ADVERTISEMENT

ಪೌರಾಣಿಕ ಆವರಣ, ಸಮಕಾಲೀನ ಆಯಾಮ

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಇತ್ತೀಚೆಗೆ ಪ್ರದರ್ಶಿತವಾದ ‘ಗ್ಲಾನಿ’ ನಾಟಕವು ಹಲವು ವಾಗ್ವಾದಗಳೊಂದಿಗೆ ಸಮಕಾಲೀನ ಪ್ರಜ್ಞೆಯೊಂದನ್ನು ಮೇಳೈಸಿಕೊಂಡಿದೆ.

ಪ್ರಕಾಶ ಕುಗ್ವೆ
Published 10 ಡಿಸೆಂಬರ್ 2023, 0:00 IST
Last Updated 10 ಡಿಸೆಂಬರ್ 2023, 0:00 IST
‘ಗ್ಲಾನಿ’ ನಾಟಕದಲ್ಲಿ ರಾಮ ಮತ್ತು ಕಾಲಪುರುಷ ನಡುವಿನ ಸಂವಾದದ ದೃಶ್ಯ.
‘ಗ್ಲಾನಿ’ ನಾಟಕದಲ್ಲಿ ರಾಮ ಮತ್ತು ಕಾಲಪುರುಷ ನಡುವಿನ ಸಂವಾದದ ದೃಶ್ಯ.   

ಕಾಲಕ್ಕೆ ಎಲ್ಲರೂ ಆಧೀನರೇ; ಅದು ಮನುಷ್ಯನಾಗಿರಬಹುದು, ದೇವರಾಗಿರಬಹುದು. ಅವರವರ ಆಯುಸ್ಸು ಕೊನೆಗೊಳ್ಳಲೇಬೇಕು. ಈ ಸಾರ್ವಕಾಲಿಕ ಸತ್ಯವನ್ನು ಪೌರಾಣಿಕ ಆವರಣದಲ್ಲಿ ಸಮಕಾಲೀನ ಆಯಾಮದೊಂದಿಗೆ ಶೋಧಿಸಲು ಹೊರಟಿದೆ ‘ಗ್ಲಾನಿ’ ನಾಟಕ.

ಇದು ರಾಮಾಯಣ ಮೂಲದ್ದು. ಮಂಕುಹಿಡಿದ ಸ್ಥಿತಿ ಅಥವಾ ಖಿನ್ನತೆಗೆ ‘ಗ್ಲಾನಿ’ ಎಂದೇ ಅರ್ಥೈಸಲಾಗುತ್ತದೆ. ತ್ರೇತಾಯುಗದಲ್ಲಿ ತನ್ನ ಅವತಾರವನ್ನು ಅಂತ್ಯ ಮಾಡಿಕೊಳ್ಳಬೇಕಾದ ರಾಮ ಅದಕ್ಕೆ ಮನಸ್ಸು ಮಾಡುತ್ತಿಲ್ಲ. ಅನಿವಾರ್ಯವಾಗಿ ನಾರದನು ಕಾಲಪುರುಷ ಮತ್ತು ದೂರ್ವಾಸ ಮುನಿಯೊಂದಿಗೆ ತಂತ್ರ ಹೂಡುತ್ತಾನೆ. ಕೊನೆಗೂ ರಾಮ ದೇಹತ್ಯಾಗ ಮಾಡಬೇಕಾಗುತ್ತದೆ. ಈ ಅಂಶವನ್ನೇ ಪ್ರಧಾನವಾಗಿಟ್ಟುಕೊಂಡು ರಾಮನ ಅವಸಾನದ ಅನಿವಾರ್ಯ, ಕೃಷ್ಣಾವತಾರದ ಅಗತ್ಯವನ್ನು ಈ ಹೊತ್ತಿನ ಬಿಕ್ಕಟ್ಟುಗಳಿಗೆ ನಾಟಕ ಮುಖಾಮುಖಿಯಾಗಿಸುತ್ತದೆ.

