ಇತ್ತೀಚೆಗೆ ರಂಗಶಂಕರದಲ್ಲಿ ರಂಗವರ್ತುಲ ತಂಡ `ನಿಮಿತ್ತ' ಎಂಬ ಕನ್ನಡದ ಹೊಸನಾಟಕವೊಂದು ತನ್ನ ಎರಡನೆಯ ಮತ್ತು ಮೂರನೆಯ ಪ್ರಯೋಗದ ಪ್ರದರ್ಶನ ನೀಡಿತು.
ಟೀವಿ ವಾಹಿನಿಯ ಮೂಲಕ ಜನಪ್ರಿಯರಾದ ನಟ, ನಿರ್ದೇಶಕ ಸೇತೂರಾಮ್ ಸ್ವತಃ ಬರೆದು, ನಟಿಸಿ, ನಿರ್ದೇಶಿಸಿದ ನಾಟಕವಿದು. ಬಿ. ಜಯಶ್ರೀ, ಸಿಹಿ-ಕಹಿ ಚಂದ್ರು, ಎನ್. ಮಂಗಳಾ, ಶ್ವೇತಾ ಎಸ್, ನಂದಿನಿ ಮೂರ್ತಿ ಮತ್ತು ನಿತೀಶ್ ಮೊದಲಾದ ಜನಪ್ರಿಯ ನಟರು ಅಭಿನಯಿಸಿದ್ದಾರೆ. ಎರಡೂ ಪ್ರದರ್ಶನಗಳು ರಂಗಮಂದಿರ ಭರ್ತಿಯಾಗಿ ಟಿಕೇಟು ಸಿಗದೆ ಜನರು ಹೊರಗೆ ಕಾಯುವಂತಾಗಿತ್ತು.
ಆಧುನಿಕ ಮನುಷ್ಯನ ಬದುಕು-ಸತ್ಯ- ಸಂಬಂಧಗಳ ಉಪದ್ವ್ಯಾಪಗಳನ್ನು ಕನ್ನಡದ ನಾಟಕೇತರ ಸಾಹಿತ್ಯಗಳಾದ ಸಣ್ಣಕಥೆಗಳು, ಕಾವ್ಯ, ಕಾದಂಬರಿಗಳು ಶೋಧಿಸಿರುವಂತೆ ನಾಟಕ ಸಾಹಿತ್ಯವು ಹೆಚ್ಚು ಶೋಧಿಸಿದಂತೆ ಕಾಣುವುದಿಲ್ಲ. ಮೊದಲಿನಿಂದಲೂ ಕನ್ನಡದ ನಾಟಕ ಸಾಹಿತ್ಯವು ನೆಚ್ಚಿಕೊಂಡಿರುವುದು ಯಾವುದೋ ಒಂದು ಕಾಲದಲ್ಲಿ ಜರುಗುವ ಮನುಷ್ಯನ ಬದುಕು-ಸತ್ಯ-ಸಂಬಂಧಗಳ ಸ್ಥಿತ್ಯಂತರಗಳನ್ನಲ್ಲ; ಬದಲಾಗಿ ಯಾವತ್ಕಾಲಕ್ಕೂ ಉಳಿಯುವ ಮತ್ತು ಮರುಕಳಿಸುವ ಭೂತ-ವರ್ತಮಾನ-ಭವಿಷ್ಯತ್‌ಗಳನ್ನೆಲ್ಲ ತನ್ನೊಳಗೆ ಗರ್ಭೀಕರಿಸಿಕೊಂಡಿರುವ ಪುರಾಣಸ್ಮೃತಿಕೋಶಗಳನ್ನು.
ಅದು ರಾಮಾಯಣ- ಮಹಾಭಾರತದಂಥ ಪುರಾಣ ಗಳಿರಬಹುದು, ಬುದ್ಧ- ಬಸವ, ಟಿಪ್ಪು-ತುಘಲಕ್, ಗಾಂಧಿ-ಅಂಬೇಡ್ಕರ್, ಭರತ-ಬಾಹುಬಲಿಯಂಥ ಐತಿಹಾಸಿಕ ಪುರಾಣ ವಿರಬಹುದು, ಅಥವಾ ಸಂಗ್ಯಾ-ಬಾಳ್ಯಾ, ಮಾದೇಶ್ವರ- ಮಂಟೇಸ್ವಾಮಿಯರಂಥ ಜಾನಪದ ಪುರಾಣವಿರಬಹುದು.
