ADVERTISEMENT

ರಂಗಭೂಮಿ | ಕಣ್ಣು ಧರಿಸಿ ಕಾಣಿರೋ…

ದಯಾನಂದ ಎಚ್‌.ಎಚ್‌.
Published 26 ನವೆಂಬರ್ 2022, 19:30 IST
Last Updated 26 ನವೆಂಬರ್ 2022, 19:30 IST
ದಕ್ಲ ಕಥಾ ದೇವಿ ಕಾವ್ಯ ನಾಟಕದ ದೃಶ್ಯ
ದಕ್ಲ ಕಥಾ ದೇವಿ ಕಾವ್ಯ ನಾಟಕದ ದೃಶ್ಯ   

ಪುರಾಣವನ್ನು ವರ್ತಮಾನದ ನೆಲೆಯಲ್ಲಿ ಕಲೆಗೆ ಒಗ್ಗಿಸುವ ಕೆಲಸ ಕನ್ನಡ ರಂಗಭೂಮಿಗೆ ಹೊಸದೇನಲ್ಲ. ಆದರೆ, ತಳಸಮುದಾಯಗಳ ಕುಲ ಪುರಾಣಗಳನ್ನು ನಾಟಕವಾಗಿ ಕಟ್ಟಿ, ಕುಣಿದ ಉದಾಹರಣೆಗಳು ಕನ್ನಡ ಶಿಷ್ಟ ರಂಗಪರಂಪರೆಯಲ್ಲಿ ವಿರಳ. ಕೆ.ಬಿ. ಸಿದ್ದಯ್ಯ ಅವರ ಬದುಕನ್ನೂ, ಕಾವ್ಯಗಳನ್ನೂ, ಬರಹಗಳನ್ನೂ, ಅವುಗಳ ಜೀವಾಳವನ್ನೂ ಆಧಾರವಾಗಿಟ್ಟುಕೊಂಡು, ದಲಿತರ ಕುಲ ಪುರಾಣವನ್ನು ಹೊಸದಾಗಿ ಕಾಣಿಸಿದ ‘ದಕ್ಲ ಕಥಾ ದೇವಿ ಕಾವ್ಯ’ (ರಚನೆ, ನಿರ್ದೇಶನ- ಲಕ್ಷ್ಮಣ ಕೆ.ಪಿ.) ಎಂಬ ವಿಶಿಷ್ಟ ನಾಟಕ ಪ್ರಯೋಗ ಇತ್ತೀಚೆಗೆ ಬೆಂಗಳೂರಿನ ರಂಗಶಂಕರದಲ್ಲಿ ನಡೆಯಿತು.

‘ನನಗೆ ಅಸ್ಪೃಶ್ಯತೆಯ ಅನುಭವ ಸ್ವಮರುಕ ಅಥವಾ ಸ್ವರತಿಯಂತಹ ಮನೋರೋಗವಲ್ಲ, ಕೀಳರಿಮೆಯಲ್ಲ. ಆರಾಧನೆ ಅಥವಾ ಅಹಂ ಅಲ್ಲ, ಅಸ್ಪೃಶ್ಯತೆಯ ಅನುಭವ ಒಂದು ಅರಿವು. ನಿಜ ಮನುಷ್ಯನನ್ನು ಕಾಣುವ ಬೆಳಕು’ ಎಂಬ ನಾಟಕದ ಆರಂಭದ ಸಂಭಾಷಣೆಯ ಸಾಲುಗಳು ಸಿದ್ದಯ್ಯ ಅವರೇ ಬರೆದುಕೊಂಡಿರುವ ಮಾತುಗಳು. ಸಿದ್ದಯ್ಯ ಅವರ ಬಾಲ್ಯದ ಕಥನದೊಂದಿಗೆ ಆರಂಭವಾಗುವ ನಾಟಕ, ದಕ್ಲದೇವಿ, ದಕ್ಲ, ದಕ್ಲನ ಎಡ-ಬಲ ಮಕ್ಕಳ ಕತೆಗಳ ಮೂಲಕ ಕುಲ ಪುರಾಣವನ್ನು ಒಳಗೊಂಡು, ಸೇಂದಿಸರೋವರವನ್ನು ಇಡಿಯಾಗಿ ಕುಡಿಯುವ ದಕ್ಲ ಮತ್ತು ಎಡ-ಬಲ ಮಕ್ಕಳ ಹಸಿವಿನ ಹಂಬಲದಂತೆ ಇಡೀ ನಾಟಕವು ಮನುಷ್ಯನನ್ನು ಮನುಷ್ಯನನ್ನಾಗಿ ಕಾಣುವ, ಕಾಣಿಸುವ ಬೆಳಕಿಗಾಗಿ ಹಂಬಲಿಸಿದ ಜೀವ ಕಾರುಣ್ಯದ ಮಹಾ ಹಸಿವಾಗಿ ಕಾಣುತ್ತದೆ. ಹೀಗಾಗಿಯೇ ನಾಟಕದ ಪ್ರತಿಯೊಂದು ಘಟ್ಟವೂ ಮನುಷ್ಯನೊಳಗಿನ ಮನುಷ್ಯತ್ವವನ್ನು ಚುಚ್ಚಿ ಎಬ್ಬಿಸುವ ಮೊನಚುತನವನ್ನು ಪಡೆದುಕೊಂಡಿದೆ. ನಿಜಮನುಷ್ಯನನ್ನು ಕಾಣುವ, ಕಾಣಿಸುವ ಈ ಬೆಳಕು ತಾಯಿಗುಣವಾಗಿ ಇಡೀ ನಾಟಕವನ್ನು ಆವರಿಸಿಕೊಂಡಿದೆ. ಗಂಡುಸೊಕ್ಕಿನ ದಕ್ಲ ಹೆಣ್ಣಾಗಿ ಬದಲಾದ ಮೇಲೆ ಹೇಳುವ, ‘ಒಂದ್ ಸಲ ಹೆಣ್ಣಾದ ಮೇಲೆ ಇನ್ಯಾವ ರೂಪ ಐತೆ ತಾಯಿ’ ಎನ್ನುವ ಮಾತುಗಳು ನಾಟಕಕ್ಕೆ ತಾಯಿಬೇರಿನಂತಿವೆ.

