ವಿಕ್ರಮ ಬಿ. ಕೆ.
ಮಂಜಮ್ಮ ಜೋಗತಿ ಅವರ ಬದುಕಿನ ಅಧ್ಯಾಯಗಳನ್ನು ರಂಗರೂಪಕ್ಕೆ ಅಳವಡಿಸಿ, ಬೇಲೂರು ರಘುನಂದನ್ ಅವರು ನಿರ್ದೇಶಿಸಿದ್ದಾರೆ. ಬರೀ ಮನೋರಂಜನೆಯಾಗದ ಈ ರಂಗಪ್ರಯೋಗವು ಮನಃಪರಿವರ್ತನೆಗೆ ಪ್ರೇರಣೆಯೂ ಆಗುವುದು ಗಮನಾರ್ಹ.
ತಲೆಮೇಲೆ ಹೊತ್ತ ದೇವಿ ಹೆಣ್ಣು, ’ನಾನು ನಿಂತಿರೋದು ಭೂಮಿ ತಾಯಿಯ ಮೇಲೆ, ಆಕೆ ಕೂಡ ಹೆಣ್ಣು. ನಡುವೆ ಇರುವ ನಾನು ಯಾರು‘ ಎಂದು ಪ್ರಶ್ನಿಸುವ ಈ ನಾಟಕ ಕನ್ನಡದಲ್ಲಿ ಬಹಳ ಹಿಂದೆಯೇ ಬರಬೇಕಿತ್ತು.
ಮಂಜುನಾಥ್ ಶೆಟ್ಟಿ, ಮಂಜಮ್ಮ ಜೋಗತಿ ಆಗಿ ‘ಮಾತಾ’ ಆಗುವ ಜಾನಪದ ಕಲೆಗಾರ್ತಿಯ ಜೀವನವನ್ನುಎಂಬತ್ತು ನಿಮಿಷಗಳಲ್ಲಿ ರಂಗದ ಮೇಲೆ ನಡೆಯುವ ನಾಟಕವಾಗಿ ರೂಪಾಂತರಿಸಲಾಗಿದೆ. ಇದು ಮಂಜಮ್ಮನವರ ಬದುಕನ್ನು ಗಟ್ಟಿಯಾಗಿ ಕಟ್ಟಿಕೊಡುತ್ತದೆ.
ಮಂಜಮ್ಮನವರ ಮಾವ ಗಾಂಧಿ ಶೆಟ್ಟಿ ಅವರನ್ನು ರಂಗದ ಮೇಲೆ ಕರೆ ತಂದ ಪರಿ ಬೇಲೂರು ರಘುನಂದನ್ ಅವರ ನಿರ್ದೇಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಹಾಗೆ ಮಾಡುತ್ತದೆ. ’ಗಾಂಧಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನರು. ನಮ್ಮಂತಹವರಿಗೆ ನಿಜವಾದ ಸ್ವಾತಂತ್ರ್ಯ ಯಾವಾಗ‘ ಎನ್ನುವ ಪ್ರಶ್ನೆ ಪ್ರದರ್ಶನ ಮುಗಿದ ನಂತರವೂ ನಮ್ಮನ್ನು ಬಂಧನದಲ್ಲಿ ಇರುವಂತಹ ಭಾವಕ್ಕೆ ದೂಡುತ್ತದೆ.
