ADVERTISEMENT

ಕೌತುಕಮಯ ಚೌಕಟ್ಟಿನಲ್ಲಿ ಸಂಸ್ಕೃತಿಯ ಗುಣಗಾನ: 'ನಟರಾಜ' ನಾಟಕ ಮನಮುಟ್ಟಿದ ಪ್ರಯೋಗ

ಪ್ರಜಾವಾಣಿ ವಿಶೇಷ
Published 23 ಜೂನ್ 2024, 14:10 IST
Last Updated 23 ಜೂನ್ 2024, 14:10 IST
   

ಅದೊಂದು ಅಪೂರ್ವ ರಂಗ ಪ್ರಸಂಗ ವಾತಾವರಣ. ರಂಗಾಭಿಮಾನಿಗಳು ಬಹಳ ಕುತೂಹಲದಿಂದ ರಂಗ ಪ್ರದರ್ಶನಕ್ಕಾಗಿ ಆತುರ ಕಾತುರದಿಂದ ನಿರೀಕ್ಷಿಸುತ್ತಿದ್ದ ನಾಟಕವನ್ನು ಕಲ್ಯಾಣ ನಗರಿ ಸಾಂಸ್ಕೃತಿಕ ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ರವೀಂದ್ರ ಕಲಾಕ್ಷೇತ್ರದಲ್ಲಿ ಹೆಸರಾಂತ ಕಲಾ ಸಂಸ್ಥೆ ಪಂಪ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ತನ್ನ 18ನೇ ವಾರ್ಷಿಕೋತ್ಸವದ ಪ್ರಯುಕ್ತ 'ನಟರಾಜ" ಎಂಬ ಹೊಸ ನಾಟಕವನ್ನು ಪ್ರಯೋಗಿಸಿತು:

ಅಭಿಮಾನಿ ಪ್ರೇಕ್ಷಕರು ಮನ ತಣಿಯುವಂತೆ ಸಂತೃಪ್ತಗೊಂಡ ವಿಶಿಷ್ಟ ದಾಖಲಾತಿ ಪ್ರದರ್ಶನವಾಗಿ ನಾಟಕ ಮೂಡಿ ಬಂದಿತು.ನಾಟಕವು ಕೌತುಕಮಯ ಕಥಾವಸ್ತುವಾದರೂ ಸಮಾಜದ ಪ್ರಚಲಿತ ವಿದ್ಯಮಾನಗಳ ಕೇಂದ್ರೀಕರಿಸಿ ಚಿತ್ತಹರಿಸುವಂತೆ ಮಾಡಿದ್ದಿತು.

ಅನೇಕ ಸಮಸ್ಯೆಗಳತ್ತ ಬೊಟ್ಟು ಮಾಡಿ ಪರಿಹಾರೋಪಾದಿಯ ದಾರಿಯಲ್ಲಿ ದಿಟ್ಟ ನಿರ್ದಿಷ್ಟ ಹೆಜ್ಜೆಗಳನ್ನು ಸೂಚಿಸಿ ವಿಕೃತ ಸಾಮುದಾಯಿಕ ಸಮಕಾಲೀನ ರಾಜಕೀಯ, ಆಡಳಿತಾತ್ಮಕ, ಬೋಧನಾತ್ಮಕ ಹಾಗೂ ಪ್ರಚೋದನಾತ್ಮಕ ವ್ಯವಸ್ಥೆಗಳ ಸ್ಥಿತ್ಯಂತರಗಳ ನಡುವೆ ಮೂರ್ತಗೊಂಡ ಅನೇಕ ಸಂಗತಿ-ವಿಸಂಗತಿಗಳತ್ತ ಗಮನ ಸೆಳೆಯಿತು.

