ADVERTISEMENT

ರಂಗಭೂಮಿ: ಸಮಕಾಲೀನ ತಲ್ಲಣದ ರಕ್ತ ವಿಲಾಪ

ಪ್ರಜಾವಾಣಿ ವಿಶೇಷ
Published 13 ಜುಲೈ 2024, 23:30 IST
Last Updated 13 ಜುಲೈ 2024, 23:30 IST
ರಕ್ತ ವಿಲಾಪ ನಾಟಕದ ದೃಶ್ಯ
ರಕ್ತ ವಿಲಾಪ ನಾಟಕದ ದೃಶ್ಯ   
ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆಯನ್ನೇ ಮೂಲದ್ರವ್ಯವಾಗಿ ಇಟ್ಟುಕೊಂಡ ಬರೆಯಲಾದ ನಾಟಕ ಇದು. ಸಮಕಾಲೀನ ತಲ್ಲಣಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನವನ್ನು ಕವಿ, ನಾಟಕಕಾರ ವಿಕ್ರಮ ವಿಸಾಜಿ ಮಾಡಿದ್ದಾರೆ. ರಾಯಚೂರು ಸಮುದಾಯ ತಂಡ ನಾಟಕದ ಆಶಯಕ್ಕೆ ಜೀವ ತುಂಬಿದೆ.

ವಿಕ್ರಮ ವಿಸಾಜಿ ಬರೆದಿರುವ ‘ರಕ್ತ ವಿಲಾಪ’ ನಾಟಕ ಇತ್ತೀಚಿಗೆ ಕಲಬುರಗಿಯಲ್ಲಿ ಪ್ರದರ್ಶನಗೊಂಡಿತು. ‘ರಾಯಚೂರು ಸಮುದಾಯ’ಕ್ಕಾಗಿ ಪ್ರವೀಣ ರೆಡ್ಡಿ ನಿರ್ದೇಶಿಸಿ,  ಸಂಶೋಧಕನ ಪಾತ್ರಕ್ಕೆ ಜೀವತುಂಬಿ ಅಭಿನಯಿಸಿದರು. ಎಂ.ಎಂ.ಕಲಬುರ್ಗಿ ಅವರ ಹತ್ಯೆಯ ಸುತ್ತ ಹೆಣೆದಿರುವ ಈ ನಾಟಕ ಸಂಶೋಧಕರೊಬ್ಬರ ಸತ್ಯದ ಹುಡುಕಾಟವನ್ನು ಬಿಂಬಿಸುವಂಥದ್ದು.

ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹಂಬಲಿಸುವವರ ಕುರಿತಾದ ನಾಟಕ. ಸತ್ಯದ ದುರ್ಗಮ ದಾರಿಯ ನೋವು, ಹತಾಶೆ, ಸಂಕಟ ಮತ್ತು ಎಂಥದ್ದೊ ಸುಖದ ಪಯಣ ಕೂಡ ಹೌದು. ಕಾಲ ಕೆಳಗಿನ ಬೆಂಕಿಗಿಂತ ಕಣ್ಣ ಮುಂದಿನ ಬೆಳಕು ದೊಡ್ಡದು ಎಂಬ ಎಂ.ಎಂ.ಕಲಬುರ್ಗಿ ಅವರ ಆಶಯವನ್ನು ಸೂಕ್ಷ್ಮವಾಗಿ ವಿಸ್ತರಿಸುವ ಕೆಲಸವನ್ನು ಈ ನಾಟಕ ಮಾಡಿತು. ಸತ್ಯದ ಇಂಥ ಹುಡುಕಾಟಗಳು ಕೆಲವೊಮ್ಮೆ ದುರಂತ ಅಂತ್ಯವನ್ನು ಕಾಣುತ್ತವೆ. ದುರಂತ ಮತ್ತು ಇದಕ್ಕೆ ಕಾರಣವಾದ ವ್ಯವಸ್ಥೆಯನ್ನು ನಾಟಕವು ಸಮರ್ಥವಾಗಿ ಕಟ್ಟಿಕೊಟ್ಟಿದೆ. ಸಂಶೋಧಕನ ತುಮುಲಗಳನ್ನು ಪ್ರವೀಣ ರೆಡ್ಡಿ ಅವರು ಕ್ಷಣಕ್ಷಣಕ್ಕೂ ತಮ್ಮ ನಟನೆಯಿಂದ ಗಾಢವಾಗಿಸುತ್ತಲೇ ಹೋದದ್ದು ವಿಶೇಷ. ಸಂಶೋಧಕನಿಗೆ ಪೈಪೋಟಿ ಎಂಬಂತೆ ಯುವಕನ ಪಾತ್ರವನ್ನು ಸಾಗರ್ ಇಟೇಕರ್ ನಿರ್ವಹಿಸಿದರು. ಧರ್ಮ, ಸಮಾಜ, ರಾಜಕಾರಣದ ಅಂಕುಡೊಂಕುಗಳನ್ನು ಚರ್ಚಿಸುತ್ತಾ, ಪ್ರಶ್ನೆ, ತುಮುಲಗಳು, ವಾದ, ವಿವಾದ, ಸಂವಾದ, ವಾಗ್ವಾದಗಳು ಪಾತ್ರಗಳ ನಡುವಿನ ಚಕಮಕಿಗಳು ಪ್ರೇಕ್ಷಕರನ್ನು ಹಿಡಿದು ಕೂರಿಸಿದವು.

