ADVERTISEMENT

ಬೆಳ್ಗಲ್ಲು: ಸಾವಿನ ಸಮ್ಮುಖದಲ್ಲಿ ಹೊಳೆಯುವ ಬದುಕಿನ ಅಂತರಂಗ

ಪದ್ಮನಾಭ ಭಟ್ಟ‌
Published 20 ಸೆಪ್ಟೆಂಬರ್ 2020, 4:38 IST
Last Updated 20 ಸೆಪ್ಟೆಂಬರ್ 2020, 4:38 IST
‘ಅಂತರಂಗ’ ನಾಟಕದ ದೃಶ್ಯ (ಚಿತ್ರಕೃಪೆ: ನೀನಾಸಮ್)
‘ಅಂತರಂಗ’ ನಾಟಕದ ದೃಶ್ಯ (ಚಿತ್ರಕೃಪೆ: ನೀನಾಸಮ್)   
""
""
""

ನಮ್ಮ ಅನುದಿನದ ಬದುಕು ಹಲವು ಸಂಕೇತಗಳಿಂದ ಕೂಡಿದೆ. ನಮ್ಮ ದಿನದಿನದ ಆಚರಣೆ, ನಡೆ ನುಡಿಗಳಲ್ಲಿ ಈ ಸಾಂಕೇತಿಕತೆ ಎಷ್ಟು ಸಹಜವಾಗಿ ಮಿಳಿತಗೊಂಡಿದೆಯೆಂದರೆ ಅದು ಸಂಕೇತ ಎಂಬುದರ ಪರಿವೇ ಇಲ್ಲದೆ ನಾವು ಬದುಕುತ್ತಿರುತ್ತೇವೆ. ಹಾಗೆ ನೋಡಿದರೆ ನಾವು ಭಾವಿಸಿಕೊಂಡಿರುವ, ಭವಿಸುತ್ತಿರುವ ಹತ್ತು ಹಲವು ಸಂಬಂಧಗಳು, ನಮ್ಮದೇ ಪಾತ್ರಗಳೆಲ್ಲವೂ ಸಂಕೇತಗಳೇ ಆಗಿರುತ್ತೇವೆ.

ಸಂಕೇತಗಳ ಕೆಲಸ ಸತ್ಯದ ಕಡೆಗೆ, ಬದುಕಿನ ಅರ್ಥವನ್ನು ಅರಿಕೆಮಾಡುವ ರಹಸ್ಯದ ಕಡೆಗೆ ದಾರಿ ತೋರುವುದು. ಆದರೆ ಈ ಸಂಕೇತಗಳು ಒಂದು ರೀತಿ ಶಾಪಗ್ರಸ್ಥ ಅಹಲ್ಯೆಯ ಹಾಗೆ. ರಾಮನ ಪಾದಸ್ಪರ್ಶ ಆಗುವರೆಗೆ ಅದು ಕಲ್ಲು; ಬರೀ ಕಲ್ಲು ಅಷ್ಟೆ. ರಾಮ ತುಳಿದಿದ್ದೇ ಅದು ಪರಮಪತಿವ್ರತಾಶಿರೋಮಣಿ ಅಹಲ್ಯೆ. ಕಲ್ಲು ಅಹಲ್ಯೆಯಾಗುವುದೂ ಮತ್ತೊಂದು ಸಂಕೇತವೇ.

