ADVERTISEMENT

ಅಭಿವ್ಯಕ್ತಿಯ ‘ಮಾಸ್ಟರ್’ ಪೀಸ್!

ರವೀಂದ್ರ ಭಟ್ಟ
Published 30 ಜನವರಿ 2021, 19:30 IST
Last Updated 30 ಜನವರಿ 2021, 19:30 IST
ಲಂಚಾವತಾರ ನಾಟಕದಲ್ಲಿ ಮಾಸ್ಟರ್‌ ಹಿರಣ್ಣಯ್ಯ ಚಿತ್ರ: ಸವಿತಾ ಬಿ.ಆರ್‌.
ಲಂಚಾವತಾರ ನಾಟಕದಲ್ಲಿ ಮಾಸ್ಟರ್‌ ಹಿರಣ್ಣಯ್ಯ ಚಿತ್ರ: ಸವಿತಾ ಬಿ.ಆರ್‌.   

ಅದು 1962ರ ಚೀನಾ ಯುದ್ಧದ ಸಮಯ. ಜವಾಹರಲಾಲ್ ನೆಹರೂ ಪ್ರಧಾನಿಯಾಗಿದ್ದರು. ಕರ್ನಾಟಕದಲ್ಲಿ ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದರು. ಆಗ ಪ್ರಧಾನಿ ಅವರು ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ದೇಶದ ಜನರಲ್ಲಿ ಮನವಿ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರ ನಾಟಕ ತಂಡ ಮೈಸೂರಿನ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ನಾಟಕ ನಡೆಸುತ್ತಿತ್ತು. ಒಂದು ದಿನ ಖ್ಯಾತ ಕಾದಂಬರಿಕಾರ ತ.ರಾ.ಸು. ಅವರು ಮಾಸ್ಟರ್ ಹಿರಣ್ಣಯ್ಯ ಅವರಿಗೆ ‘ನೀವು ಕೂಡ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿ’ ಎಂದು ಸಲಹೆ ಮಾಡಿದರು. ಅದಕ್ಕೆ ಹಿರಣ್ಣಯ್ಯ ಒಪ್ಪಿದರು. ‘ಆದರೆ ನಾನು ನಾಟಕದ ಹಣ ನೀಡಿದರೆ ಅದು ಜನರು ನೀಡಿದ ಹಣವಾಗುತ್ತದೆ. ಅದರ ಬದಲು ನಾನು ನನ್ನ ಪಾಲಿನ ಹಣವನ್ನು ಸಂಗ್ರಹಿಸಿ ಅದರಲ್ಲಿ ನನ್ನ ತೂಕದ ಬೆಳ್ಳಿಯನ್ನು ನೀಡುತ್ತೇನೆ’ ಎಂದರು.

ಈ ವಿಷಯ ‘ಪ್ರಜಾವಾಣಿ’ಯ ಆಗಿನ ಸಂಪಾದಕ ಟಿ.ಎಸ್.ಆರ್ ಮತ್ತು ತೋಟಗಾರಿಕೆ ಇಲಾಖೆಯ ಮರಿಗೌಡರಿಗೆ ಗೊತ್ತಾಯಿತು. ಈ ಇಬ್ಬರೂ ಬಂದು ‘ನೀವು ಹೋಗಿ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಹಣ ನೀಡಿದರೆ ಯಾರಿಗೂ ಗೊತ್ತಾಗುವುದಿಲ್ಲ. ರಂಗಭೂಮಿಯಲ್ಲಿ ನೀವು ಬೆಳೆಯುತ್ತಿರುವ ನಟ. ಅದಕ್ಕಾಗಿ ನಿಮ್ಮ ನಾಟಕಕ್ಕೆ ಮುಖ್ಯಮಂತ್ರಿ ನಿಜಲಿಂಗಪ್ಪ ಅವರನ್ನು ಕರೆಸಿ. ಅವರು ನಾಟಕ ನೋಡಲಿ. ಅಂತ್ಯದಲ್ಲಿ ಅವರಿಗೇ ಬೆಳ್ಳಿಯನ್ನು ನೀಡಿ ಅದನ್ನು ಪರಿಹಾರ ನಿಧಿಗೆ ತಲುಪಿಸಲು ಹೇಳಿ’ ಎಂದು ಸಲಹೆ ಮಾಡಿದರು. ಅದರಂತೆ ನಿಜಲಿಂಗಪ್ಪ ಅವರನ್ನು ನಾಟಕಕ್ಕೆ ಆಹ್ವಾನಿಸಲಾಯಿತು.

