ನೋಡನೋಡುತ್ತಿದ್ದಂತೆಯೇ ‘ವರ್ತಮಾನ’ವಾಗಿದ್ದ ಸಮಕಾಲೀನ ಘಟನೆಗಳು ‘ಇತಿಹಾಸ’ ಆಗುವುದು ಸಹಜ ಪ್ರಕ್ರಿಯೆ. ಚರಿತ್ರೆಯ ಪುಟ ಸೇರುವ ಸಂಗತಿಗಳು ‘ಕತೆ’ಯಾಗುವುದು ಕೂಡ ಸಹಜ ಕ್ರಿಯೆ. ಈ ಕ್ರಿಯೆಗೆ ಸೃಜನಶೀಲ ಪ್ರತಿಕ್ರಿಯೆ ನೀಡಿ ‘ಕಲಾಕೃತಿ’ ಆಗಿಸುವ ಹಟ-ಪ್ರಯತ್ನ ಕೂಡ ನಡೆಯುತ್ತಲೇ ಇರುತ್ತದೆ. ಈ ಹುಡುಕಾಟದ ನೆಲೆ ಅವರವರಿಗೆ ಕಂಡ ಸತ್ಯವಾಗಿರುತ್ತದೆ. ಬದುಕಿದ್ದಾಗಲೇ ‘ದಂತಕತೆ’ಯಂತಿದ್ದ ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿ ಅವರು ನಾಟಕಕ್ಕೆ ವಸ್ತುವಾಗಿದ್ದಾರೆ. ಇದನ್ನು ದಂತಕತೆಯೊಂದು ಕತೆಯಾದ ಸೋಜಿಗ ಎನ್ನಬಹುದು. ಈ ಸೋಜಿಗವನ್ನು ಬರೆದು ಆಗುಮಾಡಿದವರು ಕತೆಗಾರ-ಲೇಖಕ ನಟರಾಜ ಹುಳಿಯಾರ್. ಅದನ್ನು ನಿರ್ದೇಶನದ ಮೂಸೆಯಲ್ಲಿ ಅರಳಿಸಿದವರು ‘ಕಬಡ್ಡಿ’ ನರೇಂದ್ರ ಬಾಬು.
ಚಿತ್ರನಟ ಸಂಪತ್ ಮೈತ್ರೇಯ ಅವರು ಎಂ.ಡಿ.ಎನ್. ಪಾತ್ರದಲ್ಲಿ ರಂಗ ಕಳೆಕಟ್ಟುವಂತೆ ಮಾಡಿದ್ದಾರೆ. ಅನುಕರಣೆ-ಅಭಿನಯ ಎರಡರಲ್ಲೂ ಸಂಪತ್ ತಮಗೆ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಹಾಗೆಯೇ ತಮ್ಮ ಎದುರಿಗಿದ್ದ ಸವಾಲನ್ನು ಸಂಪತ್ ನಾಟಕೀಯ ಪ್ರಸ್ತುತಿಯ ಮೂಲಕ ದಾಟಿದ್ದಾರೆ.
ನೋಡಿ, ಕೇಳಿ, ಓದಿ ಗೊತ್ತಿದ್ದ ಎಂ.ಡಿ.ಎನ್. ಅವರ ಬದುಕು ಬಿಡಿ ಬಿಡಿ ಘಟನೆಗಳಾಗಿ ಕಣ್ಣಮುಂದೆ ಅನಾವರಣ ಆಗುತ್ತ ಹೋಗುತ್ತವೆ. ಅದನ್ನು ಕ್ರೋನಾಲಜಿಕಲ್ ಆರ್ಡರ್ ಇಲ್ಲದಂತೆಯೇ ಕಟ್ಟಿದ್ದು ಕೂಡ ಉದ್ದೇಶಪೂರ್ವಕ.
