ADVERTISEMENT

ಕನ್ನಡದ ಸಾಂಸ್ಕೃತಿಕ ಲೋಕದ ದಣಿವರಿಯದ ದುಡಿಮೆಗಾರ ಶ್ರೀನಿವಾಸ ಜಿ. ಕಪ್ಪಣ್ಣ

ಮಂಜುಶ್ರೀ ಎಂ.ಕಡಕೋಳ
Published 11 ಫೆಬ್ರುವರಿ 2023, 19:30 IST
Last Updated 11 ಫೆಬ್ರುವರಿ 2023, 19:30 IST
ಪತ್ನಿ ಲಲಿತಾ ಜತೆಗೆ ಶ್ರೀನಿವಾಸ ಜಿ. ಕಪ್ಪಣ್ಣ  ಚಿತ್ರ– ಎಂ.ಎಸ್. ಮಂಜುನಾಥ್
ಪತ್ನಿ ಲಲಿತಾ ಜತೆಗೆ ಶ್ರೀನಿವಾಸ ಜಿ. ಕಪ್ಪಣ್ಣ  ಚಿತ್ರ– ಎಂ.ಎಸ್. ಮಂಜುನಾಥ್   

ನಿರ್ದೇಶನ, ಬೆಳಕು ವಿನ್ಯಾಸ ಮತ್ತು ಸಂಘಟನೆಯ ಮೂಲಕ ನೇಪಥ್ಯ ಕ್ಷೇತ್ರಕ್ಕೆ ಸ್ಟಾರ್ ವ್ಯಾಲ್ಯೂ ತಂದುಕೊಟ್ಟವರು ಶ್ರೀನಿವಾಸ ಜಿ. ಕಪ್ಪಣ್ಣ. ಕಾರ್ಯಕ್ರಮ ಯಾವುದೇ ಇರಲಿ, ಅಲ್ಲಿ ಕಪ್ಪಣ್ಣ ಟಚ್ ಇರದಿದ್ದರೆ ಅದು ಅಪರಿಪೂರ್ಣ ಅನ್ನುವ ವೇದಿಕೆ ಕೌಶಲ ಅವರದ್ದು. 5 ದಶಕಗಳಿಂದ ಕನ್ನಡದ ಸಾಂಸ್ಕೃತಿಕ ಲೋಕ ಬೆಳಗುತ್ತಿರುವ ಕಪ್ಪಣ್ಣ ಅವರಿಗೆ ಫೆ. 13ರಂದು 75ರ ಹುಟ್ಟುಹಬ್ಬದ ಸಂಭ್ರಮ. ವಯಸ್ಸು ಎಪ್ಪತ್ತೈದಾದರೂ ಈಗಲೂ ಇಪ್ಪತ್ತೈದರ ಉತ್ಸಾಹ ಉಳಿಸಿಕೊಂಡಿರುವ ಕಪ್ಪಣ್ಣ ದಣಿವರಿಯದ ದುಡಿಮೆಗಾರ.

***

ತುಮಕೂರು ಜಿಲ್ಲೆಯ ಎಡೆಯೂರು ಸಮೀಪದ ಜಲಧಿಗೆರೆಯವರಾದ ಕಪ್ಪಣ್ಣ ಬಾಲ್ಯದಲ್ಲಿ ಬಡತನದ ಬೇಗೆಯುಂಡವರು. ತುತ್ತಿನ ಚೀಲ ತುಂಬಿಸುವುದಕ್ಕಾಗಿ ಅನಿವಾರ್ಯವಾಗಿ ಅಪ್ಪ–ಅಮ್ಮನೊಂದಿಗೆ ಬಾಲ್ಯದಲ್ಲೇ ಬೆಂಗಳೂರಿನತ್ತ ಬಂದವರು. ಹಾಗೆ ಅನಾಮಿಕರಾಗಿ ಬಂದವರು ಮುಂದೊಂದು ದಿನ ಕನ್ನಡದ ಸಾಂಸ್ಕೃತಿಕ ಲೋಕವನ್ನು ತಮ್ಮ ಬೆಳಕು ವಿನ್ಯಾಸ, ಸಂಘಟನಾ ಚಾತುರ್ಯದ ಮೂಲಕ ಬೆಳಗಿದ್ದು ಸಣ್ಣ ಸಾಧನೆಯೇನಲ್ಲ.

