ಮನುಷ್ಯನ ಪ್ರೀತಿ-ಪ್ರೇಮ, ಅವನೊಳಗಿನ ಹಿಂಸೆ-ಹತಾಶೆ, ಎದುರಾಗುವ ಶೋಕ-ದುರಂತಗಳು ಕಾಲಾತೀತ ಹಾಗೂ ದೇಶಾತೀತ. ಸ್ಪೈನ್ ನಾಟಕಕಾರ ಫೆಡ್ರಿಕೊ ಗಾರ್ಸಿಯ ಲೋರ್ಕ 1932ರಲ್ಲಿ ಈ ಅಂಶಗಳನ್ನೇ ಪ್ರಧಾನವಾಗಿಟ್ಟುಕೊಂಡು ರಚಿಸಿದ ‘ಬ್ಲಡ್ ವೆಡ್ಡಿಂಗ್’ ನಾಟಕ ಇವತ್ತಿಗೂ ಪ್ರಸ್ತುತವಾಗುವುದು ಇದೇ ಕಾರಣಕ್ಕೆ.
ಲೋರ್ಕ ನಾಟಕಕಾರ ಅಷ್ಟೇ ಅಲ್ಲ, ಕವಿ ಕೂಡ. ಮನುಷ್ಯನ ಮನಸ್ಸಿನ ದ್ವಂದ್ವ, ಚಡಪಡಿಕೆ, ದಾಹ, ಪ್ರೇಮ —ಇವುಗಳನ್ನು ತನ್ನ ನಾಟಕ ಹಾಗೂ ಕವನಗಳಲ್ಲಿ ಬಹಳ ಸಮರ್ಥವಾಗಿ ಅಭಿವ್ಯಕ್ತಿಸಿ, ಆಗಿನ ಕಾಲಕ್ಕೆ ಅಪಾರ ಜನಮನ್ನಣೆ ಗಳಿಸಿದ್ದರು. ಅವರ ‘ಬ್ಲಡ್ ವೆಡ್ಡಿಂಗ್’ ನಾಟಕ ಸಿನಿಮಾ ಕೂಡ ಆಗಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಈ ನಾಟಕವನ್ನು ಕನ್ನಡಕ್ಕೆ ಬಹಳ ಹಿಂದೆಯೇ ಲೇಖಕಿ ಕೆ.ಎನ್. ವಿಜಯಲಕ್ಷ್ಮಿ ಅವರು ಅದೇ ಹೆಸರಿನಲ್ಲಿ ಅನುವಾದಿಸಿದ್ದಾರೆ. ನೀನಾಸಂ ಪ್ರಾಂಶುಪಾಲ ಹಾಗೂ ಕನ್ನಡದ ಪ್ರತಿಭಾವಂತ ನಿರ್ದೇಶಕರಾದ ಡಾ.ಎಂ.ಗಣೇಶ ನೀನಾಸಂ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಗಾಗಿ ಈ ನಾಟಕವನ್ನು ವಿನ್ಯಾಸಗೊಳಿಸಿ, ನಿರ್ದೇಶಿಸಿದ್ದಾರೆ. ಇದರ ಮೊದಲ ಪ್ರಯೋಗ ಈಚೆಗೆ ಹೆಗ್ಗೋಡಿನ ರಂಗಶಿಕ್ಷಣ ಕೇಂದ್ರದಲ್ಲಿ ನಡೆಯಿತು.
ಈ ಪ್ರಯೋಗ ಹಲವು ಕಾರಣಗಳಿಗಾಗಿ ಗಮನಸೆಳೆಯಿತು. ನಾಟಕವನ್ನು ಕನ್ನಡ ನೆಲದ ಸಂಸ್ಕೃತಿಗೆ ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ. ಕೊಡವ ಆಚರಣೆ ಹಾಗೂ ಜನಪದ ಗೀತೆಗಳು ನಾಟಕದ ಉದ್ದಕ್ಕೂ ಜತೆಯಾಗುವುದರಿಂದ ಇದು ಹೊರಗಿನ ಕಥೆಯಾಗಿ ಕಾಣಿಸುವುದಿಲ್ಲ. ಹೀಗಾಗಿ ಗೊಂದಲಗಳಿಲ್ಲದೆ ಪ್ರೇಕ್ಷಕನನ್ನು ಮುಟ್ಟುವಲ್ಲಿ ನಾಟಕ ಯಶಸ್ವಿಯಾಯಿತು. ಹಲವು ಬಾರಿ ನಟರ ದೈಹಿಕ ಕಸರತ್ತು, ನಿರ್ದೇಶಕರ ಬುದ್ಧಿವಂತಿಕೆಯ ಪ್ರದರ್ಶನಕ್ಕಷ್ಟೇ ಸೀಮಿತವಾಗುತ್ತಿದ್ದ ನೀನಾಸಂ ನಾಟಕಗಳಿಗೆ ‘ಬ್ಲಡ್ ವೆಡ್ಡಿಂಗ್’ನಿಂದಾಗಿ ಜನಮನ್ನಣೆಯ ಹೊಸದೊಂದು ಹಾದಿ ತೆರೆದುಕೊಂಡಿತು.