ವಾಚಿಕ ಗುಣಲಕ್ಷಣಗಳೇ ಹೆಚ್ಚಿರುವ, ಮತ್ತೊಂದು ತಾಳಮದ್ದಲೆ ಪ್ರಸಂಗವಾಗಿ ರೂಪುಗೊಳ್ಳಬಹುದಾಗಿದ್ದ ಈ ಅವತಾರದ ಅಂತ್ಯದ ಸನ್ನಿವೇಶ-ಸಂದರ್ಭಕ್ಕೆ ಲೇಖಕ ಜಿ.ಎಸ್.‌ ಭಟ್ಟರು ತಮ್ಮ ಸೃಜನಶೀಲತೆಯಿಂದ ನಾಟಕೀಯ ಗುಣ ದಕ್ಕಿಸಿದ್ದಾರೆ. ಭಾರತೀಯ ರಂಗಭೂಮಿಯ ಈ ಹೊತ್ತಿನ ಸತ್ವಶಾಲಿ ನಿರ್ದೇಶಕರಲ್ಲಿ ಒಬ್ಬರಾದ ಚಿದಂಬರರಾವ್‌ ಜಂಬೆ ಅವರು ಹೊಸದೊಂದು ರಂಗಸಾಧ್ಯತೆ ಕಲ್ಪಿಸುತ್ತಾರೆ. ಇವರಿಬ್ಬರ ಹದಪಾಕದಿಂದಾಗಿ ಈ ನಾಟಕ ರಂಗದಲ್ಲಿ ಪರಿಣಾಮಕಾರಿ ಪ್ರಯೋಗವಾಗಿ ಸಾಗರದಲ್ಲಿ ಈಚೆಗೆ ಪ್ರದರ್ಶನ ಕಂಡಿತು.    

ADVERTISEMENT

ಅಧಿಕಾರದ ಮಂಪರಿನಲ್ಲಿದ್ದ ರಾಮನನ್ನು ಆತ್ಮಾವಲೋಕನಕ್ಕೆ ದೂಡಿ ಅವತಾರವನ್ನು ಪರಿಸಮಾಪ್ತಿಗೊಳಿಸಿಕೊಳ್ಳಲು ಈ ನಾಟಕ ಪ್ರೇರೇಪಿಸುತ್ತಲೇ ಯಾವುದಕ್ಕೂ ಅಳದಿರುವ, ಎಲ್ಲದಕ್ಕೂ ನಗುವ ಸಮಕಾಲೀನ ಆಡಳಿತದ ನಿರ್ಲಿಪ್ತ ನೇತಾರರ ವ್ಯಕ್ತಿತ್ವ, ವೈಖರಿಗಳಿಗೆ ಕನ್ನಡಿ ಹಿಡಿಯುತ್ತದೆ. ಪುರಂದರ ದಾಸರ ‘ಉತ್ತಮ ಪ್ರಭುತ್ವ ಲೊಳಲೊಟ್ಟೆ’ ಎನ್ನುವ ಮಾತು ನಾಟಕದ ಉದ್ದಕ್ಕೂ ಧ್ವನಿಸುತ್ತದೆ.

ಹಲವು ವಾಗ್ವಾದಗಳಿರುವ ಈ ‘ಗ್ಲಾನಿ’ಯನ್ನು ಅತ್ಯಂತ ಸರಳ ರಂಗಸಜ್ಜಿಕೆಯಲ್ಲಿ ಆಪ್ತ ರಂಗಭೂಮಿ ಮೂಲಕ ಪ್ರೇಕ್ಷಕರಿಗೆ ಪರಿಣಾಮಕಾರಿಯಾಗಿ ದಾಟಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಬಹುಮುಖ್ಯವಾಗಿ ಇಲ್ಲಿನ ಸಂಭಾಷಣೆಗಳು ಗಮನಸೆಳೆಯುತ್ತವೆ. ರಾಮ ಮತ್ತು ಕಾಲಪುರುಷನ ನಡುವಿನ ಸಂವಾದವನ್ನಂತೂ ಸಮಕಾಲೀನ ಸಂದರ್ಭದ ಬಹುದೊಡ್ಡ ಚರ್ಚೆ ಎಂದೇ ಪರಿಗಣಿಸಬಹುದು. ಇಲ್ಲಿ ಕಾಲಪುರುಷನ ಪ್ರಶ್ನೆ ನಮ್ಮೆಲ್ಲರ ಪ್ರಶ್ನೆಯೂ ಹೌದು.

‘ರಾಮ, ನಿನ್ನನ್ನು ಆರಾಧಿಸುವವರು ಶಿಷ್ಟರೆಂದೂ, ವಿರೋಧಿಸುವವರು ದುಷ್ಟರೆಂದೂ ಗುರುತಿಸುವಂತಾಯಿತು. ಕೊನೆಗೆ ಶಿಷ್ಟ ರಕ್ಷಣೆ, ದುಷ್ಟ ಶಿಕ್ಷಣೆ ಎನ್ನುವ ಪ್ರಜಾಪ್ರಿಯ ಘೋಷವಾಕ್ಯವಾಗಿ ಹೋಯಿತು’- ಕಾಲಪುರುಷನ ಈ ಪ್ರಶ್ನೆ ಸಮಕಾಲೀನ ವಿದ್ಯಮಾನದ ಪ್ರತಿಬಿಂಬವೂ ಹೌದು.