ADVERTISEMENT

ಬಾಲ್ಯದಲ್ಲಿ ಆರ್ಥಿಕ ಬಡತನವಿದ್ದರೂ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದ್ದ ಶ್ರೀನಿವಾಸ ಅವರು ತಮ್ಮ ಮನೆಯಲ್ಲಿ ವಿದ್ಯುತ್ ಕಂಡಿದ್ದು ಮೊದಲ ವಿಮಾನ ಪ್ರಯಾಣದ ನಂತರವೇ. ಕರೆಂಟಿಲ್ಲದ ಮನೆಯಲ್ಲಿದ್ದುದರಿಂದ ಬೆಳಕಿನ ವ್ಯಾಮೋಹ ಬೆಳೆಸಿಕೊಂಡಿದ್ದ ಅವರು, ಮುಂದೊಂದು ದಿನ ಅದೇ ಕ್ಷೇತ್ರದಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರಕ್ಕೆ ಪಾತ್ರವಾಗಿದ್ದು ಅವರೊಳಗಿನ ರಂಗಬದ್ಧತೆಗೆ ದೊರೆತ ಗೌರವ.

ತಂದೆ ಗಿರಿಯಪ್ಪ ಕಾರ್ಮಿಕ ಇಲಾಖೆಯಲ್ಲಿ ಸಣ್ಣ ನೌಕರಿಯಲ್ಲಿದ್ದರೆ, ತಾಯಿ ಜಯಮ್ಮ ವಾಣಿವಿಲಾಸ ಆಸ್ಪತ್ರೆಯಲ್ಲಿ ಆಯಾ ಆಗಿದ್ದರು. ಅವರಿಬ್ಬರ ಪ್ರೀತಿಯ ಜತೆಗೆ ಮೂವರು ಸಹೋದರರು, ಒಬ್ಬ ಸಹೋದರಿಯರ ಜತೆಗೆ ಬೆಳೆದ ಕಪ್ಪಣ್ಣ ಚಿಕ್ಕವಯಸ್ಸಿನಲ್ಲಿ ಏನಾದರೂ ಸಾಧಿಸುವ ಮಹತ್ವಾಕಾಂಕ್ಷೆ ಹೊಂದಿದ್ದರು. 7ನೇ ತರಗತಿಯಲ್ಲಿ ಶಾಲೆಗೇ ಹೆಚ್ಚು ಅಂಕ ಪಡೆದು ವಿಜಯಾ ಹೈಸ್ಕೂಲಿಗೆ ಸೇರುವಾಗ ಧರಿಸಲು ಒಂದು ಪೈಜಾಮವೂ ಇರದಿದ್ದಾಗ ಅಪ್ಪ ಬೇರೆಯವರ ಬಳಿ ಕೇಳಿ ಪೈಜಾಮ ತಂದುಕೊಟ್ಟ ನೆನಪು ಅವರ ಭಾವಕೋಶದಲ್ಲಿ ಇನ್ನೂ ಜತನವಾಗಿದೆ. ನ್ಯಾಷನಲ್ ಕಾಲೇಜಿನಲ್ಲಿ ವಿಚಾರವಾದಿ ಎಚ್. ನರಸಿಂಹಯ್ಯ ಅವರ ಪ್ರಭಾವದಿಂದ ವೈಚಾರಿಕ ನಿಲುವು ರೂಪಿಸಿಕೊಂಡ ಕಪ್ಪಣ್ಣ, ‘ನಾನು ಯಾವುದೇ ಇಸಂಗಳನ್ನು ಒಪ್ಪುವುದಿಲ್ಲ. ಏಕೆಂದರೆ ಇಸಂಗಳು ನಮ್ಮನ್ನು ನಿಯಂತ್ರಿಸುತ್ತವೆ. ಹಾಗಾಗಿ, ನಾನು ಮನಸಿನ ಮಾತು ಕೇಳಿ ಕಾಯಕ ಮಾಡುವೆ’ ಎಂದು ಖಡಕ್‌ ಆಗಿಯೇ ನುಡಿಯುತ್ತಾರೆ.