ಒಟ್ಟಾರೆ ಯಾವತ್ಕಾಲಕ್ಕೂ ಉಳಿಯುವ, ಬಾಳುವ ಸತ್ಯಗಳನ್ನು ಸಾರುವ ಪುರಾಣ ಸ್ಮೃತಿಕೋಶಗಳಿಂದಲೇ ಹೆಚ್ಚು ಕನ್ನಡ ನಾಟಕಸಾಹಿತ್ಯ ತನ್ನ ಸರಕನ್ನು ಪಡೆದಿದೆ. ಮತ್ತು ಅದನ್ನೇ ಆಧುನಿಕ ಪುರಾಣಗಳನ್ನಾಗಿ ಹೇಳುವ ಪ್ರಯತ್ನ ಮಾಡಿದೆ. ಬದಲಾದ ಆಧುನಿಕತೆಯನ್ನು, ಆಧುನಿಕ ಸಂಬಂಧಗಳನ್ನು ಶೋಧಿಸಲು ಅದು ಮೇಲೆ ಉಲ್ಲೇಖಿಸಿದ ಪೌರಾಣಿಕ ಪುರಾಣ, ಐತಿಹಾಸಿಕ ಪುರಾಣ, ಜಾನಪದ ಪುರಾಣ ಕೋಶಗಳಿಂದಲೇ ಸ್ಫೂರ್ತಿ ಪಡೆಯುತ್ತಿತ್ತು ಬಿಟ್ಟರೆ ಸರ್ವಸ್ವತಂತ್ರವಾಗಿ ನಮ್ಮಲ್ಲಿ, ಲಂಕೇಶರ ನಾಟಕಗಳನ್ನು ಬಿಟ್ಟರೆ ಆಧುನಿಕ ನಾಟಕಗಳು ವಿರಳ ಎಂದೇ ಹೇಳಬೇಕು.
ಇತ್ತೀಚೆಗೆ ಪ್ರಕಟವಾದ ಕಂಬಾರರ `ಶಿವರಾತ್ರಿ'ಯು 12ನೇ ಶತಮಾನದ ವಚನಬದುಕಿನ ಬಸವ-ಬಿಜ್ಜಳರ ಕಥಾನಕದ ಮೂಲಕ ಐತಿಹಾಸಿಕ ಪುರಾಣದಿಂದ ಸ್ಫೂರ್ತಿಗೊಂಡಿದ್ದರೆ, ಕಾರ್ನಾಡರ ನಾಟಕ ಬೆಂದಕಾಳು ಆನ್ ಟೋಸ್ಟ್ ಕೂಡ ಶೂದ್ರಕನ ಸಂಸ್ಕೃತ ನಾಟಕ `ಮೃಚ್ಛಕಟಿಕ'ದ ಪರವಶತೆಯಿಂದಲೇ ಹೊಮ್ಮಿದ್ದೆಂದು ಸ್ವತಃ ಕಾರ್ನಾಡರೇ ಹೇಳಿಕೊಂಡಿದ್ದಾರೆ.