ADVERTISEMENT

ಕತ್ತಲೆಯಲ್ಲಿ ನ್ಯಾಯಾಧೀಶರ ದನಿಯಿಂದ ಹೊರಬೀಳುವ ತೀರ್ಪು ಪರಿಣಾಮವಾಗಿ ಎಂಬಂತೆ ಪ್ರಯೋಗವು ಪ್ರಾರಂಭಗೊಂಡು ಏರಿಳಿತ ಘಟನಾವಳಿಗಳ ಸುರುಳಿಗಳ ಮೂಲಕ ಚಲನೆ ಪಡೆಯುತ್ತದೆ. ಮುಂದುವರೆದಂತೆ ಮೂಡಿಬಂದ ವಿಚಾರಗಳ ಬೆಳಕು ನಾಟಕದ ಪ್ರತಿ ತಿರುವಿನಲ್ಲೂ ವಿಸ್ತೃತ ಗೊಳುತ್ತಾ ಹೋಗುವುದು ವಿಶೇಷ.ವರ್ತಮಾನದ ಕಾಲದಿಂದ ಮೊದಲ್ಗೊಂಡು ಭೂತಕಾಲದ ಹಿಂಬದಿಯ ಸರದಿಯವರೆಗೆ ಸಾಗುತ್ತಾ ಕ್ಷಣ ಕ್ಷಣಕ್ಕೂ ಆಳವಾದ ಕುತೂಹಲ ಕಣ್ದೆರೆಸಿತು. ಪ್ರೇಕ್ಷಕರ ಮನಸ್ಸನ್ನು ಕೌತುಕದ ಅಲೆಗಳತ್ತ ಕೊಂಡೊಯ್ದಿತು.

ಕಥಾನಾಯಕ ರಾಜುವಿನ ಊರಿನ ಪ್ರವೇಶದೊಂದಿಗೆ ಕಥಾನಕವನ್ನು ಹಲವು ತಿರುವು ಅರಿವುಗಳನ್ನು ತೆರೆದಿಟ್ಟಿತು. ಓರ್ವ ಗುರುವಿನ ತೃಣ ಮೂಲದಿಂದ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳವರೆವಿಗೂ ಕಥಾ ಹಂದರದ ವಿವರ ಹರಿದಿದ್ದಿತು. ಜೀವನ ಮೌಲ್ಯಗಳ ಅಂತರಾಳವನ್ನು ಭೇದಿಸಿತು. ಮಂತ್ರಿ ಮಾನೇಶಯ್ಯನ ರಾಜಕಾರಣ ಮತ್ತು ಕಲಾವಿದ ರಾಜು ಪಾತ್ರಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಾಗುವ ಪರಿಯ ಪರಿಣಾಮವು ಸೈದ್ಧಾಂತಿಕ ಸಂಘರ್ಷಗಳ ನಡುವೆಯೇ ಪುಟಿದೇಳುವ ರಾದ್ಧಾಂತಗಳು ಹಾಗೂ ವಿಷಯಗಳ ತಾಕಲಾಟಗಳು ಕಥಾನಕದ ಸೂಕ್ಷ್ಮತೆಯನ್ನು ಅನಾವರಣಗೊಳಿಸಿದವು.

‘ಪ್ರಜಾಪ್ರಭುತ್ವ’ವ್ಯವಸ್ಥೆಯಲ್ಲಿ ಜಯಕಾರ ಕೂಗೋದು ದುರ್ಬಲ ಮನಸ್ಥಿತಿ, ಕೈಕಟ್ಟಿ ನಿಲ್ಲೋದು ಗುಲಾಮಗಿರಿ, ತಲೆ ಎತ್ತಿ ನಿಲ್ಲೋದು ಸ್ವಾಭಿಮಾನ" ಇದು ರಾಜ ಧರ್ಮ, ಗುರು ಪಾಂಡುರಂಗರಾಯ ರಿಂದ ಕಲಿತ ಸಿದ್ದಾಂತ ಎಂಬ ರಾಜು ಪಾತ್ರಧಾರಿಯ ಮಾತುಗಳು ಜಾಗೃತಿಯನ್ನು ಮೂಡಿಸುತ್ತದೆ.