‘ಪ್ರತಿ ಮಾತಿಗೂ ನಾನು ಸಾಮಾನ್ಯ ಮನುಷ್ಯ ಅಂತ ಹೇಳುತ್ತೀಯ. ಆದರೆ ಸಾಮಾನ್ಯ ಮನುಷ್ಯನಿಗಿಂತ ದೀರ್ಘ ಕಾಲ ಬದುಕಿ, ಅಧಿಕಾರ ಸುಖ ಅನುಭವಿಸಿಬಿಟ್ಟಿದ್ದೀಯ. ನಿನ್ನ ಜೀವನ ಮಹಾಪೂರದಲ್ಲಿ ಬೇಕಾದುದು, ಬೇಡದಿರುವುದು ಎಲ್ಲ ಸೇರಿಹೋಗಿವೆ. ಅನುಯಾಯಿಗಳು ಅತೃಪ್ತರಾಗಿದ್ದಾರೆ. ಅಧಿಕಾರ, ಅವಕಾಶ, ಆದಾಯ ಇವೆಲ್ಲವನ್ನು ಅನುಭವಿಸಬೇಕೆಂದು ನಿನ್ನೊಂದಿಗೇ ಹುಟ್ಟಿ, ನಿನಗಾಗಿ ಸಕಲವನ್ನೂ ತ್ಯಾಗ ಮಾಡುತ್ತಿರುವ ನಿನ್ನ ಸಹವರ್ತಿಗಳಿಗೂ ಹಂಬಲ ಇದ್ದೇ ಇರುತ್ತದೆಯಲ್ಲವೇ? ಪ್ರಾಪ್ತಿ ಸಿದ್ಧಿಗಳಲ್ಲಿ ಅವರಿಗೂ ಪಾಲು ಬೇಡವೇ? ಮತ್ತು ನೀನೇ ಎಲ್ಲವನ್ನೂ ನಿಯಂತ್ರಿಸುವುದೂ, ನೈತಿಕವಾಗಿ ಕಣ್ಗಾವಲು ಇಡುವುದೂ ಸಾಕು. ಯಾಕೆ ಇನ್ನೂ ಅರಸನಾಗಿರುವೆ ಎಂದು ನಾನು ಕೇಳುತ್ತಿಲ್ಲ; ಲೋಕ ಕೇಳುತ್ತಿದೆʼ ಎನ್ನುವ ಕಾಲಪುರುಷನ ಪ್ರಶ್ನೆಗೆ ರಾಮನದು ಮೌನದ ಉತ್ತರ.

ಮತ್ತೊಂದು ಕಡೆಯಲ್ಲಿ ದೂರ್ವಾಸರು, ‘ಸೀತೆಗಾಗಿ ಸಮುದ್ರಕ್ಕೇ ಸೇತುವೆ ನಿರ್ಮಿಸಿದೆ ಅಲ್ಲವೇ? ಅದು ಸೀತೆ ಮೇಲಿನ ಪ್ರೀತಿಗೋ? ಅಥವಾ ನಿನ್ನ ಅಹಂಕಾರಕ್ಕೊ’- ಪ್ರಶ್ನೆ ಮಾಡುತ್ತಾರೆ. ಆದರೆ, ಇದ್ಯಾವದಕ್ಕೂ ರಾಮನಲ್ಲಿ ಸ್ಪಷ್ಟ ಉತ್ತರಗಳಿಲ್ಲ. ಅವನ ಹೊಯ್ದಾಟಗಳು ಅವನಿಗಷ್ಟೇ ಗೊತ್ತು. ಕೊನೆಗೂ ಪರಿಸಮಾಪ್ತಿಗೊಳ್ಳಲು ಅವನೇ ಅಣಿಯಾಗುತ್ತಾನೆ.