ಇನ್ನು ಹೊಸಹೊಸ ನಾಟಕಗಳನ್ನು ಬರೆಯುತ್ತಿರುವ ಕೆ.ವೈ. ನಾರಾಯಣಸ್ವಾಮಿಯವರ `ಅನಭಿಜ್ಞ ಶಾಕುಂತಲ' ಇರಬಹುದು, `ಚಕ್ರರತ್ನ' ಇರಬಹುದು ಎಲ್ಲವೂ ಪುರಾಣೈತಿಹಾಸಿಕ ಸ್ಮೃತಿಕೋಶದಿಂದಲೇ ಆಧುನಿಕತೆಯನ್ನು ಸ್ಪರ್ಶಿಸುವ ನಾಟಕಗಳು. ಕೆ. ವಿ. ಅಕ್ಷರ ಅವರ `ಭಾರತಯಾತ್ರೆ' ನಾಟಕವೂ ಆದಿಶಂಕರಾಚಾರ್ಯರ ಬದುಕಿನ ಕಥೆಯಿಂದ ಸ್ಫೂರ್ತಿಗೊಂಡು ಅದನ್ನು ಆಧುನಿಕ ಪಾತ್ರ-ಪ್ರಪಂಚಕ್ಕೆ ಕಸಿಮಾಡುವುದರ ಮೂಲಕ ಐತಿಹಾಸಿಕ ಪುರಾಣಗಳಿಗೆ ಮರಳಲಾಗಿದೆ.
ಇನ್ನು ರಘುನಂದನ ಅವರ `ಎತ್ತ ಹಾರಿದೆ ಹಂಸ' ನಾಟಕವು `ಕಡ್ಲಿಮಟ್ಟಿ ಸ್ಟೇಶನ್ ಮಾಸ್ಟರ್' ಎಂಬ ಕನ್ನಡ ಜಾನಪದ ಪುರಾಣಸ್ಮೃತಿಕೋಶದಿಂದ ಸ್ಫೂರ್ತಿಗೊಂಡದ್ದು. ಹಾಗೆಂದ ಮಾತ್ರಕ್ಕೆ ಇವ್ಯಾವುವೂ ಆಧುನಿಕ ನಾಟಕವಲ್ಲ ಎಂದರ್ಥವಲ್ಲ. ಎಲ್ಲ ಶ್ರೇಷ್ಠ ನಾಟಕಗಳು, ನಾಟಕಕಾರರು ಮೇಲೆ ಉಲ್ಲೇಖಿಸಿದ ಹಲವು ಥರದ ಪುರಾಣಗಳಿಂದಲೇ ಸ್ಫೂರ್ತಿಗೊಂಡು ತಮ್ಮ ತಮ್ಮ ಕಾಲಮಾನವನ್ನು, ಗುಣಮಾನವನ್ನು, ಭಾವಮಾನವನ್ನು ಮೌಲ್ಯಮಾಪನ ಮಾಡಿದವರು.
ತನ್ನ ಮತ್ತು ತನ್ನ ಸಮುದಾಯದ ಸ್ಮೃತಿಯನ್ನು ತನ್ನ ಮತ್ತು ತನ್ನ ಕೃತಿಗಳ ಮೂಲಕ ಇಡಿಯಾಗಿ ಬದುಕುವುದು ಎಲ್ಲ ಶ್ರೇಷ್ಠ ಲೇಖಕರ ಮುಖ್ಯಗುಣ. ಭಾಸ-ಕಾಳಿದಾಸ-ಶೇಕ್ಸ್‌ಪಿಯರ್-ಬ್ರೆಕ್ಟ್ ಮೊದಲಾದ ನಾಟಕಕಾರರೆಲ್ಲಾ ಹಾಗೆ ಬದುಕಿಬರೆದವರೇ. ಆ ಪರಂಪರೆ ಇಂದಿಗೂ ಮುಂದುವರಿದಿದೆ.
ಆದರೆ ಇಬ್ಸನ್, ಮೋಹನ್ ರಾಕೇಶ್, ಲಂಕೇಶರಂಥ ನಾಟಕಕಾರರು ತಾವು ಬದುಕುತ್ತಿದ್ದ ಬದುಕಿನಿಂದಲೇ ಪಾತ್ರಗಳನ್ನು ಹೊರತಂದು ಬದುಕಿಸುತ್ತಾರೆ. ಇಂಥ ಆಧುನಿಕ ಪಾತ್ರಗಳ ಮೂಲಕ ಐತಿಹಾಸಿಕ, ಜಾನಪದ, ಪುರಾಣ ಕೋಶದಲ್ಲಿನ ಸ್ಮೃತಿಯನ್ನೂ ಮೀರಿದ ಆಧುನಿಕ ಪುರಾಣವೊಂದನ್ನು ಕಟ್ಟಲೆಳೆಸುತ್ತಾರೆ. ಇಂಥ ಆಧುನಿಕ ಪುರಾಣದಲ್ಲಿ ಹೊಮ್ಮಿದ ಪಾತ್ರವೊಂದು ಯಾವುದೇ ಐತಿಹಾಸಿಕ-ಜಾನಪದ-ಪುರಾಣದ ಸ್ಮೃತಿಯ ಪಾತ್ರಗಳಿಗೂ ಕಡಿಮೆಯಿರದಂತೆ ಅವಕ್ಕೆ ಸಮಾನಾಂತರವಾಗಿ ನಿಲ್ಲಬಲ್ಲ ಶಕ್ತಿ ಪಡೆದಿರುತ್ತದೆ.
