ADVERTISEMENT

ವಕೀಲರ ರಂಗಪ್ರಯೋಗ ‘ಲಹರಿ ಲಾಯರ್ಸ್‌ ಆ್ಯಕ್ಟ್‌–೨೦೧೮’

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2018, 19:30 IST
Last Updated 21 ಆಗಸ್ಟ್ 2018, 19:30 IST
Lawyers Act
Lawyers Act   

ಕಪ್ಪು ಕೋಟು ಧರಿಸಿ, ಕಕ್ಷಿದಾರರ ಪರ ವಾದ ಮಾಡುತ್ತ ಸದಾ ಸೆಕ್ಷನ್‌, ಕಲಂಗಳ ಬಗ್ಗೆ ಮಾತನಾಡುವ ವಕೀಲರು ಇದೇ ಮೊದಲ ಬಾರಿಗೆ ಮುಖಕ್ಕೆ ಬಣ್ಣ ಹಚ್ಚಿ, ತಮ್ಮದಲ್ಲದ ವೇಷಭೂಷಣ ತೊಟ್ಟು ವೇದಿಕೆಯನ್ನೇರಲು ಅಣಿಯಾಗಿದ್ದಾರೆ. ಹೊಸ ವೇಷ, ಹೊಸ ಪರಿಭಾಷೆ, ಹೊಸ ಪ್ರಯತ್ನಕ್ಕೆ ಲಹರಿ ವಕೀಲರ ವೇದಿಕೆ ಮುನ್ನುಡಿ ಬರೆದಿದೆ.

ಇದೇ 24 (ಶುಕ್ರವಾರ) ಹಾಗೂ 25 (ಶನಿವಾರ)ರಂದು ನಡೆಯಲಿರುವ ವಕೀಲರ ಏಕಾಂಕ ನಾಟಕ ಸ್ಪರ್ಧೆಗೆ 5 ತಂಡಗಳು ಬಿರುಸಿನ ತಾಲೀಮು ನಡೆಸುತ್ತಿವೆ. ಧಾರವಾಡ, ಶಿವಮೊಗ್ಗ, ದಾವರಣಗೆರೆ, ಮೈಸೂರು ಹಾಗೂ ಬೆಂಗಳೂರಿನ ಐದು ತಂಡಗಳ ನಡುವೆ ಮೊದಲ ಸ್ಥಾನಕ್ಕೆ ಪೈಪೋಟಿ ನಡೆಯಲಿದ್ದು, ಇದರಲ್ಲಿ ವಿಜೇತರಾಗುವ ಮೊದಲ ತಂಡ ₹ 75 ಸಾವಿರ ನಗದು ಬಹುಮಾನ ಹಾಗೂ ಪಾರಿತೋಷಕವನ್ನು ತಮ್ಮದಾಗಿಸಿಕೊಳ್ಳಲಿದೆ. ದ್ವಿತೀಯ ಬಹುಮಾನವಾಗಿ ₹ 50 ಸಾವಿರ ನಗದು ಹಾಗೂ ಪಾರಿತೋಷಕ ಮತ್ತು ತೃತೀಯ ಬಹುಮಾನವಾಗಿ ₹25 ಸಾವಿರ ನಗದು ಮತ್ತು ಪಾರಿತೋಷಕ ನೀಡಲಾಗುತ್ತದೆ. ಅಲ್ಲದೇ, ಅತ್ಯುತ್ತಮ ನಿರ್ದೇಶನಕ್ಕೆ ₹ 10 ಸಾವಿರ. ಅತ್ಯುತ್ತಮ ನಟ/ನಟಿ, ಅತ್ಯುತ್ತಮ ರಂಗಪರಿಕರ ಮತ್ತು ರಂಗ ಸಜ್ಜಿಕೆ, ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕೆ ತಲಾ ₹ 5ಸಾವಿರ ನಗದು ಮತ್ತು ಪಾರಿತೋಷಕ ನೀಡಲಾಗುವುದು.

‘ಜಗವೊಂದು ರಂಗಮಂದಿರ; ನಾವೆಲ್ಲರೂ ಪಾತ್ರದಾರಿಗಳು’ ಎಂದ ಶೇಕ್ಸ್‌ಪಿಯರ್‌ನ ವ್ಯಾಖ್ಯಾನದಂತೆ ತಮ್ಮ ಪಾತ್ರವನ್ನು ತಾವು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು. ವಕೀಲಿ ವೃತ್ತಿಯಲ್ಲಿ ಮತ್ತಷ್ಟು ಲವಲವಿಕೆಯನ್ನು ತುಂಬಲು ಲಹರಿ ವಕೀಲರ ವೇದಿಕೆ ಈ ಏಕಾಂಕ ಸ್ಪರ್ಧೆಯನ್ನು ಏರ್ಪಡಿಸಿದೆ.