ನಾಟಕ ಆರಂಭವಾಗುವುದೇ ಸೀತೆ, ತನ್ನ ಹುಟ್ಟೂರು ಮಿಥಿಲೆ ನೆನಪಿಸಿಕೊಂಡು ಹಳಹಳಿಸುವುದರಿಂದ; ಸು.ರಂ. ಎಕ್ಕುಂಡಿ ಅವರ ‘ಮಿಥಿಲೆ’ ಕವಿತೆ ಸಂದರ್ಭಕ್ಕೆ ಸೂಕ್ತವಾಗಿದೆ. ಕಾಲಪುರುಷನ ಕಿವಿಗಳಿಗೆ ಹೂ ಮುಡಿಸಿದ್ದು, ಆಗಾಗ್ಗೆ ಧ್ವನಿವರ್ಧಕ ಕಿರುಗುಟ್ಟಿದ್ದು ಅಸ್ವಾದನೆಗೆ ಅಡ್ಡಿಯಾದವು. ಸಂಗೀತವು ನಾಟಕದ ಗುಣಾತ್ಮಕ ಅಂಶವಾಗಿದೆ.

ಈ ಪ್ರಯೋಗದಲ್ಲಿ ಕಲಾವಿದರದ್ದು ಪೈಪೋಟಿಯ ಅಭಿನಯ. ಬಹುತೇಕರೆಲ್ಲರೂ ಅನುಭವಿ ನಿರ್ದೇಶಕರು. ತಮ್ಮದೇ ನಾಟಕ ತಂಡಗಳನ್ನು ಕಟ್ಟಿ ರಾಜ್ಯದಾದ್ಯಂತ ಅಸಂಖ್ಯಾತ ನಟರನ್ನು ರೂಪಿಸಿದ ನಿರ್ದೇಶಕರು. ಅಭಿನಯಕ್ಕಾಗಿ ವೇದಿಕೆ ಹತ್ತದೆ ಹಲವು ದಶಕಗಳೇ ಕಳೆದಿವೆ. ಅವರೆಲ್ಲರೂ ಇಲ್ಲಿ ವಿನೀತ ನಟರಾಗಿ ರಂಗದಲ್ಲಿ ವಿಜೃಂಭಿಸಿದ್ದು ಈ ಪ್ರಯೋಗದ ಮತ್ತೊಂದು ವಿಶೇಷತೆ.

ಕೆ.ಜಿ. ಕೃಷ್ಣಮೂರ್ತಿ ಅವರು ರಾಮನ ಪಾತ್ರದಲ್ಲಿ ಜೀವಿಸಿದಂತೆ ಕಂಡರು. ಎಲ್ಲಿಯೂ ಅವರ ವಯಸ್ಸಿನ ಆಯಾಸ ಕಾಣಲಿಲ್ಲ. ದೀರ್ಘ ಸಂಭಾಷಣೆಯಲ್ಲೂ ಒಂದಿನಿತೂ ಏದುಸಿರು ಬಿಡಲಿಲ್ಲ. ಕಾಲಪುರುಷನಾಗಿ ಹುಲಗಪ್ಟ ಕಟ್ಟಿಮನಿ ಅವರ ಧ್ವನಿಪೂರ್ಣ ಮಾತು, ಭಾವನೆಗಳ ಏರಿಳಿತವನ್ನು ನೋಡಿಯೇ ಅನುಭವಿಸಬೇಕು. ದೂರ್ವಾಸನಾಗಿ ದೇವೇಂದ್ರ ಬೆಳೆಯೂರು, ನಾರದನ ಪಾತ್ರದಲ್ಲಿ ಗಣಪತಿ ಹೆಗಡೆ ಹಿತ್ಲಕೈ, ಇಂದ್ರನಾಗಿ ಮಂಜುನಾಥ ಜೇಡಿಕುಣಿ ಅವರದ್ದೂ ಅತಿರೇಕವಿಲ್ಲದ ಅಭಿನಯ.  

ರಾಮನ ಪಾತ್ರದಲ್ಲಿ ಕೆ.ಜಿ. ಕೃಷ್ಣಮೂರ್ತಿ

ಸಾಗರದಲ್ಲಿ ಹೊಸ ರಂಗಪರಂಪರೆಗೆ 1948ರಲ್ಲೇ ನಾಂದಿ ಹಾಡಿದ್ದ ‘ಉದಯ ಕಲಾವಿದರು’ ಸಂಸ್ಥೆ ಈ ನಾಟಕವನ್ನು ಆಯೋಜಿಸಿದ್ದು ಹೆಗ್ಗಳಿಕೆ. ಹಳೇ ಬೇರುಗಳೆಲ್ಲವೂ ಹೀಗೆ ಸಂಘಟಿತಗೊಂಡು ಕನ್ನಡ ರಂಗಭೂಮಿಗೆ ಹೊಸ ಚಲನಶೀಲತೆ ದೊರಕಿಸಿಕೊಡಬೇಕಾದದ್ದು ಈ ಕಾಲದ ಅಗತ್ಯವೂ ಹೌದು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.