ದೆಹಲಿಯಲ್ಲಿ ಇತ್ತೀಚೆಗೆ ನಡೆದು ಯಶಸ್ಸು ಕಂಡ ಪ್ರಭುತ್ವ ವಿರೋಧಿ ರೈತ ಚಳವಳಿಯ ಘಟನೆಯ ದೃಶ್ಯದೊಂದಿಗೆ ಆರಂಭವಾಗುವ ಪ್ರದರ್ಶನವು ಇಂತಹ ಚಳವಳಿಯ ಲೆಜೆಂಡ್ ಒಬ್ಬರ ಕಡೆಗೆ ಹೊರಳುವುದು ಸಹಜ. ಉತ್ತರ ಪ್ರದೇಶದಲ್ಲಿ ಮಹೇಂದ್ರಸಿಂಗ್ ಟಿಕಾಯತ್ ಜೊತೆಗೆ ‘ಪ್ರತಿಮೆ’ಯಾಗಿರುವ ನಂಜುಂಡಸ್ವಾಮಿ ಅವರು ರೈತ ಹೋರಾಟದ ‘ಪ್ರತೀಕ’ ಆಗುವಂತೆ ಮಾಡಿ ತೋರಿಸುವ ಪ್ರಯತ್ನವಿದು. ಸಮಕಾಲೀನ ಸವಾಲುಗಳಿಗೆ ಎಂ.ಡಿ.ಎನ್. ಅವರಲ್ಲಿ ಉತ್ತರ ಇದ್ದಿರಬಹುದೇ? ಅದು ಸಿಗಬಹುದೇ? ಎಂಬ ಹುಡುಕಾಟವು ‘ಆಯಾ ಕಾಲವು ತನ್ನ ಕಾಲಕ್ಕೆ ತಕ್ಕ ಚಳವಳಿಯನ್ನು ರೂಪಿಸಿಕೊಳ್ಳಬೇಕು’ ಎಂಬ ಆಶಯದ ಅನಾವರಣಕ್ಕೆ ಅನುವು ಮಾಡಿಕೊಡುತ್ತದೆ.
ಎಂ.ಡಿ.ಎನ್. ಬಗ್ಗೆ ನಾಟಕದ ಲೇಖಕರಿಗೆ ಪ್ರೀತಿ-ಗೌರವ ಇದೆ. ಅದೇ ಕಾರಣಕ್ಕೆ ಅದನ್ನವರು ರಂಗಕೃತಿ ಆಗಿಸಲು ಹೆಣಗಿದ್ದಾರೆ. ಪ್ರೀತಿ ಗೌರವಗಳು ‘ಆರಾಧನೆ’ಯಾಗಿ ಭಕ್ತಿಯಲ್ಲಿ ತೇಲುವಂತಹ ಎಚ್ಚರ ರಹಿತ ದಿನಗಳಿವು. ಇಂತಹ ಸಹಜ ಬೆಳವಣಿಗೆ-ಬದಲಾವಣೆಗಳಿಗೆ ವ್ಯತಿರಿಕ್ತವಾಗಿ ಪ್ರೀತಿಯ ಜೊತೆಗೇ ಅಂತರವನ್ನೂ ಇಟ್ಟುಕೊಂಡಿರುವ ರಚನೆಯಲ್ಲಿ ಗತದ ವೈಭವೀಕರಣ ಆಗಿಲ್ಲ. ಆದರೆ, ನಾಟಕದ ವಸ್ತುವೇ ‘ನಾಯಕ’ ಕೇಂದ್ರಿತ ಆಗಿರುವುದರಿಂದ ಸಹಜವಾಗಿಯೇ ಎಲ್ಲ ಘಟನೆಗಳೂ ಆ ಕೇಂದ್ರದ ಸುತ್ತ ಗಿರಕಿ ಹೊಡೆಯುತ್ತವೆ. ಎಂ.ಡಿ.ಎನ್. ಅವರೊಂದಿಗೆ ಪ್ರೀತಿ ಹಾಗೂ ಅಂತರದ ಗೌರವ ಇಟ್ಟುಕೊಂಡವರು ಪಾತ್ರಗಳಾಗಿದ್ದಾರೆ. ಪಾತ್ರವಾಗದಿದ್ದರೂ ಪ್ರಸ್ತಾಪವಾಗುವ ‘ಗಾಂಧಿ ಬಜಾರಿನ ಗಾಂಧಿ’, ಲಂಕೇಶ್ ಹಾಗೂ ಪಾತ್ರಗಳಾಗಿರುವ ಡಿ.ಆರ್.ಸುಂದರೇಶ್, ಶೂದ್ರ ಶ್ರೀನಿವಾಸ್, ಅಗ್ರಹಾರ ಕೃಷ್ಣಮೂರ್ತಿ ನಾಟಕದ ಕಟ್ಟುವಿಕೆಯ ಭಾಗವಾಗಿದ್ದಾರೆ.
