಬಾರಿತ್ತಾಯರು ಶಾಂಭವಿಯ ತೋಳಲ್ಲಿ ಕಾಮದ ಆಟದ ಮಧ್ಯದಲ್ಲೇ ಜೀವ ಬಿಡುವ ವೃತ್ತಾಂತ ಹೀಗೆ ನಾಟಕ ಹಲವು ಸತ್ಯಗಳನ್ನು ವರ್ತಮಾನದೊಂದಿಗೆ ಮುಖಾಮುಖಿಯಾಗಿಸುವುದನ್ನು ಲೀಲಾಜಾಲವಾಗಿ ತೋರಿಸಿಕೊಟ್ಟಿದೆ.
ಈ ನಾಟಕದಲ್ಲಿ ನಟಿಸಿದ ಎಲ್ಲಾ ನಟ ನಟಿಯರು ರಂಗಭೂಮಿಯ ಹಳೆಯ ಹುಲಿಗಳು ಹಾಗಾಗಿ ರಂಗಕ್ರಿಯೆಗೆ ಉತ್ತಮ ಅಭಿನಯದ ಸತ್ವವನ್ನೇ ಒದಗಿಸಿಕೊಟ್ಟಿದ್ದಾರೆ. ಶ್ರೀಪತಿ ಮಂಜನ ಬೈಲು, ಲಕ್ಷ್ಮಿಭಟ್, ಲೂಸಿ ಪಿರೇರಾ ಮುಖ್ಯ ಪಾತ್ರಗಳಲ್ಲಿ ಮಿಂಚಿದರೆ ಸದಾನಂದಭಟ್ಟರು, ಕಾರ್ತಿಕ್ ಕುರುಡೇಲ್ ಮತ್ತು ಅಡ್ಯಂತಾಯರು ನಾಟಕದ ಉಪ್ಪು ಖಾರ ಹುಳಿಯಾಗಿ ನಾಟಕಕ್ಕೆ ಜೀವಕೊಟ್ಟು ತಲೆಮಾರು ಹಿಂದಿನ ಜೀವನಕ್ರಮವನ್ನು ಅತ್ಯುತ್ತಮವಾಗಿ ಪರಿಚಯಿಸಿದ್ದಾರೆ.
ಕೃಷ್ಣಮೂರ್ತಿ ಕವತ್ತಾರ್ ಎಷ್ಟು ಪ್ರಬುದ್ಧ ನಿರ್ದೇಶಕ, ನಟ ಮತ್ತು ವಿನ್ಯಾಸಕಾರ ಎನ್ನುವುದನ್ನು ಈ ನಾಟಕದಲ್ಲಿ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಕನ್ನಡ ರಂಗಭೂಮಿಯಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಕವತ್ತಾರ್ ಬೆಳೆದು ಬಂದ ರೀತಿ ಅವರ ಅದ್ಭುತ ರಂಗ ಪ್ರತಿಭೆಗೆ ಈ ನಾಟಕ ಸಾಕ್ಷಿಯಾಗಿದೆ.
ರಂಗ ಪರಿಕರಗಳಲ್ಲಿ ಸಾಂಕೇತಿಕವಾಗಿದ್ದ ‘ಪಿಂಡ’ ಬದಲಿಸಿದರೆ ಚೆನ್ನಾಗಿತ್ತೇನೋ - ತಲೆಕೆಳಗಾಗಿ ಬೇರುಗಳು ಮೇಲಾಗಿ ನಿಲ್ಲಬೇಕಿದ್ದ ‘ಊರ್ಧ್ವ ಮೊಲ ಪಟದ ಶಾಖಾ' ಕೂಡ ಇನ್ನಷ್ಟು ಚೆನ್ನಾಗಿದ್ದರೆ ಒಳಿತು.
ಕವತ್ತಾರರನ್ನು ಅಶ್ವತ್ಥಾಮ ಸದಾ ಕಾಡುತ್ತಿರುತ್ತಾನೆ. ಈ ನಾಟಕವೂ ಅದಕ್ಕೆ ಅಪವಾದವಲ್ಲ. ಚಿಕ್ಕಪುಟ್ಟ ನೃತ್ಯ ರೂಪಕಗಳು ನಾಟಕವನ್ನು ಸುಂದರವಾಗಿಸಿದೆ. ಯಕ್ಷಗಾನ, ಭೂತ ನಾಟಕಗಳು, ತುಳು ಜೀವನ ಕ್ರಮವನ್ನು ಪರಿಚಯಿಸಿದೆ. ಶ್ರಾದ್ಧದ ಊಟವಂತೂ ಒಂದು ಸಂಸ್ಕೃತಿಯನ್ನು ತೋರಿಸಿದೆ.
ಪ್ರೊ. ರಾಧಾಕೃಷ್ಣ, ಕವತ್ತಾರು ಮತ್ತವರ ರಂಗ ತಂಡ ತುಳುವಿನ ಸಾಧ್ಯತೆಯನ್ನು ಮೆರೆಸಿಕೊಟ್ಟಿದೆ. ನಾನು ವೈಯಕ್ತಿಕವಾಗಿ ಅವರಿಗೆ ತುಳು ಕನ್ನಡಿಗರ ಪರವಾಗಿ ಅಭಿನಂದನೆ ಸಲ್ಲಿಸಬೇಕಾಗಿದೆ.
ಕೊನೆಯ ಮಾತು ನನ್ನ ಹೆಂಡತಿಯದ್ದು ಈ ಅಜ್ಜನ ಹೆಂಡತಿ ನಾಟಕದುದ್ದಕ್ಕೂ ಅಜ್ಜಿಯಾಗಿರಬೇಕಾಗಿತ್ತು. ಮಾಮಿ ಹೇಗಾದಳು? ನನ್ನ ಉತ್ತರ, ಮುದುಕ ಅಜ್ಜ ಎಳೆಯ ಹುಡುಗಿಯನ್ನು ಮದುವೆಯಾದರೆ ಆಕೆ ಮಾಮಿಯೇ ಆಗುತ್ತಾಳೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.