ನಾಟಕದಲ್ಲಿ ಕುಟುಂಬ ದ್ವೇಷ ಇದೆ. ಚಾಕು-ಚೂರಿ ಸಂಸ್ಕೃತಿ ಇದೆ. ಪ್ರೀತಿ-ಪ್ರೇಮದ ಸಂಬಂಧಗಳಿವೆ. ಒಂಟಿತನ, ಹತಾಶೆ, ದ್ವಂದ್ವ, ಅಸಹಾಯಕತೆಯೂ ಅಡಕಗೊಂಡಿದೆ. ಇವೆಲ್ಲವೂ ವಿಭಿನ್ನವಾಗಿ ನಿರೂಪಣೆಗೊಂಡು ನಾಟಕವನ್ನು ವಿಶಿಷ್ಟವಾಗಿಸಿವೆ.
ಲೋರ್ಕ, ಸ್ತ್ರೀ ಪರ ನಾಟಕಕಾರ ಎನ್ನುವುದಕ್ಕೆ ನಾಟಕದಲ್ಲಿ ಹಲವು ಉದಾಹರಣೆಗಳು ಸಿಗುತ್ತವೆ. ಪುರುಷನೆಂಬ ಅಹಂಕಾರದಲ್ಲಿ ತಮ್ಮನ್ನು ತಾವು ಕಳೆದುಕೊಳ್ಳುವ ಗಂಡಸರು ಒಂದು ಕಡೆಯಾದರೆ, ಸಹನೆ, ಸಂಯಮದಲ್ಲೇ ಬದುಕನ್ನು ಅರಳಿಸಿಕೊಳ್ಳುವ ಹಂಬಲದಲ್ಲಿರುವ ಹೆಣ್ಣುಮಕ್ಕಳು ಮತ್ತೊಂದು ಕಡೆಯಲ್ಲಿ ಕಾಣಸಿಗುತ್ತಾರೆ.
ನಾಟಕದಲ್ಲಿ ಹೆಣ್ಣುಪಾತ್ರಗಳೇ ಹೆಚ್ಚು. ಈ ಹೆಣ್ಣುಮಕ್ಕಳದ್ದು ಒಬ್ಬೊಬ್ಬರದು ಒಂದೊಂದು ಲೋಕ. ಆದರೆ, ಇವರಿಗೆ ಎದುರಾಗಿರುವ ದುಃಖ ಒಂದೇ ರೀತಿಯದ್ದು ಎನ್ನುವುದನ್ನು ನಾಟಕಕಾರರ ಹೇಳುತ್ತಾನೆ. ಈ ಹೆಣ್ಣುಮಕ್ಕಳೆಲ್ಲರೂ ಒಬ್ಬರಿಗೊಬ್ಬರು ಕೈ ಹಿಡಿದು ಜತೆಯಾಗಿ ನಿಲ್ಲುವ ಮೂಲಕವೇ ನಾಟಕದ ಅಂತ್ಯವಾಗುತ್ತದೆ. ಒಬ್ಬರನ್ನೊಬ್ಬರು ಸಂತೈಸಿಕೊಳ್ಳುತ್ತಲೇ ಸಂಘಟಿತರಾಗಿ ಭವಿಷ್ಯವನ್ನು ಎದುರಿಸುವ ಸಂಕಲ್ಪ ತೊಟ್ಟವರಂತೆ ಇವರೆಲ್ಲರೂ ಕಂಡುಬರುತ್ತಾರೆ.