ನಿಜಲಿಂಗಪ್ಪ ನಾಟಕ ನೋಡಲು ಬಂದರು. ‘ಲಂಚಾವತಾರ’ ನಾಟಕ. ಹಿರಣ್ಣಯ್ಯ ಎಂದಿನಂತೆಯೇ ಕಾಂಗ್ರೆಸ್ ಧುರೀಣರನ್ನು ಬೈದರು. ರಾಜಕೀಯ ನಾಯಕರನ್ನು ಟೀಕಿಸಿದರು. ಇದು ನಿಜಲಿಂಗಪ್ಪ ಅವರನ್ನು ಕೆರಳಿಸಿತು. ನಾಟಕದ ಮಧ್ಯೆಯೇ ಅವರು ಎದ್ದುನಿಂತು ಹಿರಣ್ಣಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಕಾಂಗ್ರೆಸ್ ಪಕ್ಷವನ್ನು ಬೈತೀಯಾ? ನಾಟಕವನ್ನು ನಿಲ್ಲಿಸಿಬಿಡ್ತೀನಿ’ ಎಂದು ಬೆದರಿಕೆ ಹಾಕಿದರು. ಅದಕ್ಕೆ ಹಿರಣ್ಣಯ್ಯ ಬೆದರಲಿಲ್ಲ. ‘ನಾನು ಕಾಂಗ್ರೆಸ್ ಪಕ್ಷವನ್ನು ಬೈಯುತ್ತಿಲ್ಲ. ಕಾಂಗ್ರೆಸ್‌ನಲ್ಲಿರುವ ಕೆಟ್ಟವರನ್ನು ಬೈತಾ ಇದ್ದೇನೆ. ನಿಮ್ಮ ಪಕ್ಷದಲ್ಲಿ ಯಾರೂ ಕೆಟ್ಟವರೇ ಇಲ್ಲವಾ’ ಎಂದು ಪ್ರಶ್ನಿಸಿದರು.

ADVERTISEMENT

ನಿಜಲಿಂಗಪ್ಪ ಅವರ ಸಿಟ್ಟು ಇನ್ನೂ ಹೆಚ್ಚಾಯಿತು. ‘ನಾನು ನಿನಗೆ ಎಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತೇನೆ’ ಎಂದರು. ‘ಎಲ್ಲಿ, ಏನು ಮಾಡ್ತೀರಿ ಎಂದು ಇಲ್ಲಿಯೇ ಹೇಳಿ. ನೀವು ಜನರಿಂದ ಆಯ್ಕೆಯಾದವರು. ಇಲ್ಲಿ ಜನರು ಇದ್ದಾರೆ. ಅವರ ಮುಂದೆಯೇ ನಿಮ್ಮ ನಿರ್ಧಾರ ಪ್ರಕಟಿಸಿ’ ಎಂದು ಹಿರಣ್ಣಯ್ಯ ಪಟ್ಟು ಹಿಡಿದರು. ‘ನಿಮ್ಮ ನಾಟಕ ಬ್ಯಾನ್ ಮಾಡ್ತೇನೆ. ಇಲ್ಲವಾದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಸವಾಲು ಹಾಕಿದರು. ಅದಕ್ಕೂ ಜಗ್ಗದ ಹಿರಣ್ಣಯ್ಯ ‘ನಾನು ಸೋತರೆ ಬಣ್ಣ ಹಚ್ಚುವುದನ್ನು ನಿಲ್ಲಿಸುತ್ತೇನೆ’ ಎಂದು ಪ್ರತಿ ಸವಾಲು ಹಾಕಿದರು. ನಿಜಲಿಂಗಪ್ಪ ಸಿಟ್ಟಿನಿಂದಲೇ ಹೊರನಡೆದರು.

