ಸದ್ಯ ಪಶ್ಚಿಮ ಘಟ್ಟಗಳಲ್ಲಿ ಅರಣ್ಯ ರೋದಿಸುತ್ತಿದೆ. ಆದರಿದು ಸಂಬಂಧಪಟ್ಟ ಕಿವಿಗಳಿಗೆ ಕೇಳುತ್ತಿಲ್ಲ! ಮಾನವ ಕಾರಣದಿಂದ ಕಾಣಿಸಿಕೊಂಡ ಬೆಂಕಿ ಹೆಚ್ಚಾಗಿ ಕಾಡು ಸುಡುತ್ತಿದ್ದ ಕಾಲವೀಗ ಉರುಳಿ, ಮಾನವನ ಕರ್ಮದಿಂದ ಕಾಡುತ್ತಿರುವ ಹವಾಮಾನ ವೈಪರೀತ್ಯವೀಗ ಕಾಡು ಸುಡುತ್ತಿದೆ. ಸೂಕ್ತ ಪರಿಕರಗಳಿಲ್ಲದೆ ಅರಣ್ಯ ಕಾಯುವ ಸಿಬ್ಬಂದಿ ಹಸಿ ಸೊಪ್ಪಿನ ಚಣಿಕೆಯನ್ನು ಬಳಸಿ ಬೆಂಕಿ ಆರಿಸುವ ಪ್ರಯತ್ನ ಮಾಡಿ ತಾವೂ ಆಹುತಿಯಾದ ಘಟನೆಗಳು ಇನ್ನೂ ಹಸಿಯಾಗಿವೆ.
ಕಾಡ್ಗಿಚ್ಚಿನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅರಣ್ಯ ಇಲಾಖೆ ವರ್ಷಂಪ್ರತಿ ಜನಜಾಗೃತಿ ಮೂಡಿಸುತ್ತಿದೆ. ಈ ಹೆಜ್ಜೆಯ ಅಂಗವಾಗಿ ಶಿವಮೊಗ್ಗ ಜಿಲ್ಲೆಗೆ ಸೀಮಿತವಾಗಿ, ಹೆಗ್ಗೋಡಿನ ಕೆ.ವಿ.ಸುಬ್ಬಣ್ಣ ರಂಗ ಸಮೂಹ ‘ದಹಿಸುತಿದೆ ಧರಣಿ’ ಎಂಬ ಬೀದಿ ನಾಟಕವನ್ನು ಪ್ರಸ್ತುತಪಡಿಸಿದೆ. ಕಲಾರಂಗ, ಚಲನಚಿತ್ರ ಹಾಗೂ ನಾಟಕ ರಂಗಕ್ಕೆ ಕಾಲಿಡುತ್ತಿರುವ ಕಲಾವಿದರು ಸೇರಿಕೊಂಡು ಬೆಂಕಿ ಅವಘಡದ ಕುರಿತಾದ ಈ ಬೀದಿ ನಾಟಕವನ್ನು ಬೀದಿ ಬೀದಿಗಳಲ್ಲಿ ಪ್ರದರ್ಶಿಸುತ್ತಿದ್ದಾರೆ.
‘ಹೋಯ್ ಅಣಾ, ಕೃಷ್ಣಣ್ಣ, ಹಾಲೇಶಣ್ಣ, ಸ್ವಾಮಿ, ಸುರೇಶಣ್ಣಾ, ತಮಾ ತಮ್ಮಣ್ಣ, ಇಲ್ಲಿ ಸ್ವಲ್ಪ ಕೇಳಿ, ನಂ ಮಾತು ಕೇಳಿ ಸ್ವಾಮಿ, ನಾವು ಸಾಯೋಕೆ ಹೊರಟಿದೀವಿ. ಅಲ್ಲಲ್ಲಾ ಸಾವೇ ನಮ್ಮತ್ರ ಬರ್ತಾ ಇದೆ. ಊಹೂಂ ಹಾಗಲ್ಲ, ಇದು ಸರಿಯಲ್ಲ; ಸಾವನ್ನು ನಾವೇ ತನ್ಕೋತಾ ಇದೀವಿ. ಥೋ ಹಂಗೂ ಅಲ್ಲ. ಸಾವೇ ನಮ್ಮನ್ನ ಸುತ್ತುವರೆದು ನಮ್ಮನ್ನೆಲ್ಲಾ ತಿಂದು ಹಾಕೋಕೆ ಹೊಂಚಿಹಾಕಿ ಕೂತಿದೆ....’ ಹೀಗೆ ಪ್ರಾರಂಭವಾಗುವ ಸಂಭಾಷಣೆ ಸಾಲು ನೆರೆದಿರುವ ಜನರನ್ನು ಬಡಿದೆಬ್ಬಿಸುತ್ತದೆ. ಊರಿಗೆ ಬುದ್ಧಿ ಹೇಳುವ ಯಜಮಾನ ಖುದ್ದು ಆತ್ಮಹತ್ಯೆಗೆ ಹೊರಟಿದ್ದು ಏಕೆ? ನಾಲ್ಕಾರು ಕೊಳವೆ ಬಾವಿಗಳನ್ನು ಕೊರೆಸಿಯೂ ಆತನಿಗೆ ನೀರು ದಕ್ಕಲಿಲ್ಲ. ಕೈಗೆ ಬಂದ ಬೆಳೆ ನೀರಿಲ್ಲದೇ ಒಣಗಿಹೋಯಿತು. ಬೇರೆ ದಾರಿಯಿಲ್ಲದ ಕೃಷಿಕ ಮತ್ತೇನು ಮಾಡುತ್ತಾನೆ? ಊರಿನ ಕೆರೆ-ಕುಂಟೆಗಳು, ಕಲ್ಯಾಣಿಗಳು, ಬಾವಿಗಳು ಸುಸ್ಥಿತಿಯಲ್ಲಿದ್ದಿದ್ದರೆ, ಆತ ತನ್ನ ಬೆಳೆಯನ್ನು ಉಳಿಸಿಕೊಳ್ಳಬಹುದಿತ್ತು. ಈ ಸಾವು ಒಂದು ರೀತಿ ಸ್ವಯಂಕೃತಾಪರಾಧ ಎನ್ನುವುದನ್ನು ಕಲಾವಿದರು ಇಲ್ಲಿ ಮನಮುಟ್ಟುವಂತೆ ತೋರಿಸುತ್ತಾರೆ.
ಕಾಡುಪ್ರಾಣಿಗಳು ನಾಡಿಗೆ ಬರುವುದು, ರೈತರ ತೋಟಕ್ಕೆ ನುಗ್ಗಿ ಬೆಳೆ ಹಾಳುಮಾಡುವುದು, ಇದರಿಂದ ಹೈರಾಣಾಗುವ ರೈತ ಅವುಗಳನ್ನು ಪಟಾಕಿ ಹೊಡೆದು ಓಡಿಸಬಹುದಷ್ಟೆ. ಕೊಂದರೆ, ಉಗ್ರ ಶಿಕ್ಷೆ ಕಾನೂನಿನಲ್ಲಿದೆ. ಅತ್ತ ಅನುಭವಿಸಲು ಆಗದೇ ಇತ್ತ ನಿವಾರಣೆ ಮಾಡಿಕೊಳ್ಳುವುದಕ್ಕೂ ಆಗದ ಮುಗ್ಧ ರೈತನ ಪಾತ್ರ, ವನ್ಯಜೀವಿಗಳ ಮೇಲೆ ದೂರು ನೀಡಲು ಹೋಗುವ ದೃಶ್ಯವು ಇವತ್ತಿನ ಸರ್ಕಾರದ ನೀತಿಗಳನ್ನು ವಿಡಂಬನೆ ಮಾಡುವ ಹಾಗಿದೆ.
ಈ ಸಂದರ್ಭದಲ್ಲೇ ಇತ್ತೀಚೆಗೆ ನಡೆದ ಘಟನೆಯೊಂದು ನೆನಪಾಗುತ್ತಿದೆ. ಅಕ್ರಮ ವಿದ್ಯುತ್ ಸಂಪರ್ಕ ನೀಡಿ ಹುಲಿಯನ್ನು ಕೊಂದವನ ಮೇಲೆ ಅರಣ್ಯ ಇಲಾಖೆ ಮೊಕದ್ದಮೆ ಹೂಡಲು ಹಿಂಜರಿಯುತ್ತಿದೆ. ಈಗ ಆತನ ಮೇಲೆ ಕ್ರಮ ಕೈಗೊಂಡಲ್ಲಿ, ಸಿಟ್ಟಿಗೇಳುವ ಸಾರ್ವಜನಿಕರು ಅರಣ್ಯಕ್ಕೆ ಬೆಂಕಿ ಹಾಕಬಹುದೆಂಬ ಅಪಾರ ಭಯವೇ ಇದಕ್ಕೆ ಕಾರಣ. ಒಂದೆರಡು ಮಳೆ ಬಿದ್ದ ಮೇಲೆ ಹುಲಿ ಕೊಂದವನ ಮೇಲೆ ಕ್ರಮ ಕೈಗೊಂಡರಾಯಿತು ಎಂಬ ಯೋಚನೆಯಲ್ಲಿ ಇಲಾಖೆಯಿದೆ. ಇಂತಹ ವೈರುಧ್ಯಗಳು ನಡೆಯುವ ದುರಿತ ಕಾಲವಿದು. ಪರಿಹಾರಾರ್ಥವಾಗಿ, ಜನರಲ್ಲಿ ಜಾಗೃತಿ ಮೂಡಿಸುವುದೇ ಸೂಕ್ತವೆಂದು ತೋರುತ್ತದೆ.