ಪ್ರಸ್ತುತ ರಾಜಕೀಯ ಸನ್ನಿವೇಶಗಳಲ್ಲಿನ ಏರಿಳಿತಗಳು ಮತ್ತು ಹೊಯ್ದಾಟ, ತೊಯ್ದಾಟಗಳ ಬಿಡುಬೀಸಿನ ವಿದ್ಯಾಮಾನ ಅಲ್ಲದೆ ಧರ್ಮಾಧರ್ಮಗಳ ತಾಕಲಾಟದ ಸೆಳೆತವು ಪ್ರೇಕ್ಷಕ ಗಣದಲ್ಲಿ ಅಗಣಿತ ಕುತೂಹಲದೊಂದಿಗೆ ನೆಮ್ಮದಿಯತ್ತಲಿನ ಆಸೆ, ಆಕಾಂಕ್ಷೆಗಳನ್ನು ಪ್ರಚುರಪಡಿಸಿತು.

ತತ್ಪರಿಣಾಮವಾಗಿ ಆಗಂತುಕ ರಾಜು ಊರನ್ನು ಪ್ರವೇಶಿಸಿ ತನ್ನ ಮೇಲೆ ಬಂದೆರಗಿದ ದುರ್ಬರ ಬರ್ಬರ ಕೊಲೆ ಆಪಾದನೆಯನ್ನು ಗಂಭೀರ ವಿಚಾರ ಧಾರೆಯ ಸಾವಧಾನವಾಗಿ ಪ್ರಭಾವ ಯುತವಾಗಿ ತಿಳಿಸುತ್ತಾ ಹೋಗುವನು.

ರಾಜಕಾರಣ ಮತ್ತು ಆಡಳಿತ ವರ್ಗಗಳ ನಡುವೆಯ ಸಡಿಲಿಸಿ ಬಿಡಿಸಲಾಗದ ಬೆಸುಗೆ ಹಾಗೂ ಬಂಡವಾಳಶಾಹಿಗಳ ಅವಿರತ ಪ್ರಭಾವ ಮುಂತಾದ ಸಾಮಾಜಿಕ ದುಸ್ತರತೆಯನ್ನು ಪ್ರಯೋಗ ತೆರೆದಿಡುತ್ತದೆ.

‘ಧರ್ಮೋ ಹ್ಯಧರ್ಮೋಪಹತಃ ಶಾಸ್ತಾರಂ ಹಂತ್ಯುಪೇಕ್ಷಿತಃ’ಎಂಬ ಚಾಣಕ್ಯ ವಾಣಿ ಮಾರ್ದನಿಸುತ್ತದೆ. ನಾಟಕದ ಉದ್ದಕ್ಕೂ ಈ ರೀತಿಯ ಅನೇಕ ಸಂಭಾಷಣಾ ಸಾಂಗತ್ಯವು ಪ್ರೇಕ್ಷಕರ ಅಂತರಂಗವನ್ನು ಮುಟ್ಟುತ್ತದೆ.

ಇಡೀ ನಾಟಕವನ್ನು ನಿರ್ದೇಶಕರು ಪ್ಲಾಶ್ ಬ್ಯಾಕ್ ತಂತ್ರ ವಿಧಾನ ದಲ್ಲಿ ಕಟ್ಟಿ ಕೊಟ್ಟಿದ್ದಾರೆ. ಅಂತೆಯೇ ಪ್ರಯೋಗವು ಪ್ರಾರಂಭದಿಂದ ಕೊನೆಯವರೆಗೆ ಕುತೂಹಲ ಮೂಡಿಸುತ್ತದೆ. ದೃಶ್ಯ ವೈವಿಧ್ಯತೆಯಿಂದ ಸಾಫಲ್ಯಗೊಳ್ಳುತ್ತದೆ.

