ಮೈಸೂರು: ನನ್ನಪ್ಪ ಪ್ರೀತಿ ಹಾಗೂ ಖುಷಿ ಹಂಚುತ್ತಾರೆ. ಎಂದಿಗೂ ಖಾಲಿ ಕುಳಿತಿಲ್ಲ, ಏನಾದರೂ ಒಂದು ಕೆಲಸದಲ್ಲಿ ತೊಡಗಿರುತ್ತಾರೆ. ಏಕತಾನತೆಯನ್ನು ಮುರಿಯುತ್ತಾರೆ. ರಂಗಭೂಮಿಯಲ್ಲಿ ಎಷ್ಟೇ ಏರುಪೇರು ಎದುರಾದರೂ ಪಾಸಿಟಿವ್ ಆಗಿ ತೆಗೆದುಕೊಂಡಿದ್ದಾರೆ. ‘ಬದುಕಿಗೆ ಅನುಭವ ಬೇಕು’ ಎನ್ನುತ್ತಾರೆ. ನನಗೆ ಕಷ್ಟವಾದಾಗ ಅವರ ಮಾತುಗಳು ನೆನಪಾಗಿವೆ, ನೆರವಾಗಿವೆ.
ತೊಂದರೆಗೆ ಒಳಗಾದ ಪ್ರತಿಯೊಬ್ಬರಿಗೂ ಸ್ಪಂದಿಸುವ ರೀತಿ ಇಷ್ಟವಾಗುತ್ತದೆ. ತುಂಬಾ ಓಡಾಡುತ್ತಾರೆ. ಎಲ್ಲೇ ಹೋದರೂ ಆ ಸ್ಥಳದ ಹಿನ್ನೆಲೆ ತಿಳಿದುಕೊಳ್ಳುತ್ತಾರೆ. ಆರೋಗ್ಯ ಏರುಪೇರಾದರೂ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಾರೆ. ಇಂದಿನ ಪೀಳಿಗೆಯವರನ್ನು ಒಪ್ಪಿಕೊಳ್ಳುತ್ತಾರೆ. ಹೀಗೆ ಬದುಕಬೇಕು ಎಂದು ಎಂದಿಗೂ ಒತ್ತಡ ಹಾಕಿಲ್ಲ. ‘ಎಲ್ಲಾ ಒಳ್ಳೆಯದೇ ಆಗುತ್ತದೆ. ಸದಾ ಕೆಲಸ ಮಾಡುತ್ತಿರಬೇಕು’ ಎಂದು ಸಲಹೆ ಕೊಡುತ್ತಾರೆ.
ಬಿಡುವಿಲ್ಲದ ಚಿತ್ರೀಕರಣದ ನಡುವೆಯೂ ಕುಟುಂಬದೊಂದಿಗೆ ಕಾಲ ಕಳೆಯುತ್ತಾರೆ. ಸಂಬಂಧಗಳನ್ನು ಉಳಿಸಿಕೊಳ್ಳುವುದು ತುಂಬಾ ಮುಖ್ಯ ಎಂಬುದನ್ನು ಮನಗಂಡಿದ್ದಾರೆ. ನನ್ನಪ್ಪನಿಗೆ ಬಹಳ ಧೈರ್ಯ. ನಟನ ರಂಗಶಾಲೆ ಕಟ್ಟಲು ವಿಚಿತ್ರ ಧೈರ್ಯ ಮಾಡಿದರು. ಸಾತ್ವಿಕ ಹಟ ಇಟ್ಟುಕೊಂಡು ಸಾಧಿಸಿದರು.
ಅವರ ಮೇಲೆ ಯಾರೇ ತಕರಾರು ಎತ್ತಿದರೂ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮನಸ್ಥಿತಿಯನ್ನು ಬದಲಾಯಿಸುವ ಗುಣವಿದೆ. ಯಾರು ಏನೇ ಅಂದರೂ ಕೆಲಸ ನಿಲ್ಲಿಸೋದಿಲ್ಲ. ಅವರ ಶಿಷ್ಯರು ಉತ್ತಮ ಸ್ಥಾನದಲ್ಲಿದ್ದಾರೆ. ಅವರನ್ನೆಲ್ಲಾ ನೆನಪು ಮಾಡಿಕೊಂಡು ಹೆಮ್ಮೆ ಪಡುತ್ತಾರೆ. ಅವರ ಬಗ್ಗೆ ಕಾಳಜಿ ವಹಿಸುತ್ತಾರೆ. ಭಾವಜೀವಿ ಆಗಿಯೂ ಹಾಗೂ ಪ್ರಾಕ್ಟಿಕಲ್ ಆಗಿಯೂ ಬದುಕುತ್ತಾರೆ.
ರಸ್ತೆ ಬದಿ ಹೋಟೆಲ್‌ಗಳಲ್ಲೂ, ಫೈವ್ ಸ್ಟಾರ್ ಹೋಟೆಲ್‌ಗಳಲ್ಲೂ ಊಟ ಮಾಡಿಸಿದ್ದಾರೆ. ಶಾಲಾ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬರಲು ಆಗದಿದ್ದರೆ ಸಮಾಧಾನಪಡಿಸಲು ಮಸಾಲೆ ದೋಸೆ ಕೊಡಿಸುತ್ತಿದ್ದರು. ತುಂಬಾ ನನ್ನೊಂದಿಗೆ ಮಾತನಾಡುತ್ತಾರೆ. ರಂಗಭೂಮಿ, ಸಿನಿಮಾ ಕ್ಷೇತ್ರದ ಅನುಭವಗಳನ್ನು ಹೇಳಿಕೊಳ್ಳುತ್ತಾರೆ ಎಂದು ಮಂಡ್ಯ ರಮೇಶ್ ಪುತ್ರಿ ದಿಶಾ ರಮೇಶ್ ಹೇಳುತ್ತಾರೆ.
‘ಇಂಥವರೊಂದಿಗೆ ಸೇರು, ಅದನ್ನು ಮಾಡಬೇಡ’ ಎಂದು ಯಾವತ್ತೂ ಹೇಳಿಲ್ಲ. ಬದುಕಿನ ಬಗ್ಗೆ ಚೆನ್ನಾಗಿ ತಿಳಿಸಿಕೊಟ್ಟಿದ್ದಾರೆ. ಅವರು ಅನುಭವಿಸಿದ ಆರ್ಥಿಕ ಸಮಸ್ಯೆ ಬಗ್ಗೆಯೂ ಹೇಳಿಕೊಂಡಿದ್ದಾರೆ. ಏನೇ ಕಷ್ಟ ಬಂದರೂ ಹೇಗೆ ಎದುರಿಸಬೇಕು ಎಂಬುದನ್ನು ಕಲಿಸಿದ್ದಾರೆ. ‘ನಿಮ್ಮನ್ನು ನೀವು ನಂಬಿ. ನಟನಾದವನಿಗೆ ನಂಬಿಕೆ ಎಂಬುದು ಇರಬೇಕು’ ಎಂದು ಹೇಳುತ್ತಾರೆ. ಅದನ್ನೇ ಅವರು ಅಳವಡಿಸಿಕೊಂಡಿದ್ದಾರೆ. ನಟನೆ ಬಗ್ಗೆ ವಿಮರ್ಶೆ ಮಾಡಿದ್ದಾರೆ. ಒಟ್ಟಾರೆ ನನ್ನಪ್ಪ ಗುರುವಾಗಿ, ಮಾರ್ಗದರ್ಶಕರಾಗಿ ಹಾಗೂ ಸ್ನೇಹಿತರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.