ಜಗತ್ತಿನ ಶ್ರೇಷ್ಠ ಮಹಾಕಾವ್ಯ ಮಹಾಭಾರತ. ಈ ಕಾವ್ಯದ ಒಡಲಿನಲ್ಲಿ ಸಾವಿರಾರು ಕಥೆ, ಕಾದಂಬರಿ ಹಾಗೂ ನಾಟಕಗಳು ಮೂಡಿಬಂದಿವೆ. ಮಹಾಭಾರತ ಬರೀ ಇತಿಹಾಸ ಅಥವಾ ಪುರಾಣವಲ್ಲ, ಅದು ಭಾರತೀಯ ಸಂಸ್ಕೃತಿಯ ಅನಾವರಣ. ನಮ್ಮ ಕಥೆಯೂ ಹೌದು, ಮಹಾಭಾರತದ ಕಥಾನಾಯಕಿ ದ್ರೌಪದಿ, ಪಾಂಚಾಲ ದೇಶದ ದ್ರುಪದ ರಾಜನ ಮಗಳು. ಯಜ್ಞಬಲದಿಂದ ಮೂಡಿಬಂದ ಚಿರಯೌವನೆ. ಮಹಾಭಾರತದ ಕಥೆ ಕಾಲತೀತವಾದರೂ ಮಾನವ ಸಹಜ ಆಮಿಷಗಳು, ನಿಸರ್ಗ ಸಹಜ, ಕಾಲಧರ್ಮಕ್ಕೆ ಅನುಗುಣವಾಗಿ ಪ್ರತಿಯೊಬ್ಬರಿಗೂ ಜೀವನ ಸಂಧ್ಯಾಕಾಲ ಆವರಿಸುತ್ತದೆ.
ಮಹಾಭಾರತ ಯುದ್ಧ ನಂತರದ ಸಂದರ್ಭದಲ್ಲಿ ದ್ರೌಪದಿಯು ತನ್ನ ವರ್ಣರಂಜಿತ ಬದುಕಿನ ಪುಟಗಳನ್ನು ತೆರೆದು ನೋಡಿದಾಗ ಅವಳ ಬದುಕು ಜೀವನ ಜೋಕಾಲಿಯಾಗದೆ ಉರಿಯ ಉಯ್ಯಾಲೆಯಾಗಿರುತ್ತದೆ.
ಇದು ಕವಿ, ನಾಟಕಕಾರ ಎಚ್.ಎಸ್. ವೆಂಕಟೇಶಮೂರ್ತಿ ರಚಿಸಿರುವ ‘ಉರಿಯ ಉಯ್ಯಾಲೆ’ ಎಂಬ ಏಕವ್ಯಕ್ತಿ ನಾಟಕದ ಕಥಾವಸ್ತು. ಈ ನಾಟಕವನ್ನು ಧಾರವಾಡದ ಅಭಿನಯ ಭಾರತಿ ತಂಡದವರು ಇತ್ತೀಚೆಗೆ ಧಾರವಾಡದ ಸೃಜನ ರಂಗಮಂದಿರದಲ್ಲಿ ವಸಂತ ನಾಟಕೋತ್ಸವದ ಅಂಗವಾಗಿ ಪ್ರದರ್ಶಿಸಿ, ಪ್ರೇಕ್ಷಕರನ್ನು ಭಾವನಾಲೋಕಕ್ಕೆ ಸೆಳೆದು ಮೆಚ್ಚುಗೆ ಗಳಿಸಿತು. ಹಿರಿಯ ರಂಗ ನಿರ್ದೇಶಕ ಶ್ರೀಪತಿ ಮಂಜನಬೈಲು
ಅವರ ಸಮರ್ಥ ನಿರ್ದೇಶನದಲ್ಲಿ ಕಲಾವಿದೆ ಜ್ಯೋತಿ ಮೋಹನ್ ದೀಕ್ಷಿತ್ ಅವರು ದ್ರೌಪದಿಯ ಜೀವನದ ಏರಿಳಿತಗಳನ್ನು ಸಮರ್ಥವಾಗಿ ಬಿಂಬಿಸಿದರು.