‘ಧ್ವಜವಂದನೆ’ ನಾಟಕದ ಮೂಲಕ ರಂಗಪ್ರವೇಶವಾದರೂ, ಎಂ.ಜಿ.ಆರ್., ಶಿವಾಜಿ ಗಣೇಶನ್ ಅವರ ತಮಿಳುಚಿತ್ರಗಳು ಅವರ ಭಾವಲೋಕ ವಿಸ್ತರಿಸಿದವು. ಸ್ನೇಹಿತ ರಾಮಕೃಷ್ಣನ ಜತೆಗೆ ಸಿನಿಮಾ ನೋಡಲು ತೆರಳಿ, ಅಲ್ಲಿ ಆತ ಮತ್ತೊಬ್ಬ ಸ್ನೇಹಿತನಿಗಾಗಿ ಇವರನ್ನು ಬಿಟ್ಟುಹೋದ ಅವಮಾನಪ್ರಸಂಗ ಎದುರಿಸಿದ್ದು ಅವರಲ್ಲಿನ ಸಿನಿಮಾ ವ್ಯಾಮೋಹಕ್ಕೆ ಇತಿಶ್ರೀ ಹಾಡಿತು. ಮದುವೆಯಾದ ಬಳಿಕ ಸಿನಿಮಾಕ್ಕೆ ಹೋದರೂ ಬಾಲ್ಕನಿಯಲ್ಲೇ ಸಿನಿಮಾ ನೋಡುವ ಅಭ್ಯಾಸ.

ಬಾಲ್ಯದಲ್ಲಿ ಒಂದು ಕೆ.ಜಿ ಮಾಂಸದಲ್ಲಿ ಕುಟುಂಬದ 8 ಸದಸ್ಯರೂ ಮೂರು ಹೊತ್ತು ಊಟ ಮಾಡಿ ತೃಪ್ತಿ ಪಡುತ್ತಿದ್ದ ದಿನಗಳನ್ನು ನೆನೆಯುವ ಕಪ್ಪಣ್ಣ ಅವರು, ಸ್ನೇಹಿತರಿಗೆ ಮನೆಯಲ್ಲಿ ಆಗಾಗ ಊಟ ಹಾಕಿಸುವ ಪರಿಪಾಟ ಇನ್ನೂ ಬಿಟ್ಟಿಲ್ಲ.

60ರ ದಶಕದಲ್ಲಿ ‘ತುಘಲಕ್’ ನಾಟಕ ಪ್ರಯೋಗಿಸಿದಾಗ, ಅದರಲ್ಲಿ ತಮ್ಮನ್ನು ಬೆಳಕು ವಿನ್ಯಾಸಕಾರ ಅಂತ ಗುರುತಿಸಿದ್ದೇ ‘ಪ್ರಜಾವಾಣಿ’ ಎಂದು ಕಪ್ಪಣ್ಣ ಹೆಮ್ಮೆಯಿಂದ ನುಡಿಯುತ್ತಾರೆ. ಅಂತೆಯೇ, ಪ್ರಜಾವಾಣಿಯ ಕೆ.ಎನ್. ಗುರುಸ್ವಾಮಿ ಅವರಿಂದಾಗಿ ಬೆಂಗಳೂರು ರೇಸ್‌ಕೋರ್ಸ್‌ನಲ್ಲಿ ಗೇಟ್ ಕೀಪರ್ ನೌಕರಿ ಪಡೆದು, ಆ ಸಂಬಳದಲ್ಲೇ ಶಾಲಾ–ಕಾಲೇಜಿನ ಫೀಜು ಕಟ್ಟಿದ್ದನ್ನು ವಿನಮ್ರವಾಗಿ ನೆನೆಯುತ್ತಾರೆ.

ವಾರ್ತಾ ಇಲಾಖೆಯ ನೌಕರಿಯ ಮೂಲಕ ಇಡೀ ರಾಜ್ಯದ ಸಾಂಸ್ಕೃತಿಕ ನರನಾಡಿಯನ್ನು ಅರಿತ ಕಪ್ಪಣ್ಣ ಜಾನಪದ ಕ್ಷೇತ್ರದ ಆಳ–ಅಗಲವನ್ನೂ ಅರಿತರು. ರಾಜ್ಯ ಸರ್ಕಾರದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಿನಿಮೋತ್ಸವ ಸೇರಿದಂತೆ ಇತರ ಕಾರ್ಯಕ್ರಮಗಳ ಸಂಘಟನೆ, ವಿನ್ಯಾಸದ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದ ಕಪ್ಪಣ್ಣ ರಾಜ್ಯವಷ್ಟೇ ಅಲ್ಲ, ರಾಷ್ಟ್ರೀಯ ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ತಮ್ಮೊಳಗಿನ ಸಂಘಟನಾ ಚಾತುರ್ಯಕ್ಕೆ ಜಾಗತಿಕ ಮನ್ನಣೆಗೆ ಭಾಜನರಾದರು.

ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್ ಆಗಿ ಆಗಿನ ಅಧ್ಯಕ್ಷೆ ಚಿಂದೋಡಿ ಲೀಲಾ ಅವರ ನೇತೃತ್ವದಲ್ಲಿ ವೃತ್ತಿರಂಗಭೂಮಿಗೆ ಕಾಯಕಲ್ಪ ನೀಡಲು ಯೋಜನೆ ಜಾರಿಗೆ ತಂದರು. ಮುಂದೆ ತಾವೇ ಅಕಾಡೆಮಿ ಅಧ್ಯಕ್ಷರಾದಾಗ ರಾಷ್ಟ್ರೀಯ ರಂಗೋತ್ಸವ, ಗ್ರಾಮೀಣ ರಂಗೋತ್ಸವ, ಬಹುಭಾಷಾ ನಾಟಕೋತ್ಸವ ನಡೆಸಿದರು. ಏಣಗಿ ಬಾಳಪ್ಪ ಮತ್ತು ಆರ್. ಪರಮಶಿವನ್ ಅವರಂಥ ಮೇರು ಕಲಾವಿದರ ರಂಗಗೀತೆಗಳ ದಾಖಲೀಕರಣದ ಜತೆಗೆ ಅಕಾಡೆಮಿಯ ಕಾರ್ಯಗಳನ್ನು ವಿಕೇಂದ್ರೀಕರಣ ಮೂಡುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿದರು. ಅಕಾಡೆಮಿಯ ಕೆಲಸಗಳ ಜತೆಗೆ ಸಾಂಸ್ಕೃತಿಕ ಲೋಕದ ದಿಗ್ಗಜರ ಜತೆಗೂಡಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ, ಯಶಸ್ವಿಯಾದರು. ಅದು ಗಣರಾಜ್ಯೋತ್ಸವ ಪರೇಡ್‌ನ ಸಾಂಸ್ಕೃತಿಕ ತಂಡವೇ ಆಗಿರಲಿ, ಹಂ‍ಪಿ ಉತ್ಸವ ಅಥವಾ ಸಾರ್ಕ್ ಉತ್ಸವವೇ ಆಗಿರಲಿ, ಅಲ್ಲಿ ತಮ್ಮೊಂದು ಛಾಪು ಉಳಿಯುವಂತೆ ಮಾಡಿದವರು ಕಪ್ಪಣ್ಣ.

‘ಪ್ರಗತಿರಂಗ’ ಪ್ರವರ್ಧಮಾನಕ್ಕೆ ಬರುತ್ತಿದ್ದ ದಿನಗಳಲ್ಲಿ ಲಂಕೇಶ್ ಅವರ ರಾಜಕೀಯ ಕಾರ್ಯಕ್ರಮಗಳಿಗೆ ಸ್ಟೇಜ್ ಮಾಡಿಕೊಟ್ಟಿದ್ದ ಕಪ್ಪಣ್ಣ ಅದರ ಸಂಭಾವನೆಯನ್ನು ಪಡೆಯಲು ಹೋದಾಗಿನ ಪ್ರಸಂಗ ಕಪ್ಪಣ್ಣ ಅವರ ಮಾತಿನಲ್ಲೇ ಹೇಳುವುದಾದರೆ... ‘ಕಾರ್ಯಕ್ರಮ ಮುಗಿದ ನಾಲ್ಕು ದಿನಕ್ಕೆ ಲಂಕೇಶ್ ಬಳಿ ದುಡ್ಡು ಕೇಳಲು ಹೋದರೆ, ಅವರಾಗಲೇ ಸಿ.ಎಂ ಆಗಿ ಕ್ಯಾಬಿನೆಟ್ ರಚನೆಯಲ್ಲಿದ್ದರು. ಅಲ್ಲಿ ಪ್ರೊ.ನಂಜುಂಡಸ್ವಾಮಿ, ಶ್ರೀನಿವಾಸ ಗೌಡ, ಬಸವರಾಜ ಅವರಲ್ಲದೆ ಮತ್ತೊಬ್ಬ ಲೇಖಕ ಇದ್ರು. ಅವರ ಹೆಸರು ನೆನಪಾಗುತ್ತಿಲ್ಲ. ಲಂಕೇಶ್ ಈಗ ನಾನು ಸಿ.ಎಂ. ಅಂದ್ರು. ನಂಜುಂಡಸ್ವಾಮಿ ಅಯ್ಯೋ ನಾನು ಕಣೋ ಸಿ.ಎಂ. ಅಂದ್ರು. ಅದೇ ಸಮಯಕ್ಕೆ ನಾನು ಹೋದೆ. ಅವರಿಬ್ಬರೂ ನನ್ನನ್ನು ನೋಡಿ ಅಯ್ಯೋ ನಾವು ಸಂಸ್ಕೃತಿ ಖಾತೆಯನ್ನೇ ಮರೆತಿದ್ದೇವೆ ಅಂತ ಮಾತಾಡಿಕೊಂಡರು. ಕಪ್ಪಣ್ಣ ಬಾರೋ ಸರಿಯಾದ ಸಮಯಕ್ಕೆ ಬಂದೆ. ಕಪ್ಪಣ್ಣನನ್ನೇ ಸಂಸ್ಕೃತಿ ಸಚಿವ ಮಾಡೋಣ ಅಂದ್ರು ನಂಜುಂಡಸ್ವಾಮಿ. ಅಂತೂ ಲಂಕೇಶ್ ಕ್ಯಾಬಿನೆಟ್‌ನಲ್ಲಿ 30 ನಿಮಿಷ ಸಂಸ್ಕೃತಿ ಸಚಿವನೂ ಆದೆ!’ ಎಂದು ರಸವತ್ತಾಗಿ ವರ್ಣಿಸುತ್ತಾರೆ. ಇಂಥ ಹಲವು ರಸಪ್ರಸಂಗಗಳು ಕಪ್ಪಣ್ಣ ಅವರ ಖಾಸ್‌ಬಾತ್‌ನಲ್ಲಿ ಹೇರಳವಾಗಿವೆ.

