ಇಪ್ಪತ್ತು ಇಪ್ಪತೈದು ವರ್ಷಗಳ ಹಿಂದಿನ ನೆನಪು. ಕೊಟ್ಟೂರಿನ ಒಂದು ಪುಸ್ತಕದ ಅಂಗಡಿ ಮುಂದೆ ನಿಂತಿದ್ದೆ. ಆಗೆಲ್ಲಾ ಪುಸ್ತಕದ ಅಂಗಡಿಗಳಲ್ಲಿ ನಾಟಕ ಕೃತಿಗಳನ್ನು ಪ್ರದರ್ಶನಕ್ಕೆ ಇಡುತ್ತಿದ್ದರು. ಆಲ್ದಾಳ ಮಾಸ್ತರರ ಒಂದು ಸಾಮಾಜಿಕ ನಾಟಕವನ್ನು ಓದಲೆಂದು ಕೈಗಿತ್ತಿಕೊಂಡೆ. 'ನಾರದ ವಿಜಯ' ಎಂಬ ಸಿನಿಮಾ ಕತೆ ಹೀಗೇ ಇದೆಯಲ್ಲ ಎನಿಸಿತು. ಹೌದು ವೃತ್ತಿ ನಾಟಕಕಾರರ ಅನೇಕ ಕೃತಿಗಳಿಂದ ಕತೆ ಪಡೆದುಕೊಂಡರೂ ಮೂಲ ಅವರದೆಂದು ಎಲ್ಲಿಯೂ ಸ್ಮರಿಸಿಯೇ ಇಲ್ಲ! ಆಲ್ದಾಳ ಅವರು ಸಾಮಾಜಿಕ ಅದಕ್ಕಿಂತ ಹೆಚ್ಚಾಗಿ ಅಸಂಖ್ಯಾತ ಪೌರಾಣಿಕ ನಾಟಕಗಳನ್ನು ರಚಿಸಿ, ನಿರ್ದೇಶಿಸಿ ನಾಟಕಗಳ ಪವಾಡ ಪುರುಷ ಎಂದೇ ಪ್ರಸಿದ್ಧರಾದವರು.
ಗ್ರಾಮೀಣ ಭಾಗದಲ್ಲಿ ಸಚ್ಛಾರಿತ್ರ್ಯ ಬೆಳೆಸುವಲ್ಲಿ ಪವಾಡ ಪುರುಷರ ಕೀರ್ತನೆಗಳು ಹಾಗೂ ನಾಟಕಗಳು ದೊಡ್ಡ ಪಾತ್ರವನ್ನು ನಿರ್ವಹಿಸುತ್ತವೆ. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕವಿ ಲಾಲ್‍ಅಹ್ಮದ್ ಬಂದೇನವಾಜ್ ಖಲೀಫ ಆಲ್ದಾಳ (ಎಲ್‍ಬಿಕೆ ಆಲ್ದಾಳ) ಅವರು ತಮ್ಮ ನಾಟಕಗಳ ಮೂಲಕ ಆ ಕೆಲಸ ಮಾಡುತ್ತ ಬಂದರು. ಪುರಾಣಗಳಿಗೆ, ಐತಿಹ್ಯಗಳಿಗೆ ನಾಟಕದ ರೂಪ ಕೊಟ್ಟು ರಂಗದ ಮೇಲೆ ಅವನ್ನು ಯಶಸ್ವಿಯಾಗಿ ತಂದರು.
ಮಠ, ಸಂಸ್ಥೆಗಳಲ್ಲಿ ದೊರೆಯುವ ಪುರಾಣ, ಐತಿಹ್ಯ, ಚರಿತ್ರೆಗಳನ್ನಾಧರಿಸಿ ನಾಟಕ ರಚಿಸಿ; ಯಶಸ್ವಿಯಾಗಿ ನಿರ್ದೇಶಿಸುವುದರಲ್ಲಿ ಅವರು ಎತ್ತಿದಕೈ. ಆಲ್ದಾಳ ಅವರ ಮೂವತ್ತಕ್ಕೂ ಅಧಿಕ ಇಂತಹ ನಾಟಕಗಳು ನೂರಾರು ಪ್ರಯೋಗಗಳನ್ನೂ ಕಂಡಿವೆ. ಒಂದು ಮತ ಅಲ್ಲ, ಒಂದು ಜಾತಿ ಅಲ್ಲ- ಕುರುಬರ ಯಲ್ಲಪ್ಪಸ್ವಾಮಿ ಕುರಿತು ‘ಮುಗಳಖೋಡ ಮುತ್ತು’, ಈಡಿಗರ ಬಾಲಯೋಗೀಂದ್ರ ಮಹಾರಾಜೇಂದ್ರರ ಕುರಿತು ‘ಗರತಿ ವಿಶ್ವಜ್ಯೋತಿ’, ವಿಶ್ವಕರ್ಮರ ‘ಅಳ್ಳಳ್ಳಿ ಅಯ್ಯಪ್ಪಯ್ಯ ಮಹಾತ್ಮೆ’, ‘ಮೋಟನಹಳ್ಳಿ ಹಸನಸಾಬ್’, ‘ಮುದನೂರು ದೇವರ ದಾಸಿಮಯ್ಯ’ ಇನ್ನೂ ಹತ್ತು ಹಲವಾರು ಐತಿಹ್ಯಗಳ ಜೊತೆಗೆ ಶರಣರು, ಸಂತರು, ಸೂಫಿಗಳ ಕುರಿತು ನಾಟಕ ರಚಿಸಿ ನಿರ್ದೇಶಿಸಿದವರು ಅವರು. ಸರಳ ಜೀವನ, ಕಾಯಕದ ಮಹತ್ವ, ಭಾವೈಕ್ಯ ಇವರ ನಾಟಕಗಳ ತಿರುಳು.
