ಭದ್ರಾ ನದಿ ಸಮೀಪದ ಪುಟ್ಟ ಹಳ್ಳಿಯೊಂದರ ಶಾಲಾ ಮಕ್ಕಳು ಮುಂಬೈನಲ್ಲಿ ನಡೆದ ರಾಷ್ಟ್ರಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ‘ವಿಶೇಷ ಜ್ಯೂರಿ ಪ್ರಶಸ್ತಿ’ಗೆ ಭಾಜನರಾದ ಯಶೋಗಾಥೆ ಇಲ್ಲಿದೆ...
***
ಭದ್ರಾವತಿ ತಾಲ್ಲೂಕಿನ ಪುಟ್ಟ ಊರು ದೊಂಬರ ಬೈರನಹಳ್ಳಿ (ಡಿ.ಬಿ.ಹಳ್ಳಿ). ಅಲ್ಲಿನ ಪದ್ಮದೀಪ ಪಬ್ಲಿಕ್ ಶಾಲೆಯ ಮಕ್ಕಳು ಮುಂಬೈನ ನೆಹರೂ ವಿಜ್ಞಾನ ಕೇಂದ್ರದಲ್ಲಿ ಕಳೆದ ವಾರ ಕೇಂದ್ರ ಸಂಸ್ಕೃತಿ ಸಚಿವಾಲಯ ಆಯೋಜಿಸಿದ್ದ ರಾಷ್ಟ್ರಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ‘ವಿಶೇಷ ಜ್ಯೂರಿ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ದೂರದ ಅರಬ್ಬೀ ಸಮುದ್ರದ ತಟದಲ್ಲಿ ‘ಕನ್ನಡ ಡಿಂಡಿಮ’ ಬಾರಿಸಿದ್ದಾರೆ.
ಭದ್ರಾ ನದಿಯ ಒಡಲ ಹಾದಿಯಿಂದಾಗಿ ಹಸಿರ ಸಮೃದ್ಧಿ ಹೊದ್ದ ದೊಂಬರ ಬೈರನಹಳ್ಳಿ ಹಾಗೂ ಸುತ್ತಲಿನ ಊರುಗಳಲ್ಲಿ ಅಡಿಕೆ ಬೆಳೆಯದ್ದೇ ಪಾರಮ್ಯ. ಬೆಳೆ ಮಾತ್ರವಲ್ಲ, ಅಡಿಕೆ ಕೇಣಿ (ವಹಿವಾಟು) ಮಾಡಿಯೂ ಊರವರು ಬೆಚ್ಚನೆಯ ಬದುಕು ಕಟ್ಟಿಕೊಂಡಿದ್ದಾರೆ. ಹೀಗಾಗಿ ವರ್ಷವಿಡೀ ಇಲ್ಲಿ ಅಡಿಕೆ ಧಾರಣೆಯ ಏರಿಳಿತದ್ದೇ ಸುದ್ದಿ. ಆದರೆ ಈ ಹಂಗಾಮಿನಲ್ಲಿ ಅಡಿಕೆ ಧಾರಣೆಯ ಸದ್ದನ್ನೂ ಊರ ಮಕ್ಕಳ ಈ ಸಾಧನೆ ಮಂಕಾಗಿಸಿದೆ. ಹತ್ತು ರಾಜ್ಯಗಳ ಪೈಪೋಟಿಯ ನಡುವೆ ಜ್ಯೂರಿಗಳ ಮೆಚ್ಚುಗೆಯ ಪ್ರಶಸ್ತಿ ಪಡೆದದ್ದು ಭದ್ರೆಯ ಸೀಮೆಯಲ್ಲಿ ಚರ್ಚೆಯ ಸಂಗತಿ ಆಗಿದೆ.
