ADVERTISEMENT

ಶತ ಸಂಭ್ರಮದಲ್ಲಿ ‘ಪಂಪ ಭಾರತ’

ಮಂಜುಶ್ರೀ ಎಂ.ಕಡಕೋಳ
Published 27 ನವೆಂಬರ್ 2018, 19:45 IST
Last Updated 27 ನವೆಂಬರ್ 2018, 19:45 IST
‘ಪಂಪ ಭಾರತ’ ನಾಟಕದ ದೃಶ್ಯ
‘ಪಂಪ ಭಾರತ’ ನಾಟಕದ ದೃಶ್ಯ   

ಬೆಂಗಳೂರು ಸಮುದಾಯ ಪ್ರದರ್ಶಿಸುತ್ತಿರುವ ‘ಪಂಪ ಭಾರತ’ ನಾಟಕಕ್ಕೀಗ ಶತಕದ ಸಂಭ್ರಮ. 16 ವರ್ಷಗಳಿಂದ ನಿರಂತರವಾಗಿ ಪ್ರೇಕ್ಷಕರ ಮನಗೆದ್ದಿರುವ ಈ ನಾಟಕದ ಕುರಿತು ನಾಟಕಕಾರ ಡಾ.ಕೆ.ವೈ. ನಾರಾಯಣ ಸ್ವಾಮಿ ಜತೆ ಆಡಿದ ಮಾತುಕತೆಯ ಅಕ್ಷರ ರೂಪ ಇಲ್ಲಿದೆ.

* ‘ಪಂಪ ಭಾರತ’ ರಚನೆಯ ಹಿನ್ನೆಲೆಯೇನು?

ಬಹುಶಃ ಅದು 2001–02 ಇರಬಹುದು. ಮಹಾಕವಿ ಪಂಪನಿಗೆ 1,100 ವರ್ಷವಾಯಿತು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಿ.ಜಿ.ಕೃಷ್ಣಸ್ವಾಮಿ ಮತ್ತು ಕಿ.ರಂ. ನಾಗರಾಜ ಅವರು ‘ಪಂಪನ ಕಾವ್ಯದ ಜತೆಗೆ ಹೊಸ ತಲೆಮಾರು’ ಕುರಿತು ಬೆಂಗಳೂರು ವಿವಿಯ ಗಾಂಧಿಭವನದಲ್ಲಿ ಶಿಬಿರ ಆಯೋಜಿಸಿದ್ದರು. ಆ ಶಿಬಿರಕ್ಕೆ ಹಿರಿಯ ಮತ್ತು ಕಿರಿಯ ತಲೆಮಾರಿನ ರಂಗಾಸಕ್ತರನ್ನು ಆಹ್ವಾನಿಸಲಾಗಿತ್ತು. ಶಿಬಿರದ ಭಾಗವಾಗಿ ನಮಗೆ ಪಂಪನ ಕಾವ್ಯ, ಕಥೆಗಳನ್ನು ನಾಟಕರೂಪಕ್ಕೆ ತರುವಂತೆ ನಿರ್ದೇಶಿಸಲಾಗಿತ್ತು. ಸ್ವತಂತ್ರ ಕೃತಿ ರಚನೆಯ ಸ್ವಾತಂತ್ರ್ಯವನ್ನೂ ನೀಡಲಾಗಿತ್ತು. ಆಗ ಹುಟ್ಟಿದ್ದೇ ‘ಪಂಪ ಭಾರತ’ ನಾಟಕ ಕೃತಿ.

ADVERTISEMENT

* ಪಂಪನ ಬಗ್ಗೆ ನಿಮಗೇಕೆ ಅಷ್ಟೊಂದು ಮೋಹ?

