ಕಲಬುರಗಿ: ಮುಖದ ಮೇಲೆ ಬಣ್ಣ ಬಿದ್ದರೆ ಮನಸ್ಸಿನಲ್ಲಿ ಚೈತನ್ಯ ಮೂಡುತ್ತದೆ. ಹೊಟ್ಟೆಯಲ್ಲಿ ಹಸಿವಿದ್ದರೂ ಅಭಿನಯದ ಮುಂದೆ ಅದು ಲೆಕ್ಕಕ್ಕೆ ಬರುವುದಿಲ್ಲ. ಇಂತಹ ಜೀವನೋತ್ಸಾಹ ಪಾಠ ಕಲಿಸಿದ್ದು ರಂಗಭೂಮಿ...
–ಹೀಗೆಂದು ಹಿರಿಯ ಚಿತ್ರನಟ ವೈಜನಾಥ ಬಿರಾದಾರ ಹೇಳಿದರು.
‘ಪ್ರಜಾವಾಣಿ’ ಲೈವ್ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ‘ಬೀದರ್ ಜಿಲ್ಲೆಯ ಭಾಲ್ಕಿ ಸಮೀಪದ ತೇಂಪೂರ ನಮ್ಮೂರು. ನಮ್ಮ ತಾಯಿ ಮದುವೆಯ ಮನೆಗಳಲ್ಲಿ ಬೀಸುಕಲ್ಲಿನ ಪದ, ನಾಗರಪಂಚಮಿಗೆ ಬಿಲಾಯಿ ಪದ ಹಾಡುತ್ತಿದ್ದರು. ಅದನ್ನು ಕೇಳಿ, ನೋಡಿ ನನ್ನಲ್ಲಿಯೂ ನಟ ಆಗಬೇಕು ಎಂಬ ಆಸೆ ಮೂಡಿತು’ ಎಂದರು.
‘ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸುಲೇಪೇಟೆ ಗ್ರಾಮದಲ್ಲಿ ಬಸ್ ಹಮಾಲಿ ನಾಟಕ ನಡೆಯುತ್ತಿತ್ತು. ನಾನು ಹಮಾಲಿ ರಂಗನ ಪಾತ್ರ ಮಾಡುತ್ತಿದ್ದೆ. ನನ್ನನ್ನು ಬಿಟ್ಟು ಉಳಿದ ಕಲಾವಿದರೆಲ್ಲ ದಂಪತಿ ಸಮೇತ ವಾಸವಾಗಿದ್ದರು. ಅವರೆಲ್ಲ ಅಡುಗೆ ಮಾಡಿಕೊಂಡು, ಊಟ ಮಾಡಿ ಬಂದಿದ್ದರು. ನಾನು ಬೆಳಿಗ್ಗೆಯಿಂದ ಊಟವಿಲ್ಲದೆ ಕುಣಿಯುತ್ತ ಕುಣಿಯುತ್ತ ತಲೆ ಸುತ್ತಿ ಬಿದ್ದೆ’ ಎಂದು ಸ್ಮರಿಸಿದರು.
‘ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಬಂದಾಗ ನಿರ್ದೇಶಕ ಎಂ.ಎಸ್. ಸತ್ಯು ಅವರ ಬರ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಅನಂತ್‌ನಾಗ್ ಅವರಿಗೆ ನನ್ನ ತಾಯಿಯ ಊರಿನಿಂದ ಗಟ್ಟಿ ಮೊಸರು ತಂದು ಕೊಟ್ಟು ಪರಿಚಯಿಸಿಕೊಂಡೆ. ಅವರು ನಿರ್ದೇಶಕರಿಗೆ ಪರಿಚಯಿಸಿ, ಚಿತ್ರದಲ್ಲಿ ಅಭಿನಯಿಸಲು ಅವಕಾಶ ಮಾಡಿ ಕೊಟ್ಟರು. ಕಷ್ಟಪಟ್ಟು ದುಡ್ಡು ಹೊಂದಿಸಿ ಬೆಂಗಳೂರಿಗೆ ಬಂದು, ಡಾ.ರಾಜ್‌ಕುಮಾರ್ ಅವರನ್ನು ನೋಡಲು ಚೆನ್ನೈಗೆ ಹೋದೆ. ಅಲ್ಲಿಂದ ಬೆಂಗಳೂರಿಗೆ ವಾಪಸಾಗಿ ಗುರುರಾಜ ಹೊಸಕೋಟೆ ಅವರ ಆರ್ಕೆಸ್ಟ್ರಾ ಸೇರಿಕೊಂಡೆ’ ಎಂದರು.
‘ಮುಂದೆ ಕಾಶಿನಾಥ್, ಉಪೇಂದ್ರ ಪರಿಚಯವಾಗಿ ‘ಶಂಖನಾದ’, ‘ಅಜಗಜಾಂತರ’ ಸಿನಿಮಾದಲ್ಲಿ ಹಾಸ್ಯ ಪಾತ್ರ ಮಾಡಿದೆ. ‘ತರ್ಲೆ ನನ್ಮಗ’ ಸಿನಿಮಾದಲ್ಲಿ ಸಿಕ್ಕ ಭಿಕ್ಷುಕನ ಪಾತ್ರ ನನಗೆ ಅಕ್ಷಯ ಪಾತ್ರೆಯಾಯಿತು. ಅದು ಹಲವು ಅವಕಾಶಗಳಿಗೆ ಹಾದಿ ಮಾಡಿಕೊಟ್ಟಿತು. ಗಿರೀಶ್ ಕಾಸರವಳ್ಳಿ ಅವರ ‘ಕನಸೆಂಬೊ ಕುದುರೆಯನೇರಿ’ ಸಿನಿಮಾ ನನ್ನ ವೃತ್ತಿ ಬದುಕಿಗೆ ಹೊಸ ಆಯಾಮ ನೀಡಿ, ಅಂತರರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟಿತು. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಕರೆ ಮಾಡಿ, ಶುಭ ಹಾರೈಸಿದ್ದು ಬದುಕಿನ ಸಂತಸದ ಗಳಿಗೆ’ ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.