ಬಣ್ಣದ ಬಟ್ಟೆಗಳ ಸಣ್ಣ ಸಣ್ಣ ತುಂಡುಗಳನ್ನು ಸೇರಿಸಿ ಹೊಲಿದಾಗ ರೂಪುಗೊಳ್ಳುವ ಚಿತ್ತಾರದ ‘ಕೌದಿ’ಯ ಸೌಂದರ್ಯಕ್ಕೆ ಮನ ಸೋಲದವರು ಅಪರೂಪ. ವರ್ಣಮಯ ಉಡುಗೆ, ತೊಡುಗೆ, ಹಾಡುಗಬ್ಬ ಸೇರಿದಂತೆ ಸಾಂಸ್ಕೃತಿಕ ಶ್ರೀಮಂತಿಕೆಯ ಬಂಜಾರರ ಬದುಕು ಕೂಡಾ ‘ಕೌದಿ‘ಯ ನೇಯ್ಗೆಯಂತಿದೆ. ಲಮಾಣಿ, ಬಂಜಾರ, ಲಂಬಾಣಿ, ಲಮಾಣ್, ಲದಣಿಯಾ– ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುವ ಈ ಸಮುದಾಯದ ಇತಿಹಾಸದ ಜಾಡು ಹಿಡಿದು ಹೊರಟರೆ ಅದು ಹರಪ್ಪ ಮೊಹೆಂಜಾದರೋಕ್ಕೆ ತಲುಪುತ್ತದೆ.
ಕಾಡು–ಮೇಡು, ಬೆಟ್ಟ–ಗುಡ್ಡ, ನೀರು ಇರುವಲ್ಲಿ ತಾಂಡಾ ಕಟ್ಟಿಕೊಂಡು ಜೀವಿಸುತ್ತಿದ್ದ ಈ ಸಮುದಾಯ ದೇಶದೆಲ್ಲೆಡೆ ಬೇರೆ ಬೇರೆ ಹೆಸರುಗಳಲ್ಲಿ ಹಂಚಿಹೋಗಿದೆ. ಪ್ರಪಂಚದ ನಾನಾ ದೇಶಗಳಲ್ಲೂ ಬಂಜಾರರ ಮೂಲನೆಲೆಯ ಐತಿಹ್ಯಗಳಿವೆ. ಇಂಥ ಅಪರೂಪದ ಸಮುದಾಯದ ಸಂಕಥನವನ್ನು ಕಟ್ಟಿಕೊಡುತ್ತದೆ ಮೈಸೂರು ರಂಗಾಯಣ ಪ್ರಸ್ತುತಪಡಿಸಿದ ‘ಗೋರ್‌ಮಾಟಿ’ ನಾಟಕ.
ಮೊದಲಾರ್ಧದಲ್ಲಿ ಬಂಜಾರ ಸಮುದಾಯದ ಇತಿಹಾಸ, ಮೂಲಪುರುಷ, ಬ್ರಿಟಿಷರ ದೌರ್ಜನ್ಯವನ್ನು ತೆರೆದಿಡುತ್ತದೆ. ಭಾರತದ ಉದ್ದಗಲಕ್ಕೂ ವ್ಯಾಪಾರಕ್ಕಾಗಿ ಸಂಚರಿಸುತ್ತಿದ್ದ ಲಂಬಾಣಿಗರು ಇವತ್ತಿನ ರಾಷ್ಟ್ರೀಯ ಹೆದ್ದಾರಿಗಳ ಮೂಲ ಮಾರ್ಗಕಾರರು. ಸೇನೆಗಳಿಗೆ ದವಸ–ಧಾನ್ಯ ಸರಬರಾಜು ಮಾಡಿ ನಂಬಿಕಸ್ಥರಾಗಿದ್ದ ಈ ಸಮುದಾಯ ಎಲ್ಲಿ ಆರ್ಥಿಕವಾಗಿ ಸಬಲವಾಗಿ ತಮಗೆ ಪ್ರತಿಸ್ಪರ್ಧಿಗಳಾಗುವರೋ ಎಂಬ ಭೀತಿಯಲ್ಲಿ ‘ಅಪರಾಧಿ ಬುಡಕಟ್ಟು’ ಎಂಬ ಪಟ್ಟ ಕಟ್ಟುವ ಬ್ರಿಟಿಷರ ಕುತಂತ್ರ, ನೆಲೆ ನಿಲ್ಲದ ಅತಂತ್ರ ಬದುಕಿನಲ್ಲೇ ಸಾಗುವ ಬಂಜಾರರ ಸ್ಥಿತಿಗತಿಯ ಬಗ್ಗೆ ನಾಟಕ ಬೆಳಕು ಚೆಲ್ಲುತ್ತದೆ.
