ADVERTISEMENT

ಬರುತ್ತಾಳೆ ಕುಸುಮಬಾಲೆ

ಮಂಜುಶ್ರೀ ಎಂ.ಕಡಕೋಳ
Published 11 ಜನವರಿ 2019, 19:45 IST
Last Updated 11 ಜನವರಿ 2019, 19:45 IST
   

ಜಾತಿ, ವರ್ಣ ಸಂಕರಣದ ಕುಲುಮೆಯಲ್ಲಿ ನಲಗುತ್ತಿರುವ ಪ್ರೇಮಹಕ್ಕಿಗಳಿಗೆ ಈಗ ಮರ್ಯಾದೆಗೇಡು ಹತ್ಯೆಯ ಭೀತಿ. ಜಾತಿಯಲ್ಲದವನನ್ನು ಮದುವೆಯಾದಳು, ಮದುವೆಯಾದ ಅನ್ನುವುದೇ ಕಾರಣವಾಗಿ ಕರುಳ ಕುಡಿಗಳನ್ನೇ ಕೊಲ್ಲುವ ಮನೋಧರ್ಮ ಜಾತೀಯತೆ ತುಂಬಿದ ಹೆತ್ತವರದ್ದಾಗಿದೆ. ಇಂಥದ್ದೇ ಕಥಾನಕವುಳ್ಳ ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಅಪ್ಪಟ ಮನುಷ್ಯತ್ವದ ಕಥೆ ಹೇಳಲು ರಂಗಭೂಮಿಗೆ ಬರುತ್ತಿದ್ದಾಳೆ.

ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ನಿರ್ದೇಶಕ ಸಿ. ಬಸವಲಿಂಗಯ್ಯ ಬರೋಬ್ಬರಿ 27 ವರ್ಷಗಳ ಬಳಿಕ ಮತ್ತೆ ‘ಕುಸುಮಬಾಲೆ’ಯನ್ನು ರಂಗಕ್ಕೆ ತರುತ್ತಿದ್ದಾರೆ. ಇದೇ 12 ಮತ್ತು 13ರಂದು ಮಲ್ಲತ್ತಹಳ್ಳಿಯ ಕಲಾ ಗ್ರಾಮದ ಬಿದಿರುಮಳೆಯಲ್ಲಿ ‘ಕುಸುಮಬಾಲೆ’ ರಂಗಪ್ರಿಯರಿಗೆ ಗೋಚರಿಸಲಿದ್ದಾಳೆ.

‘ಕುಸುಮಬಾಲೆ’ಯ ಪ್ರಸ್ತುತತೆ ಬಗ್ಗೆ ಬಸವಲಿಂಗಯ್ಯ ಹೇಳುವುದಿಷ್ಟು: ‘70–80 ದಶಕದಲ್ಲಿ ಅಂತರ್ಜಾತಿ ಮದುವೆಯಾದರೆ ಆಗ ಕನಿಷ್ಠ

ADVERTISEMENT
ಸಿ. ಬಸವಲಿಂಗಯ್ಯ

ಪ್ರಗತಿಪರರ ಮಧ್ಯೆ ಗೌರವವಿರುತ್ತಿತ್ತು. ಆದರೀಗ, ಇಂಥ ಮದುವೆಯಾದರೆ ಹೆತ್ತವರೇ ತಮ್ಮ ಮಕ್ಕಳನ್ನು ಹತ್ಯೆ ಮಾಡಲು ಹೇಸುತ್ತಿಲ್ಲ. ಇದನ್ನೆಲ್ಲಾ ನೋಡಿದರೆ ಭಾರತದಲ್ಲಿ ಹಿಂದೆಂದಿಗಿಂತಲೂ ಜಾತಿ, ವರ್ಣ ಸಂಕರಣ ಹೆಚ್ಚಿದೆ ಅನಿಸುತ್ತಿದೆ. ‌ಜಾತಿಯ ಶ್ರೇಷ್ಠತೆಯ ವ್ಯಸನದಲ್ಲಿ ಮುಳುಗಿರುವವರಿಗೆ ‘ಸಂಬಂಜಾ ಅನ್ನೋದು ದೊಡ್ಡದು ಕಣಾ’ ಅಂತ ದೇವನೂರು ’ಕುಸುಮಬಾಲೆ’ಯ ಮೂಲಕ ಹೇಳುತ್ತಾರೆ’.