ದಿನದಿನದ ಬದುಕಿನಲ್ಲಿ ನಾವು ನಮಗೆ ಅರಿವೇ ಇಲ್ಲದೆ ಈ ಸಂಕೇತಗಳನ್ನು ಹೇಗೆ ಬಳಸುತ್ತಿರುತ್ತೇವೆಂದರೆ ಕನ್ನಡಕವನ್ನು ಹಾಕಿಕೊಂಡು ಕನ್ನಡಕಕ್ಕಾಗಿ ಮನೆಯೆಲ್ಲ ಹುಡುಕಿದಂತೆ. ಕನ್ನಡ ತೆಗೆದಿಟ್ಟಾಗ ಮಾತ್ರ ಅದನ್ನು ಧರಿಸಿದವರಿಗೆ ಅದರ ಅಸ್ತಿತ್ವ ಅರಿವಾಗುವುದು. ಅದು ತನ್ನಿಂದ ಬೇರೆಯಾದದ್ದು ಎಂದು ತಿಳಿಯುವುದು. ಉಸಿರಿನ ಘನತೆ ಅರಿವಾಗುವುದು ಅದು ನಿಲ್ಲುವ ಹೊತ್ತಿನಲ್ಲೇ. ಈ ತಿಳಿವೇ ನಮ್ಮ ಹಲವು ಭ್ರಮೆಗಳನ್ನು ಕಳಚುತ್ತದೆ; ಬದುಕಿನ ಹರಿತ ಸತ್ಯಗಳಿಗೆ ನಮ್ಮನ್ನು ಹುರಿಗೊಳಿಸುತ್ತದೆ. ಆದರೆ ಈ ತಿಳಿವು ಗಳಿಸಿಕೊಳ್ಳುವುದೂ ಸುಲಭದ ಮಾತಲ್ಲ. ಆದರೆ ತಿಳಿವಿನ ಸ್ಫೋಟ ನಾವು ಬದುಕನ್ನು ನೋಡುವ ಬಗೆಯನ್ನೇ ಬದಲಿಸುವಂಥದ್ದು.

ADVERTISEMENT

ಉಪನಿಷತ್ತಿನಲ್ಲಿ ಬರುವ ಜೀವಾತ್ಮ ಮತ್ತು ಪರಮಾತ್ಮದ ಕುರಿತಾಗಿ ಇರುವ ಒಂದು ಚಿತ್ರ ಬಹುಜನಪ್ರಿಯವಾದದ್ದು. ಒಂದು ಮರದ ಮೇಲೆ ಎರಡು ಹಕ್ಕಿಗಳು ಕೂತಿವೆ. ಅವುಗಳಲ್ಲಿ ಒಂದು ಮೈಮರೆತು ಹಣ್ಣನ್ನು ತಿನ್ನುತ್ತಿದೆ. ಹಣ್ಣನ್ನು ತಿನ್ನುತ್ತ ತಿನ್ನುತ್ತ ತನ್ನ ಇರುವಿಕೆಯನ್ನೇ ಮರೆತು ಹಣ್ಣೇ ಆಗಿಹೋಗಿದೆ. ಇನ್ನೊಂದು ಹಕ್ಕಿ ತುಸು ದೂರದಲ್ಲಿ ಕೂತು ಈ ಹಕ್ಕಿಯನ್ನೇ ನೋಡುತ್ತಿದೆ. ಬಹುಶಃ ಹಣ್ಣು ತಿನ್ನುತ್ತಿರುವ ಹಕ್ಕಿ ತನ್ನ ಮೈಮರೆವನ್ನು ಕಳೆದುಕೊಂಡು ತನ್ನನ್ನು ನೋಡುವ ಗಳಿಗೆಗಾಗಿ ಕಾಯುತ್ತಿದೆಯೋ ಏನೋ.

ಬದುಕಲ್ಲಿ ಇಡುಕಿರಿದ ಸಂಕೇತಗಳೆಂಬ ದೀಪದ ಸರ ಹೊತ್ತಿಕೊಳ್ಳಲು, ಸರಿಯಾದ ಜಾಗದಲ್ಲಿ ಉರಿಯಬಲ್ಲ ಒಂದು ಸಣ್ಣ ಕಿಡಿ ಸಾಕು. ಒಂದು ಸಣ್ಣ ಸತ್ಯ ನಾವು ಬದುಕಿದ, ಬದುಕುತ್ತಿರುವ ಬದುಕನ್ನು ಬೇರೆಯದೇ ರೀತಿ ನೋಡಲು ಹಚ್ಚಬಹುದು.‌ ಈ ಕಿಡಿ ನಮ್ಮ ದಿನದಿನದ ಬದುಕಿಗೆ ತೀರಾ ಸಮೀಪದಲ್ಲಿಯೇ, ಹೊತ್ತಿಕೊಳ್ಳಲು ಸರಿಯಾದ ಕಾಲಕ್ಕೆ ಕಾಯುತ್ತ ಸರಿಯುತ್ತಿರುತ್ತದೆ. ಆದರೆ ನಮ್ಮಲ್ಲಿ ಬಹುತೇಕರ ಬದುಕು ಈ ಕಿಡಿಯ ಇರುವಿಕೆಯ ಸಾಧ್ಯತೆಯ ಅರಿವೂ ಇಲ್ಲದೇ ಮುಗಿದು ಹೋಗುತ್ತದೆ.