ಈ ವಿಷಯ ವಿಧಾನಸಭೆಯಲ್ಲಿಯೂ ಪ್ರಸ್ತಾಪ ಆಯಿತು. ‘ಲಂಚಾವತಾರ’ ನಾಟಕ ನಿಷೇಧಿಸುವುದಾಗಿ ಮುಖ್ಯಮಂತ್ರಿ ಹೇಳಿದರು.

ಆಗ ವಿರೋಧ ಪಕ್ಷದಲ್ಲಿದ್ದ ಎಚ್.ಡಿ.ದೇವೇಗೌಡ, ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಕೋಣಂದೂರು ಲಿಂಗಪ್ಪ ಮುಂತಾದವರು ಇದನ್ನು ವಿರೋಧಿಸಿದರು. ‘ಲಂಚ ತೆಗೆದುಕೊಳ್ಳುವುದು ತಪ್ಪು ಎಂದು ಅವರು ನಾಟಕ ಮಾಡುತ್ತಿದ್ದಾರೆ. ನೀವು ಅದನ್ನು ನಿಷೇಧ ಮಾಡಿದರೆ ಲಂಚ ತೆಗೆದುಕೊಳ್ಳುವುದು ಸರಿ ಎಂದಾಗುತ್ತದೆ. ಇದು ವಿಧಾನಸಭೆಯ ದಾಖಲೆಗಳಲ್ಲಿಯೂ ಸೇರಿ ಹೋಗುತ್ತದೆ. ಆದ್ದರಿಂದ ಇಲ್ಲಿ ನಿಷೇಧ ಮಾಡುವುದು ಬೇಡ’ ಎಂದು ಸಲಹೆ ಮಾಡಿದರು. ಆದರೆ ನಿಜಲಿಂಗಪ್ಪ ‘ಲಂಚಾವತಾರ’ ನಾಟಕ ನಿಷೇಧ ಮಾಡಬೇಕು ಎಂದು ಹೈಕೋರ್ಟ್ ಮೊರೆ ಹೋದರು. ಆಗ ಹಿರಣ್ಣಯ್ಯ ಅವರ ಪರವಾಗಿ ಗೋಪಿವಲ್ಲಭ ಅಯ್ಯಂಗಾರ್ ವಾದ ಮಾಡಿದರು. ‘1958ರಿಂದ ಈ ನಾಟಕವನ್ನು ಪ್ರದರ್ಶಿಸಲಾಗುತ್ತಿದೆ. ಎಲ್ಲಿಯೂ ಗಲಾಟೆಯಾಗಿಲ್ಲ. ಗಲಭೆಯೂ ಆಗಿಲ್ಲ. ಇವರು ಮಾತನಾಡಲಿ ಎಂದು ಜನ ಬಯಸುತ್ತಿದ್ದಾರೆ. ಅದನ್ನು ನೋಡಿ ಖುಷಿ ಪಡುತ್ತಿದ್ದಾರೆ. ನಾಟಕವನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತಡೆ ಒಡ್ಡಲು ಆಗದು’ ಎಂದು ಹೈಕೋರ್ಟ್ ತೀರ್ಪು ನೀಡಿತು.