ಹಾಗೆ ಕನ್ನಡದ ಕಥೆ-ಕಾದಂಬರಿಯ ಹೊಲದಲ್ಲಿ ಈ ರೀತಿಯ ಕೃಷಿ ನಡೆಯುತ್ತಿದ್ದರೂ ನಾಟಕದ ಹೊಲದಲ್ಲಿ ಇಂಥ ಕೃಷಿ ಬಹಳ ವಿರಳವೇ ಸರಿ. ಎಷ್ಟೋ ಯುವ ನಾಟಕಕಾರರು ಇಂಥ ಸಾಹಸಕ್ಕೆ ಕೈಹಚ್ಚಿ ಅನುಭವದ ಕೊರತೆಯಿಂದಲೋ, ಸೂಕ್ತ ಮಾರ್ಗದರ್ಶನದ ಕೊರತೆಯಿಂದಲೋ ಅವಗಣನೆಗೆ ಒಳಗಾಗುತ್ತಿದ್ದಾರೆ.
ಸೇತೂರಾಮರ `ನಿಮಿತ್ತ' ನಾಟಕ ನೋಡಿಯಾದ ಮೇಲೆ, ಮೇಲಿನ ಎಲ್ಲ ವಿಚಾರಗಳೂ ಮನಸ್ಸಿಗೆ ಬಂದದ್ದು. ತಮ್ಮ ಸುದೀರ್ಘವಾದ ಜೀವದ ಮತ್ತು ಲೋಕದ ಅನುಭವದಿಂದ ಸೇತೂರಾಮ್ ನಿಮಿತ್ತ ಎಂಬ ಹೊಸನಾಟಕವನ್ನು ಕನ್ನಡ ನಾಟಕಸಾಹಿತ್ಯಕ್ಕೆ ನೀಡಿದ್ದಾರೆ.
`ಮಂಥನ', `ದಿಬ್ಬಣ', `ಅನಾವರಣ' ಎಂಬ ಟೀವಿ ಧಾರಾವಾಹಿಗಳ ಮೂಲಕ ಕನ್ನಡನಾಡಿನ ಮೂಲೆಮೂಲೆಗೂ ಚಿರಪರಿಚಿತರಾಗಿರುವ ಸೇತೂರಾಮ್ ಅವರು, ಟೀವಿ ಧಾರಾವಾಹಿ ಲೋಕದ ಸಿದ್ಧಪರಂಪರೆಯನ್ನು ಮುರಿದು ಅದಕ್ಕೊಂದು ನಾಟಕೀಯತೆಯನ್ನು ತಂದುಕೊಟ್ಟವರು. ಅರಳುಹುರಿದಂತೆ ಮಾತಿನಚಕಮಕಿ, ಕರುಳು ಇರಿವಂತೆ ನೋಟ-ಅಭಿನಯ, ಬಿಟ್ಟಬಾಣ ಮರ್ಮಕ್ಕೇ ತಾಗುವಂಥ ವಿಚಾರಗಳು ಸೇತೂರಾಮ್ ಅವರ ವಿಶಿಷ್ಟ ಛಾಪು. ಇದೇ ಕಾರಣದಿಂದಾಗಿಯೇ ಅವರ ಧಾರಾವಾಹಿಗಳು ಸಾಮಾನ್ಯ ಜನರಿಗೆ ಇಷ್ಟವೂ ಆಗುತ್ತಿರಲಿಲ್ಲ, ಅರ್ಥವೂ ಆಗುತ್ತಿರಲಿಲ್ಲ.