ಮೂಲತಃ ಪಶುಪಾಲಕರಾದ ಬಂಜಾರರ ಕೊಳಲಿನ ನಾದಕ್ಕೆ ಮನಸೋಲುವ ಕೃಷ್ಣ, ತನಗೂ ಅಂಥದ್ದೇ ಕೊಳಲು ಬೇಕೆಂದು ಸ್ನೇಹಿತ ದಾದಾಮೋಲನಿಗೆ ಗಂಟು ಬೀಳುತ್ತಾನೆ. ಬಂಜಾರರಿಂದ ಕೊಳಲು ಪಡೆಯುವ ಕೃಷ್ಣ ಮುಂದೆ ಅದರ ಮೋಹಕ್ಕೆ ಬಿದ್ದು ಸಾಗುವ ಹಾದಿಯೇ ಬೇರೆಯಾಗುತ್ತದೆ. ಕೃಷ್ಣನಿಗೆ ಕೊಟ್ಟ ಮಾತಿನಂತೆ ದಾದಾಮೋಲ ಮತ್ತು ರಾಧೆ ಬಂಜಾರರ ಮೂಲ ಪುರುಷ–ಸ್ತ್ರೀಯರಾಗುತ್ತಾರೆ. ಸಮುದಾಯದ ನೆಲೆಗಳನ್ನು ಹುಡುಕಿದಾಗ ಕಾಮಿಡಿಯನ್ ಚಾರ್ಲಿ ಚಾಪ್ಲಿನ್, ಪಾಕಿಸ್ತಾನದ ಗಾಯಕಿ ರೇಷ್ಮಾ, ಭಾರತದ ಓಟಗಾರ ಮಿಲ್ಕಾ ಸಿಂಗ್, ಮೈಸೂರಿನವರೇ ಆದ ನೃತ್ಯಗಾರ್ತಿ ವೆಂಕಟಲಕ್ಷ್ಮಮ್ಮ ಬಂಜಾರ ಸಮುದಾಯದವರು ಎಂಬುದನ್ನು ನಾಟಕ ಬೆಳಕಿಗೆ ತರುತ್ತದೆ. ಶ್ರಮಜೀವಿಗಳೂ, ಪ್ರತಿಭಾವಂತರೂ ಆದ ಬಂಜಾರರ ಜೀವನಶೈಲಿಯನ್ನೂ ರಂಗದ ಮೇಲೆ ಸೊಗಸಾಗಿ ತರಲಾಗಿದೆ. ಮುಖ್ಯವಾಗಿ ಸಮುದಾಯದವರ ಆರಾಧ್ಯದೈವ ಸಂತ ಸೇವಾಲಾಲ್, ಮರಿಯಮ್ಮ ಅವರ ಸಂದೇಶ, ಮಾತೃಪ್ರಧಾನ ಮೌಲ್ಯವನ್ನೂ ನಾಟಕ ಪ್ರತಿಬಿಂಬಿಸುತ್ತದೆ.