‘ವಿಧವೆ ಅಕ್ಕಮಹಾದೇವಿಯ ನೋವು, ಕುಸುಮ ಬಾಲೆಯ ಪ್ರೇಮಕಥನ ಇಲ್ಲಿದೆ. ಪ್ರೀತಿಸಿದ ತಪ್ಪಿಗಾಗಿ ತನ್ನ ಇನಿಯ ಚನ್ನನನ್ನು ಕಳೆದುಕೊಳ್ಳುವ ಅನಕ್ಷರಸ್ಥೆ ಕುಸುಮಳ ಭಾವಲೋಕ ಇಲ್ಲಿ ಅನಾವರಣಗೊಂಡಿದೆ. ಗಂಡನ ಮನೆಯ ಆಸ್ತಿ ಪಡೆಯಲು ಹಟ್ಟಿಯ ಜೀತಗಾರನಿಂದ ಮಗು ಪಡೆಯುವ ಅಕ್ಕಮಹಾದೇವಿ, ಗಂಡನ ಮನೆಯ ಶ್ರೀಮಂತಿಕೆಯನ್ನೂ ಮೀರಿಸುವ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ಚಿತ್ರಣವಿದೆ’.

‘ಎತ್ತಣ ಮಾಮರ ಎತ್ತಣ ಕೋಗಿಲೆ, ಎತ್ತಣ ನೆಲ್ಲಿಕಾಯಿ ಎತ್ತಣ ಸಮುದ್ರದ ಉಪ್ಪು’ ಅನ್ನುವ ವಚನದಂತೆ ಮೇಲ್ಜಾತಿಯ ಕುಸುಮ, ದಲಿತ ಹುಡುಗ, ವಿದ್ಯಾವಂತ ಚನ್ನನಿಗೆ ಮನ ಸೋಲುತ್ತಾಳೆ. ಆದರೆ, ಇದು ನಾಟಕದಲ್ಲಿ ದುರಂತದ ಅಂತ್ಯ ಕಾಣುತ್ತದೆ. ಮರ್ಯಾದೆಗೇಡು ಹತ್ಯೆಯಿಂದ ಸಾಯುವ ಚನ್ನ, ಮಾನಸಿಕ ಕ್ಷೋಭೆಗೊಳಗಾಗುವ ಕುಸುಮಳ ಜೀವನ ಇಂದಿನ ದುರಂತ ಪ್ರೇಮಕಥನಗಳಿಗೆ ಪ್ರಸ್ತುತವಾಗುತ್ತದೆ’.