ಭಾವ-ಬದುಕು-ಸಂಬಂಧಗಳನ್ನು ಹೊಸ (ಒಳ) ದಿಕ್ಕಿನಿಂದ ನೋಡುವ, ಹೊಸ (ಒಳ) ನುಡಿಗಟ್ಟಿನಿಂದ ಆಡುವ, ದೃಶ್ಯಗಳು, ಮಾತುಗಳನ್ನು ಟೀವಿಯೆಂಬ ಜಗದ್ಕಿಂಡಿಯಲ್ಲಿ ಹಲವರಿಗೆ ಅರಗಿಸಿಕೊಳ್ಳಲು ಕಷ್ಟವಾದರೆ, ಕೆಲವು ಸೂಕ್ಷ್ಮಮನಸಿಗರಿಗೆ ಮಾತ್ರ ಅದು ಕಿಚ್ಚಿನಂತೆ ತಾಕೀತು; ಗುಂಗು ಹಿಡಿಸೀತು. ಟೀವಿ ಎಂಬ ದಿನಪತ್ರಿಕೆಯ ಧಾರಾವಾಹಿಗಳಿಗೆ ಮಾತುಗಳನ್ನು ಬರೆದ ನಂತರವೂ `ನಿಮಿತ್ತ' ಎಂಬ ತುಂಬಿದ ನಾಟಕವನ್ನು ಬರೆಯಲು ಸಾಧ್ಯವಾದದ್ದು ಸೇತೂರಾಮರ ಹೆಚ್ಚುಗಾರಿಕೆ.
ಪ್ರಸ್ತುತ ಈ ನಾಟಕವನ್ನು ನಾವು ಸಿದ್ಧಮಾದರಿಯ ನಾಟಕದ ಚೌಕಟ್ಟಿನಲ್ಲಿ ನೋಡಹೊರಟರೆ, ಹಲವರಿಗೆ ಅದು ನಾಟಕವೇ ಅಲ್ಲ ಎನಿಸಬಹುದು; ಅಥವಾ ಟೀವಿ ಧಾರಾವಾಹಿಯ ಮುಂದುವರಿಕೆ ಎನಿಸಬಹುದು.
ನಾಟಕವೇ ಅಲ್ಲ ಎನಿಸಲಿಕ್ಕೆ ಮುಖ್ಯ ಕಾರಣ ನಾವು ಯಾವುದನ್ನು ನಾಟಕ ಎಂದು ರಂಗದಮೇಲೆ ಕಾಣುತ್ತೇವೋ ಅಂತಹದ್ದು ಇದರಲ್ಲಿ ಹೆಚ್ಚೇನೂ ಇಲ್ಲವೇ ಇಲ್ಲ.
ರಂಗಸಜ್ಜಿಕೆ ಇರಬಹುದು, ಸಂಗೀತವಿರಬಹುದು, ಬೆಳಕಿರಬಹುದು, ಬ್ಲಾಕಿಂಗ್-ಕಂಪೋಸಿಷನ್ ಇರಬಹುದು ಯಾವುದೂ ಅಷ್ಟೇನೂ ಗಮನಸೆಳೆಯುವಂತಿಲ್ಲ. ಇನ್ನು ಕೆಲವರಿಗೆ ಟೀವೀ ಧಾರಾವಾಹಿ ಎನಿಸುವಂತೆ ಮಾಡಲು ಇರುವ ಕಾರಣಗಳೆಂದರೆ ಈ ನಾಟಕದಲ್ಲಿ ನಟಿಸಿದ ಬಹುತೇಕರನ್ನು ನಾವು ನೋಡಿರುವುದೇ ಟೀವಿಗಳಲ್ಲಿ; ಮತ್ತು ಟೀವಿ ಧಾರಾವಾಹಿಗಳ ಅತಿಮುಖ್ಯ ಬಂಡವಾಳವಾದ ಮಾತನ್ನೇ ನಾಟಕ ಜೀವಾಳವನ್ನಾಗಿ ಮಾಡಿಕೊಂಡಿರುವುದು. ನಾಟಕಪ್ರಯೋಗವಲ್ಲ ಎಂದು ಕರೆಯದಿರಲು ಬರುವುದಿಲ್ಲ.
