ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯನ್ನು ನಟ ಪ್ರಕಾಶ್ ರಾಜ್ ನಿರಾಕರಿಸಿದ್ದಾರೆ.
ಮೂರು ವರ್ಷಗಳ ವಾರ್ಷಿಕ ಪ್ರಶಸ್ತಿಯ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದ್ದ ಅಕಾಡೆಮಿ, 2024–25ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿತ್ತು.
‘ನಾನು ಈಗಷ್ಟೇ ರಂಗಭೂಮಿಗೆ ಮರಳಿ ಬಂದಿದ್ದೇನೆ. ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ. ನನಗಿಂತಲೂ ಅರ್ಹರು ರಂಗಭೂಮಿಯಲ್ಲಿ ಇರುವುದರಿಂದ, ಈ ಪುರಸ್ಕಾರವನ್ನು ಸ್ವೀಕರಿಸಲು ನನ್ನ ಮನಃಸಾಕ್ಷಿ ಒಪ್ಪುತ್ತಿಲ್ಲ’ ಎಂದು ಪ್ರಕಾಶ್ ರಾಜ್ ಅವರು ಶುಕ್ರವಾರ್ ‘ಎಕ್ಸ್’ ಮಾಡಿದ್ದಾರೆ.
ಸಾಮಾಜಿಕ ನ್ಯಾಯಕ್ಕಾಗಿ ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತರ ಮೈತ್ರಿಕೂಟ ಇಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಯೂ ಈ ಬಗ್ಗೆ ಪ್ರಸ್ತಾಪಿಸಿದ ಪ್ರಕಾಶ್ ರಾಜ್, ‘ರಂಗಭೂಮಿ ಉಳಿಸಿ, ಬೆಳೆಸಿದ ಉತ್ತಮ ಅರ್ಹ ಕಲಾವಿದರಿಗೆ ಈ ಪ್ರಶಸ್ತಿ ನೀಡಬೇಕು’ ಎಂದು ವೇದಿಕೆ ಮೇಲಿದ್ದ ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜ ಮೂರ್ತಿ ಅವರಿಗೆ ಮನವಿ ಮಾಡಿದರು.
‘ಪ್ರಕಾಶ್ ರಾಜ್ ಅವರ ಜತೆಗೆ ಇನ್ನೊಮ್ಮೆ ಮಾತನಾಡಿ, ಪ್ರಶಸ್ತಿ ಸ್ವೀಕರಿಸುವಂತೆ ಅವರನ್ನು ಒಪ್ಪಿಸಲಾಗುವುದು. ಇಷ್ಟಾಗಿಯೂ ಅವರು ನಿರಾಕರಿಸಿದರೆ ಬೇರೆಯವರನ್ನು ಆಯ್ಕೆ ಮಾಡಲಾಗುತ್ತದೆ’ ಎಂದು ಕೆ.ವಿ. ನಾಗರಾಜ ಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.