ಪಾತ್ರ ವರ್ಗದಲ್ಲಿ ರಾಜಕಾರಣಿಯಾಗಿ ಮಂತ್ರಿ ಮಾನೇಶಯ್ಯ (ಜಿ.ಸಂತೋಷ್) ಪರಿವರ್ತನೆಗೊಳ್ಳುವ ಜಿಲ್ಲಾಧಿಕಾರಿ (ಶಂಕರ ಭಟ್) ಆದರ್ಶ ಶಿಕ್ಷಕ ಪಾಂಡುರಂಗರಾವ್ (ಪುರುಶೋತ್ತಮ ಕಾಚೋಹಳ್ಳಿ) ರಾಜಕಾರಣಿ ಚೇಲಾಗಳಾಗಿ ಸಿಂಗಾರಿ(ಸದಾ ಬುದ್ಧಿ) ಬಂಗಾರಿ(ರಾಕೇಶ್) ಪ್ರಹ್ಲಾದ (ಮಾಸ್ಟರ್ ಯದುವೀರ್) ನರ್ಸ್ (ಲಲಿತಾ ಶ್ರೀಧರ್). ಪಾತ್ರಗಳ ಗುಣಧರ್ಮ ಅರಿತು ಅಭಿನಯಿಸಿದ್ದಾರೆ. ಗ್ರಾಮಸ್ಥರಾಗಿ ಮೂರ್ತಿ, ರತ್ನ, ಸುಮಿತ್ರಾ, ಮುರುಳಿ, ಜಾಹ್ನವಿ, ತಿಪ್ಪೇಸ್ವಾಮಿ ಗಮನ ಸೆಳೆಯುತ್ತಾರೆ.

ಚೊಚ್ಚಲ ನಾಟಕ ರಚನೆ ಮಾಡಿರುವ ಆರ್. ವೆಂಕಟರಾಜು ಭರವಸೆಯ ನಾಟಕಕಾರರಾಗಿ, ನಿರ್ದೇಶಕರಾಗಿಯೂ ಮೇಲುಗೈ ಸಾಧಿಸಿದ್ದಾರೆ. ರಾಜು ಪಾತ್ರದಲ್ಲಿ ಅವರ ಮಾಗಿದ ಮೌನಾಭಿನಯ, ಹಾಗೂ ವಾಚಿಕಾಭಿನಯ ಅವರಲ್ಲಿರುವ ಕಲಾ ಪ್ರೌಢಿಮೆಯನ್ನು ಸಾಬೀತು ಪಡಿಸಿತು. ಗಜಾನನಟಿ. ನಾಯಕ್ ಅವರ ರಂಗ ಸಂಗೀತ ನಾಟಕಕ್ಕೆ ಬೇಕಾದ ಸಮಗತಿಯನ್ನು ಪೋಷಿಸಿತು.

ಪರಿಣಾಮಕಾರಿ ಬೆಳಕಿನ ನಿರ್ವಹಣೆ ಮಾಡಿದವರು ಎಸ್.ಮಹದೇವ ಸ್ವಾಮಿ. ಪ್ರಯೋಗ ಪೂರಕ ಪ್ರಸಾದನ ನ್ಯಾಷನಲ್ ದೇವು, ಕಲೆ ಶಿವ ನಾಯಕದೊರೆ, ರಂಗ ಪರಿಕರ ಕೇಶವ, ರಂಗ ನಿರ್ವಹಣೆಯನ್ನು ದಕ್ಷತೆಯಿಂದ ನಿರ್ವಹಿಸಿದವರು ಇತಿಹಾಸ ಶಂಕರ. ಈ ನಾಟಕವು ಕನ್ನಡ ರಂಗಭೂಮಿಯಲ್ಲಿ ಹೊಸ ನಾಟಕವು ರಚನೆಗೊಳ್ಳುತ್ತಿಲ್ಲ ಎಂಬ ಕೊರತೆಯನ್ನು ತುಸು ನೀಗಿ, ಪ್ರಯೋಗ ಸಾಕ್ಷಿಯಾಗಿದೆ. "ನಟರಾಜ" ಹಲವು ಪ್ರಯೋಗಗಳನ್ನು ಕಾಣುವ ತೀವ್ರ ಅವಶ್ಯಕತೆಯನ್ನು ಮನಗಾಣಿಸಿದೆ.

–ಡಾ. ಹೆಚ್.ಎ.ಪಾರ್ಶ್ವನಾಥ್, ರಂಗ ವಿಮರ್ಶಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.