‘ದೋಯಪ್ಪದೋ… ದೋಯವ್ವದೋ’ ಎಂಬ ದಕ್ಕಲರ ಇರುವಿನ ಕೂಗುಗಳೂ ನಾಟಕದಲ್ಲಿ ಮನುಷ್ಯನ ಅಂತರಾಳದ ಕೂಗುಗಳು ಹಾಗೂ ಆ ಕೂಗುಗಳ ಮೂಲಕ ಜೀವ ಕಾರುಣ್ಯ ಕರುಣಿಸುವ ಅಂಶಗಳಾಗಿ ಬೆರೆತಿವೆ. ಅರೆ, ತಮಟೆಗಳ ಕಂಪನ ಆರಂಭದಿಂದ ಕೊನೆಯವರೆಗೂ ಈ ಪ್ರಯೋಗದಲ್ಲಿ ಆವರಿಸಿಕೊಂಡು ನಾಟಕಕ್ಕೆ ವಿಶಿಷ್ಟ ಅನುಭೂತಿ ನೀಡಿದೆ. ಅರೆ, ತಮಟೆ ವಾದ್ಯಗಳನ್ನು ನುಡಿಸುವ ಕಲಾವಿದರೇ ಪಾತ್ರಧಾರಿಗಳಾಗಿ ಇದ್ದಿದ್ದು ಮತ್ತು ವಾದನ, ಅಭಿನಯ ಎರಡನ್ನೂ ಹದವಾಗಿ ನುಡಿಸಿಕೊಂಡು, ನಡೆಸಿಕೊಂಡು ಹೋಗಿದ್ದು ನಾಟಕದ ಹೆಚ್ಚುಗಾರಿಕೆ.

ADVERTISEMENT

ನಾಟಕದೊಳಗೇ ನಾಟಕ ನಡೆಯುತ್ತಾ, ದಕ್ಕಲ ಮಕ್ಕಳೇ ಪಾತ್ರಗಳಾಗುತ್ತಾ ನಾಟಕ ಕಲೆಯ ಪ್ರಧಾನ ಅಂಶ ಎನಿಸಿರುವ ‘ಮನರಂಜನೆ’ಯ ಜತೆಜತೆಗೇ ಮನುಷ್ಯ ಘನತೆ ಹಾಗೂ ಮಾನವೀಯತೆಯ ಬಗ್ಗೆ ಅರಿವು ಕರುಣಿಸುವ ಕಾರಣಕ್ಕೆ ಈ ನಾಟಕ ಭಿನ್ನವೂ, ಸಕಾಲಿಕವೂ ಆಗಿದೆ. ನಾಟಕದಲ್ಲಿ ಅಸ್ಪೃಶ್ಯತೆ, ಲಿಂಗ ಅಸಮಾನತೆ, ಬಡತನ, ಪ್ರಸ್ತುತ ರಾಜಕೀಯ ಸನ್ನಿವೇಶಗಳನ್ನು ಹಾಡು, ಆಚರಣೆ, ಒಡಪು, ಗಾದೆ, ಕುಲ ಪುರಾಣಗಳ ಮೂಲಕ ಒಂದರೊಳಗೊಂದು ಹೆಣೆಯಲಾಗಿದೆ. ಈ ಪ್ರಯೋಗದ ಹಲವು ಕಡೆ ಪ್ರೇಕ್ಷಕರೂ ಪಾತ್ರಗಳಾಗಿ, ಪಾತ್ರಗಳು ಪ್ರೇಕ್ಷಕರ ಭಾವಪ್ರತಿಕ್ರಿಯೆಗೆ ಕಾಯುವ ಪ್ರೇಕ್ಷಕರಾಗಿ, ಆಚರಣೆಗಳು ಪ್ರೇಕ್ಷಕರ ನಡುವೆಯೇ ನಡೆಯುತ್ತಾ, ಪ್ರೇಕ್ಷಕರ ಗ್ಯಾಲರಿಗೆ ಆಗಾಗ ಬೆಳಕು ಚೆಲ್ಲುವ ಮೂಲಕ ಪ್ರೇಕ್ಷಕರನ್ನು ‘ಎಚ್ಚರ’ವಾಗಿಡುವ ಎಪಿಕ್‌ ರಂಗಭೂಮಿಯ ಅಂಶಗಳನ್ನೂ ಈ ನಾಟಕದಲ್ಲಿ ಅಚ್ಚುಕಟ್ಟಾಗಿ ಬಳಸಿಕೊಳ್ಳಲಾಗಿದೆ.