ಹೇಳಿಕೇಳಿ ಇದು (2024–25) ರಾಷ್ಟ್ರೀಯ ಸಿರಿಧಾನ್ಯಗಳ ವರ್ಷ. ಹೀಗಾಗಿ ಡಿ.ಬಿ.ಹಳ್ಳಿ ಶಾಲೆಯ ಮಕ್ಕಳು ಸಿರಿಧಾನ್ಯಗಳ ಮಹತ್ವ ಬಿಂಬಿಸುವ ‘ಸಿರಿಧಾನ್ಯವೇ ಸರಿಧಾನ್ಯ‘ ಹೆಸರಿನ ನಾಟಕವನ್ನೇ ತಮ್ಮ ರಂಗಪಯಣಕ್ಕೆ ಆಯ್ದುಕೊಂಡಿದ್ದರು. ಶಾಲೆಯ ಪ್ರಾಚಾರ್ಯ ಕೆ.ತಂಗರಾಜು ಅದಕ್ಕೆ ಒತ್ತಾಸೆಯಾಗಿ ನಿಂತರೆ, ನೀನಾಸಂ ಪ್ರತಿಭೆ ಅಜಯ್ ಹಾಗೂ ಸಜಿ ಆರ್., ಮಾರ್ಗದರ್ಶನ ಮಾಡಿದ್ದರು.
ಸಾಂಪ್ರದಾಯಿಕವಾಗಿ ಭಾರತೀಯರ ಆಹಾರ ಪದ್ಧತಿಯ ಅಸ್ಮಿತೆಯೇ ಆಗಿದ್ದ ಸಿರಿಧಾನ್ಯಗಳು (ನವಣೆ, ಊದಲು, ಆರ್ಕ, ಸಾಮೆ, ಕೊರ್ಲೆ ಜತೆಗೆ ಸಜ್ಜೆ, ರಾಗಿ, ಬರಗು, ಜೋಳ) ನಂತರ ಆಧುನಿಕ ಬದುಕಿನಲ್ಲಿ ’ಹೈಬ್ರೀಡ್‘ ಧಾನ್ಯಗಳ ಗದ್ದಲದಲ್ಲಿ ಕಳೆದು ಹೋಗಿದ್ದವು. ಆದರೆ ಈಗ ಅವು ಹೇಗೆ ಬಹುರಾಷ್ಟ್ರೀಯ ಕಂಪೆನಿಗಳ ’ವ್ಯಾಪಾರಿ‘ ಹುನ್ನಾರಕ್ಕೆ ಸಿಲುಕಿವೆ. ಸಹಜ ಬದುಕಿನ ಭಾಗವಾಗಬೇಕಿದ್ದ ಈ ಧಾನ್ಯಗಳು ಪಥ್ಯ ಆಹಾರದ ನೆಪದಲ್ಲಿ ಸಿರಿವಂತರ ಪಾಲಾಗುತ್ತಿವೆ. ಅವು ಪಥ್ಯ ಅಲ್ಲ ಬದಲಿಗೆ ಸಹಜ ಆಹಾರ ಎಂಬುದನ್ನು 25 ನಿಮಿಷದ ಈ ನಾಟಕ ಮನೋಜ್ಞವಾಗಿ ಕಟ್ಟಿಕೊಡುತ್ತದೆ.
ಪ್ರೇಕ್ಷಕರಲ್ಲಿ ಎಚ್ಚರದ ದನಿ ಆಗುವ ಗಾದೆ ಮುದುಕಿ, ಆಕೆಯ ಆಪ್ತ ಬಳಗವಾದ ಇರುವೆಗಳು ನಾಟಕದಲ್ಲಿ ಸಿರಿಧಾನ್ಯಗಳನ್ನು ಪ್ರತಿನಿಧಿಸಿದರೆ, ಆಹಾರ ಮಾರುಕಟ್ಟೆಯ ವ್ಯಾಪಾರೀ ಹುನ್ನಾರದ ರೂಪಕಗಳಾಗಿ ರಣಹದ್ದು, ಇಲಿ, ಹೆಗ್ಗಣ ಬಳಕೆಯಾಗಿವೆ. ಎರಡೂ ಸಂಗತಿಗಳನ್ನು ಇಲ್ಲಿ ನಿರ್ದೇಶಕ ಮುಖಾಮುಖಿ ಆಗಿಸಿದ್ದಾರೆ. ಹೀಗಾಗಿ ನಾಟಕದ ಕಥೆ ಚಿಂತನೆಗೆ ಹಚ್ಚುತ್ತದೆ.