ಎಲ್ಲೆಲ್ಲೋ ಯಾವ್ಯಾವಾಗಲೋ ಓದಿ, ಕೇಳಿ, ನನ್ನ ಗ್ರಹಿಕೆಯ ಮಿತಿಯಲ್ಲಿ ಮನಸೊಳಗೆ ಇಳಿದ ಈ ವಿಚಾರಗಳೆಲ್ಲ ಜಾದೂಗಾರ ಬಿಡಿಯಾಗಿ ನುಂಗಿ, ಇಡಿಯಾಗಿ ಹೊರತೆಗೆಯುವ ಬಣ್ಣದ ಕಾಗದಗಳಂತೆ ಹೊರಬಂದಿದ್ದು ಒಂದು ನಾಟಕದಿಂದ. ಆ ನಾಟಕದ ಹೆಸರು ‘ಅಂತರಂಗ’.

ಇದೇ ವರ್ಷದ ಆರಂಭದಲ್ಲಿ ನೀನಾಸಮ್ ಮರುತಿರುಗಾಟದಲ್ಲಿನ ಈ ರಂಗಪ್ರಯೋಗವನ್ನು ಮಾರಿಸ್ ಮೆಟರ್ಲಿಂಕ್ ರಚಿಸಿದ್ದು. ‘ಇಂಟೀರಿಯರ್’ ಹೆಸರಿನ ಈ ನಾಟಕವನನ್ನು ಮಾಧವ ಚಿಪ್ಪಳಿ ‘ಅಂತರಂಗ’ವಾಗಿಸಿ ಕನ್ನಡಕ್ಕೆ ತಂದಿದ್ದಾರೆ. ಕೇರಳದ ಪ್ರಯೋಗಶೀಲ ರಂಗನಿರ್ದೇಶಕ ಶಂಕರ್ ವೆಂಕಟೇಶ್ವರನ್ ಈ ನಾಟಕವನ್ನು ನಿಜದ ಅರ್ಥದಲ್ಲಿ ರಂಗ‘ಪ್ರಯೋಗ’ವಾಗಿಸಿದ್ದಾರೆ.

ನಮ್ಮ ಬದುಕಿನ ಆಳವಾದ ಸತ್ಯಗಳಿಗೆ ಮುಖಾಮುಖಿಯಾಗುತ್ತಲೇ, ಈ ನಾಟಕ ತನ್ನ ಕಟ್ಟುವಿಕೆಯ ಕ್ರಮದಿಂದಲೇ ಸದ್ಯಕ್ಕೂ ಬಹುವಿಚಿತ್ರವಾಗಿ ಸ್ಪಂದಿಸುತ್ತದೆ. ತುಸು ಹೊತ್ತು ನಿಂತು ನಮ್ಮನ್ನು ನಾವೇ ನೋಡಿಕೊಳ್ಳುವ ಹಾಗೆ ಮಾಡುತ್ತದೆ.