ಓಣಿಯ ಗುಡಿಸಲಿನ ಮನೆಗೆ ಬೆಂಕಿ ಬಿದ್ದಾಗ, ತೊಟ್ಟಲು ತೂಗುತ್ತಿರುವ ಮಂಜಮ್ಮ ಅವರ ತಾಯಿ ಕೂಸನ್ನು ಅಲ್ಲಿಯೇ ಬಿಟ್ಟು ಮೊದಲು ಮಾತು ಬಾರದ ಬೆಕ್ಕಿನ ಮರಿಗಳನ್ನು ರಕ್ಷಿಸಿದ ಘಟನೆ- ತಾಯಿತನದ ಬಗ್ಗೆ ಅಷ್ಟೇ ಅಲ್ಲ ಜಾತಿ, ಲಿಂಗ, ಮೀರಿ ಶುದ್ಧ ಮನಸ್ಸಿನಿಂದ ಬಾಳುವ ಸಂದೇಶ ಸಾರುತ್ತದೆ. ಬೆಳಕು, ಸಂಗೀತದ ಮೂಲಕ ಇಡೀ ನಾಟಕದ ಕಟ್ಟೆ ಒಂದು ದೊಡ್ಡ ಕನ್ನಡಿಯಾಗುತ್ತದೆ. ಆ ತಾಯಿ ತನ್ನ ಗಂಡುಮಗು ಹೆಣ್ಣಾದಾಗ ಏಕೆ ತಿರಸ್ಕರಿಸಿದ್ದಳು? ಒಪ್ಪಿಕೊಂಡು ಮನೆಯಲ್ಲೇ ಬೆಳೆಸಿದ್ದರೆ, ನಮ್ಮ ಮುಂದೆ ದೇಶ ಕಂಡ ಒಬ್ಬ ಶ್ರೇಷ್ಠ ಕಲಾವಿದೆಯ ಮರುಹುಟ್ಟಿಗೆ ಕಾರಣವೇ ಸಿಗುತ್ತಿರಲಿಲ್ಲವೇನೊ ಅನಿಸುತ್ತದೆ.
ಮಂಜಮ್ಮನವರ ಬಹಳಷ್ಟು ಭಾಷಣಗಳಲ್ಲಿ ಕೇಳಿ ತಿಳಿದುಕೊಂಡಿದ್ದು ಇಷ್ಟು: ಅವರು ’ಕಲೆಯೇ ಬದುಕು‘ ಎಂದು ನಂಬಿ ಬದುಕಿದ್ದಾರೆ. ಆದರೆ ಅವರು ಕಲೆಗಾರ್ತಿ ಆಗಿದ್ದು ಹೇಗೆ, ಯಾರು ಯಾರು ಅವರನ್ನು ಕಲೆ ಅನುಭವಿಸಲು ಅನುವು ಮಾಡಿಕೊಟ್ಟಿರಬಹುದು ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟ ರಘುನಂದನ್ ಅದನ್ನು ಸಮರ್ಥವಾಗಿ ರಂಗದ ಮೇಲೆ ಸಾಧಿಸಿದ್ದಾರೆ. ಮಂಜಮ್ಮನವರ ತಾಯಿ ಬುರ್ಖಾ ಧರಿಸಿ ಯಾರಿಗೂ ತಿಳಿಯದ ಹಾಗೆ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವ ಸಂದರ್ಭವಿದೆ. ಹೆಣ್ಣಿಗೆ ಸಮಾಜ ಹಾಕಿದ ನಿಬಂಧನೆಗಳನ್ನು ಎತ್ತಿ ತೋರಿಸುತ್ತಾ, ಬುರ್ಖಾದ ಒಳಗೆ ಇರುವ ಸೀರೆ, ಹೆಣ್ಣಿನ ಒಳಗಿರುವ ಆಸೆಯನ್ನು ರೂಪಕವಾಗಿ ತೋರುವ ಬಗೆ ಗಮನಾರ್ಹ.
ಕತ್ತಲೆಯಲ್ಲಿ ಮೈ ಮೇಲೆ ಎರಗುವ ಸೈಕಲ್‌ನ ಗಾಲಿ ಇಲ್ಲಿ ಕಾಲಚಕ್ರ, ಮುಟ್ಟಿನ ಬಟ್ಟೆ ಎಂಬುದು ಹೆಣ್ಣಿನ ಬದುಕಿನ ರೈಲನ್ನು ಗಕ್ಕನೆ ನಿಲ್ಲಿಸುವ ಅಂಕುಶ, ಜೋಗತಿ ಸಂಪ್ರದಾಯದ ಭಕ್ತಿ ಮತ್ತು ಹಿಜಡಾ ಸಂಪ್ರದಾಯದ ಲಿಂಗ ಪರಿವರ್ತನೆ ಇವೆಲ್ಲವುಗಳ ಬಗ್ಗೆ ನಾಟಕ ಹೇಳುತ್ತದೆ.