ದುರಂತದ ಮುನ್ಸೂಚನೆ ಹೆಣ್ಣುಮಕ್ಕಳಿಗೆ ಮೊದಲು ತಿಳಿಯುತ್ತದೆ ಏನೋ; ನಾಟಕದಲ್ಲಿ ಬಹುತೇಕ ಹೆಣ್ಣುಪಾತ್ರಗಳು ಮುಂದಿನ ದುರಂತವನ್ನು ಅಂದಾಜಿಸುವ ಸಾಕಷ್ಟು ಸನ್ನಿವೇಶಗಳಿವೆ.
‘ನನಗೆ ಮದುವೆಯಾಗಿದೆ, ಮಗುವಿದೆ. ಆದರೂ ನಿನ್ನನ್ನು ಮರೆಯಲು ಸಾಧ್ಯವಾಗುತ್ತಿಲ್ಲ’ ಎಂದು ಚಡಪಡಿಸುವ ಲಿಯೋನಾರ್ಡೊ, ‘ನಾನು ಇಬ್ಬರನ್ನೂ ಪ್ರೀತಿಸಿದೆ ನಿಜ. ಆದರೆ, ನಾನು ಪರಿಶುದ್ಧಳು’ ಎನ್ನುವ ಲಿಯೋನಾರ್ಡೊ ಪ್ರೇಯಸಿ ವಧು, ‘ನನ್ನದೂ ಮೂರು ವರ್ಷಗಳ ಶುದ್ಧ ಪ್ರೀತಿ’ ಎಂಬ ಕನಸು ಕಂಗಳ ವರ. ಗಂಡ ಮತ್ತು ಹಿರಿಯ ಮಗನನ್ನು ಕಳೆದುಕೊಂಡ ತಾಯಿ, ತನ್ನ ಗಂಡನಿಗೊಬ್ಬಳು ಪ್ರೇಯಿಸಿ ಇದ್ದಾಳೆ ಎಂಬುದನ್ನು ತಿಳಿದು ತಲ್ಲಣಗೊಂಡಿರುವ ಲಿಯೋನಾರ್ಡೊ ಹೆಂಡತಿ. ಈ ಪಾತ್ರಗಳ ಸುತ್ತಲೇ ನಾಟಕ ಹರಡಿಕೊಂಡಿದೆ.
ಇಲ್ಲಿ ದುರಂತಕ್ಕೆ ಮುನ್ನುಡಿ ಬರೆಯುವವನೇ ಚಂದಿರ. ನಮ್ಮ ಭಾರತೀಯ ಕಥಾನಕದಲ್ಲಿ ಚಂದಿರನ ಬಗ್ಗೆ ಇರುವ ನವಿರು ಭಾವನೆ ಇಲ್ಲಿ ತಿರುಗು-ಮುರುಗಾಗಿದೆ. ಇಲ್ಲಿ ಚಂದಿರ ಗಾಢ ಬೆಳಕು ಚೆಲ್ಲಿ ಘೋರ ದುರಂತಕ್ಕೆ ಕಾರಣನಾಗುತ್ತಾನೆ. ಇಲ್ಲೆಲ್ಲಾ ಗ್ರೀಕ್ ದುರಂತ ನಾಟಕಗಳ ಛಾಯೆ ಕಾಣಿಸುತ್ತದೆ.
ನಟರೆಲ್ಲರೂ ಕಲಿಕಾ ವಿದ್ಯಾರ್ಥಿಗಳು. ಅವರ ಅಭ್ಯಾಸದ ಭಾಗವಾಗಿಯೇ ಈ ಪ್ರಯೋಗ ನಡೆಯಿತು. ಅವರೆಲ್ಲರ ಪ್ರತಿಭಾ ಪ್ರದರ್ಶನಕ್ಕೆ ಮುಕ್ತ ಅವಕಾಶವನ್ನು ನಾಟಕದಲ್ಲಿ ಕಲ್ಪಿಸಲಾಗಿತ್ತು. ಸಂಭಾಷಣೆಯ ಏರಿಳಿತ, ಅತಿರೇಕವಿಲ್ಲದ ಆಂಗಿಕ ಅಭಿನಯದಲ್ಲಿ ಅವರೆಲ್ಲರೂ ನುರಿತ ನಟರಂತೆಯೇ ಕಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.