ರಂಗದ ಮೇಲೆ ಕಷ್ಟಸಾಧ್ಯವಾದ ಹಲವು ಸಾಧ್ಯತೆಗಳನ್ನು ಆಗುಮಾಡಿದ್ದು ವಿಶೇಷ. ಆಕಾಶವಾಣಿಯ ವಾರ್ತೆ, ಟೆಲಿಫೋನ್ ಮಾತುಕತೆ, ಟಿ.ವಿ. ಸಂದರ್ಶನ, ವರದಿಗಾರಿಕೆಗಳನ್ನು ಕತೆಯ ಬೆಳವಣಿಗೆಗೆ ಅನುಕೂಲ ಆಗುವಂತೆ ಬಳಸಿಕೊಳ್ಳಲಾಗಿದೆ. ಅವು ಹಂದರಕ್ಕೆ ಪೂರಕವಾಗಿವೆ. ಆದರೆ, ಒಂದಾದ ಮೇಲೊಂದರಂತೆ ಬರುವ ಒಂದೇ ರೀತಿಯ ದೃಶ್ಯಗಳು ರಿಪಿಟೇಟಿವ್ ಆದಂತೆ ಭಾಸವಾಗುತ್ತವೆ. ಪೊಲೀಸ್ ಸಿಬ್ಬಂದಿಯನ್ನು ಬಳಸಿಕೊಂಡಿರುವ ದೃಶ್ಯಗಳು ಅದಕ್ಕೊಂದು ಉದಾಹರಣೆ.
ಪ್ರಭುತ್ವ ವಿರೋಧಿಯಾಗಿದ್ದ ನಂಜುಂಡಸ್ವಾಮಿ ಅವರು ಚಳವಳಿಯನ್ನು ಹೇಗೆ ಸೃಜನಶೀಲವಾಗಿ ರೂಪಿಸುತ್ತಿದ್ದರು ಎನ್ನುವುದಕ್ಕೆ ಹಲವು ಉದಾಹರಣೆಗಳು ನೋಡಲು ಸಿಗುತ್ತವೆ. ವಿಧಾನಸೌಧದ ಮುಂದೆ ನಿಂತು ನಗುವ ಚಳವಳಿ ಅಂತಹದ್ದರಲ್ಲೊಂದು. ಹಿಂಸೆಯನ್ನು ಕುರಿತ ಪ್ರೊಫೆಸರ್‌ರ ವ್ಯಾಖ್ಯಾನವೂ ಅವರಂತೆಯೇ ವಿಚಿತ್ರ. ‘ರೈತನಲ್ಲ ಸಾಲಗಾರ, ಸರ್ಕಾರವೇ ಬಾಕಿದಾರ’ ಎನ್ನುವ ನಿಲುವು ಹೊಂದಿದ್ದ ಎಂ.ಡಿ.ಎನ್. ಅವರು ರೈತ ಚಳವಳಿಗೆ ತಾತ್ವಿಕ ನೆಲೆ ಒದಗಿಸಿದವರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಅದನ್ನ ಅಳವಡಿಸಿಕೊಂಡ ‘ಡೈರೆಕ್ಟ್ ಆ್ಯಕ್ಷನ್’ ಕಟ್ಟುವ ಕ್ರಿಯೆಯಾಗದೇ ಇರುವುದು ನಾಟಕದ ಸೋಲಲ್ಲ.
ರೈತಚಿಂತಕರಾಗಿ ಅಂತರರಾಷ್ಟ್ರೀಯ ಮನ್ನಣೆ ಗಳಿಸಿದರೂ ಕನ್ನಡಿಗರು ಅರಿಯದೇ ಹೋದ ಎಂ.ಡಿ.ಎನ್. ಕೂಡ ಗ್ರೀಕ್ ನಾಟಕಗಳ ‘ಟ್ರ್ಯಾಜಿಕ್ ಹೀರೋ’ ತರಹ. ಈ ದುರಂತಕ್ಕೆ ಪಾತ್ರಗಳು ಆರೋಪಿಸುವ ಅವರ ‘ಸರ್ವಾಧಿಕಾರಿ’ ಗುಣ ಕಾರಣವೇ? ದುರಂತ ನಾಯಕನಾಗಲು ಅದಷ್ಟೆ ಸಾಕೆ? ಈ ಕುರಿತ ‘ಮೌನ’ ನಾಯಕನಿಗೆ ಒಳತೋಟಿಯೇ ಇಲ್ಲದಂತೆ ಮಾಡುತ್ತದೆ.