ನನ್ನ ಓದಿನ ದಿನಗಳಿಂದಲೂ ಪಂಪ ನನ್ನ ಮೇಲೆ ಪ್ರಭಾವ ಬೀರಿದ ಕವಿ. ಆತನ ಕಾವ್ಯವನ್ನು ಇಷ್ಟಪಟ್ಟು ಓದುತ್ತಿದ್ದೆ. ಅದೇ ಕಾಲಕ್ಕೆ ಎಲ್. ಬಸವರಾಜು ಅವರು ಪಂಪನ ಕೃತಿಗಳನ್ನು ಹೊಸಗನ್ನಡಕ್ಕೆ ತಂದಿದ್ದರು. ಹೀಗೆ ನನ್ನೊಳಗೆ ಪಂಪ ನಿಧಾನವಾಗಿ ಬೇರುಬಿಟ್ಟಿದ್ದ. ಪಂಪ ತನ್ನ ಕಾಲಘಟ್ಟದಲ್ಲಿ ಎದುರಿಸುತ್ತಿದ್ದ ಪ್ರಶ್ನೆ ಮತ್ತು ಸಂಕಟಗಳನ್ನು ಅನೇಕ ಆಯಾಮಗಳಲ್ಲಿ ಕಥನವಾಗಿ ಮಂಡಿಸಿದ್ದಾನೆ. ಅನಂತರ ಬಂದ ಕವಿಗಳು ಮತ್ತು ಇಂದಿನ ಕವಿಗಳೂ ಪಂಪನ ಆಯಾಮಗಳಲ್ಲೇ ಮರುಶೋಧನೆ ಮಾಡುತ್ತಿದ್ದಾರೆ. ಒಂದರ್ಥದಲ್ಲಿ ಪಂಪ ಬೀಜಕವಿ. ಪಂಪನಂತೆ ನಿರಂತರವಾಗಿ ಮತ್ಯಾವ ಕವಿಯೂ ಮರುಸೃಷ್ಟಿಯಾಗಿಲ್ಲ. ತೆಲುಗು ಭಾಷೆಯ ಅಪ್ಪ, ಕನ್ನಡ ಭಾಷೆಯ ಅಮ್ಮನ ಮಗನಾಗಿದ್ದ ಪಂಪ, ಕನ್ನಡದ ಪರಿಸರಕ್ಕೆ ಬಂದು ಇಲ್ಲಿಯೇ ಬರೆದಿದ್ದು ನಮ್ಮ ಭಾಷೆಯ ಭಾಗ್ಯ.

* ನಾಟಕ ರೂಪುಗೊಂಡಿದ್ದು ಹೇಗೆ?

‘ಪಂಪ ಭಾರತ’ ನಾಟಕ ಕೃತಿಯಾಗಿ ರೂಪುಗೊಳ್ಳಲು ನನಗೆ ವಿಶೇಷವಾದ ಅನುಕೂಲವಿತ್ತು. 1987ರಿಂದ ನಾನು ‘ಸಮುದಾಯ’ ನಾಟಕ ತಂಡದಲ್ಲಿ ನಟನಾಗಿ, ನೇಪಥ್ಯ ಕಲಾವಿದನಾಗಿ ಕೆಲಸ ಮಾಡುತ್ತಿದ್ದೆ. ಅನೇಕ ಬೀದಿನಾಟಕಗಳನ್ನೂ ಬರೆದಿದ್ದೆ. ಸಿ.ಬಸವಲಿಂಗಯ್ಯ ಅವರ ಜತೆಗೆ ಕೆಲಸ ಮಾಡಿದ ಅನುಭವ, ರಂಗಾಯಣದ ಒಡನಾಟವೂ ಇತ್ತು. ಹೀಗೆ ನಾಟಕದ ಹೊರಗೆ–ಒಳಗಿನ ಬಗ್ಗೆ ಪೂರ್ವಸಿದ್ಧತೆಯಿತ್ತು. ಇವೆಲ್ಲವೂ ನಾಟಕ ಬರೆಯುವಾಗ ತುಂಬಾ ಪ್ರಯೋಜನಕ್ಕೆ ಬಂತು.

