ADVERTISEMENT

ನಾಟಕೋತ್ಸವ | ಇದು ನೋಡುವ ಸಮಯ!

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2022, 19:30 IST
Last Updated 29 ಅಕ್ಟೋಬರ್ 2022, 19:30 IST
ರಂಗ ನಾಟಕ – ಸಾಂದರ್ಭಿಕ ದೃಶ್ಯ
ರಂಗ ನಾಟಕ – ಸಾಂದರ್ಭಿಕ ದೃಶ್ಯ   

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಂಗಕಲೆಯ ಕೀರ್ತಿಪತಾಕೆಯನ್ನು ಎತ್ತಿ ಹಿಡಿದ ರಂಗಶಂಕರ ಪ್ರಾರಂಭವಾಗಿ ಹದಿನೆಂಟು ವರ್ಷಗಳಾದವು. ಇದೇ ನವೆಂಬರ್ 1 ರಿಂದ ತೊಡಗಿ ಆರು ದಿನಗಳ ಕಾಲ ರಂಗಶಂಕರದ 19ನೇ ನಾಟಕೋತ್ಸವ ನಡೆಯಲಿದೆ. ಈ ಬಾರಿಯ ಪರಿಕಲ್ಪನೆ ‘ಜಸ್ಟ್ ಥಿಯೇಟರ್’ ಅಂದರೆ ನ್ಯಾಯ, ಸತ್ಯ, ಔಚಿತ್ಯಪೂರ್ಣ ರಂಗಕಲೆ.

ರಂಗಶಂಕರದ ರೂವಾರಿ, ಅಭಿನೇತ್ರಿ ಅರುಂಧತಿ ನಾಗ್ ಅವರು ಹೇಳುವಂತೆ ‘ಜಸ್ಟ್ ಥಿಯೇಟರ್ ಪ್ರೇಕ್ಷಕವರ್ಗವನ್ನು ಆಲೋಚಿಸಲು ಪ್ರಚೋದಿಸುತ್ತದೆ. ಈ ನಾಟಕೋತ್ಸವ ಕೇವಲ ನೋಡುಗರಾಗಿ ನಿಮ್ಮತ್ತ ಒಗೆದದ್ದನ್ನು ಸುಮ್ಮನೇ ಸ್ವೀಕರಿಸುವ ತಟಸ್ಥ ಪ್ರೇಕ್ಷಕರಾಗಿ ಮಾತ್ರವಲ್ಲ, ಬದಲಿಗೆ ನಮ್ಮ ಪ್ರೇಕ್ಷಕರು, ಸಮಾಜ ಹಾಗೂ ವ್ಯಕ್ತಿಗಳ ನೆಲೆಯಲ್ಲೂ ನಮ್ಮ ಆಯ್ಕೆ ನ್ಯಾಯವಾಗಿರಬೇಕು ಎನ್ನುವುದನ್ನು ಮನಗಂಡು ಸಕ್ರಿಯವಾಗಿ ಭಾಗಿಗಳಾಗಬೇಕು ಎನ್ನುವುದು ಇದರ ಆಶಯ’.

ಕಲೆ ಸದಾ ಬದುಕನ್ನೇ ಪ್ರತಿಬಿಂಬಿಸುತ್ತದೆ. ಇಂದಿನ ತೀವ್ರ ಗೊಂದಲದ ಕಾಲದಲ್ಲಿ ಸುತ್ತಮುತ್ತಲ ಸಂಭವಗಳು ಜನರನ್ನು ಕಂಗೆಡಿಸಿರುವುದು ನಿಜ. ಇತರ ಎಲ್ಲಾ ಕಲೆಗಳಿಗಿಂತ ನಾಟಕ ತನ್ನ ತಕ್ಷಣದ ಪರಿಣಾಮದಿಂದಾಗಿ ಜೊತೆಗೆ ನಂಬಿಸುವ ಸಾಮರ್ಥ್ಯದಿಂದಾಗಿ ಹೆಚ್ಚು ಖಡಕ್ಕಾಗಿ ಮಾನದಂಡಕ್ಕೊಳಪಡುತ್ತದೆ. ಹಾಗಾಗಿ ಈ ಬಾರಿಯ ನಾಟಕೋತ್ಸವ ‘ಜಸ್ಟ್’ ‘ನ್ಯಾಯ’ ಎನ್ನುವ ಪರಿಕಲ್ಪನೆಯ ಹಲವು ಮಜಲುಗಳನ್ನು ಮತ್ತು ಅವುಗಳ ಮರುವ್ಯಾಖ್ಯಾನಗಳನ್ನು ಕುರಿತು ಪರಿಶೋಧಿಸುತ್ತದೆ.