ರೈತರಿಗೆ ಕೈದಿಗಳಂತೆ ಬಿಳಿ ಯುನಿಫಾರ್ಮ್ ಹಾಕಿಸಿರುವುದು ರಸಾಭಾಸ ಉಂಟುಮಾಡದೇ ಇರಲಾರದು. ಎಂ.ಡಿ.ಎನ್. ಪಾತ್ರದ ಕಾಸ್ಟ್ಯೂಮ್‌ಗೆ ಸಿಕ್ಕಿರುವ ಆದ್ಯತೆ-ಮನ್ನಣೆ ಉಳಿದ ಪಾತ್ರಗಳಿಗೆ ಸಿಕ್ಕಿಲ್ಲದೇ ಇರುವುದು ಕೊರತೆ. ಜೈಲಿನ ದೃಶ್ಯದಂತೆಯೇ ವಿಧಾನಸಭೆಯೂ ಸೇರಿದಂತೆ ಹಲವು ದೃಶ್ಯಗಳು ಕಾಣಿಸುವುದು ಒಳ್ಳೆಯದೇನಲ್ಲ. ಕತೆಯನ್ನು ನಾಟಕೀಯ ಬೆಳವಣಿಗೆಗಳ ಮೂಲಕ ಕಟ್ಟಿರುವುದು ಸಕಾರಾತ್ಮಕ ಅಂಶವಾದರೆ, ಅಲ್ಲಲ್ಲಿ ಸಿನಿಮೀಯಗೊಳಿಸಿರುವುದು ಮಿತಿ ಎಂದೇ ಹೇಳಬೇಕು. ಬೆಳಕಿನ ವಿನ್ಯಾಸ ಮಾಡಿದ ಮಂಜು ನಾರಾಯಣರ ಕೌಶಲ ಎದ್ದು ಕಾಣಿಸುತ್ತದೆ.
ನಾಟಕದಲ್ಲಿ ಸಾಹಿತ್ಯ ಕೃತಿಯು ರಂಗಕೃತಿಯಾಗಿ ಸಾಕಾರವಾಗುತ್ತದೆ. ಈ ಪ್ರಕ್ರಿಯೆಯು ನಾಟಕಕಾರ-ನಿರ್ದೇಶಕ- ಕಲಾವಿದ-ತಂತ್ರಜ್ಞರ ಪರಸ್ಪರ ಕೊಡುಕೊಳ್ಳುವಿಕೆಯ ಮೂಲಕ ಶ್ರೀಮಂತವಾಗುತ್ತ ಹೋಗುತ್ತದೆ. ಯಾವುದೇ ಹಂತದಲ್ಲಿ ಹದ ತಪ್ಪಿದರೂ ಅದು ಒಟ್ಟು ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ.
‘ಡೈರಕ್ಟ್ ಆ್ಯಕ್ಷನ್’ನಲ್ಲಿ ಪ್ರೇಕ್ಷಕರು- ಸಮಾಜ ಬಯಸುವ ಎಲ್ಲವೂ ಇದೆ. ಆದರೂ ನೋಡಿದ ನಂತರ ಸಮಾಧಾನ ಆಗದೇ ಇರಲು ಕಾರಣವೇನಿರಬಹುದು? ಹುಡುಕಾಟದ ಶ್ರದ್ಧೆಯ ಬಗ್ಗೆ ಅನುಮಾನಗಳೇನಿಲ್ಲ. ಆದರೆ ಅದು ರಂಗದ ಮೇಲೆ ವ್ಯಕ್ತವಾದಾಗ ಮಾತ್ರ ಪರಿಣಾಮಕಾರಿಯಾಗುತ್ತದೆ. ಅದಿರಲಿ ‘ಅಪಾಯಕಾರಿ’ ಕಾಲದಲ್ಲಿ ಸವಾಲಿನ ಕೆಲಸವನ್ನು ಕೈಗೆತ್ತಿಕೊಂಡ ಸಮತಾ ಚಿಂತನದ ಗೆಳೆಯರು ‘ನಗ್ನ ಥಿಯೇಟರ್’ನ ಮೂಲಕ ಅಸಾಧಾರಣ ಕೆಲಸ ಮಾಡಿದ್ದಾರೆ. ಒಡೆಯುವವರು ಇದ್ದೇ ಇರುತ್ತಾರೆ ‘ಕಟ್ಟುವ ಕೆಲಸ ಮಾಡಬೇಕು’ ಎನ್ನುವ ಸಂದೇಶ ಸ್ಪಷ್ಟವಾಗಿದೆ. ಕೈಗೆ ಸಿಕ್ಕರೂ ಸಿಗದಂತೆ ಭಾಸವಾಗುವ ವರ್ತಮಾನವನ್ನು ಕತೆಯಾಗಿಸುವ, ಕೃತಿಯಾಗಿಸುವ ಅಪರೂಪದ -ಮಹತ್ವದ ಪ್ರಯತ್ನವನ್ನು ‘ಡೈರೆಕ್ಟ್ ಆ್ಯಕ್ಷನ್’ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.