ಹುಲಿಗೆಮ್ಮ ತಾಯಿಯಾಗಿದ್ದಾಗಲೇ ಚೆನ್ನಾಗಿದ್ದಳು, ದೇವಿಯಾದ ಕೂಡಲೇ ನಮ್ಮಿಂದ ದೂರಾದಳು. ಗುಡಿಯಾಗಿದ್ದಾಗ ನಾವು ಒಳಗಿದ್ದೆವು, ಅರ್ಚಕರೆಂದು ಬಂದು ದೇವಸ್ಥಾನವಾದ ಕೂಡಲೇ ನಾವು ಹೊರಗೆ ಬಂದೆವು ಎನ್ನುವುದು ಬದಲಾಗುತ್ತಿರುವ ಸಮಾಜ ಮತ್ತು ಭಕ್ತರಿಂದ ದೂರಾದ ದೇವರನ್ನು ತೋರಿಸುತ್ತವೆ. ದೇವರೆಂದರೆ ಭರವಸೆ. ಅದೇ ಇಲ್ಲದೇ ಬದುಕು ಇನ್ನಷ್ಟು ಕೇಡು ಕಾಣುತ್ತದೆ. ಈಗಿನ ಮಾತೆಯರ ಪಾಡು ಹೇಗಿದೆಯೋ? ಅನಿಸುತ್ತದೆ.
ಬದುಕು ಏನೆಲ್ಲಾ ಕಾಟಗಳನ್ನು ಕೊಡುತ್ತಿದ್ದರೂ ಮಂಜಮ್ಮನವರನ್ನು ಉಳಿಸಿದ್ದು ಅವರ ಕಲೆ ಮತ್ತು ಕೆಲಸ. ಸಂಬಂಧಗಳಿಗೆ ಸೋಲು, ಗೆಲುವಿದೆ. ಆದರೆ ಕಲೆಗೆ ಮತ್ತು ಕೆಲಸಕ್ಕೆ ಯಾವಾಗಲೂ ಏರುಮುಖದ ಫಲ. ಮಾತಾ ಮಂಜಮ್ಮ ಜೋಗತಿ ಎನ್ನುವ ಸಾಲಿನಲ್ಲಿ ’ಮಾತಾ ಅಂದರೆ ನನ್ನನ್ನು ಸಾಕಿದ ತಾಯಿ ಹುಲಿಗೆಮ್ಮೆ, ಮಂಜಮ್ಮ ಎಂದರೆ ಮಾತ್ರ ನಾನು, ಜೋಗತಿ ಎನ್ನುವುದು ಮಂದಿ ಎಂದು ಎಲ್ಲರನ್ನೂ ಒಳಗೊಳ್ಳುವ ಭಾವ‘. ಇದು ಬದುಕಿನ ಸಾಕ್ಷಾತ್ಕಾರದಂತೆ ಅನಿಸುತ್ತದೆ. ತಾಯಿಗೆ ಎಲ್ಲಾ ಮಕ್ಕಳು ಒಂದೇ, ಕಲೆಗೆ–ಅರಿವಿಗೆ ಜಾತಿ ಭೇದವಿಲ್ಲ ಎನ್ನುವ ಸಾರ್ವಕಾಲಿಕ ಸತ್ಯಗಳು ಇಲ್ಲಿ ಮೇಲ್ಮಟ್ಟಕ್ಕೆ ಏರುತ್ತವೆ.
ಅರುಣ್ ಕುಮಾರ್ ಅವರು ಮಂಜಮ್ಮ ಜೋಗತಿಯವರ ಬದುಕಿನ ಎಲ್ಲವನ್ನೂ ಎಡಬಿಡದೇ ನಮ್ಮ ಕಣ್ಣ ಮುಂದೆ ಕಟ್ಟಿಕೊಡುವ ಬಗೆ ಚೆನ್ನಾಗಿದೆ. ನಟನೆಯ ಏರಿಳಿತ ಮತ್ತು ತಲೆಯ ಮೇಲೆ ಕೊಡವನ್ನು ಇಟ್ಟುಕೊಂಡು ಕುಣಿಯುವುದು ಪರಕಾಯ ಪ್ರವೇಶ. ಮಂಜಮ್ಮನವರ ಸಣ್ಣ ಸಣ್ಣ ಹಾವಭಾವಗಳನ್ನು ಅವರು ಚೆನ್ನಾಗಿ ಕಟ್ಟಿಕೊಟ್ಟರು. ಬಳ್ಳಾರಿ ಸೀಮೆಯ ಮಾತುಗಳನ್ನೂ ಅವರು ಸೊಗಸಾಗಿ ಹರಡಿದ್ದಾರೆ.