ADVERTISEMENT

ರೇವತಿ ಲಾಲ್ ಅವರು ಬರೆದ ಈ ನಾಟಕೋತ್ಸವ ಕುರಿತ ಟಿಪ್ಪಣಿಯಲ್ಲಿ ‘ಈ ದುರಿತ ಕಾಲದಲ್ಲಿ ಬದುಕಲು ನಾವು ಬಾಗುವುದಿಲ್ಲ ಎಂದು ದೃಢವಾಗಿ ನಿಲ್ಲುವ ಧೈರ್ಯ ಬೇಕು. ನಮಗೆ ಈಗ ಬೇಕಾದುದು, ಸಾಧ್ಯತೆಗಳ ಮತ್ತು ತನ್ನಂಬಿಕೆಯ ಪ್ರದರ್ಶನ. ಭಯ ಮತ್ತು ಪಕ್ಷಪಾತದಿಂದಲ್ಲದೇ, ಸಕಾರಣದ ಸ್ಪಷ್ಟ ಸತ್ಯ ದನಿಯಲ್ಲಿ ನ್ಯಾಯ ಪ್ರತಿಪಾದನೆ. ಅನ್ಯಾಯವನ್ನು ಕಂಡಲ್ಲೆಲ್ಲಾ ನಾವು ಅದನ್ನು ಗುರುತಿಸಿ ಖಂಡಿಸೋಣ. ಪ್ರತಿಯೊಂದು ಮಗುವಿಗೂ ನ್ಯಾಯ ಮತ್ತು ಅನ್ಯಾಯದ ಕುರಿತು ಪಾಠ ಕಲಿಸೋಣಾ. ಸರ್ವರಿಗೂ ನ್ಯಾಯದ ಜಗತ್ತನ್ನು ಅರಸೋಣ’ ಎಂದು ಕರೆ ಕೊಟ್ಟಿದ್ದಾರೆ.

ಕರ್ನಾಟಕ ರಾಜ್ಯೋತ್ಸವದ ದಿನದಂದು ಪ್ರಾರಂಭವಾಗಿ ‘ಇದು ಕೇಳುವ ಸಮಯ’ ಎನ್ನುವ ಅನ್ವರ್ಥ ಶೀರ್ಷಿಕೆಯಡಿಯಲ್ಲಿ ಕಾವ್ಯ ಗೋಷ್ಠಿಯಿಂದ ಉತ್ಸವ ತೊಡಗುತ್ತದೆ. ಕವಿಗಳಾದ ಪ್ರತಿಭಾ ನಂದಕುಮಾರ್ ಮತ್ತು ಮಮತಾ ಸಾಗರ್ ಎರಡು ಗೋಷ್ಠಿಗಳನ್ನು ಆಯೋಜಿಸಿದ್ದಾರೆ. ರಾಜೇಂದ್ರ ಪ್ರಸಾದ್, ಸದಾಶಿವ ಸೊರಟೂರ್, ಫಾತಿಮಾ ರಲಿಯಾ, ಶಿಲೋಕ್ ಮುಕ್ಕಾಟಿ, ಹಾಜೀರ, ಚಾಂದ್ ಪಾಷಾ, ದಾದಾಪೀರ್ ಜೈಮನ್ ಅವರು ತಮ್ಮ ಕವನಗಳನ್ನು ಪ್ರಸ್ತುತಪಡಿಸುತ್ತಾರೆ.

ಆರು ದಿನಗಳ ಉತ್ಸವದಲ್ಲಿ ಆರು ಪ್ರಧಾನ ನಾಟಕಗಳ ಪ್ರದರ್ಶನವಿದೆ. ರಂಗಶಂಕರ ನಾಟಕ ಕಮ್ಮಟದಲ್ಲಿ ಸಿದ್ಧಗೊಂಡ ಕನ್ನಡ ನಾಟಕ ಜಂಗಮ ಕಲೆಕ್ಟಿವ್ ತಂಡದ ‘ದಕ್ಲ ಕಥಾದೇವಿ ಕಾವ್ಯ’ ಮೊದಲ ನಾಟಕ. ಮೂಲಪಠ್ಯ ಕನ್ನಡದ ಜನಪ್ರಿಯ ಕವಿ ಕೆ.ಬಿ. ಸಿದ್ದಯ್ಯ ಅವರದು. ರಚನೆ ಮತ್ತು ನಿರ್ದೇಶನ ಲಕ್ಷ್ಮಣ್.

ಆರೂ ನಾಟಕಗಳು ವಸ್ತು ವೈವಿಧ್ಯದಿಂದ ಕೂಡಿದ ಉತ್ತಮ ಆಯ್ಕೆಯಾಗಿವೆ. ಮುಂಬೈನ ಆಕ್ವೇರಿಯಸ್ ತಂಡದವರು ಹೆನ್ರಿ ಇಬ್ಸನ್‌ನ ಎನ್ ಎನಿಮಿ ಆಫ್ ದ ಪೀಪಲ್ ನಾಟಕ ಆಧಾರಿತ ‘ದೇರ್ ಈಸ್ ಸಮ್‌ಥಿಂಗ್ ಇನ್ ದ ವಾಟರ್’ ಇಂಗ್ಲಿಷ್ ನಾಟಕವನ್ನು ಆಕರ್ಷ್ ಖುರಾನಾ ಅವರು ನಿರ್ದೇಶಿಸಿದ್ದಾರೆ. ಮುಂಬೈನ ಮತ್ತೊಂದು ಜನಪ್ರಿಯ ತಂಡ ದ ಕಂಪನಿ ಥಿಯೇಟರ್ ರೊನಾಲ್ಡ್ ಹಾರ್‌ವುಡ್ ರಚಿಸಿದ ‘ಟೇಕಿಂಗ್ ಸೈಡ್ಸ್’ ಪ್ರದರ್ಶಿಸುತ್ತಿದೆ. ನಿರ್ದೇಶನ ಅತುಲ್ ಕುಮಾರ್ ಅವರದು.