* ‍‘ಪಂಪ ಭಾರತ’ದ ಪಾತ್ರಗಳು, ವಿವಿಧ ಕಾಲಘಟ್ಟಗಳು ಸೃಷ್ಟಿಯಾದ ಕುರಿತು ಹೇಳಿ...

ಪಂಪ ಅವಶ್ಯಕತೆ ಇಲ್ಲದಿದ್ದರೂ ಅನೇಕ ಕಡೆ ತನ್ನ ಕಾವ್ಯದಲ್ಲಿ ಕರ್ಣನನ್ನು ತರುತ್ತಿದ್ದ ಬಗೆ ಮನಸಿಗೆ ತೀವ್ರವಾಗಿ ತಟ್ಟಿತ್ತು. ಪಂಪ–ಕರ್ಣನಿಗೆ ಇದ್ದ ಸಂಬಂಧ ಅರಿಕೇಸರಿ–ಪಂಪನಿಗೂ ಇತ್ತು. ಅಷ್ಟೊಂದು ಸ್ನೇಹವಿದ್ದರೂ ಅವರಿಬ್ಬರ ನಡುವೆ ಬಿರುಕಿತ್ತು. ಇದೆಲ್ಲಾ ನನಗೆ ತೀವ್ರವಾಗಿ ಕಾಡಿದ ಸಂಗತಿಗಳಾಗಿದ್ದವು. ಹಾಗಾಗಿ, ಪಂಪನನ್ನೇ ಪಾತ್ರವನ್ನಾಗಿ ಮಾಡಿ, ಅವನ ಕಾಲದ ಒಡನಾಡಿಗಳು, ಅವನು ಸೃಷ್ಟಿಸಿದ ಪಾತ್ರಗಳನ್ನು ಒಂದೇ ವೇದಿಕೆಯ ಮೇಲೆ ತರಬೇಕೆಂಬ ಆಲೋಚನೆ ಬಂತು. ನಾಲ್ಕು ರೀತಿಯ ಕಾಲಘಟ್ಟಗಳನ್ನು ಒಟ್ಟಿಗೆ ತರುವುದು ಕಷ್ಟ. ಇದನ್ನು ಸವಾಲಾಗಿ ಸ್ವೀಕರಿಸಿ ನಾಟಕ ಬರೆದೆ.

* ನಾಟಕದ ಕಥೆ ಇಂದಿಗೂ ಪ್ರಸ್ತುತವಾಗುವಂತಿದೆ...

ಹೌದು. ‘ಪಂಪ ಭಾರತ’ದ ಯಶಸ್ಸಿರುವುದೇ ಅದರ ಸಮಕಾಲೀನ ಸಂಗತಿಗಳಲ್ಲಿ. ನಾಟಕ ಬರೆದಾಗ ಅಂದರೆ 2001–02ರಲ್ಲಿ ತಮಿಳುನಾಡಿನಲ್ಲಿ ಜಯಲಲಿತಾ ಸರ್ಕಾರ, ಕೇಂದ್ರದಲ್ಲಿ ವಾಜಪೇಯಿ ಸರ್ಕಾರವಿತ್ತು. ಬಲಪಂಥದ ಚರಿತ್ರೆ ಮತ್ತು ಸಂಸ್ಕೃತಿಯನ್ನು ನೋಡುವ ದೃಷ್ಟಿಕೋನ ಸಾರ್ವಜನಿಕ ಚರ್ಚೆಗಳಲ್ಲಿ ಬಲಗೊಳ್ಳುತ್ತಿದ್ದ ಕಾಲವದು. ಅದೇ ಸಮಯಕ್ಕೆ ಮತಾಂತರ ನಿಷೇಧ ಕುರಿತು ಜಯಲಲಿತಾ ಸರ್ಕಾರ ಆದೇಶ ಹೊರಡಿಸಿತ್ತು. ಇದುವೇ ಸ್ಫೂರ್ತಿಯಾಯಿತು. ಮತಾಂತರಗೊಂಡಿದ್ದ ಪಂಪ ವ್ಯಕ್ತಿಯಾಗಿ ಆ ಕಾಲದಲ್ಲಿ ಅನುಭವಿಸಿದ ಸಂಕಟಗಳು ದೊಡ್ಡದು. ಇಂದಿನ ಮತಾಂತರದ ಪ್ರಶ್ನೆಯೂ ಇಂಥ ತ್ರಿಶಂಕು ಸಂಕಟದಲ್ಲಿದೆ. ಅದುವೇ ನಾಟಕದಲ್ಲಿದೆ. ‘ಪಂಪ ಭಾರತ’ ಪಂಪ ಬರೆದ ಭಾರತದ ನಕಲು ಅಲ್ಲ. ಕವಿಯಾಗಿ ಪಂಪ ಅನುಭವಿಸಿದ ಆ ಕಾಲದ ಸಂಕಟ, ಇಂದಿನ ಸಾಮಾನ್ಯ ಮನುಷ್ಯ ಅನುಭವಿಸುತ್ತಿರುವ ಸಂಕಟಗಳನ್ನು ಶೋಧಿಸುವುದೇ ಈ ನಾಟಕದ ಉದ್ದೇಶ.

