ಚಿತ್ರದುರ್ಗ ಜಿಲ್ಲೆ ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಆವರಣದಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವವು ಹಲವು ಕಾರಣಗಳಿಂದ ಗಮನ ಸೆಳೆಯಿತು. ಇದು ಉತ್ತರ–ದಕ್ಷಿಣ ಕರ್ನಾಟಕದ ಬೆಸುಗೆಯಾಗಿಯೂ ಕಂಡಬಂದಿತು.
ಕಾರ್ತೀಕ ಮಾಸದ ಚುಮುಚುಮು ಚಳಿಯ ನಡುವೆಯೂ ಸಾಣೇಹಳ್ಳಿಯ ಶಿವಕುಮಾರ ಬಯಲು ರಂಗಮಂದಿರ ಪ್ರೇಕ್ಷಕರಿಂದ ತುಂಬಿ ತುಳುಕಿತ್ತು. ಬಸ್ ಸಂಚಾರವೇ ಇಲ್ಲದ ಈ ಪುಟ್ಟ ಹಳ್ಳಿ ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳ ರಂಗಪ್ರೇಮಿಗಳನ್ನು ತನ್ನತ್ತ ಸೆಳೆದುಕೊಂಡಿತ್ತು. ಉತ್ತರ–ದಕ್ಷಿಣದ ನಡುವಣ ಬೆಸುಗೆಯಾಗಿರುವ ತರಳಬಾಳು ಶಾಖಾ ಮಠದ ಆವರಣ ರಂಗಮಂಚವಾಗಿ ಅನಾವರಣಗೊಂಡಿತ್ತು.
ಶಿವಕುಮಾರ ಕಲಾಸಂಘದ ವತಿಯಿಂದ ನ.4ರಿಂದ ನ.9ರವರೆಗೆ ನಡೆದ ರಾಷ್ಟ್ರೀಯ ನಾಟಕೋತ್ಸವ ಹಲವು ಹೊಸತುಗಳಿಗೆ ಸಾಕ್ಷಿಯಾಯಿತು. ಸ್ಥಳೀಯ ಗ್ರಾಮಸ್ಥರು, ರೈತರು, ಮಠದ ಭಕ್ತರ ಜೊತೆಗೆ ರಾಜ್ಯದ ವಿವಿಧೆಡೆಯಿಂದ, ಹೊರರಾಜ್ಯಗಳಿಂದ ಬಂದಿದ್ದ ರಂಗಪ್ರೇಮಿಗಳು, ಸಾಹಿತಿಗಳು, ಕಲಾವಿದರು, ವಿದ್ಯಾರ್ಥಿಗಳು ಸುಂದರ ಪ್ರಕೃತಿಯ ಮಡಿಲಲ್ಲಿ ರಂಗಾನುಭೂತಿ ಪಡೆದರು.
ಮಠದ ಪ್ರವಾಸಿ ಮಂದಿರ, ಹಾಸ್ಟೆಲ್‌ಗಳಲ್ಲಿ ತಂಗಿದ್ದ ರಂಗಪ್ರಿಯರು ವಾರಪೂರ್ತಿ ನಾಟಕ ವೀಕ್ಷಣೆ ಜೊತೆಗೆ ಮಠದ ದಾಸೋಹ ಸವಿಯನ್ನೂ ಸವಿದರು. ನಾಟಕಗಳಷ್ಟೇ ಅಲ್ಲ, ಸಾಮೂಹಿಕ ಪ್ರಾರ್ಥನೆ, ಯೋಗ, ಧ್ಯಾನ, ವಚನ ಗಾಯನ, ಜನಪದ ಸಂಭ್ರಮ, ನೃತ್ಯ ರೂಪಕ, ವಿಚಾರ ಸಂಕಿರಣ, ಕಮ್ಮಟ ಚಿಂತನ–ಮಂಥನಗಳು ಎಲ್ಲರನ್ನೂ ಆವರಿಕೊಂಡವು.