‘ಶಾಲೆಯ ಮಕ್ಕಳು ಕಳೆದ ವರ್ಷ ವಿಜ್ಞಾನ ನಾಟಕ ಸ್ಪರ್ಧೆಯ ದಕ್ಷಿಣ ಭಾರತ ಮಟ್ಟದಲ್ಲಿ ಪ್ರಶಸ್ತಿಯ ಸುತ್ತು ತಲುಪಿರಲಿಲ್ಲ. ಆಗ ನಿಗದಿತ ಅವಧಿಯಲ್ಲಿ ರಂಗ ಸಜ್ಜಿಕೆ ಸಿದ್ಧಗೊಳಿಸಿ ಪ್ರದರ್ಶನ ನೀಡುವಾಗ ಆಗಿದ್ದ ಲೋಪಗಳು ಪ್ರಶಸ್ತಿ ಹಂತಕ್ಕೆ ತೆರಳಲು ಅಡ್ಡಿಯಾಗಿದ್ದವು. ಅದನ್ನು ಈ ವರ್ಷ ತಿದ್ದಿಕೊಂಡೆವು. ಇದರಿಂದ ದಕ್ಷಿಣ ಭಾರತ ಮಟ್ಟದ ಸ್ಪರ್ಧೆಯಲ್ಲಿ ಆರು ರಾಜ್ಯಗಳ 12 ತಂಡಗಳನ್ನು ಎದುರಿಸಿ ಪ್ರಥಮ ಸ್ಥಾನ ಪಡೆದೆವು’ ಎಂದು ಪದ್ಮದೀಪ ಶಾಲೆಯ ಪ್ರಾಚಾರ್ಯ ಕೆ.ತಂಗರಾಜು ಹೆಮ್ಮೆಯಿಂದ ಹೇಳುತ್ತಾರೆ.
ರಾಷ್ಟ್ರಮಟ್ಟದ ಸ್ಪರ್ಧೆಯ ಅಂತಿಮ ಹಂತದಲ್ಲಿ ನಿಗದಿತ 30 ನಿಮಿಷಗಳ ಅವಧಿಯಲ್ಲಿ ಮಕ್ಕಳೇ ರಂಗಸಜ್ಜಿಕೆ ಸಿದ್ಧಪಡಿಸಿಕೊಂಡು ನಾಟಕ ಪ್ರದರ್ಶಿಸಬೇಕಿತ್ತು. ನಾಟಕದ ಕಥೆ ಮಾತ್ರವಲ್ಲದೇ ಮಕ್ಕಳ ಅಭಿನಯವೂ ಪ್ರಭಾವಿ ಆಗಿ ಜ್ಯೂರಿಗಳ ಮನಮುಟ್ಟಿತು. ಗಾದೆ ಮುದುಕಿ ಆಗಿ ನಟಿಸಿದ್ದ 8ನೇ ತರಗತಿಯ ಪ್ರೇರಣಾ ವಿ.ಸ್ವರ ಉತ್ತಮ ನಟಿ ಪ್ರಶಸ್ತಿಯ ಶ್ರೇಯಕ್ಕೂ ಪಾತ್ರಳಾದಳು. ಅದು ಪ್ರಶಸ್ತಿಯ ಸಂಭ್ರಮ ಇಮ್ಮಡಿಗೊಳಿಸಿದೆ.
‘ದಕ್ಷಿಣ ಭಾರತ ಮಟ್ಟದ ಸ್ಪರ್ಧೆಯಲ್ಲಿ ನಾಟಕ ನೋಡಲು ಬಂದಿದ್ದ ರಂಗಕರ್ಮಿ, ಚಿತ್ರ ನಿರ್ದೇಶಕ ಬಿ.ಸುರೇಶ್ ನಮ್ಮ ಗಾದೆ ಮುದುಕಿಯ (ಪ್ರೇರಣಾ) ಎತ್ತಿಕೊಂಡು ಬೆನ್ನು ತಟ್ಟಿದ್ದರು’ ಎಂದು ನೆನಪಿಸಿಕೊಂಡರು.