ತಮಿಳುನಾಡಿನ ಕೋವಿಲ್ ಪಟ್ಟಿಯ ಮಣಲ್ ಮಗುಡಿ ಥಿಯೇಟರ್ ಲ್ಯಾನ್ಡ್ ತಂಡ ದೇಹ ಮತ್ತು ನೆಲದ ಸಂಬಂಧ ಕುರಿತ ಸುಪ್ರಸಿದ್ಧ ತಮಿಳು ನಾಟಕ ‘ಇಡಕಿನಿ ಕಥೈರಥಮ್’ ಪ್ರಸ್ತುತಪಡಿಸುತ್ತಿದೆ. ನಿರ್ದೇಶನ ಎಸ್ ಮುರುಗಬಹುಪತಿ ಅವರದು. ದೆಹಲಿಯ ಯುನಿಕಾರ್ನ್ ಆ್ಯಕ್ಟರ್ಸ್ ಸ್ಟುಡಿಯೊ ಜಾರ್ಜ್ ಆರ್ವೆಲ್‌ನ ಸುಪ್ರಸಿದ್ಧ ಕಾದಂಬರಿ ‘1984’ ಆಧಾರಿತ ಹಿಂದಿ ನಾಟಕ ಪ್ರಸ್ತುತಪಡಿಸುತ್ತಿದೆ.

ರಂಗಶಂಕರದ ಸ್ವಂತ ನಿರ್ಮಿತಿ ‘ಅಪ್ನಾ ಘರ್ ಜೈಸಾ’ ಅನ್ಮೋಲ್ ವೆಲಾನಿ ಅವರು ರಚಿಸಿ ನಿರ್ದೇಶಿಸಿದ ನಾಟಕ. ವಿಭಿನ್ನ ಧ್ವನಿಯ ಪ್ರಸ್ತುತಿಯ ‘ಅದರ್ ವಾಯ್ಸಸ್’ ಎನ್ನುವ ವಿಭಾಗದಲ್ಲಿ ಮುಂಬೈನ ಖ್ಯಾತ ಅಭಿನೇತ್ರಿ ರತ್ನ ಪಾಠಕ್ ಷಾ ಅವರು ಪ್ರಸ್ತುತ ಕಾಲಕ್ಕೆ ಸ್ಪಂದಿಸುವ ‘ಪ್ಯಾರಾಬಲ್ಸ್ ಫಾರ್ ದ ಪ್ರೆಸೆಂಟ್’ ಕಥೆಗಳನ್ನು ವಾಚಿಸುತ್ತಾರೆ.

ಯುವ ಜನತೆಗಾಗಿ ‘ವಾಯ್ಸಸ್ ಆಫ್ ಯೂತ್’ ವಿಭಾಗದಲ್ಲಿ ಪ್ರತಿದಿನ ಸಂಜೆ ಯುವಜನತೆ ನ್ಯಾಯ, ಸಮಾನತೆ ಇತ್ಯಾದಿ ಪರಿಕಲ್ಪನೆಗಳನ್ನು ಹೇಗೆ ಅರ್ಥೈಸಿಕೊಳ್ಳುತ್ತಾರೆ ಎನ್ನುವುದರ ಕುರಿತ 20 ನಿಮಿಷಗಳ ಕಿರುನಾಟಕಗಳನ್ನು ಪ್ರಸ್ತುತಪಡಿಸುತ್ತಾರೆ. ಇದರಲ್ಲಿ ಸುರಾನಾ ಕಾಲೇಜ್, ಕ್ರೈಸ್ಟ್ ಯುನಿವರ್ಸಿಟಿ, ಸೃಷ್ಟಿ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿ, ದ ವ್ಯಾಲಿ ಸ್ಕೂಲ್ ಮತ್ತು ಜ್ಯೋತಿ ನಿವಾಸ ಕಾಲೇಜ್ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ.

ಕೆಲವು ಪ್ರದರ್ಶನಗಳು ಟಿಕೀಟ್ ಸಹಿತ (ರಂಗ ಶಂಕರ ಮತ್ತು ಬುಕ್ ಮೈ ಶೋನಲ್ಲಿ ಪಡೆಯಬಹುದು) ಕೆಲವು ಉಚಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.