* ‘ಪಂಪ ಭಾರತ’ ನಾಟಕ 100ನೇ ಪ್ರಯೋಗ ಕಾಣುತ್ತಿದೆ. ಹೇಗನ್ನಿಸುತ್ತಿದೆ?

15 ವರ್ಷಗಳ ನಂತರವೂ ಕನ್ನಡದ ಓದುಗರು ಮತ್ತು ಪ್ರೇಕ್ಷಕರ ನಡುವೆ ‘ಪಂಪ ಭಾರತ’ದ ಪ್ರಯಾಣ ಇನ್ನೂ ಮುಗಿದಿಲ್ಲ. ಇದು ಸಂತಸದ ಸಂಗತಿ. ಬೇರೆ ಬೇರೆ ವೃತ್ತಿಗಳಲ್ಲಿರುವವರು ಈ ನಾಟಕವನ್ನು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಅಂತರರಾಷ್ಟ್ರೀಯ ನಾಟಕೋತ್ಸವ, ಹೊರರಾಜ್ಯ, ದಿಲ್ಲಿ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ‘ಪಂಪ ಭಾರತ’ ಪ್ರದರ್ಶನ ಕಂಡು, ಡಿ. 2ಕ್ಕೆ ನೂರನೇ ಪ್ರದರ್ಶನ ಕಾಣುತ್ತಿದೆ. ಇದರಲ್ಲಿ ಬೆಂಗಳೂರು ಸಮುದಾಯದ ಪಾತ್ರ ದೊಡ್ಡದು.

‘ಪಂಪ ಭಾರತ’ ಹಂಪಿ ಕನ್ನಡ ವಿ.ವಿ. ಮತ್ತು ಮಂಗಳೂರು ವಿ.ವಿ.ಗಳಲ್ಲಿ ಪಠ್ಯವಾಗಿದೆ. ಮೂರು ಬಾರಿ ಮರುಮುದ್ರಣ ಕಂಡಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕಾವ್ಯಾನಂದ ಪುರಸ್ಕಾರಕ್ಕೆ ಕೃತಿ ಭಾಜನವಾಗಿದೆ. ನಿರ್ದೇಶಕ ಪ್ರಮೋದ್ ಶಿಗ್ಗಾಂವ್ ನಾಟಕಕಾರನಷ್ಟೇ ಅಥವಾ ನಾಟಕಕಾರನಿಗಿಂತ ಒಂದು ಹೆಜ್ಜೆ ಹೆಚ್ಚೇ ಗ್ರಹಿಸಿ ರಂಗರೂಪಕ್ಕೆ ತಂದಿದ್ದಾರೆ. ನಾಟಕ ಬಯಸುವ ಹೊಸ ಮತ್ತು ಭಿನ್ನ ರಂಗಭಾಷೆಯನ್ನು ತಂದಿದ್ದಾರೆ. ಹಾಗೆ ನೋಡಿದರೆ ನನ್ನ ಪಾತ್ರವೇ ಕಡಿಮೆ ಎಂದು ವಿನಮ್ರವಾಗಿ ಹೇಳಬಯಸುತ್ತೇನೆ.