ದೇವನೂರ ಮಹಾದೇವ

‘ದೇವನೂರರ ಈ ಕಾದಂಬರಿ 27 ವರ್ಷಗಳ ಹಿಂದೆ ರಂಗಕ್ಕೆ ಬಂದಾಗ ನೂರಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಈ ನಾಟಕ ಒಂದು ರೀತಿಯಲ್ಲಿ ದಲಿತ ಪುರಾಣವೂ, ಆಧುನಿಕ ಕಾಲದ ಮರ್ಡರ್ ಮಿಸ್ಟರಿಯೂ ಹೌದು. ಜೀವನದಲ್ಲಿ ಮನುಷ್ಯ ಪ್ರೀತಿ ಬಿಟ್ಟರೆ ಬೇರಾವ ಸಂಬಂಧವೂ ಮುಖ್ಯವಲ್ಲ ಅನ್ನುವ ಸಂದೇಶ ನಾಟಕದಲ್ಲಿದೆ. ನಂಜನಗೂಡಿನ ದೇಸಿ ಭಾಷೆಯ ಬಳಕೆಯನ್ನು ನಾಟಕದಲ್ಲಿ ಹಾಗೇ ಬಳಸಿಕೊಳ್ಳಲಾಗಿದೆ. ದೇವನೂರು, ಸಿದ್ದಲಿಂಗಯ್ಯ, ಬಿ. ಕೃಷ್ಣಪ್ಪ, ಕೆ.ಬಿ.ಸಿದ್ದಯ್ಯ ಹೀಗೆ ವರ್ತಮಾನದ ಅನೇಕ ಪಾತ್ರಗಳೂ ನಾಟಕದಲ್ಲಿ ಕಾಣಿಸಿಕೊಳ್ಳುತ್ತವೆ. ದೇಶದಲ್ಲಿ ಜಾತಿ ವ್ಯವಸ್ಥೆ ಇರುವವರೆಗೆ ಕುಸುಮಬಾಲೆ ಪ್ರಸ್ತುತವಾಗುತ್ತದೆ’ ಎಂದು ಮಾತು ಮುಗಿಸಿದರು ಸಿ. ಬಸವಲಿಂಗಯ್ಯ.

ನಾಟಕದ ಅವಧಿ: 2 ಗಂಟೆ 20 ನಿಮಿಷ

ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ನಾಟಕ ಪ್ರದರ್ಶನ: ಪ್ರಸ್ತುತಿ–ಎನ್ಎಸ್‌ಡಿ. ಪರಿಕಲ್ಪನೆ, ನಿರ್ದೇಶನ–ಸಿ. ಬಸವಲಿಂಗಯ್ಯ. ಸಂಗೀತ–ಬಿ.ವಿ.ಕಾರಂತ. ಸಂಗೀತ ಮರುಸಂಯೋಜನೆ–ಪಿಚ್ಚಳ್ಳಿ ಶ್ರೀನಿವಾಸ, ಗಜಾನನ ಟಿ. ನಾಯ್ಕ, ರಂಗವಿನ್ಯಾಸ– ಶಶಿಧರ ಅಡಪ, ವಸ್ತ್ರವಿನ್ಯಾಸ–ಎನ್. ಮಂಗಳಾ, ಮುಖವರ್ಣಿಕೆ–ರಾಮಕೃಷ್ಣ ಬೆಳ್ತೂರು, ಬೆಳಕು–ಎಂ.ರವಿ, ವಿನಯ್ ಚವ್ಹಾಣ್. ಆಯೋಜನೆ– ರಾಷ್ಟ್ರೀಯ ನಾಟಕ ಶಾಲೆ. ಸ್ಥಳ–ಬಿದಿರುಮೆಳೆ ರಂಗಮಂದಿರ, ಕಲಾಗ್ರಾಮ, ಮಲ್ಲತ್ತಹಳ್ಳಿ. ಜ. 12 ಮತ್ತು 13. ರಾತ್ರಿ 7.

ಎನ್‌ಎಸ್‌ಡಿ ಬೆಂಗಳೂರು ಕೇಂದ್ರದ ಹಾಸ್ಟೆಲ್ ಕಟ್ಟಡ ಉದ್ಘಾಟನೆ: ಎಂ.ಎಸ್. ಸತ್ಯು ಮತ್ತು ಬಿ.ಜಯಶ್ರೀ ಅವರಿಂದ. ಅತಿಥಿಗಳು–ಸುರೇಶ್ ಶರ್ಮಾ, ಡಾ.ಕೆ.ಮರುಳಸಿದ್ದಪ್ಪ. ಅಧ್ಯಕ್ಷತೆ–ಅರ್ಜುನ್ ದೇವ್ ಚರಣ್. ಸ್ಥಳ–ಬಿದಿರು ಮೆಳೆ ರಂಗ ಹಿಂಭಾಗ, ಕಲಾಗ್ರಾಮ, ಮಲ್ಲತ್ತಹಳ್ಳಿ. ಭಾನುವಾರ ಬೆಳಿಗ್ಗೆ 10.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.