‘ಕಥೆ ಏನು?’ ಎಂದು ಕೇಳುವವರಿಗೆ ಹೇಳಲಿಕ್ಕೇ ಸಾಧ್ಯವಿಲ್ಲದಷ್ಟು ಅಥವಾ ಎರಡೇ ಸಾಲಿನಲ್ಲಿ ಹೇಳಲು ಆಗುವ ರೀತಿಯಲ್ಲಿ ಇದರ ಕಥೆ ಇದೆ. ‘ಊರ ಆಚೆಗಿನ ಒಂದು ಹಳ್ಳದಲ್ಲಿ ಹುಡುಗಿ ಸತ್ತಿದ್ದಾಳೆ. ಅವಳ ಸಾವಿನ ಸುದ್ದಿಯನ್ನು ತಿಳಿಸಲು ಒಬ್ಬ ಅಜ್ಜ ಮತ್ತೊಬ್ಬ ಹುಡುಗ ಅವರ ಮನೆಗೆ ಬರುತ್ತಾರೆ. ಸಾವಿನ ಸುದ್ದಿ ತಿಳಿಸುತ್ತಾರೆ’. ಇಷ್ಟೇ ಈ ನಾಟಕದ ಕಥೆ. ಆದರೆ ಇಷ್ಟು ಹೇಳಿದರೆ ಈ ನಾಟಕದ ಕುರಿತು ಏನನ್ನೂ ಹೇಳಿದಂತಾಗುವುದಿಲ್ಲ. ಇದರಲ್ಲಿ ಆ ನಾಟಕ ಕಟ್ಟಿಕೊಡುವ ಅನುಭವತೀವ್ರತೆಯ ಕಿಂಚಿತ್ ಸಾರಾಂಶವೂ ಇಲ್ಲ ಎನ್ನುವುದು ಒಂದು ಕಾರಣವಾದರೆ, ದಿನದಿನವೂ ಚಿನ್ನದ ದರ, ಪೆಟ್ರೋಲ್ ದರಗಳ ಹಾಗೆ ಸತ್ತವರ ಸಂಖ್ಯೆಯನ್ನು ವೃತ್ತ ಪತ್ರಿಕೆ, ಸುದ್ದಿವಾಹಿನಿಗಳು, ಸೋಷಿಯಲ್ ಮೀಡಿಯಾಗಳಲ್ಲಿ ಕೇಳುತ್ತ ನೋಡುತ್ತ ಓದುತ್ತ ನಾವು ಸಾವಿನ ಸುದ್ದಿ ನಮ್ಮನ್ನು ಕಿಂಚಿತ್ ಬೆಚ್ಚುಬೀಳಿಸದಷ್ಟು ಜಡರಾಗಿದ್ದೇವೆ.

ಅದೊಂದು ಮುಸ್ಸಂಜೆ. ಮನೆಯೊಳಗೆ ಅಮ್ಮ, ಎಳೆ ಶಿಶುವನ್ನು ಮಡಿಲಲ್ಲಿ ಮಲಗಿಸಿಕೊಂಡು ಕೂತಿದ್ದಾಳೆ. ತಂದೆ ಏನೋ ಓದುತ್ತಿದ್ದಾರೆ. ಅಕ್ಕ ನೇಯುತ್ತಿರುವ ಕಸೂತಿಯನ್ನು ತಮ್ಮ ಮಲಗಿಕೊಂಡು ನೋಡುತ್ತ ಕೀಟಲೆ ಮಾಡುತ್ತಿದ್ದಾನೆ. ಸಂತೋಷ ನೆಮ್ಮದಿಗಳೇ ತುಂಬಿರುವ ಕುಟುಂಬವದು. ಹೀಗೆ ತಮ್ಮದೇ ಲೋಕದಲ್ಲಿ ಮೈಮರೆತಿರುವ ಅವರಿಗೆ ಅವರ ಹಿರಿಮಗಳು ಸತ್ತ ಸುದ್ದಿಯನ್ನು ಮುಟ್ಟಿಸಬೇಕಾಗಿದೆ. ಆ ಸುದ್ದಿಯನ್ನು ತಿಳಿಸಲು ಬರುವವನು ಎಂಬತ್ತು ವರ್ಷದ ಅಜ್ಜ ಮತ್ತು ಮತ್ತೊಬ್ಬ ತರುಣ. ಆ ಮನೆಯ ಹಿತ್ತಲಲ್ಲಿ ನಿಂತು ಕಿಟಕಿಯಲ್ಲಿ ಆ ಮನೆಯೊಳಗನ್ನು ನೋಡುತ್ತಿದ್ದಾರೆ ಸಾವಿನ ಸುದ್ದಿಯ ದೂತರು.