ನಿರ್ದೇಶಕರ ಮಾತು

* ಪ್ರಸ್ತುತವಾಗಿರುವ ಕಾರಣ ‘ಪಂಪ ಭಾರತ’ವನ್ನು ನಿರ್ದೇಶಿಸಲು ಆಯ್ಕೆ ಮಾಡಿಕೊಂಡೆ. ಪಂಪನನ್ನು ಕೆವೈಎನ್ ಊಹಿಸಿರುವ ರೀತಿಯೇ ತುಂಬಾ ಅದ್ಭುತವಾಗಿದೆ. ಮೂರು ಕಾಲಗಳನ್ನು ಒಟ್ಟಿಗೆ ಜೋಡಿಸುವ ಕ್ರಿಯೆ ನನಗೆ ಸವಾಲು ಎನಿಸಿತು. ಇದನ್ನು ರಂಗರೂಪಕ್ಕೆ ತರಬೇಕೆಂಬ ಹಂಬಲಕ್ಕೂ ಇದೇ ಕಾರಣ. ಸವಾಲೊಡ್ಡುವ ನಾಟಕಕಾರ ನನಗೆ ಇಷ್ಟ. ಕೆವೈಎನ್ ನಿರ್ದೇಶಕರ ನಾಟಕಕಾರ. ಯಾವುದೇ ನಾಟಕ ಮಾಡಿದಾಗಲೂ ನಿರಂತರವಾಗಿ ನಿರ್ದೇಶಕರ ಜತೆಗಿದ್ದು ಅವರೂ ನಿರಂತರವಾಗಿ ತಿದ್ದುಪಡಿಗೆ ಒಳಪಡುತ್ತಾರೆ.

–ಪ್ರಮೋದ್ ಶಿಗ್ಗಾಂವ್, ನಿರ್ದೇಶಕ.

* ‘ಪಂಪ ಭಾರತ’ ಕರ್ಣನ ಪಾತ್ರವನ್ನು ಹೈಲೈಟ್ ಮಾಡುತ್ತಾ ಹೋಗುತ್ತದೆ. ಅನ್ಯಾಯ ಮತ್ತು ಶೋಷಣೆಗೊಳಗಾಗುವ ಕರ್ಣನ ಪಾತ್ರ ಇಂದಿಗೂ ಪ್ರಸ್ತುತ. ಶೋಷಣೆಗೊಳಗಾದವರ ಪ್ರತಿನಿಧಿಯಾಗಿ ಕರ್ಣ ಗೋಚರಿಸುತ್ತಾನೆ. ‘ಪಂಪ ಭಾರತ’ ನೂರನೇ ಪ್ರದರ್ಶನ ಕಾಣುತ್ತಿರುವುದು ಸಂತಸಕರ.

–ಶಶಿಧರ, ಕಾರ್ಯದರ್ಶಿ, ಬೆಂಗಳೂರು ಸಮುದಾಯ

‘ಪಂಪ ಭಾರತ’ ನಾಟಕದ 100ನೇ ಪ್ರದರ್ಶನ: ರಚನೆ– ಡಾ.ಕೆ.ವೈ. ನಾರಾಯಣ ಸ್ವಾಮಿ, ನಿರ್ದೇಶನ–ಪ್ರಮೋದ್ ಶಿಗ್ಗಾಂವ್, ಸಂಗೀತ–ಗಜಾನನ ಟಿ. ನಾಯ್ಕ. ಸ್ಥಳ–ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಡಿಸೆಂಬರ್ 2 ರಾತ್ರಿ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.