ಪಾತ್ರಧಾರಿಗಳೂ, ಸಂಗೀತಗಾರರೂ ಆಗಿದ್ದ ನುರಿತ ಕಲಾವಿದರಾದ ಬಿಂದು ರಕ್ಷಿದಿ, ರಮಿಕ ಚೈತ್ರ, ಸಂತೋಷ್ ದಿಂಡಗೂರು, ನರಸಿಂಹರಾಜು ಬಿ.ಕೆ., ಭರತ್‌ ಡಿಂಗ್ರಿ ಅವರ ಅಭಿನಯ ಮತ್ತು ಸಂಗೀತ ಹದವಾಗಿತ್ತು. ಬೆಳಕು (ಮಂಜು ನಾರಾಯಣ್), ವಸ್ತ್ರ ವಿನ್ಯಾಸ (ಶ್ವೇತಾರಾಣಿ ಎಚ್.ಕೆ.) ನೇಪಥ್ಯ (ಚಂದ್ರಶೇಖರ ಕೆ.) ನಾಟಕದ ಪರಿಣಾಮ ಹೆಚ್ಚಿಸಿದವು.

ಅಸ್ಪೃಶ್ಯರಲ್ಲೇ ಅಸ್ಪೃಶ್ಯರಾಗಿ, ಇಂದಿಗೂ ಸಮಾಜದ ಕಟ್ಟಕಡೆಯಲ್ಲಿರುವ ದಕ್ಕಲರ ಬದುಕು, ದಕ್ಕಲರ ಕುಲ ಪುರಾಣವನ್ನು ವರ್ತಮಾನದ ಅಸಮಾನತೆಯ ಪಿಡುಗಿಗೆ ಮದ್ದಾಗಿ ಬಳಸಿಕೊಳ್ಳಲು ಈ ನಾಟಕ ಪ್ರಯತ್ನಿಸಿದೆ. ಸಿದ್ದಯ್ಯ ಅವರಿಗೆ ಅಕ್ಷರ ಕಾಣಿಸಿದ ಬೆಳಕನ್ನು ಲಕ್ಷ್ಮಣ ಕೆ.ಪಿ. ಅವರ ತಂಡ ಸಮಾಜಕ್ಕೆ ಹರಡುವ ಸಾರ್ಥಕ ಕಾರ್ಯವಾಗಿ ಈ ಪ್ರಯೋಗ ಕಾಣುತ್ತದೆ. ಆ ನಿಟ್ಟಿನಲ್ಲಿ ಈ ಪ್ರಯೋಗ ಸಿದ್ದಯ್ಯ ಅವರಿಗೆ, ಅವರ ಕಾವ್ಯ ಕಾಣ್ಕೆಗೆ, ದರ್ಶನಕ್ಕೆ ಸಲ್ಲಿಸಿದ ನಿಜನಮನ.

ಇಡೀ ನಾಟಕದಲ್ಲಿ ಮುಖ್ಯವಾಗಿ ಕಾಡುವ ಅಂಶ ಜೀವಕಾರುಣ್ಯದ ಬೆಳಕಿನ ಹಂಬಲ. ಸಮಾಜದಲ್ಲಿ ಈ ಜೀವ ಕಾರುಣ್ಯದ ಬೆಳಕಿನ ಕೊರತೆಯ ಕಾರಣಕ್ಕಾಗಿಯೇ ಇಂದಿಗೂ ಮನುಷ್ಯ ಘನತೆಯನ್ನು ತುಳಿಯುವಂಥ ಹೇಯ ಘಟನೆಗಳು ನಡೆಯುತ್ತಲೇ ಇವೆ. ಮನುಷ್ಯನೊಳಗಿನ ಜೀವ ಕಾರುಣ್ಯದ ಬೆಳಕು ಕಾಣಲು ದಕ್ಲನಿಗೆ ದಕ್ಕಿದ ಕಣ್ಣು, ಕೇಬಿ ಅವರಿಗೆ ದಕ್ಕಿದ ಕಣ್ಣುಗಳ ಅಗತ್ಯ ಈಗ ಈ ಸಮಾಜಕ್ಕಿದೆ. ಈ ನಾಟಕವನ್ನು ಕಾಣಲೂ ಅಂಥ ಕಣ್ಣು ಬೇಕು. ಅಂಥ ಕಣ್ಣಿಲ್ಲದವರು ಕಣ್ಣು ಧರಿಸಿ ಕಾಣಿರೋ…

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.