ಆ ಮನೆಯ ನೆಮ್ಮದಿ, ಸಂತೋಷಕ್ಕೂ, ಇಡೀ ಮನೆಯನ್ನು ದುಃಖದ ಕಡಲಲ್ಲಿ ಮುಳುಗಿಸುವ ಒಂದು ಸತ್ಯಕ್ಕೂ ಒಂದು ಗೋಡೆಯ ಅಂತರವಷ್ಟೆ; ಒಂದು ಮಾತಿನ ಅಂತರವಷ್ಟೆ. ದುರ್ದೈವ ಆ ಮನೆಯತ್ತ ಒಂದೊಂದೇ ಹೆಜ್ಜೆ ಇಡುತ್ತ ಬರುತ್ತಿದೆ. ಅದು ಸಾವಿನ ಸುದ್ದಿಯ ದೂತರಿಗೆ ಕಾಣಿಸುತ್ತಿದೆ. ಆದರೆ ಮನೆಯವರಿಗೆ ಕಾಣಿಸುತ್ತಿಲ್ಲ. ಅವರು ಅದಕ್ಕೆ ಬೆನ್ನು ಮಾಡಿಕೊಂಡು, ತಮ್ಮ ಈ ನೆಮ್ಮದಿ ಇನ್ನೂ ಸಾವಿರ ಸಾವಿರ ವರ್ಷಗಳ ಕಾಲ ಕಲಕದೇ ಇರುವಂಥದ್ದು ಎಂದುಕೊಂಡೇ ಬದುಕುತ್ತಿದ್ದಾರೆ. ಆದರೆ ಅವರಿಗೆ ಗೊತ್ತಿಲ್ಲದ ಸಣ್ಣ ಸತ್ಯವೊಂದು ಹೊರಗೆ ನಿಂತ ಮುದುಕನಿಗೆ ಗೊತ್ತಿದೆ. ಹಾಗಾಗಿಯೇ ಅವರ ಪ್ರತಿ ನಡೆ, ನುಡಿ, ವರ್ತನೆ ಎಲ್ಲವೂ ಅವನಿಗೆ ನಿಗೂಢವಾಗಿ, ಬೇರೆಯೇ ಏನನ್ನೋ ಸೂಚಿಸುವ ಸಂಕೇತಗಳ ಹಾಗೆ ಕಾಣಿಸುತ್ತಿದೆ.

‘ನನಗೀಗ ಎಂಬತ್ತು ವರ್ಷ. ಈಗ ನನಗೆ ಬದುಕು ಎಂದರೆ ಏನು ಎಂದು ತಿಳಿಯುತ್ತಿದೆ’ ಎನ್ನುತ್ತಾನೆ ಆ ಮುದುಕ. ದುರ್ದೈವದ ದಾಡೆಯಲ್ಲಿ ಶಾಶ್ವತದ ಕನಸು ಕಾಣುತ್ತ ಮೈಮರೆತಿರುವವರ ನೋಡಿ ಅವನಿಗೆ ಬದುಕಿನ ಅರ್ಥ ಹೊಳೆಯುತ್ತದೆ. ‌

ವಿಚಿತ್ರ ನೋಡಿ, ನಾವು ಯಾವುದನ್ನು ದುರ್ದೈವ ಎಂದು ಬಗೆಯುತ್ತೇವೆಯೋ, ಯಾವುದನ್ನು ದುರಂತ ಎಂದು ಕಾಣುತ್ತೇವೆಯೋ, ಅದು ನಮ್ಮ ಬದುಕಲ್ಲಿ ಬರದಿರಲಿ ಎಂದು ಪ್ರತಿದಿನ ಪ್ರಾರ್ಥಿಸುತ್ತೇವೆಯೋ, ಅದೇ ದುರ್ದೈವ ನಮಗೆ ಬದುಕನ್ನು ನೋಡುವ ರೀತಿ ಬದಲಿಸುತ್ತದೆ; ಬದುಕಿನ ಅರ್ಥವನ್ನು ಬಿಚ್ಚಿಡುತ್ತದೆ. ಹಾಗಾದರೆ ಅದನ್ನು ನಿಜಕ್ಕೂ ದುರ್ದೈವ ಅನ್ನಬೇಕೆ? ಯಾವ ಸಂತೋಷವೂ ಕಾಣಿಸದ ಸತ್ಯವನ್ನು ತೀವ್ರವಾದ ನೋವು, ಆಘಾತ ಕಾಣಿಸುತ್ತದೆ ಎಂದರೆ ಅದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು? ಆ ಮತ್ತೊಂದು ಕೇಂದ್ರದಲ್ಲಿ ನಿಂತು ನೋಡಿದಾಗ ಈ ಬದುಕು ಹೇಗೆ ಕಾಣಿಸಬಹುದು?