ಶಿವ ಸಂಚಾರ ರೆಪರ್ಟರಿಯ ಮೂರು ವಿಶಿಷ್ಟ ನಾಟಕಗಳೂ ಸೇರಿದಂತೆ ಹೊರಗಿನಿಂದ ಬಂದಿದ್ದ ಒಟ್ಟು ಹನ್ನೊಂದು ರಂಗ ಪ್ರಯೋಗಗಳು ಪ್ರೇಕ್ಷಕರನ್ನು ಚಿಂತನೆಗೆ ಹಚ್ಚಿದವು, ವರ್ತಮಾನಕ್ಕೆ ಕನ್ನಡಿ ಹಿಡಿದವು, ಸಾಮರಸ್ಯದ ಪಾಠ ಹೇಳಿದವು. ಮೌಲ್ಯಗಳು ಅವನತಿಯತ್ತ ಸಾಗುತ್ತಿವೆ ಎಂಬ ಆತಂಕದ ಹೊತ್ತಿನಲ್ಲಿ ಒಳಿತಿನ ಮರುಹುಟ್ಟಿನ ಭರವಸೆ ಮೂಡಿಸಿದವು.
ನಾಟಕೋತ್ಸವದ ಪರದೆ ತೆರೆದುಕೊಳ್ಳುತ್ತಿದ್ದಂತೆ ಶಿವ ಸಂಚಾರದ ಕಲಾವಿದರು ಅಭಿನಯಿಸಿದ ‘ತುಲಾಭಾರ’ ಕತ್ತಲು ಕವಿದಿರುವ ಸಮಾಜದಲ್ಲಿ ಜ್ಞಾನದ ದೀವಿಗೆ ಹಚ್ಚುವ ಶಿಕ್ಷಕನೊಬ್ಬನ ಸೇವೆಯ ಸಂಗತಿ ಸಾರಿತು. ಈಗಂತೂ ಗುರು–ಶಿಷ್ಯರ ಸಮ್ಮಿಲನ ಸಮಾರಂಭಗಳು ಸಾಮಾನ್ಯವಾಗುತ್ತಿವೆ. ಶಿಕ್ಷಣ ಕೊಟ್ಟು ಬಡವರ ಬದುಕು ಬದಲಿಸಿದ ಗುರು ‘ಮೈನುದ್ದೀನ್ ಖಾಜಿಗೆ ತುಲಾಭಾರ ಸೇವೆ’ ಎಂಬ ಪರಿಕಲ್ಪನೆಯೇ ಸಾಮರಸ್ಯದ ಸಂದೇಶ ಸಾರುವಲ್ಲಿ ಯಶಸ್ವಿಯಾಯಿತು. ದೇವದಾಸಿಯರಿಗೆ ರಾತ್ರಿ ಪಾಠ, ವಯಸ್ಕರ ಶಿಕ್ಷಣ ಮುಂತಾದ ಚಿತ್ರಣಗಳು ಬದಲಾವಣೆಯ ಹಾದಿ ತೋರಿದವು. ಆಕಾಶವಾಣಿ ನಾಟಕವಾಗಿ ಪ್ರಸಿದ್ಧಿ ಪಡೆದಿದ್ದ ಬಿ.ಆರ್.ಪೊಲೀಸ್ ಪಾಟೀಲ್ ಅವರ ‘ತುಲಾಭಾರ’ ಈಗ ವಿಶ್ವೇಶ್ವರಿ ಹಿರೇಮಠ ಅವರಿಂದ ರಂಗರೂಪ ಪಡೆದು ಪ್ರೇಕ್ಷಕರಿಗೆ ಆಪ್ತ ಎನಿಸಿತು.
ವರನಟ ಡಾ.ರಾಜ್‌ಕುಮಾರ್ ಅಭಿನಯದ ‘ಬಂಗಾರದ ಮನುಷ್ಯ’ ಸಿನಿಮಾ ಆ ದಿನಗಳಲ್ಲಿ ಸಂಚನಲವನ್ನೇ ಸೃಷ್ಟಿಸಿತ್ತು. ದೇಶದ ಬೆನ್ನೆಲುಬು ಕೃಷಿಕನಿಗೆ ದೈವೀಕ ರೂಪ ಕೊಟ್ಟ ಈ ಸಿನಿಮಾ ಸಮಾಜದಲ್ಲಿ ಹಲವು ಬದಲಾವಣೆಗೆ ಕಾರಣವಾಗಿತ್ತು. ಸಿನಿಮಾಕ್ಕೆ ಹೊರತಾಗಿ ಟಿ.ಕೆ.ರಾಮರಾವ್ ಅವರ ಕಾಬಂಬರಿ ಆಧಾರಿತ ‘ಬಂಗಾರದ ಮನುಷ್ಯ’ ರಂಗರೂಪ ನಾಟಕೋತ್ಸವದಲ್ಲಿ ಭಿನ್ನವಾಗಿ ಕಂಡಿತು. ಆದರೂ ಗ್ರಾಮೀಣ ರೈತರು, ಪ್ರೇಕ್ಷಕರು ಸಿನಿಮಾ ನೆರಳಿನಲ್ಲೇ ನಾಟಕ ನೋಡಿದರು.
ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪೀಠಾಧಿಪತಿಯಷ್ಟೇ ಅಲ್ಲ, ರಂಗಕರ್ಮಿಯೂ ಹೌದು. ಅನ್ನ, ಅಕ್ಷರ ದಾಸೋಹದ ಜೊತೆಯಲ್ಲೇ ರಂಗ ಕಾಯಕದಲ್ಲೂ ತೊಡಗಿಸಿಕೊಂಡವರು. ರಾಷ್ಟ್ರೀಯ ನಾಟಕೋತ್ಸವದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ ವಿರಚಿತ ‘ಕೋಳೂರು ಕೊಡಗೂಸು’ ಹಾಗೂ ‘ಅಕ್ಕ ನಾಗಲಾಂಬಿಕೆ’ ನಾಟಕಗಳು ಪ್ರದರ್ಶನಗೊಂಡವು. ಪೌರಾಣಿಕ ಕತೆಯಾಧಾರಿತವಾದ ಎರಡೂ ನಾಟಕಗಳನ್ನು ಸ್ವಾಮೀಜಿ ವರ್ತಮಾನದ ದನಿಯಾಗಿಸಿದ್ದರು.
ಕಾಡಿದ ಕಾಲಚಕ್ರ
ಮಂಚಿಕೇರಿಯ ರಂಗಸಮೂಹ ಕಲಾವಿದರು ಪ್ರದರ್ಶಿಸಿದ ಹುಲುಗಪ್ಪ ಕಟ್ಟೀಮನಿ ನಿರ್ದೇಶನದ ‘ಕಾಲಚಕ್ರ’ ಪ್ರೇಕ್ಷಕರ ಮನಸ್ಸು ಕಲಕಿತು. ಆಧುನಿಕ ಕಾಲದ ಓಟದಲ್ಲಿ ವೃದ್ಧ ಪೋಷಕರನ್ನು ಸಲಹಲು ಮಕ್ಕಳಿಗೆ ಸಮಯವಿಲ್ಲ. ಮಕ್ಕಳು, ಮೊಮ್ಮಕ್ಕಳ ಪ್ರೀತಿಯ ಜೊತೆ ಬದುಕಬೇಕಾದ ಹಿರಿಯರು ವೃದ್ಧಾಶ್ರಮಗಳ ಗೋಡೆಗಳ ನಡುವೆ ಬಂಧಿಯಾದ ಚಿತ್ರಣ ಪ್ರಸ್ತುತ ಜೀವನ ಶೈಲಿಯ ಮೇಲೆ ಬೆಳಕು ಚೆಲ್ಲಿತು.
ಮಕ್ಕಳಿಲ್ಲದ ತಂದೆ–ತಾಯಿ ಮಗುವನ್ನು ದತ್ತು ಪಡೆಯುತ್ತಾರೆ. ಆದರೆ ‘ತಂದೆ–ತಾಯಿಯನ್ನು ಕಳೆದುಕೊಂಡ ಮಕ್ಕಳು ವೃದ್ಧರನ್ನೇಕೆ ದತ್ತು ಪಡೆಯಬಾರದು’ ಎಂಬ ಪ್ರಶ್ನೆಯ ಸುತ್ತ ನಾಟಕ ಪ್ರೇಕ್ಷಕರ ಮನಸೂರೆಗೊಂಡಿತು. ರಕ್ತ ಸಂಬಂಧಕ್ಕಿಂತಲೂ ಮಾನವ ಸಂಬಂಧ ಬಲು ದೊಡ್ಡದೆಂಬ ಸಂದೇಶ ಸಾರಿತು.