ಕೋರ್ಟಿನಲ್ಲಿ ಗೆದ್ದ ಹಿರಣ್ಣಯ್ಯ ಅವರನ್ನು ಕರೆಸಿಕೊಂಡ ನಿಜಲಿಂಗಪ್ಪ ‘ನೀನು ಗೆದ್ದಿದ್ದೀಯ. ಮಾತಿನಂತೆಯೇ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ’ ಎಂದರು. ಅದನ್ನು ಒಪ್ಪದ ಹಿರಣ್ಣಯ್ಯ ‘ನಾನು ನಿಮ್ಮ ಮೊಮ್ಮಗನ ವಯಸ್ಸಿನವನು. ಮಾತಿನ ಭರದಲ್ಲಿ ನೀವೂ ಏನೇನೋ ಹೇಳಿದಿರಿ. ನಾನೂ ಏನೇನೋ ಹೇಳಿದೆ. ಇದನ್ನು ಇಷ್ಟಕ್ಕೆ ಬಿಟ್ಟು ಬಿಡೋಣ’ ಎಂದರು.

ರಂಗಕರ್ಮಿ ಬಾಬು ಹಿರಣ್ಣಯ್ಯ- ಪ್ರಜಾವಾಣಿ ಚಿತ್ರ/ ರಂಜು ಪಿ

ಒಮ್ಮೆ ಹಿರಣ್ಣಯ್ಯ ನಾಟಕ ಮಾಡುವಾಗ ‘ರಾಜಾಜಿನಗರದ ಈ ಬೀದಿಯಲ್ಲಿರುವ 8 ಮನೆಗಳೂ ನಿಜಲಿಂಗಪ್ಪ ಮತ್ತು ಅವರ ಸಂಬಂಧಿಗಳದ್ದು’ ಎಂದು ಹೇಳಿದ್ದರು. ಮರುದಿನ ಮುಖ್ಯಮಂತ್ರಿ ಫೋನ್ ಮಾಡಿ ‘ಏನ್ರಿ ನಿಮಗೆ ನನ್ನ ಬಗ್ಗೆ ಗೊತ್ತಿಲ್ಲವಾ? ಆ ಬೀದಿಯಲ್ಲಿರುವ 8 ಮನೆ ನನ್ನದು ಎಂದು ನಾಟಕದಲ್ಲಿ ಹೇಳಿದಿರಂತೆ’ ಎಂದು ಪ್ರಶ್ನೆ ಮಾಡಿದರಂತೆ. ಅದಕ್ಕೆ ಹಿರಣ್ಣಯ್ಯ ‘ಓಹೋ 8 ಮನೆ ಅಲ್ವಾ, ಎಷ್ಟು ಮನೆ ಅಂತ ಹೇಳಿ, ಅಷ್ಟನ್ನೇ ಹೇಳ್ತೇನೆ’ ಎಂದು ಉತ್ತರಿಸಿದ್ದರಂತೆ.

ಮಾಸ್ಟರ್ ಹಿರಣ್ಣಯ್ಯ ಅವರ ನಾಟಕ ನೋಡಲು ರಾಮಕೃಷ್ಣ ಹೆಗಡೆ, ಎಸ್.ಎಂ.ಕೃಷ್ಣ, ಜೆ.ಎಚ್.ಪಟೇಲ್ ಎಲ್ಲರೂ ಬರುತ್ತಿದ್ದರಂತೆ. ಆದರೆ ಯಾರೂ ಬೇಸರ ಮಾಡಿಕೊಳ್ಳುತ್ತಿರಲಿಲ್ಲವಂತೆ. ಬಸವಲಿಂಗಪ್ಪ ಅವರೂ ಬಂದು ಸಂತೋಷಪಡುತ್ತಿದ್ದರಂತೆ. ಒಂದು ದಿನ ಬಸವಲಿಂಗಪ್ಪ ಬಂದು ‘ನೋಡಿ ಹಿರಣ್ಣಯ್ಯ ಇವತ್ತು ವಕೀಲರ ಜೊತೆಗೇ ಬಂದಿದ್ದೇನೆ. ನನ್ನ ಬಗ್ಗೆ ಮಾತನಾಡುವಾಗ ಹುಷಾರು’ ಎಂದರಂತೆ. ಅದಕ್ಕೆ ಹಿರಣ್ಣಯ್ಯ ‘ಇಷ್ಟು ದಿನ ನಿಮ್ಮ ಬಗ್ಗೆ ನಾಲ್ಕು ಮಾತನಾಡುತ್ತಿದ್ದೆ. ಇವತ್ತು ಇನ್ನೆರಡು ಸೇರಿಸಿ ಆಡುತ್ತೇನೆ’ ಎಂದು ಹೇಳಿದ್ದರಂತೆ. ನಾಟಕ ಮುಗಿದ ನಂತರ ಬಸವಲಿಂಗಪ್ಪ ‘ಏನೇ ಆಗಲ್ರಿ, ನೀವು ಚೆನ್ನಾಗಿ ಮಾತಾಡ್ತೀರಾ’ ಎಂದು ಪ್ರಶಂಸೆ ಮಾಡಿ ಹೋದರಂತೆ.