ತಾಂಡಾದ ಕಾರ್‌ಬಾರಿಗಳ ಪಂಚಾಯಿತಿ ಸಭೆಯಲ್ಲಿ ಕಾಯಿಲೆಪೀಡಿತ ಗಂಡನ ಪತ್ನಿ, ಪರ ಪುರುಷನ ಪ್ರೀತಿಗೆ ಹಂಬಲಿಸುವುದು, ಆತನೂ ಆಕೆಯ ಮೋಹಕ್ಕೊಳಗಾಗಿ, ಪತ್ನಿ ಮತ್ತು ಮಕ್ಕಳನ್ನು ಬಿಟ್ಟು ಬರುವ ದೃಶ್ಯಕ್ಕಿಂತಲೂ ಬಂಜಾರರ ವೈಚಾರಿಕ ಪ್ರಜ್ಞೆಗೆ ಸಾಕ್ಷಿಯಂತಿರುವ ‘ವಿಧವಾ ವಿವಾಹ’ ಪದ್ಧತಿಗೆ ಆದ್ಯತೆ ನೀಡಿದ್ದರೆ ನಾಟಕ ಮತ್ತಷ್ಟು ಅರ್ಥಪೂರ್ಣವಾಗುತ್ತಿತ್ತು. ಅಂತೆಯೇ ಮೈಸೂರು ಮಹಾರಾಜರ ಆಸ್ಥಾನದಲ್ಲಿ ನರ್ತಕಿಯಾಗಿದ್ದ ವೆಂಕಟಲಕ್ಷ್ಮಮ್ಮ ಅವರನ್ನು ಪರಿಚಯಿಸುವ ಜೊತೆಗೆ, ಬಂಜಾರ ಸಮುದಾಯಕ್ಕೆ ಮೊದಲ ಬಾರಿಗೆ ರಾಜಕೀಯ ಪ್ರಾತಿನಿಧ್ಯ ನೀಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಉಲ್ಲೇಖವೂ ಇದ್ದಿದ್ದರೆ ಸೂಕ್ತವಾಗುತ್ತಿತ್ತು.
ಲೇಖಕ ಶಿರಗಾನಹಳ್ಳಿ ಶಾಂತನಾಯಕ್ ಅವರ ‘ಗೋರ್‌ಮಾಟಿ’, ಸಾಹಿತಿ ಬಿ.ಟಿ. ಲಲಿತಾ ನಾಯಕ್ ಅವರ ‘ಹಬ್ಬ ಮತ್ತು ಬಲಿ’ ಹಾಗೂ ‘ತಾಂಡಾಯಣ’ ಕೃತಿಗಳಲ್ಲಿನ ಅಂಶಗಳನ್ನು ಹೆಕ್ಕಿ ತೆಗೆದಿರುವ ನಿರ್ದೇಶಕರು ಅವುಗಳನ್ನು ಸನ್ನಿವೇಶಕ್ಕೆ ತಕ್ಕಂತೆ ಚಿತ್ರಿಸಿದ್ದಾರೆ. ಮೊಘಲ್ ದೊರೆ ಔರಂಗಜೇಬನಿಂದ ಹತನಾಗುವ ಸಿಖ್ಖರ 9ನೇ ಗುರು ತೇಜ್ ಬಹಾದ್ದೂರ್ ಅವರ ಅಂತ್ಯಸಂಸ್ಕಾರ ನಡೆಸುವ ಲಕ್ಕಿ ಸಾ ಬಂಜಾರ ಅವರ ಶೌರ್ಯ, ಹೈದರಾಬಾದ್‌ನಲ್ಲಿನ ಜಂಗಿ–ಭಂಗಿ ಸಹೋದರರ ಕಥನವನ್ನೂ ನಾಟಕ ಒಳಗೊಂಡಿದೆ. ಲಕ್ಕಿ ಸಾ ಬಂಜಾರನ ಶೌರ್ಯದ ಕಥನ ಹೇಳಲು ನಾಟಕದಲ್ಲಿ ಪ್ರಥಮ ಬಾರಿಗೆ ಶ್ಯಾಡೊಪಪೆಟ್ ಬಳಸಿಕೊಂಡಿರುವ ರೀತಿ ಆಕರ್ಷಕವಾಗಿದೆ.
