ADVERTISEMENT

ದನ ಕಾಯಲು ಹೋದಾಗ ನಾಟಕ ಮಾಡ್ತಿದ್ವಿ

ರಂಗಭೂಮಿ ಪಯಣ ಸ್ಮರಿಸಿದ ಚಂದ್ರಶೇಖರ ಕಂಬಾರ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 19:23 IST
Last Updated 13 ಫೆಬ್ರುವರಿ 2021, 19:23 IST
ರವೀಂದ್ರ ಕಲಾಕ್ಷೇತ್ರಲ್ಲಿ ಶನಿವಾರ ಆಯೋಜಿಸಿದ್ದ ಸಂವಾದದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ(ಎಡಬದಿ) ಮಾತನಾಡಿದರು. ಡಾ.ಕೆ.ವೈ ನಾರಾಯಣಸ್ವಾಮಿ ಇದ್ದಾರೆ –ಪ್ರಜಾವಾಣಿ ಚಿತ್ರ
ರವೀಂದ್ರ ಕಲಾಕ್ಷೇತ್ರಲ್ಲಿ ಶನಿವಾರ ಆಯೋಜಿಸಿದ್ದ ಸಂವಾದದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ(ಎಡಬದಿ) ಮಾತನಾಡಿದರು. ಡಾ.ಕೆ.ವೈ ನಾರಾಯಣಸ್ವಾಮಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನನಗೆ ಕಮ್ಮಾರಿಕೆ ಬರುತ್ತಿರಲಿಲ್ಲ. ಹೀಗಾಗಿ ಅಪ್ಪ, ಚಿಕ್ಕಂದಿನಲ್ಲಿ ದನಕಾಯಲು ಕಳಿಸುತ್ತಿದ್ದರು. ನನ್ನೊಂದಿಗೆ ಇನ್ನೂ ಐದು ಜನ ಇರುತ್ತಿದ್ದರು. ಆಗ ನಾವೆಲ್ಲಾ ಬಯಲಾಟದ ಬಗ್ಗೆ ಮಾತನಾಡುತ್ತಿದ್ದೆವು. ನಾವೇ ಬಯಲಾಟ ಹೂಡುತ್ತಿದ್ದೆವು. ಹೀಗಾಗಿ ಸಹಜವಾಗಿಯೇ ನಾಟಕದ ಬಗ್ಗೆ ಅಭಿರುಚಿ ಬೆಳೆಯಿತು’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿರುವ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹೇಳಿದರು.

ಕವಿಯಾಗಿದ್ದವರು ನಾಟಕದತ್ತ ಹೊರಳಿದ್ದು ಏಕೆ ಎಂಬ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.

13ನೇ ವರ್ಷದ ರಂಗಭೂಮಿ ಸಂಭ್ರಮದ ಅಂಗವಾಗಿ ‘ನಾಟಕ ಬೆಂಗ್ಳೂರು’, ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ರಂಗ ಸಂವಾದದಲ್ಲಿ ಅವರು ತಮ್ಮ ರಂಗಪಯಣವನ್ನು ಮೆಲುಕು ಹಾಕಿದರು.