ದೇಶದಲ್ಲಿ ನಮಗೆ ಇರುವ ಬಹು ದೊಡ್ಡ ಧರ್ಮ ಗ್ರಂಥ ಎಂದರೆ ನಮ್ಮ ಸಂವಿಧಾನ. ಈ ನಾಟಕದಲ್ಲಿ ಒಬ್ಬ ಕಲೆಗಾರ್ತಿ ಸಂವಿಧಾನ ಎತ್ತಿ ಹಿಡಿಯುತ್ತಾಳೆ. ಮೇಲ್ಜಾತಿಯಲ್ಲಿ ಹುಟ್ಟಿದ ಗಂಡಿನ ದೇಹದ ಒಳಗೆ ಇರುವ ಹೆಣ್ಣನ್ನ, ಮನೆಯಿಂದ ಹೊರಹಾಕಿ ಅವರ ಕುಟುಂಬ ಮಡಿವಂತಿಕೆ ಮೆರೆದರೆ, ಮೇಲ್ಜಾತಿಯ ಜೋಗತಿ ಮಂಜಮ್ಮ ತನ್ನ ಗುರು ಮಟ್ಟಿಕಲ್ ಬಸಪ್ಪ ಊಟ ಮಾಡಲು ಜೊತೆಗೆ ಕೂರಿಸದೆ, ಹೋಟೆಲ್ ಹೊರಗೆ ಕೂರಿಸಿ ಊಟ ಮಾಡಿಸುವ ಮೂಲಕ ಅವರ ಕಡೆಯಿಂದ ಅಸ್ಪೃಶ್ಯತೆಯನ್ನು ಅನುಭವಿಸಿದ ಬದುಕನ್ನು ಮತ್ತು ಅನುಭವಿಸುತ್ತಾ ಮಾನವತಾವಾದವನ್ನು ತಮ್ಮೊಳಗೆ ಬೆಳೆಸಿಕೊಳ್ಳಲು ಪ್ರೇರಣೆ ಆಗಿದೆ ಎಂದು ನಾಟಕ ನಮಗೆ ಹೇಳಿ ಕೊಡುತ್ತದೆ. ಒಂದು ಸಿಲ್ವರ್ ಪ್ಲೇಟ್ ಮತ್ತು ಸಿಲ್ವರ್ ಗ್ಲಾಸ್ ಅನ್ನು ನೆಲಕ್ಕೆ ಕುಟ್ಟಿ ಕುಟ್ಟಿ ಹೇಳುವ ಮಂಜಮ್ಮ ಜೋಗತಿ ಅವರ ಪಾತ್ರ ಮಾಡಿದ ಅರುಣ್ - ಇಂತಹ ಅದ್ಬುತ ನಟ ಎಂದು ಗೊತ್ತಾಗುತ್ತದೆ.
ಸಂಗೀತ ಸಂಯೋಜನೆಯನ್ನು ಸವಿತಕ್ಕ ಮಾಡಿದ್ದಾರೆ. ಅವರ ಗಟ್ಟಿ ದನಿ ನಾಟಕಕ್ಕೆ ಬೇಕಾದ ಶಕ್ತಿಯನ್ನು ಸಂಗೀತದ ಮೂಲಕ ಬೆರೆಸುತ್ತಾರೆ. ಹಿಂದೆ ಆಗಾಗ ಬರುವ ಚೌಡಿಕಿ ಪದಗಳು, ಹುಲಿಗೆಮ್ಮನ ಜಾತ್ರೆಯನ್ನು ಬರೀ ಒಬ್ಬ ನಟ ರಂಗದ ಮೇಲೆ ಯಶಸ್ವಿಯಾಗಿ ತೋರಿಸಲು ಸಾಧ್ಯವಾಗಲು ಸಂಗೀತ ಮುಖ್ಯ ಕಾರಣ ಆಗುತ್ತದೆ. ರೇಡಿಯೋ ಹಿಡಿದು ಮಂಜಮ್ಮನ ಪಾತ್ರ ಕುಣಿಯುವಾಗ, ಮಂಜಮ್ಮ ತಮ್ಮ ಪ್ರೇಮ ಪ್ರಣಯದ ನೆನಪುಗಳನ್ನು ಹಂಚು ಕೊಳ್ಳುವಾಗ, ಹಿನ್ನಲೆ ಸಂಗೀತ ನಮ್ಮನ್ನು ರಂಜಿಸುತ್ತದೆ.