ಲಂಚಾವತಾರ ನಾಟಕ ಹುಟ್ಟಿದ ಕತೆಯೇ ಚೆನ್ನಾಗಿದೆ. ತಂದೆ ಕೆ.ಹಿರಣ್ಣಯ್ಯ ಅವರು ತೀರಿಕೊಂಡಾಗ ಮಾಸ್ಟರ್ ಹಿರಣ್ಣಯ್ಯ ಅವರಿಗೆ ಇನ್ನೂ 19–20 ವರ್ಷ. ರಂಗಭೂಮಿಯಲ್ಲಿ ತಂದೆ ಸಾಕಷ್ಟು ಛಾಪು ಮೂಡಿಸಿದ್ದರು. ಅವರು ಮಾಡುತ್ತಿದ್ದ ಪಾತ್ರಗಳನ್ನು ಮಾಡಿದರೆ ಜನರು ಅವರ ಜೊತೆಗೆ ಹೋಲಿಕೆ ಮಾಡುತ್ತಿದ್ದರು. ಏನಾದರೂ ಹೊಸತು ಮಾಡುವ ಹುಮ್ಮಸ್ಸು ಇತ್ತು. ಆದರೆ ಏನು ಮಾಡಬೇಕು ಎಂದು ಗೊತ್ತಾಗಿರಲಿಲ್ಲ. ಆಗ ಬಳ್ಳಾರಿಯ ವಕೀಲ ಭೀಮಪ್ಪ ಶೆಟ್ಟಿ (ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಅವರ ತಂದೆ) ಮಾಸ್ಟರ್ ಹಿರಣ್ಣಯ್ಯ ಅವರಿಗೆ ಒಂದು ಪುಸ್ತಕ ನೀಡಿದರು. ಅದರಲ್ಲಿ ಗುಮಾಸ್ತನೊಬ್ಬನ ಕತೆ ಇತ್ತು. ಇದನ್ನು ನಾಟಕ ಮಾಡಿ ಎಂದು ಸಲಹೆ ಮಾಡಿದರು. ಅದು ಸರ್ಕಾರಿ ಕಚೇರಿಯಲ್ಲಿ ನಡೆಯುವ ಲಂಚಾವತಾರದ ಕತೆ. ಆದರೆ ಆಗ ಇನ್ನೂ ಲಂಚ ಇಷ್ಟೊಂದು ಜಾಸ್ತಿಯಾಗಿರಲಿಲ್ಲ. 1954ರಲ್ಲಿ ಈ ನಾಟಕವನ್ನು ರಚಿಸಿದ್ದರೂ ನಾಲ್ಕು ವರ್ಷ ಅದನ್ನು ಆಡಲಿಲ್ಲ. ಆದರೆ ಭೀಮಪ್ಪ ಶೆಟ್ಟರು ‘ಲಂಚ ಎನ್ನುವುದು ಬೃಹತ್ತಾಗಿ ಬೆಳೆಯುತ್ತದೆ. ಅದರ ಮೊಳಕೆಗಳು ಈಗ ಕಾಣುತ್ತಿವೆ’ ಎಂದು ಹೇಳಿದ್ದರು. ಅದರಂತೆ 1958ರಲ್ಲಿ ರಂಗದ ಮೇಲೆ ಬಂದ ಈ ನಾಟಕ ದಿಗ್ವಿಜಯ ಸಾಧಿಸಿತು. ಸುಮಾರು 11 ಸಾವಿರ ಪ್ರದರ್ಶನಗಳು ಆದವು. ಎಲ್ಲ ಪ್ರದರ್ಶನದಲ್ಲಿಯೂ ಮಾಸ್ಟರ್ ಹಿರಣ್ಣಯ್ಯ ಅವರೇ ದತ್ತು ಪಾತ್ರ ಮಾಡಿದ್ದರು.