ADVERTISEMENT

‘ಗೋಕಾಕ ಜಲಪಾತದ ಹತ್ತಿರ ಬ್ರಿಟಿಷರು ನೆಲೆಸಿದ್ದರು. ನಾವು ನಿತ್ಯವೂ ಅದೇ ಮಾರ್ಗವಾಗಿ ಹೈಸ್ಕೂಲು ವ್ಯಾಸಂಗಕ್ಕಾಗಿ ಗೋಕಾಕಕ್ಕೆ ಹೋಗುತ್ತಿದ್ದೆವು. ಆಗ ಬ್ರಿಟಿಷರನ್ನು ನೋಡಿಯೇ ಕಥೆಗಳನ್ನು ಕಟ್ಟುತ್ತಿದ್ದೆವು. ಅವರು ಬಹಳ ಶ್ರೀಮಂತರು, ನೋಟುಗಳಲ್ಲಿ ತಂಬಾಕು ಹಾಕಿಕೊಂಡು ಸಿಗರೇಟ್‌ ಸೇದುತ್ತಾರೆ ಎಂದು ನಾವೇ ಮಾತನಾಡಿಕೊಳ್ಳುತ್ತಿದ್ದೆವು. ಆದರೆ ವಾಸ್ತವದಲ್ಲಿ ಹಾಗಿರಲಿಲ್ಲ. ಬ್ರಿಟಿಷ್‌ ಮಹಿಳೆಯೊಬ್ಬರು ಹೊಳೆಯಲ್ಲಿ ಸ್ನಾನ ಮಾಡುವುದನ್ನು ಕದ್ದು ನೋಡಬೇಕೆಂದು ಒಮ್ಮೆ ಹೋಗಿದ್ದೆವು. ಅಲ್ಲಿ ಅವರಿರಲಿಲ್ಲ. ಅವರು ಬಳಸುತ್ತಿದ್ದ ಸೋಪು ಸಿಕ್ಕಿತ್ತು. ಅದನ್ನು ಹಿಡಿದು, ಮೂಸಿ ಸಂಭ್ರಮಿಸಿದ್ದೆವು. ನಾವು ಗೋಕಾಕ ತಲುಪುವಷ್ಟರಲ್ಲೇ ಆ ಸೋಪು ಸವೆದು ಹೋಗಿತ್ತು’ ಎಂದರು.

‘ಬ್ರಿಟಿಷರನ್ನು ವ್ಯಂಗ್ಯ ಮಾಡಿ, ಅವರಿಗೆ ಹೆದರಿ ನಾವು ಕಥೆಗಳನ್ನು ಕಟ್ಟುತ್ತಿದ್ದೆವು’ ಎಂದೂ ತಿಳಿಸಿದರು.

‘ನಮ್ಮೂರ ಪಕ್ಕದಲ್ಲೇ ನದಿ ಹಾದು ಹೋಗುತ್ತಿತ್ತು. ಮಳೆಗಾಲದ ಅವಧಿಯಲ್ಲಿ ಅದರಲ್ಲಿ ಹೆಣಗಳು ತೇಲಿ ಬರುತ್ತಿದ್ದವು. ಆ ಹೆಣಗಳ ಕುರಿತೂ ನಾವು ಒಂದೊಂದು ಬಗೆಯ ಕಥೆಗಳನ್ನು ಕಟ್ಟುತ್ತಿದ್ದೆವು. ಬೆಳಿಗ್ಗೆ ನಾನು ಕಟ್ಟಿದ ಕಥೆ ಮಾರನೇ ದಿನ ನನ್ನ ಕಿವಿಗೇ ಬಂದು ತಲುಪುತ್ತಿತ್ತು. ನಮ್ಮದು ಕೊಲೆಗಡುಕರ ಊರು. ಊರಿನಲ್ಲಿ ನಡೆದ ಕೊಲೆಯ ಸುದ್ದಿ ಪತ್ರಿಕೆಯಲ್ಲಿ ಬಿತ್ತರವಾಗುತ್ತಿತ್ತು. ಆ ಸುದ್ದಿಯನ್ನು ಓದಿ ನಾವೆಲ್ಲಾ ಹೆಮ್ಮೆಯಿಂದ ಬೀಗುತ್ತಿದ್ದೆವು. ಬೇರೆ ಊರಿಗೆ ಹೆಣ್ಣು ಕೇಳಲು ಹೋದಾಗ ಆ ಸುದ್ದಿಯ ಕಟಿಂಗ್‌ ಅನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ನಮ್ಮೂರು ತುಂಬಾ ಪ್ರಸಿದ್ಧವಾಗಿದೆ. ಪತ್ರಿಕೆಯಲ್ಲೇ ಹೆಸರು ಬಂದಿದೆ ನೋಡಿ ಎಂದು ಅಪರಾಧ ಸುದ್ದಿಯ ಕಟಿಂಗ್‌ ಅನ್ನು ತೋರಿಸುತ್ತಿದ್ದರು’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.