ಬೆಂಕಿ ಬಿದ್ದಿತೋ ಕಾಡಿಗೆ! ಹುಲಿಯು ಬಂದಿತು ನಾಡಿಗೆ! ಪ್ರಾಣಿಪಕ್ಷಿಗಳೆಲ್ಲಾ ಉರಿದುಹೋದವೋ ಕೊಳ್ಳಿಗೆ, ದೇವರು ಕೊಟ್ಟ ಕಾಡು ಗುಡ್ಡಗಳು ಕರಕಲಾದವೋ ಕಿಚ್ಚಿಗೆ ಎಂಬ ಹಾಡು ಕಾಡಿಗೆ ಬೆಂಕಿ ಹಚ್ಚುವ ಮನಃಸ್ಥಿತಿಯವರನ್ನು ಪರಿವರ್ತನೆ ಮಾಡುವಷ್ಟು ಪ್ರಬಲವಾಗಿದೆ. ಪರಿಸರ, ವಾತಾವರಣ, ನದಿ, ಕೆರೆ ಎಲ್ಲವೂ ಕಲುಷಿತವಾಗಿವೆ. ಕಲುಷಿತಗೊಳಿಸಿದ್ದು ನಾವೇ. ಆದರೆ, ಪರಿಹಾರ ಮಾತ್ರ ದೈವದಿಂದ ಸಿಗಬೇಕು. ಹೀಗೆಂದು ತೀರ್ಮಾನಿಸಿದ ಪಾತ್ರಗಳು ದೈವದ ಮೊರೆ ಹೋಗುತ್ತವೆ.
ಎಲ್ಲವನ್ನೂ ನಿಷ್ಪಕ್ಷಪಾತವಾಗಿ, ಉಚಿತವಾಗಿ ಧಾರೆಯೆರೆಯುವ ಧರೆಯ ಆಭರಣಗಳಾದ ಕಾಡಿಗೆ, ವನ್ಯಜೀವಿಗಳ ನೆಲೆಗೆ ಬೆಂಕಿಯಿಕ್ಕುವಿರಾ? ಇದೀಗ ಬುದ್ಧಿ ಬಂತಾ? ಈಗ ದೈವದ ಸನ್ನಿಧಿಗೆ ಬಂದಿರಾ? ಮಾನವರೇ ತಿಳಿಯಿರಿ. ಕಾಡಿಗೆ ಬೆಂಕಿ ಹಚ್ಚಿದರೆ ಅದು ತಾನೊಂದೇ ಸುಟ್ಟುಹೋಗುವುದಿಲ್ಲ. ಮುಂದಿನ ದಿನಗಳಲ್ಲಿ ಬೆಂಕಿಯ ಮಳೆ ಸುರಿಸುವ ಮೂಲಕ ನಿಮ್ಮನ್ನು ಸುಡಲಿದೆ ಎನ್ನುವ ನುಡಿ ಕಾಡ್ಗಿಚ್ಚಿನ ಪರಿಣಾಮವನ್ನು ಬಿತ್ತರಿಸುತ್ತದೆ.
ಈ ಜಾಗೃತಿಯ ನಾಟಕ ರಚಿಸಬೇಕು ಎಂಬ ಯೋಚನೆ ಬಂದಿದ್ದು ಹೆಗ್ಗೋಡಿನ ನಟ ಏಸುಪ್ರಕಾಶ್ ಅವರಿಗೆ. ಕೃತಿಗೆ ಇಳಿಸಲು ಸಹಾಯ ಮಾಡಿದ್ದು ಶಿವಾನಂದ ಕಳವೆ ಹಾಗೂ ಅಖಿಲೇಶ ಚಿಪ್ಪಳಿಯವರು. ಕೃತಿಯನ್ನು ಸಮರ್ಥವಾಗಿ ರಂಗಭೂಮಿಗೆ ತರಲಾಗಿದೆ. ನುರಿತ ರಂಗಕರ್ಮಿಗಳು ಬೀದಿ ನಾಟಕಗಳನ್ನು ಮಾಡುವುದು ಕಡಿಮೆ. ಅದು ತಮ್ಮ ಪ್ರತಿಷ್ಠೆಗೆ ಧಕ್ಕೆ ತರಬಲ್ಲದು ಎಂಬ ಭಯವಿರುತ್ತದೆ. ಆದರೆ, ದಹಿಸುತ್ತಿರುವ ಧರಣಿಯ ಪಾತ್ರಧಾರಿಗಳು ತಮ್ಮೆಲ್ಲಾ ಪ್ರತಿಷ್ಠೆಗಳನ್ನು ಪಕ್ಕಕ್ಕಿಟ್ಟಿದ್ದಾರೆ. ಜನಜಾಗೃತಿ, ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿದ್ದಾರೆ. 30 ನಿಮಿಷಗಳ ನಾಟಕ ನೋಡುಗರ ಮನ ಕಲಕುವಂತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.