ಈ ಪ್ರದರ್ಶನ ನಾಟಕಕಾರ ಮತ್ತು ನಿರ್ದೇಶಕನ ನಡುವಿನ ಜುಗಲ್ ಬಂದಿಯಾಗಿ ಕಂಡುಬರುತ್ತಿತ್ತು. ನಾಟಕಕಾರನ ಪದ ಪ್ರಯೋಗ, ಪರಿಣಾಮಕಾರಿ ಸಂಭಾಷಣೆ, ದೃಶ್ಯ ಜೋಡಣೆ ಒಂದೆಡೆಯಾದರೆ, ಇತ್ತ ನಾಟಕದ ಘನತೆಗೆ ಧಕ್ಕೆ ಬಾರದ ಹಾಗೆ ನಿರ್ದೇಶಕರು ಅಷ್ಟೇ ನಿಪುಣತೆಯಿಂದ ಅಭಿನಯ, ಹಾಡು, ನೃತ್ಯ, ಸಂಗೀತ, ಬೆಳಕು ಬಳಸಿಕೊಂಡು ರಂಗತಂತ್ರಗಳ ಮೂಲಕ ಬಿಗಿಯಾಗಿ ರಂಗರೂಪವನ್ನು ಕಟ್ಟಿಕೊಟ್ಟರು. ಪ್ರತಿಕ್ಷಣವೂ ಪ್ರೇಕ್ಷಕರನ್ನು ಆಲೋಚನೆಗೆ ಹಚ್ಚಿದ್ದು ಇದರ ಸಕಾರಾತ್ಮಕ ಸಂಗತಿ. ಕೆಲವೊಮ್ಮೆ ಸಂಶೋಧಕನ ಮಾತುಗಳು ದೀರ್ಘವೆನಿಸುತ್ತಿದ್ದವು. ಇವುಗಳನ್ನು ಕೊಂಚ ಸಂಕ್ಷಿಪ್ತಗೊಳಿಸಬಹುದಿತ್ತು. ಆದರೆ, ಇದು ಮನರಂಜನೆಯ ನಾಟಕವಲ್ಲ, ನಮ್ಮನ್ನು ತಬ್ಬಿಬ್ಬುಗೊಳಿಸುವ ನಾಟಕ. ವ್ಯವಸ್ಥೆಯ ಆಳದಲ್ಲಿ ಹುದುಗಿರುವ ಹಿಂಸೆಯ ಮುಖವಾಡಗಳನ್ನು ಬಿಚ್ಚಿಡುವ ನಾಟಕ.

ADVERTISEMENT

‘ನೋವು ನನ್ನ ತಾಯಿ, ಸ್ಥಾಯಿ’ ಎಂಬ ಸಂಶೋಧಕನ ಮಾತು ಎಲ್ಲಾ ಹೋರಾಟಗಾರರಿಗೆ ಬರೆದ ಭಾಷ್ಯದಂತಿತ್ತು. ಕೆಲವೊಮ್ಮೆ ಈ ನಾಟಕದಲ್ಲಿಯ ನಟರ ವಯಸ್ಸು, ದೇಹ, ಧ್ವನಿ ಅಲ್ಲಲ್ಲಿ ಹೊಂದಾಣಿಕೆಯಾಗದೇ ಹೋಗುತ್ತಿತ್ತು. ವಿಶೇಷವಾಗಿ ನಾಲ್ಕು ಸಮಕಾಲೀನ ಸಂಶೋಧಕರ ಮಾತುಕತೆಯ ಸನ್ನಿವೇಶದಲ್ಲಿ ಇನ್ನಷ್ಟು ಪಕ್ವತೆಯ ಅಗತ್ಯವಿತ್ತು.