ಅರುಣ್ ಜೋಳದ ಕೂಡ್ಲಿಗಿ ಬರೆದಿರುವ 'ನಡುವೆ ಸುಳಿವ ಹೆಣ್ಣು‘, ಡಾ ಚಂದ್ರಪ್ಪ ಸೊಬಟಿ ಅವರು ಬರೆದಿರುವ ’ಮಂಜಮ್ಮ ಜೋಗತಿ‘ ನಾಟಕ ಮತ್ತು ಹಲವೆಡೆ ಮಂಜಮ್ಮನವರು ಆಡಿದ ಮಾತುಗಳು ಮತ್ತು ಕೊಟ್ಟ ಸಂದರ್ಶನಗಳನ್ನು ಮೂಲವಾಗಿ ಇಟ್ಟುಕೊಂಡು ನಾಟಕವನ್ನು ಕಟ್ಟಿದ್ದಾರೆ ನಿರ್ದೇಶಕರು.
ನವಿಲುಗರಿಯಿಂದ ಸಜ್ಜಾದ ಕೊಡ, ಮೇಲೆ ದೇವರ ಮುಖಗಳು, ಹಿಂದೆ ಮತ್ತಷ್ಟು ನವಿಲು ಗರಿ ಮತ್ತು ಕವಿಗಳ ಹಾರ...ಇವೆಲ್ಲವುಗಳೂ ಸೇರಿದಂತೆ ರಂಗದ ಮೇಲೆ ಮುಖ್ಯ ಸೆಟ್ ಹಾಕಲಾಗಿತ್ತು. ಆಡಂಬರ ಇಲ್ಲ-ಅಸಹಜತೆ ಇಲ್ಲ. ಸಾಧಾರಣ ಟ್ರಾನ್ಸ್‌ಜೆಂಡರ್, ಒಬ್ಬ ಜಾನಪದ ಕಲೆಗಾರ್ತಿ ಹಳ್ಳಿಯಿಂದ ದೆಹಲಿಯವರೆಗೆ ಸಾಗಿಬಂದ ಬದುಕನ್ನು ನಾಟಕ ಸಮರ್ಥವಾಗಿ ಕಟ್ಟಿಕೊಟ್ಟಿದೆ.
ಮರಾಠಿಯಲ್ಲಿ ಮೊದಲ ಬಾರಿಗೆ ಮಂಜಮ್ಮ ಜೋಗತಿ ಅವರ ಜೀವನದ ಆಧಾರಿತ ನಾಟಕ ’ಮಂಜಮ್ಮ ಪುರಾಣಂ‘ ಅನ್ನು ಪ್ರಯೋಗಕ್ಕೆ ತರಲಾಗಿತ್ತು. ಆ ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಥಮ ಸ್ಥಾನ ಪಡೆದು, ಝೀ ಖಾಸಗಿ ವಾಹಿನಿಯಲ್ಲಿ ಪ್ರಶಸ್ತಿಗಳನ್ನು ಗಳಿಸಿತ್ತು. ಈಗ ನಿರ್ದೇಶಕ ಬೇಲೂರು ರಘುನಂದನ್ ಕನ್ನಡ ರಂಗಭೂಮಿಗೆ ಇಂತಹ ಅಪರೂಪದ ಪ್ರಯೋಗವನ್ನು ತಂದಿದ್ದಾರೆ.
’ಮಾತಾ‘ ನಾಟಕ ಬರೀ ಮನೋರಂಜನೆಗೆ ಅಲ್ಲ; ಮನಃಪರಿವರ್ತನೆಗೆ ಪ್ರೇರಣೆಯೂ ಹೌದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.