ನಾಟಕದ ಮೊದಲಾರ್ಧ ಬಂಜಾರರ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮಹಾರೂಪಕದಂತೆ ಬಿಂಬಿಸಿದರೆ, ದ್ವಿತೀಯಾರ್ಧ ಬಂಜಾರರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಯನ್ನು ಬಿಂಬಿಸುತ್ತದೆ. ಕೊನೆಯಲ್ಲಿ ಚಾರ್ಲಿ ಚಾಪ್ಲಿನ್ ಅವರ ಮಾತುಗಳು ಪ್ರಸ್ತಕ ರಾಜಕಾರಣದ ಸ್ಥಿತಿಗೆ ಕನ್ನಡಿ ಹಿಡಿಯುತ್ತವೆ.
ಸಮುದಾಯವೊಂದರ ಸಂಕಥನವನ್ನು ಕೆಲವೇ ಗಂಟೆಗಳಲ್ಲಿ ರಂಗರೂಪದಲ್ಲಿ ಕಟ್ಟಿಕೊಡುವುದು ಸುಲಭವಲ್ಲ. ಆದರೆ, ನಿರ್ದೇಶಕ ಸಿ. ಬಸವಲಿಂಗಯ್ಯ ಅವರು, ಬಂಜಾರರ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಸ್ಥಿತಿಗಳನ್ನು ಸೂಕ್ಷ್ಮವಾಗಿ ತೆರೆದಿಡುತ್ತಲೇ ಇತಿಹಾಸ, ವರ್ತಮಾನದ ತಲ್ಲಣಗಳನ್ನೂ ಅನಾವರಣಗೊಳಿಸಿದ್ದಾರೆ.
ಲಂಬಾಣಿ ಸಮುದಾಯದ ಉಡುಗೆ–ತೊಡುಗೆ ವಸ್ತ್ರವಿನ್ಯಾಸ (ಪ್ರಮೋದ್ ಶಿಗ್ಗಾಂವ್, ಶಶಿಕಲಾ ಬಿ.ಎನ್.), ರಂಗಸಜ್ಜಿಕೆ (ಶಶಿಧರ ಅಡಪ), ನೃತ್ಯ ಸಂಯೋಜನೆ (ನೇಸರ ಮೈಮ್ ರಮೇಶ್), ಬೆಳಕು ವಿನ್ಯಾಸ (ಕೃಷ್ಣಕುಮಾರ್ ನಾರ್ಣಕಜೆ) ಹಾಗೂ ಸಂಗೀತ ನಿರ್ವಹಣೆ (ಧನಂಜಯ ಆರ್.ಸಿ) ಸೇರಿದಂತೆ ನೇಪಥ್ಯ ಕಲಾವಿದರ ಪರಿಶ್ರಮ ನಾಟಕಕ್ಕೆ ಪೂರಕವಾಗಿವೆ. ಮುಖ್ಯವಾಗಿ ತಮ್ಮದಲ್ಲದ ಸಮುದಾಯವೊಂದರ ಭಾಷೆ, ಸಂಸ್ಕೃತಿಯನ್ನು ಅರಿತು ಅದನ್ನು ರಂಗದ ಮೇಲೆ ಪ್ರಸ್ತುತಪಡಿಸಿದ ಕಲಾವಿದರ ಶ್ರಮ ನಾಟಕದ ಉದ್ದಕ್ಕೂ ಗೋಚರಿಸುತ್ತದೆ. ಅಲೆಮಾರಿ, ಬುಡಕಟ್ಟು ಸಮುದಾಯವೊಂದರ ಸಂಕಥನವನ್ನು ರಂಗದ ಮೇಲೆ ತರಲು ಕಾರಣವಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಯತ್ನ ಶ್ಲಾಘನೀಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.