ಗಾದೆ ಹೇಳುತ್ತಾ, ಘಾಟಿತನ ತೋರುತ್ತಾ ಮುದುಕಿಯ ಪಾತ್ರದಲ್ಲಿ ಪ್ರೇಕ್ಷಕರನ್ನು ಹಿಡಿದಿಡುವ ಪ್ರೇರಣಾ ಸ್ವರ ನಿಜಾರ್ಥದಲ್ಲಿ ಕಥೆಯ ನಾಯಕಿಯೂ ಹೌದು. ’ಮನೆಯಲ್ಲಿ ಅಜ್ಜಿ, ಮುತ್ತಜ್ಜಿ ಇಬ್ಬರೂ ಇದ್ದು, ಅವರನ್ನು ನೋಡುತ್ತಾ ಬೆಳೆದ ನನಗೆ ನಾಟಕದಲ್ಲಿ ಅವರ ಹಾವಭಾವ ಅನುಕರಿಸಲು ನೆರವಾಯಿತು‘ ಎನ್ನುತ್ತಾಳೆ.
ನಾಟಕದಲ್ಲಿ ಸಿರಿಧಾನ್ಯಗಳ ಮಹತ್ವದ ಬಗ್ಗೆ ಪ್ರೇಕ್ಷಕರೊಂದಿಗೆ ಸರಳವಾಗಿ ಸಂವಾದಿಸಲು ನಿರ್ದೇಶಕ ಅಜಯ್ ನೀನಾಸಂ ಸರ್ವಜ್ಞನ ತ್ರಿಪದಿಗಳ ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಕೂತರೂ ನಿಂತರೂ ಅಡಿಕೆಯ ಚೊಗರನ್ನೇ ಧ್ಯಾನಿಸುವ ಡಿ.ಬಿ.ಹಳ್ಳಿಯ ಜನರು ಈಗ ಸಿರಿಧಾನ್ಯಗಳ ಮಹತ್ವದ ಬಗ್ಗೆ ಮಾತಾಡುತ್ತಾರೆ. ಅದರಲ್ಲಿನ ಪೋಷಕಾಂಶಗಳ ವಿಚಾರವನ್ನು ಪ್ರಮಾಣಬದ್ಧವಾಗಿ ಹೇಳುತ್ತಾರೆ.
’ನಾಟಕದ ಪಯಣದಲ್ಲಿ ಮಕ್ಕಳಿಗೆ ಭ್ರಮೆ ಬಾರದ ರೀತಿಯಲ್ಲಿ ನೋಡಿಕೊಂಡೆವು. ಸಹಜವಾಗಿ ಮೊದಲ ಬಾರಿಗೆ ನಾಟಕ ಮಾಡಲು ಬರುತ್ತಿದ್ದೇವೆ ಎಂಬ ಭಾವದಲ್ಲಿಯೇ ಮಕ್ಕಳು ಅಭಿನಯಿಸಿದ್ದರು. ಹೀಗಾಗಿ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು‘ ಎನ್ನುತ್ತಾರೆ ನಿರ್ದೇಶಕ ಅಜಯ್ ನೀನಾಸಂ.
ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮಿ ತಿರುಕ ರಂಗ ತಂಡದ ಹೆಸರಿನಲ್ಲಿ ಎಂಟು ಮಕ್ಕಳು ಅಭಿನಯಿಸಿದ್ದಾರೆ. ರಣಹದ್ದು ಪಾತ್ರದಲ್ಲಿ ಧನ್ಯಶ್ರೀ ಗಮನ ಸೆಳೆಯುತ್ತಾಳೆ. ಇರುವೆ, ಇಲಿ, ಹೆಗ್ಗಣಗಳಾಗಿ ಆಗಿ ಪ್ರಜ್ಞಾ, ಧೀಮಂತ್, ಟಿ.ಎಲ್.ತಿಲಕ್, ಅವಿನಾಶ್, ವರ್ಷಿಣಿ, ವಿಕಾಸ್, ಶಿವಪ್ರಸಾದ್ ಕುಂಬಾರ್ (ವೇದಿಕೆ ಸಹಾಯಕ) ಅಭಿನಯಿಸಿದ್ದಾರೆ. ಜ್ಞಾನದೀಪ ಸಂಸ್ಥೆಯ ಅಧ್ಯಕ್ಷ ಎಸ್.ಯು.ಕಿರಣ್‌ಕುಮಾರ್ ಹಾಗೂ ರಂಗ ಶಿಕ್ಷಕ ಕೆ. ವೆಂಕಟೇಶ್ವರ ನೆರವಿಗೆ ನಿಂತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.