ನಿರ್ದೇಶಕರು ಬಹಳ ಉದ್ದೇಶಪೂರ್ವಕವಾಗಿಯೇ ಬಾಹ್ಯ ರಂಗತಂತ್ರಗಳನ್ನು ಅಲಕ್ಷಿಸಿ ಬರೀ ನಟರ ಸಾತ್ವ್ತಿಕ ಮತ್ತು ವಾಚಿಕ ಅಭಿನಯಗಳಿಗೆ ಒತ್ತುನೀಡಲು ಯತ್ನಿಸಿದ್ದಾರೆ. ಸೇತೂರಾಮ್ ಅವರ ಮಾತುಗಳನ್ನು ಬರೀ ನಾವು ಲೌಕಿಕದ ಭಾಷೆಯೊಂದಿಗೆ ಸಮೀಕರಿಸಿಕೊಂಡರೆ ಬರುವುದಿಲ್ಲ. ಅದು ಪಾತ್ರ-ಪಾತ್ರಗಳು ಎದುರುನಿಂತು ಮಾತನಾಡುತ್ತಿದ್ದರೂ ಎಲ್ಲ ಪಾತ್ರಗಳೂ ತನ್ನ ಸ್ವಗತವನ್ನೇ ಆಡುವಂತೆ ತೋರುತ್ತದೆ.
ಮಾತು ಎಂಬುದು ಪಾತ್ರದ ಆಲೋಚನೆಯನ್ನು ಕಾಣಿಸುವ ಅನಿವಾರ್ಯಮಾರ್ಗ ಎಂಬಂತೆ ಸೇತೂರಾಮರ ನಾಟಕದ ಮಾತುಗಳ ತೀರ್ವತೆಯಿರುತ್ತದೆ. ಆ ಮಾತುಗಾರಿಕೆಯ ಲಯ-ವಿನ್ಯಾಸ-ವ್ಯಾಕರಣಗಳು ಕೂಡ ಎಲ್ಲಿಂದಲೋ ಎರವಲು ತಂದದ್ದಲ್ಲ. ಅದು ಸ್ವತಃ ಸೇತೂರಾಮವರಿಗೆ ಮಾತ್ರ ಸಾಧ್ಯವಾಗುವಂಥದ್ದು; ದಕ್ಕಿಸಿಕೊಂಡಿರುವಂಥದ್ದು. ನಾಟಕ ನೋಡುತ್ತ ನೋಡುತ್ತ ಆ ಮಾತುಗಳನ್ನು ಆಡುತ್ತಿರುವ ನಟರ ಭೌತಿಕ ದೇಹವೊಂದು ಅಂತರ್ಗತವಾಗಿ ಬರೀ ಆಲೋಚನೆ, ಮಾತು, ವಿಚಾರ, ಭಾವಗಳಷ್ಟೇ ಕಾಣುವ ತೀವ್ರತೆಯ ಅನುಭವವನ್ನು ಪ್ರಯೋಗ ಉಂಟುಮಾಡುತ್ತದೆ. ಸೇತೂರಾಮ್ ಅವರೇ ಹೇಳಿಕೊಳ್ಳುವಂತೆ ಆದರೆ ಈ ಕಾರಣದಿಂದ `ನಿಮಿತ್ತ' ನಾಟಕವನ್ನು ಪಾತ್ರವೊಂದರ ಮಾತು, ಅದು ಬರೀ ಮಾತಲ್ಲ; ತನ್ನ ಒಳಮನಸಿನ ಮಾತು.