ಆಗಿನ ಐಎಎಸ್ ಅಧಿಕಾರಿ ಐ.ಎಂ.ವಿಠ್ಠಲಮೂರ್ತಿ ಅವರ ನೇತೃತ್ವದಲ್ಲಿ ಕನ್ನಡದಮೊದಲ ರಿಯಾಲಿಟಿ ಷೋ ‘ನಿತ್ಯೋತ್ಸವ’ ರೂಪಿಸಿದ್ದು ಕಪ್ಪಣ್ಣ ಅವರ ಸಂಘಟನಾ ಚಾತುರ್ಯಕ್ಕೆ ಹಿಡಿದ ಕೈಗನ್ನಡಿ. ಜಾನಪದ, ಗ್ರಾಮೀಣ ಪ್ರತಿಭೆಗಳ ಪರ ಸದಾ ಚಿಂತಿಸುವ ಅವರ ಜಾನಪದ ಕಾಳಜಿಯಿಂದಾಗಿ ಅಕ್ಕ, ನಾವಿಕ ಉತ್ಸವಗಳ ಮೂಲಕ ಜಾನಪದ ಕಲೆಯನ್ನು ವಿದೇಶದಲ್ಲೂ ಪಸರಿಸಿದರು. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 80 ದಿನಗಳ ‘ಜಾನಪದ ಜಾತ್ರೆ’ ರೂಪಿಸಿಕೊಟ್ಟ ಕಪ್ಪಣ್ಣ, ಅಲ್ಲಿ ಭಾಗವಹಿಸಿದ ಮೂವರು ಕಲಾವಿದರಿಗೆ ಈ ಬಾರಿಯ ಪದ್ಮ ಪ್ರಶಸ್ತಿ ಬಂದಿರುವುದನ್ನು ಸಂಭ್ರಮದಿಂದ ಹೇಳಿಕೊಳ್ಳುತ್ತಾರೆ.

ತಮ್ಮೆಲ್ಲಾ ಕೆಲಸಗಳ ಹಿಂದೆ ಪ್ರೀತಿಯ ಮಡದಿ ಲಲಿತಾ, ಮಕ್ಕಳಾದ ಸ್ನೇಹಾ, ಜಯದೇವ ಅವರ ಪ್ರೀತಿ, ಬೆಂಬಲವನ್ನು ನೆನೆಯುವ ಕಪ್ಪಣ್ಣ, ತಮ್ಮ ಮನೆಯಂಗಳದ ಕಪ್ಪಣ್ಣ ಅಂಗಳದ ಮೂಲಕ ಸಕ್ರಿಯರಾಗಿದ್ದಾರೆ. ಅವರ ಎಪ್ಪತ್ತೈದರ ಜನ್ಮದಿನದ ಪ್ರಯುಕ್ತ ನಾಡಿನ ವಿವಿಧೆಡೆ ಸ್ನೇಹಿತರು, ಅಭಿಮಾನಿಗಳು ಕಾರ್ಯಕ್ರಮ ರೂಪಿಸುವ ಮೂಲಕ ಅಭಿಮಾನ ತೋರುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.