ನಾಟಕದ ಭಾಷೆ ಸಂಶೋಧಕನ ಚಡಪಡಿಕೆಯನ್ನು ಸೂಕ್ಷ್ಮವಾಗಿ ತೋರಿಸುತ್ತಿತ್ತು. ಸಂಶೋಧಕನ ಅನೇಕ ತಾತ್ವಿಕ ಮಾತುಗಳನ್ನು ಗ್ರಹಿಸಲು ಸಾಧ್ಯವಾಗದ ನ್ಯಾಯಾಧೀಶರು ‘ವಕೀಲರೇ ನನಗನ್ನಿಸುತ್ತೆ, ನಮ್ಮೆಲ್ಲರ ಭಾಷೆಯ ಶಕ್ತಿ ಕುಂದುಬಿಟ್ಟಿದೆ. ಗೊತ್ತಾಗಲಾರದ ಎಷ್ಟೆಲ್ಲ ವಿಧಾನಗಳಿವೆ ನೋಡಿ. ಭಾಷೆ ಯಾವೆಲ್ಲ ಸ್ತರದಲ್ಲಿ ಕೆಲಸ ಮಾಡುತ್ತಿದೆ. ಭಾಷೆಯ ಮೂಲೆಮೂಲೆಗೆ ಹೋಗಿ ಅರ್ಥ ಮಾಡಿಕೊಳ್ಳೊ ಸಾಮರ್ಥ್ಯ ಬಹುಶಃ ನ್ಯಾಯಾಲಯಕ್ಕೂ ಇಲ್ವೇನೊ’ ಎಂದು ನುಡಿದದ್ದು ಸತ್ಯದ ಸಂಕೀರ್ಣ ಸ್ಥಿತಿಗೆ ಸಂಕೇತವಾಗಿತ್ತು. ‘ರಕ್ತದಾಗ ದೇಶಭಕ್ತಿ ಇರೋದಿಲ್ಲ, ಬೆವರಿನ್ಯಾಗ ಇರತಾದ. ಎಷ್ಟು ಬೆವರು ಸುರಿಸಿ ದುಡಿತಿ ಅಷ್ಟು ದೊಡ್ಡ ದೇಶಭಕ್ತ ಆಗ್ತಿ’ ಎಂಬ ಮಾತು ಸಮಕಾಲೀನ ಹಲವು ತಲ್ಲಣಗಳಿಗೆ ಪ್ರತಿಕ್ರಿಯೆ ಎನ್ನುವಂತಿದೆ. ಸಮಕಾಲೀನ ವಸ್ತುವೊಂದನ್ನು ಆಯ್ದುಕೊಂಡು ಅದರ ಅಕಾಡೆಮಿಕ್ ಭಾರಗಳನ್ನು ಕಳಚಿ ಪ್ರೇಕ್ಷಕರೆದುರು ಇಟ್ಟಿದ್ದು ನಾಟಕಕಾರ, ನಿರ್ದೇಶಕ ಮತ್ತು ಕಲಾವಿದರ ಗೆಲುವು.

ರಂಗ ಪ್ರದರ್ಶನದ ತಾಂತ್ರಿಕ ನೆಲೆಗಟ್ಟಿನಲ್ಲಿ ಇಲ್ಲಿ ಬಳಕೆಯಾದ ಸಂಗೀತ ಮುಖ್ಯ ನೆಲೆಗೆ ಬಂದು ನಿಲ್ಲುತ್ತದೆ. ಇನ್ಸಾಫ್‌ ಪಟೇಲ್‌ ಅವರ ಸಂಗೀತ ಸಂಯೋಜನೆ ಪ್ರೇಕ್ಷಕರನ್ನು ಮಂತ್ರಮುಗ್ಧರಾಗಿಸಿತು. ಅತ್ಯಂತ ಕಡಿಮೆ ವಾದ್ಯಗಳ ಈ ಸಂಯೋಜನೆ ನಾಟಕದ ದೀರ್ಘ ಸಂಭಾಷಣೆಗಳ ಏಕತಾನತೆಯನ್ನು ಮಣಿಸಿತ್ತು. ಆರಂಭದ ಹಾಡನ್ನು ನಾಟಕದುದ್ದಕ್ಕೂ ದೃಶ್ಯದಿಂದ ದೃಶ್ಯಕ್ಕೆ ಬ್ರಿಡ್ಜ್ ಮ್ಯೂಜಿಕ್ ರೂಪದಲ್ಲಿ ಬಳಸಿದ ರೀತಿ, ಅದಕ್ಕೆ ತಕ್ಕಂತೆ ವಸ್ತ್ರವಿನ್ಯಾಸ, ಪೂರಕವಾದ ದೃಶ್ಯ ಮತ್ತು ನೃತ್ಯ ಸಂಯೋಜನೆಯಿತ್ತು. ಲಕ್ಷ್ಮಣ ಮಂಡಲಗೇರ ಅವರು ಬೆಳಕಿನ ದೃಶ್ಯ-ಸಾದೃಶ್ಯಗಳನ್ನು  ಒಂದು ಭಾವವಾಗಿ ಕಾಣಿಸಿದ್ದಾರೆ. ದೃಶ್ಯ ಜೋಡಣೆಗೆ ಪೂರಕವಾಗಿ ಬಂದ ಬೆಳಕಿನ ಸಂಯೋಜನೆ ಕಾವ್ಯಾತ್ಮಕ ರೂಪು ಪಡೆದಿತ್ತು. ನಿರ್ಮಲಾ ಅವರು ನಾಟಕದಲ್ಲಿ ನ್ಯಾಯಾಧೀಶರ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಕಲಬುರಗಿ ಸಮುದಾಯದ ಈ ಆಯೋಜನೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ನಾಟಕದಲ್ಲಿ ಯುವಕ ಮತ್ತು ಸಂಶೋಧಕನ ಪಾತ್ರಧಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.