ಹೀಗೆ ಎಲ್ಲ ಪಾತ್ರಗಳೂ ತನ್ನ ಕಡುಖಾಸಗೀ ಒಳಮನಸ್ಸನ್ನು ಬಿಚ್ಚಿಕೊಳ್ಳುತ್ತ ಬಿಚ್ಚಿಕೊಳ್ಳುತ್ತ ಬತ್ತಲಾಗುವದನ್ನು ನೋಡುವ ಪ್ರೇಕ್ಷಕನು ಭಾವಬತ್ತಲೆಯನ್ನು ಅನುಭವಿಸುತ್ತಾನೆ. ಮಧ್ಯಮವರ್ಗದ ಕುಟುಂಬಗಳ ಗಂಡ-ಹೆಂಡಿರ ಸಂಬಂಧಗಳನ್ನು ನಿಮಿತ್ತವಾಗಿಟ್ಟುಕೊಂಡು ಆಧುನಿಕ ಮನುಷ್ಯನ ಬದುಕು-ಮೌಲ್ಯ ಸತ್ಯ-ಸಂಬಂಧಗಳ ಔಚಿತ್ಯಗಳನ್ನು ನಾಟಕ ಪ್ರಶ್ನಿಸುತ್ತಾ, ಅನಾವರಣ ಮಾಡುತ್ತಾ ಹೋಗುತ್ತದೆ.
ಮನುಷ್ಯನ ಕ್ರೌರ್ಯ, ಲಂಪಟತನ, ಸ್ವಾರ್ಥ, ಆತ್ಮಶೋಷಣೆ, ತ್ಯಾಗ, ಬಲಿದಾನ, ಪ್ರೀತಿ, ಎಲ್ಲವೂ ನಾಟಕದಲ್ಲಿ ಹಲವು ಸ್ತರಗಳಲ್ಲಿ ಅನಾವರಣಗೊಳ್ಳುತ್ತದೆ. ಕಡೆಗೆ ಎಷ್ಟೇ ಹೊಲಸಿನಲ್ಲಾದರೂ ಬದುಕಲೇಬೇಕಿರುವ ಆಧುನಿಕ ಮನುಷ್ಯನ ಲಜ್ಜಾಹೀನತೆಯ ಅನಿವಾರ್ಯ ಒಂದು ಕಡೆಯಾದರೆ, ಪರಂಪರೆಗಳಿಂದ ಹಲವು ಬಗೆಯ ಶೋಷಣೆಗೆ ತುತ್ತಾಗಿರುವ ಸ್ತ್ರೀ ಬದುಕು ಇನ್ನೊಂದುಕಡೆ. ಸ್ತ್ರೀ ಶೋಷಣೆಯ ಕುರಿತು ಬರೆಯುವುದು, ನಾಟಕ ಆಡುವುದು, ಸಿನಿಮಾ ಮಾಡುವುದು ಎಂದರೆ ಬರಿದೆ ಮಾರಾಟದ ಸರಕಿನಂತೆ ಖರೆಕಾಳಜಿಯಿಲ್ಲದ ಕ್ಲೀಷೆಯಂತಾಗಿಬಿಟ್ಟಿರುವ ಇಂಥ ಕಾಲದಲ್ಲಿ ನಿಮಿತ್ತ ನಾಟಕದಲ್ಲಿ ಬರುವ ಸ್ತ್ರೀ ಘನವಾಗಿ ನಿಲ್ಲುತ್ತಾಳೆ.
ಈ ನಾಟಕದ ಇನ್ನೊಂದು ಮುಖ್ಯ ಗುಣವೆಂದರೆ ಇಲ್ಲಿ ಯಾವ ಪಾತ್ರಗಳಿಗೂ ಹೆಸರಿಲ್ಲ. ಈ ಹೆಸರಿಲ್ಲದಿರುವ ಪಾತ್ರಗಳು, ಹೆಸರಿದ್ದೂ ಇಲ್ಲದಂತಿರುವ, ಅಥವಾ ಕಳಕೊಂಡಂತಿರುವ ಆಧುನಿಕ ಮನುಷ್ಯನ ಅಸ್ಮಿತೆಯನ್ನೇ ಪ್ರತಿನಿಧಿಸುವಂತಿದೆ. ಮತ್ತು ಇಲ್ಲಿ ಬರುವ ಸ್ತ್ರೀ ಯಾವುದೇ ಪೌರಾಣಿಕ ಪುರಾಣದ, ಐತಿಹಾಸಿಕ ಪುರಾಣದ, ಜಾನಪದ ಪುರಾಣದ ಸ್ಮೃತಿಕೋಶದಲ್ಲಿ ಬರುವ ಸ್ತ್ರೀ ಪಾತ್ರವೂ ಆಗಬಹುದು, ಅದರ ಜೊತೆಗೆ ಸರಿಸಮಾನ ನಿಲ್ಲಬಲ್ಲಳು.