ADVERTISEMENT

ತಾಂತ್ರಿಕ ವರ್ಗದಲ್ಲಿ ವಕೀಲರಲ್ಲದವರೂ ಇರುತ್ತಾರೆ. ಆದರೆ ವೇದಿಕೆ ಮೇಲೆ ವಕೀಲರಿಗಷ್ಟೇ ಅವಕಾಶ. ಅಂದರೆ ನಾಟಕದ ನಿರ್ದೇಶನ, ರಚನೆ, ವಿನ್ಯಾಸ ಸೇರಿದಂತೆ ಇನ್ನಿತರ ಜವಾಬ್ದಾರಿಗಳನ್ನು ಯಾರಾದರೂ ವಹಿಸಿಕೊಳ್ಳಬಹುದು. ಆದರೆ ನಟನೆ ಮಾತ್ರ ವಕೀಲರಿಗಷ್ಟೇ ಸೀಮಿತ.

‘ಹಿಂದೆ ಯಾವುದೇ ಸ್ಪರ್ಧೆಗಳಲ್ಲಿ ಅಥವಾ ನಾಟಕೋತ್ಸವಗಳಲ್ಲಿ ಪ್ರದರ್ಶನ ಕಾಣದ ಹೊಚ್ಚ ಹೊಸ ನಾಟಕಗಳನ್ನಷ್ಟೇ ಇಲ್ಲಿ ಆಯ್ಕೆ ಮಾಡಲಾಗಿದೆ. ನೀನಾಸಂ, ರಂಗಾಯಣ, ರಂಗಶಾಲೆ, ರಾಷ್ಟ್ರೀಯ ನಾಟಕ ಶಾಲೆಮ ಸಾಣೇಹಳ್ಳಿ ರಂಗಪ್ರಯೋಗ ಶಾಲೆಯಂತಹ ರಂಗ ಸಂಸ್ಥೆಗಳಲ್ಲಿ ತರಬೇತಿ ಹೊಂದಿದ ರಂಗಕರ್ಮಿಗಳು ನಿರ್ದೇಶನದ ಹೊಣೆ ಹೊತ್ತಿದ್ದಾರೆ’ ಎನ್ನುವುದು ವೇದಿಕೆಯ ಸಂಚಾಲಕ ಶ್ರೀಕಾಂತ ಪಾಟೀಲ ಅವರ ವಿವರಣೆ.

‘ವಕೀಲಿ ವೃತ್ತಿಯಲ್ಲಿ ಆ್ಯಕ್ಟ್‌ ಆಫ್‌ ಅಡ್ವಕೆಸಿ ಎನ್ನುವ ಪರಿಭಾಷೆ ಇದೆ. ಅಂದರೆ ವಕೀಲಿ ವೃತ್ತಿಯೂ ಒಂದು ಕಲೆ. ಮಾತಿನ ಕಲೆಗೆ ಇಲ್ಲಿ ಹೆಚ್ಚಿನ ಬೆಲೆ ಇದೆ. ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ, ಸರಿಯಾದ ಕ್ರಮದಲ್ಲಿ ಪ್ರಾಮಾಣಿಕವಾಗಿ ನಮ್ಮ ಸಂಭಾಷಣೆಯನ್ನು ನಾವು ತಲುಪಿಸಬೇಕಾಗುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಏಕಾಂಕ ನಾಟಕ ಸ್ಪರ್ಧೆಯನ್ನು ಏರ್ಪಡಿಸಿದ್ದೇವೆ’ ಎನ್ನುತ್ತಾರೆ ಅವರು.

ಕಳೆದ ಮೂರು ದಶಕಗಳಿಂದ ವಕೀಲರಿಗಾಗಿ ಕಾನೂನು, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಲಹರಿ ವೇದಿಕೆಗೆ ಇದು ಮೊದಲ ರಂಗಭೂಮಿ ಪ್ರಯೋಗ. ವಕೀಲರಿಗಾಗಿ ರಸಪ್ರಶ್ನೆ, ಚರ್ಚಾಸ್ಪರ್ಧೆ, ಅಣಕು ನ್ಯಾಯಾಲಯ, ಮಾದರಿ ಸಂಸತ್ತು, ಸಂವಾದ, ತರಬೇತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವ ವೇದಿಕೆಯಲ್ಲಿ ಇದೇ ಮೊದಲ ಬಾರಿಗೆ ವಕೀಲರು ಬಣ್ಣ ಹಚ್ಚಲಿದ್ದಾರೆ. ಭಾಗವಹಿಸಲಿರುವ ತಂಡಗಳಿಗೂ ಇದೇ ಮೊದಲ ರಂಗಪ್ರಯೋಗ.

ಮಾಹಿತಿಗೆ–99456 77944

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.