ಒಂದು ನಾಟಕ 11 ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿದ್ದು ಮತ್ತು ದತ್ತು ಪಾತ್ರವನ್ನು ಈ ಎಲ್ಲ ಪ್ರದರ್ಶನದಲ್ಲಿಯೂ ಒಬ್ಬರೇ ಮಾಡಿದ್ದು ಗಿನ್ನಿಸ್ ರೆಕಾರ್ಡ್. ಇದನ್ನು ರೆಕಾರ್ಡ್ ಬುಕ್‌ಗೆ ಕಳಿಸಿ ಎಂದು ಸಲಹೆ ಮಾಡಿದರೆ ನಮ್ಮ ಬಳಿ ಯಾವುದೇ ದಾಖಲೆ ಇರಲಿಲ್ಲ ಎಂದು ಬಾಬು ಹಿರಣ್ಣಯ್ಯ ಹೇಳುತ್ತಾರೆ. ‘ಲಂಚಾವತಾರ ಇಷ್ಟೊಂದು ಪ್ರಸಿದ್ಧವಾಗುತ್ತದೆ ಎಂಬುದು 1958ರಲ್ಲಿ ಅದರ ಮೊದಲ ಪ್ರದರ್ಶನ ಮಾಡಿದಾಗ ಗೊತ್ತಾಗಿರಲಿಲ್ಲ. ಹುಟ್ಟಿದ ಮೊದಲ ಮಗನೇ ಮಹಾತ್ಮ ಗಾಂಧಿ ಆಗುತ್ತಾನೆ ಎಂದು ಗೊತ್ತಾಗಿ ಬಿಟ್ಟರೆ ನಂತರ ಯಾರೂ ಮಕ್ಕಳನ್ನು ಪಡೆಯಲು ಹೋಗುವುದೇ ಇಲ್ಲ. ಹುಟ್ಟಿದ ಎಲ್ಲ ಮಕ್ಕಳೂ ಮಹಾತ್ಮ ಗಾಂಧಿ, ಅಂಬೇಡ್ಕರ್ ಆಗಲಿ ಎಂಬ ಬಯಕೆ ನಮಗೆ ಇರುತ್ತದೆ. ಆದರೆ ಕೆಲವರು ಒಸಾಮಾ ಬಿನ್ ಲಾಡೆನ್ ಆಗಿಬಿಡುತ್ತಾರೆ ಏನು ಮಾಡೋದು? ಎಂದು ನಮ್ಮ ತಂದೆ ಹೇಳುತ್ತಿದ್ದರು ಎಂದು ಬಾಬು ನೆನಪಿಸಿಕೊಳ್ಳುತ್ತಾರೆ.

‘ಹೌದು, ಲಂಚಾವತಾರ ಇಷ್ಟೊಂದು ಪ್ರಯೋಗವಾಗಿದೆಯಲ್ಲ, ಲಂಚ ನಿಂತಿದೆಯಾ?’ ಎಂದು ಕೇಳಿದರೆ ನಮ್ಮ ತಂದೆ ‘ಹೌದು ನಿಂತಿದೆ. ಭದ್ರವಾಗಿ ನಿಂತಿದೆ’ ಎನ್ನೋರು. ಹೀಗೆ ಅವರ ಮಾತಿನ ಸರಣಿ ಮುಂದುವರಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.