ಹತ್ತಕ್ಕೂ ಅಧಿಕ ಸಾಮಾಜಿಕ ನಾಟಕಗಳನ್ನು ರಚಿಸಿರುವ ಆಲ್ದಾಳ ಮಾಸ್ತರ ಅವರು 11 ನಾಟಕ ಕಂಪನಿಗಳಲ್ಲಿ ನಾಟಕಕಾರರಾಗಿ, ನಿರ್ದೇಶಕರಾಗಿ ಕೆಲಸ ಮಾಡಿದವರು. ಅದಕ್ಕೂ ಹೆಚ್ಚಾಗಿ ಬೀದರ, ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳ ಹಳ್ಳಿಗಳಲ್ಲಿ ಆರು ದಶಕಗಳ ಕಾಲ ನಾಟಕಗಳನ್ನು ಕಲಿಸಿ ರಂಗಕ್ಕೆ ತಂದವರು.
ಜನನ ವಿಜಯಪುರ ಜಿಲ್ಲೆ, ಕಾರ್ಯಕ್ಷೇತ್ರ ಸಗರನಾಡು
ವಿಜಯಪುರ ಜಿಲ್ಲೆಯ ಸಿಂಧಗಿ ತಾಲ್ಲೂಕು ಬನ್ನಿಹಟ್ಟಿಯಲ್ಲಿ ಬಂದೇನವಾಜ- ಹುಸೇನಬಿ ದಂಪತಿಗೆ 1938ರಲ್ಲಿ ಜನಿಸಿದ ಲಾಲ್‌ಮಹ್ಮದ್, ಬೆಳೆದದ್ದು ಯಾದಗಿರಿ ಜಿಲ್ಲೆ, ಸುರಪುರ ತಾಲ್ಲೂಕು ಆಲ್ದಾಳದಲ್ಲಿ, ನಂತರ ಇವರು ನೆಲೆಸಿದ್ದು ಕಲಬುರ್ಗಿ ಜಿಲ್ಲೆ, ಯಡ್ರಾಮಿ ತಾಲ್ಲೂಕು ಮಳ್ಳಿ ಎಂಬ ಗ್ರಾಮದಲ್ಲಿ. ಪತ್ನಿ ಅಮೀನಬಿ. ರಫಿ, ಶಫಿ ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ.
ಬಹುಮುಖ ಪ್ರತಿಭಾವಂತ ಆಲ್ದಾಳ ಅವರು ಭಾಮಿನಿ ಷಟ್ಪದಿಯಲ್ಲಿ ನಾಲ್ಕು ಪುರಾಣಗಳನ್ನು ರಚಿಸಿದ್ದಾರೆ. ತತ್ವಗೀತೆಗಳ ಸಂಕಲನ ಹೊರತಂದಿದ್ದಾರೆ. ನಾಮಾವಳಿಗಳನ್ನು ಬರೆದಿದ್ದಾರೆ. ನಾಟಕ ಅಕಾಡೆಮಿ, ರಾಜ್ಯೋತ್ಸವ, ಗುಬ್ಬಿವೀರಣ್ಣ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.
ಸಚ್ಚಾರಿತ್ರದ ಅವರ ನಾಟಕಗಳಂತೆ ಅವರ ಬದುಕೂ ಸರಳ. ಇದ್ದುದರಲ್ಲೇ ಸಂತೃಪ್ತಿಯಾಗಿರುತ್ತಿದ್ದರು. ಬೆಂಗಳೂರಿಗೆ ಸಂಸ್ಕೃತಿ ಇಲಾಖೆಯ ಯಾವುದಾದರೂ ಸಭೆ, ಕಾರ್ಯಕ್ರಮಗಳಿಗಾಗಿ ಬೆಂಗಳೂರಿಗೆ ಬಂದರೆ ಮೆಜೆಸ್ಟಿಕ್‍ನ ತೀರಾ ಕಡಿಮೆ ದರದ ಹೋಟೆಲ್‍ನಲ್ಲಿ ತಂಗುತ್ತಿದ್ದರು. ಅಲ್ಲಿಂದ ಸಂಸ್ಕೃತಿ ಇಲಾಖೆ ಕಚೇರಿಗೆ ನಡೆದೇ ಹೋಗುತ್ತಿದ್ದರು. ಬಸ್, ಆಟೊ ನೆಚ್ಚಿದವರಲ್ಲ. ಅವರ ಜೀವನ ಕ್ರಮವೇ ಅವರ ಆಯುರಾರೋಗ್ಯದ ಗುಟ್ಟಾಗಿತ್ತು.
ಮೂರು ತಿಂಗಳ ಹಿಂದೆ ಸಗಟು ಖರೀದಿಯ ಗ್ರಂಥಾಲಯಕ್ಕೆ ಪುಸ್ತಕ ಕೊಡಲು ಬೆಂಗಳೂರಿಗೆ ಬಂದಿದ್ದರು. ಅದೊಂದೇ ಬಾರಿ ಸಹಾಯಕರನ್ನು ಕರೆತಂದಿದ್ದರು. ಅವರು ತಮ್ಮ ನೋವನ್ನು ಯಾರೊಂದಿಗೂ ಹಂಚಿಕೊಂಡವರಲ್ಲ. ಸದಾ ಹಸನ್ಮುಖಿ ಆಗಿರುತ್ತಿದ್ದ ಅವರ ಬದುಕಿನ ಶೈಲಿ ಅವರ ನಾಟಕ ರಚನೆ, ನಿರ್ದೇಶನಕ್ಕಿಂತ ದೊಡ್ಡದಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.