ಈ ಎಲ್ಲ ಪ್ರಶ್ನೆಗಳನ್ನು ಸಾವಿನ ಸಮ್ಮುಖದಲ್ಲಿ ಬದುಕನ್ನು ಇಟ್ಟು ನಾಟಕಕಾರ ನಮಗೆ ಕಾಣಿಸುತ್ತ ಹೋಗುತ್ತಾನೆ.

ಈ ರಂಗಪ್ರಯೋಗದ ಅರ್ಥ ಸಾಧ್ಯತೆಗಳು ಇನ್ನಷ್ಟು ಜ್ವಲಿಸುವ ಹಾಗೆ, ಸ್ಫುರಿಸುವ ಹಾಗೆ ಅದರ ಕಟ್ಟುವಿಕೆಯಲ್ಲಿಯೇ ಹಲವು ಪ್ರಯೋಗಗಳನ್ನು ನಿರ್ದೇಶಕರು ಮಾಡಿದ್ದಾರೆ. ಒಂದೂವರೆ ಗಂಟೆಯ ಈ ನಾಟಕ ಪೂರ್ತಿ ನಿಧಾನಗತಿಯ ಚಲನೆಯಲ್ಲಿಯೇ ಸಾಗುತ್ತದೆ. ಅದು ನಾವು ಸ್ಲೋ ಮೋಷನ್ ಎಂದು ಹೇಳಬಹುದಾದಷ್ಟು ನಿಧಾನಗತಿಯ ಚಲನೆ. ಅದರ ಮೊದಲ ಸಂಭಾಷಣೆ ಬರುವುದೇ ನಾಟಕ ಶುರುವಾಗಿ ಹದಿನೈದು ನಿಮಿಷದ ನಂತರ! ಕೊನೆಯಲ್ಲಿ ಸ್ಫೋಟಗೊಳ್ಳುವ ಒಂದು ಗಳಿಗೆಯನ್ನು ಸಾಧ್ಯವಾದಷ್ಟೂ ಮುಂದೂಡುವ ಪ್ರಯತ್ನ ಇಡೀ ನಾಟಕದಲ್ಲಿ ಕಾಣಿಸುತ್ತದೆ. ಅದಕ್ಕೆ ಪೂರಕವಾಗಿಯೇ ಈ ನಿಧಾನಗತಿಯೂ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ, ಸಾವಿನ ಜನನದ, ಹಾದರದ, ಅಪರಾಧದ ಸುದ್ದಿಗಳೆಲ್ಲವನ್ನೂ ಆದಷ್ಟೂ ಮೊದಲು, ಆದಷ್ಟೂ ರೋಚಕವಾಗಿ ತಲುಪಿಸುವ ಧಾವಂತದಲ್ಲಿ ಏದುಸಿರು ಬಿಡುತ್ತಿರುವ ಇಂದಿನ ಸುದ್ದಿಜಗತ್ತಿಗೂ ಈ ನಾಟಕದ ನಿಧಾನಗತಿ ದಿಟ್ಟವಾಗಿ ಸ್ಪಂದಿಸುತ್ತದೆ.ನಟನ ಆಂಗಿಕ ಮತ್ತು ವಾಚಿಕವನ್ನೂ ಪತ್ರ್ಯೇಕಿಸುವ ಇನ್ನೊಂದು ಪ್ರಯತ್ನವನ್ನೂ ಅವರು ಮಾಡಿದ್ದಾರೆ. ಇಲ್ಲಿ ಧ್ವನಿ ಕೂಡ ನಾಟಕದ ಒಂದು ಪಾತ್ರವಾಗಿಯೇ ಕೆಲಸ ಮಾಡುತ್ತಿರುತ್ತದೆ.