ಭಾಷೆಗಿಂತ ಭಾವನೆ ದೊಡ್ಡದು ಎಂಬ ಧ್ವನಿ ತಮಿಳಿನ ‘ನಡಪಾವಾಡೈ’ ರಂಗಪ್ರಯೋಗದ ಮೂಲಕ ವ್ಯಕ್ತವಾಯಿತು. ಪುದುಚೆರಿ ಕೇಂದ್ರಾಡಳಿತ ಪ್ರದೇಶದ ಹಳ್ಳಿಯೊಂದರಲ್ಲಿ ಹಿರಿಯರು ನಿಧನರಾದಾಗ ಮಹಿಳೆಯರೇ ಅವರ ಅಂತ್ಯಸಂಸ್ಕಾರ, ಅಪರ ಕರ್ಮಾದಿಗಳನ್ನು ನೆರವೇರಿಸುತ್ತಾರೆ. ವಾಸ್ತವದ ಕತೆಯೊಂದಿಗೆ ಸಂಶೋಧನೆಯ ಮೂಲಕ ಕಟ್ಟಲಾದ ಈ ನಾಟಕ ಪ್ರೇಕ್ಷಕರನ್ನು ಸಮಕಾಲೀನ ಸಾಮಾಜಿಕ ಸಂಪ್ರದಾಯಗಳತ್ತ ಕೊಂಡೊಯ್ಯುತ್ತದೆ. ಇಂದಿಗೂ ಸಮಾಜದಲ್ಲಿ ಜೀವಂತಿಕೆಯಾಗಿರುವ ಲಿಂಗ ಸಂವೇದನೆಯ ಪ್ರತಿರೂಪವಾಗಿ ನಿಲ್ಲುತ್ತದೆ. ತಮಿಳಿನ ನಾಟಕವಾದರೂ ಅಭಿನಯದ ಮೂಲಕವೇ ‘ವೆಲಿಪ್ಪಡೈ ಥಿಯೇಟರ್ ಮೂವ್‌ಮೆಂಟ್’ ಕಲಾವಿದರು ಪ್ರೇಕ್ಷಕರಲ್ಲಿ ಹೊಸ ಭಾವ ಅರಳಿಸುವಲ್ಲಿ ಯಶಸ್ವಿಯಾದರು.
ಶ್ರೀಕೃಷ್ಣ ಆಲನಹಳ್ಳಿ ಅವರ ಕಾದಂಬರಿಯಾಧಾರಿತ ‘ಪರಸಂಗದ ಗೆಂಡೆತಿಮ್ಮ’ ನಾಟಕ ಸಿನಿಮಾ ನೆರಳಿನಲ್ಲೇ ಸಾಗಿದರೂ ಬೆಂಗಳೂರಿನ ‘ರೂಪಾಂತರ’ ತಂಡದ ಕಲಾವಿದರ ಉತ್ಸಾಹದ ಅಭಿನಯ ಪ್ರೇಕ್ಷಕರಿಗೆ ಮುದ ನೀಡಿತು. ಶಿವಕುಮಾರ ಕಲಾಸಂಘದ ಹಿರಿಯ ಕಲಾವಿದರು ಅಭಿನಯಿಸಿದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಜೀವನಾಧಾರಿತ ‘ಮಹಾಬೆಳಗು’ ನಾಟಕ ಪ್ರೇಕ್ಷಕರಲ್ಲಿ ಭಕ್ತಿ ಭಾವ ಮೂಡಿಸಿತು.
ಸತ್ಯ ಅಹಿಂಸೆ ಶಾಂತಿ ಸಹಕಾರ ತತ್ವಗಳ ಸರ್ವೋದಯ ಪರಿಕಲ್ಪನೆ ಈ ಬಾರಿ ನಾಟಕೋತ್ಸವದ ಧ್ಯೇಯವಾಗಿತ್ತು. ಬುದ್ಧ ಬಸವ ಗಾಂಧೀಜಿಯವರು ಪ್ರೀತಿ ಕರುಣೆ ಸಹೋದರತ್ವದ ಮೂಲಕ ಸರ್ವೋದಯಕ್ಕಾಗಿ ಶ್ರಮಿಸಿದ್ದಾರೆ. ಆ ಮೂಲಕ ಸಮಾಜದ ಕಟ್ಟಕಡೆಯ ಮನುಷ್ಯ ಹಾಗೂ ಎಲ್ಲಾ ಜೀವರಾಶಿಗಳಿಗೆ ಒಳಿತು ಮಾಡಿದ್ದಾರೆ. ಅದೇ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು ಎಂಬುದು ನಮ್ಮ ಆಶಯ.–ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ತರಳಬಾಳು ಶಾಖಾ ಮಠ ಸಾಣೇಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.