ದ್ರೌಪದಿಯು ಪಂಚ ಪಾಂಡವರೊಡನೆ ಸಹಬಾಳ್ವೆ ನಡೆಯಿಸಿ, ಅವರವರ ಭಾವಕ್ಕನುಗುಣವಾಗಿ ಸ್ಪಂದಿಸಿ ವಿಷಾದ ಭಾವದಿಂದ ತನ್ನ ಅಂತರಂಗವನ್ನು ಕೆಣಕಿ ನೋಡುತ್ತಾಳೆ. ಯುದ್ಧ ನಂತರದ ಜೀವನ ಶೂನ್ಯತೆ ಆವರಿಸ ತೊಡಗಿದಾಗ, ಕನ್ನಡಿಯಲ್ಲಿ ತನ್ನ ಬಿಂಬವನ್ನು ನೋಡಿಕೊಳ್ಳುತ್ತಾ ‘‘ಕೃಷ್ಣೆ ನಿನಗೆ ವಯಸ್ಸಾಯ್ತು, ನೀನು ಮುದುಕಿಯಾದೆ’’ ಎಂದು ತನ್ನನ್ನೇ ತಾನು ಛೇಡಿಸಿ ಕೊಳ್ಳುತ್ತಾಳೆ. ಸ್ವರ್ಗಾರೋಹಣ ಪಾಂಡವರೆಲ್ಲರೂ ಹೊರಡುವ ಸಂದರ್ಭದಲ್ಲಿ ಚಳಿಗಾಳಿ ತಡೆಯಲು ಬಟ್ಟೆ ಬರೆ ಹೊಂದಿಸಿಕೊಳ್ಳವ ತವಕದೊಂದಿಗೆ ನಾಟಕ ಅನಾವರಣಗೊಳ್ಳುತ್ತದೆ. ಆಗ ದ್ರೌಪದಿಯ ನೆನಪಿನಚಿತ್ರಗಳು ಮೆರವಣಿಗೆಯಂತೆ ಸಾಗಿ ಬರುತ್ತವೆ. ನಾಟಕದ ಸುದೀರ್ಘ ಸ್ವಗತ ಸಂಭಾಷಣೆಗಳು ಹಲವು ಭಾವಗಳಿಗೆ ಬಣ್ಣ ಹಚ್ಚುತ್ತಾ ಶ್ರವ್ಯ ದೃಶ್ಯಗಳ ಮೂಲಕ ನಮ್ಮ ಅಂತಃಕರಣದೊಡನೆ ಅನುಸಂಧಾನ ಮಾಡುತ್ತವೆ. ಆಂಗಿಕ ವಾಚಕಗಳ ಸೂಕ್ತ ಸಮನ್ವಯ, ಸರಳ ರಂಗ ವಿನ್ಯಾಸ, ಹಿತಮಿತವಾದ ಬೆಳಕಿನ ಸಂಯೋಜನೆ ಹಾಗೂ ಅರ್ಥಪೂರ್ಣ ಭಾವಸ್ಪೂರಕ ಸಂಗೀತ ಸಂಯೋಜನೆಯಲ್ಲಿ ನಿರ್ದೇಶಕರ ಜಾಣ್ಮೆ ಎದ್ದು ಕಾಣುತ್ತಿತ್ತು.
ನಾಟಕದ ಉದ್ದಕ್ಕೂ ಎರಡೇ ಸೀರೆಗಳ ಬಳಕೆ ಅರ್ಥಪೂರ್ಣ ಎನಿಸಿ ಗಮನ ಸೆಳೆಯುತ್ತವೆ. ದ್ರೌಪದಿಯ ಸ್ವಯಂವರದ ಸಂಭ್ರಮಕ್ಕೆ ಒಂದು ಸೀರೆ ಹಾಗೂ ದ್ರೌಪದಿ ವಸ್ತ್ರಾಪಹರಣ ಸಂದರ್ಭದಲ್ಲಿ ಅಕ್ಷಯಂಬರವಾಗುವ ಮತ್ತೊಂದು ಸೀರೆಯ ಬಳಕೆ ಜೀವನದ ಈಗ ಈ ಭಾವಗಳನ್ನು ಸಾಕ್ಷೀಕರಿಸುತ್ತವೆ.
ಉಪ ಪಾಂಡವರ ಹತ್ಯೆ ಹಾಗೂ ಸ್ವರ್ಗಾರೋಹಣದ ದೃಶ್ಯ ಸಂಯೋಜನೆಯಲ್ಲಿ ನಿರ್ದೇಶಕ ಹಾಗೂ ನಟಿಯ ಸಮರ್ಥ ಸಂಯೋಜನೆ ಎದ್ದು ಕಾಣುತ್ತಿತ್ತು. ಸಾತ್ವಿಕ ಆಂಗೀಕ ಹಾಗೂ ವಾಚಿಕ ಅಭಿನಯದ ಅಲೆಗಳು ತ್ರಿವೇಣಿ ಸಂಗಮದಂತೆ ನೋಡುಗರನ್ನು ಆವರಿಸಿಕೊಂಡು ಒಂದೂವರೆ ಗಂಟೆ ರಸಾನುಭವ ನೀಡಿದೆ. ದ್ರೌಪದಿಯ ತಮುಲಗಳನ್ನು ಜ್ಯೋತಿ ಮೋಹನ್ ದೀಕ್ಷಿತ್ ಅವರು ಸಮರ್ಥವಾಗಿ ವ್ಯಕ್ತಪಡಿಸಿದರು. ಹೆಜ್ಜೆ ಹೆಜ್ಜೆಗೂ ಅರ್ಥಪೂರ್ಣ ದೃಶ್ಯ ಸಂಯೋಜನೆಯು ಮಹಾಭಾರತದ ಎಳೆಎಳೆಗಳನ್ನು ಬಿಡಿಸಿ ತೋರಿಸಿತು.
ಇದೊಂದು ಉತ್ತರ ಕರ್ನಾಟಕ ಭಾಗದ ಉತ್ತಮ ಪ್ರಯೋಗವೆನಿಸಿದ್ದು, ಈ ತರಹದ ಪ್ರಬುದ್ಧ ನಾಟಕವನ್ನು ನೋಡಲು ಅನುವು ಮಾಡಿಕೊಟ್ಟ ಅಭಿನಯ ಭಾರತಿ ತಂಡದವರಿಗೂ, ತಾಂತ್ರಿಕ ವರ್ಗದವರಿಗೂ ಹಾಗೂ ನಾಟಕಕಾರರಿಗೂ ಅಭಿನಂದನೆಗಳು. ನಾಡಿನುದ್ದಕ್ಕೂ ಈ ನಾಟಕದ ಮರು ಪ್ರಯೋಗಗಳು ನಡೆಯಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.