ಸಾವಿನ ಸುದ್ದಿಯನ್ನು ಎದುರಿಗಿಟ್ಟು ಬದುಕಿನ ಅಂತರಂಗವನ್ನು ಇಣುಕಿ ನೋಡುವ ಪ್ರಯತ್ನವಿದು. ನಾವು ನಿಜವಾಗಲೂ ಸಂತೋಷ ನೆಮ್ಮದಿ ಎಂದುಕೊಂಡಿರುವ ಸಂಗತಿಗಳೆಲ್ಲ ಎಷ್ಟು ನಿಶ್ಚಿತ? ಎಷ್ಟು ಶಾಶ್ಚತ? ಈ ಬದುಕಿನ ನಿಜವಾದ ಅರ್ಥವೇನು? ಹಾಗಾದರೆ ಈ ಬದುಕೇ ಅರ್ಥಹೀನವೇ? ಅರ್ಥಹೀನವೇ ಆದರೆ ಸಾವಿರ ಕೋಟಿ ಜನ ಇದನ್ನೇ ಹೀಗೆ ಮೈಮರೆತೇ ಬದುಕುತ್ತಿರುವುದರ ರಹಸ್ಯವೇನು? ನಮ್ಮ ಸುತ್ತಲಿನ ಸಮಾಜದ ವಿನ್ಯಾಸ, ಅದರ ತಾರತಮ್ಯಗಳು, ದ್ವೇಷ, ಪ್ರೇಮ, ಹಿಂಸೆ, ಅಧಿಕಾರಗಳ ಅರ್ಥವೇನು? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ನಮ್ಮೊಳಗೆ ಹುಟ್ಟಿಸುತ್ತ ಹೋಗುತ್ತದೆ.ಸಾವಿನ ನೆರಳನ್ನು ತೀವ್ರಗೊಳಿಸಿದಷ್ಟೂ ಬದುಕಿನ ಬಗ್ಗೆ ಯೋಚಿಸುವಂತೆ ಮಾಡುವುದು ಈ ರಂಗಕೃತಿಯ ಶಕ್ತಿ.

1862-1949 ಮಾರಿಸ್ ಮೆಟರ್‌ಲಿಂಕ್‌ನ ಕಾಲ. ಅಂದು ಅವನು ರಚಿಸಿದ ರಂಗಕೃತಿಯೊಂದು 2020ರಲ್ಲಿ ರಂಗಪ್ರಯೋಗ ಕಂಡು ನಮ್ಮ ಕಾಲಕ್ಕೂ ಸ್ಪಂದಿಸುತ್ತ, ನಮ್ಮಲ್ಲಿ ಬದುಕಿನ ಕುರಿತು ಇಷ್ಟೊಂದು ಪ್ರಶ್ನೆಗಳನ್ನು ಹುಟ್ಟಿಸುತ್ತದೆ ಎಂದರೆ ಈ ಕೃತಿಯ ರಹಸ್ಯ ಏನಿರಬಹುದು? ಬಹುಶಃ ಯಾವ ಕಾಲಕ್ಕೂ ಸದ್ಯ ಮತ್ತು ಶಾಶ್ವತಕ್ಕೆ ನಮ್ಮನ್ನು ಮುಖಾಮುಖಿಯಾಗಿಸುವ ಸಾಂಕೇತಿಕತೆಯೇ ಈ ನಾಟಕದ ಮೂಲಶಕ್ತಿ. ಹಾಗೆ ನೋಡಿದರೆ ಎಲ್ಲ ಶ್ರೇಷ್ಠ ಕಲೆಗಳ ಉದ್ದೇಶವೂ ತಾವೊಂದು ಸಂಕೇತವಾಗಿ ಬದುಕಿನ ಸತ್ಯದ ಕಡೆಗೆ ನಮ್ಮನ್ನು ಹೊರಳಿಸುವಂತೆ ಮಾಡುವುದೇ ಅಲ್ಲವೇ?

ಮರದ ಮೇಲೆ ಹಣ್ಣು ತಿನ್ನುತ್ತ ತಿನ್ನುತ್ತ ಹಣ್ಣೇ ಆಗಿಬಿಟ್ಟಿರುವ ಹಕ್ಕಿ, ತನ್ನ ಇರುವನ್ನು ಕಂಡುಕೊಂಡು ತನ್ನನ್ನೇ ನೋಡುತ್ತಿರುವ ಇನ್ನೊಂದು ಹಕ್ಕಿಯ ಕಡೆಗೆ ನೋಡುವಂತೆ ಮಾಡಲು ಕಲೆಯಿಂದ ಮಾತ್ರವೇ ಸಾಧ್ಯವೇನೋ.

‘ಅಂತರಂಗ’ ನಾಟಕವನ್ನು ನೀವು ಈ ಕೊಂಡಿ ಬಳಸಿ ನೋಡಬಹುದು:rb.gy/zprdiq

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.