ಇದೆಲ್ಲವೂ ಸಾಧ್ಯಂತ ನಾಟಕ ಪಠ್ಯದ ಕುರಿತಾದರೆ ಪ್ರಯೋಗದ ದೃಷ್ಟಿಯಿಂದ, ರಂಗಭೂಮಿಯ ಆದ್ಯಂತಿಕ ಪರಿಕರಗಳಾದ ರಂಗಸಜ್ಜಿಕೆ, ಬೆಳಕು, ಸಂಗೀತ, ಆಂಗಿಕವನ್ನು ಇನ್ನಷ್ಟು ವ್ಯವಸ್ಥಿತವಾಗಿ ಬಳಸಿಕೊಂಡಿದ್ದರೆ ಪ್ರಯೋಗವು ಏಕತಾನತೆಯಿಂದ ಮುಕ್ತವಾಗುತ್ತಿತ್ತು.
ಹಲವು ಸೂಕ್ಷ್ಮಗ್ರಾಹೀ ನಿರ್ದೇಶಕರ ಕೈಯಲ್ಲಿ ಸಿಕ್ಕಿದ್ದಿದ್ದರೆ ನಾಟಕವು ಇನ್ನೂ ನಾಟಕ ದಂತಾಗುತ್ತಿತ್ತೇನೋ.
ಹಾಗಿದ್ದೂ, ಧನ, ಸಂಪತ್ತು, ವಸ್ತು, ಇವುಗಳಲ್ಲೇ ತಮ್ಮನ್ನು ತಾವು ತೇದುಕೊಳ್ಳುತ್ತ, ಭಾವ-ಸಂಬಂಧ-ಸತ್ಯಗಳ ಮುಸುಕನ್ನು ತೊಟ್ಟು ಬದುಕುತ್ತಿರುವ ನಗರಕೇಂದ್ರಿತ ಆಧುನಿಕ ಜನರಿಗೆ ಪ್ರಸ್ತುತ ಪ್ರಯೋಗವು ಭಾವಶೋಧನೆಯ ಸರ್ಜರಿ ಮಾಡುವುದರ ಮೂಲಕ ಸಂಬಂಧಗಳಿಗೆ, ಮೌಲ್ಯಗಳಿಗೆ ಮರುಗುವಂತೆ ಮಾಡಿ ಒಂದು ಬಗೆಯ ಪರಿಮಾರ್ಜನೆಯನ್ನು ಉಂಟು ಮಾಡುವಲ್ಲಿ ಸಫಲವಾಗಿದೆ. ಇಂತಹ ಚಿಕಿತ್ಸೆಯ ಅಗತ್ಯವೂ ಎಂದಿಗಿಂತ ಇಂದು ಹೆಚ್ಚಿದೆ.
ಸೇತೂರಾಮ್ ಅವರು ಧಾರಾವಾಹಿಗಳಿಂದ ಮುಕ್ತರಾಗಿ ನಾಟಕ ರಚನೆಗಳಲ್ಲಿ ತೊಡಗಿರುವುದು ನಿಜಕ್ಕೂ ಕನ್ನಡ ರಂಗಭೂಮಿಗೆ ಬಹಳ ಚೇತೋಹಾರಿಯಾದ ಬೆಳವಣಿಗೆಯಾಗಿದೆ. ಅವರ ಲೇಖನಿಯಿಂದ ಇನ್ನೂ ಹೆಚ್ಚುಹೆಚ್ಚು ನಾಟಕಗಳನ್ನು ನಿರೀಕ್ಷಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.