ADVERTISEMENT

ಸಾಂಸ್ಕೃತಿಕ ನಗರಿಯ ತುರಾಯಿಗೆ ರಮಾಗೋವಿಂದ ರಂಗಮಂದಿರ ಸೇರ್ಪಡೆ

ಡಾ.ರಮಾ ವಿ ಬೆಣ್ಣೂರ್
Published 29 ನವೆಂಬರ್ 2020, 19:30 IST
Last Updated 29 ನವೆಂಬರ್ 2020, 19:30 IST
ರಮಾಗೋವಿಂದ ರಂಗಮಂದಿರದ ಒಳಾಂಗಣ ನೋಟ
ರಮಾಗೋವಿಂದ ರಂಗಮಂದಿರದ ಒಳಾಂಗಣ ನೋಟ   

ಮೈಸೂರಿನಲ್ಲಿ ಸುಮಾರು 31 ವರ್ಷಗಳಷ್ಟು ಹಳೆಯದಾದ ಒಂದು ಕನ್ನಡ ಶಾಲೆ ಇದೆ. ಅದು ‘ನೃಪತುಂಗ ಕನ್ನಡ ಶಾಲೆ’ (ಕನ್ನಡ ವಿಕಾಸ ವಿದ್ಯಾ ಸಂಸ್ಥೆ) ಎಂದೇ ಮೈಸೂರಿಗರೆಲ್ಲರಿಗೂ ಪರಿಚಿತ. ಜನವಸತಿ ಪ್ರದೇಶದಲ್ಲಿರುವ ಈ ಶಾಲೆಯು ತನ್ನದೇ ರಂಗಮಂದಿರ ಹೊಂದುವ ಬಯಕೆಯಿಂದ ಸುಮಾರು ಹನ್ನೆರಡು ವರ್ಷಗಳ ಹಿಂದೆ ನಿರ್ಮಿತಿ ಕೇಂದ್ರದ ಮೂಲಕ ಎಂಎಲ್‌ಎ, ಎಂಎಲ್‌ಸಿ ಫಂಡ್‌ ನೆರವಿನಿಂದ ಅದರ ನಿರ್ಮಾಣ ಕಾರ್ಯ ಆರಂಭಿಸಿತ್ತು. ಸುತ್ತಲ ಗೋಡೆಯನ್ನು ಮಾತ್ರ ಕಟ್ಟಿದ ನಂತರ ಆ ಕಾರ್ಯ ಸ್ಥಗಿತಗೊಂಡು, ಪಾಳುಗೋಡೆಯ ಅವಶೇಷದಂತೆ ನಿಂತಿತ್ತು.

ಮೈಸೂರಿನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕೊಡುಗೈ ದಾನಿಗಳ ಕೊರತೆ ಎಂದೂ ಉಂಟಾಗಿಲ್ಲ. ಉದ್ಯಮಿ ಜಗನ್ನಾಥ ಶೆಣೈ ಅವರು ಅಂತಹವರಲ್ಲಿ ಒಬ್ಬರು. ನೃಪತುಂಗ ಶಾಲೆಯ ಬೋರ್ಡ್‌ನವರೊಂದಿಗೆ ಕೈಜೋಡಿಸಿ, ಈ ರಂಗಮಂದಿರದ ಪುನರುತ್ಥಾನದ ಕಾರ್ಯವನ್ನು ಅವರು ಕೈಗೆತ್ತಿಕೊಂಡರು. ಅದರ ಫಲವೇ ಹೆಮ್ಮೆಯಿಂದ ತಲೆಯೆತ್ತಿ ನಿಂತಿರುವ ‘ರಮಾಗೋವಿಂದ ರಂಗಮಂದಿರ’. ಮೈಸೂರಿನಲ್ಲಿ ನಡೆಯುವ ನಿರಂತರ ರಂಗ ಚಟುವಟಿಕೆಗಳಿಗೆ ₹85 ಲಕ್ಷ ವೆಚ್ಚದಲ್ಲಿ ಅತ್ಯಂತ ಸೂಕ್ತ ರೀತಿಯಲ್ಲಿ, ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡ ರಂಗ ಮಂದಿರ ಇಂದು ಸರ್ವ ರೀತಿಯಲ್ಲೂ ಸಜ್ಜಾಗಿ, ಲೋಕಾರ್ಪಣೆಗೊಂಡು ನಿಂತಿದೆ.

366 ಆಸನಗಳುಳ್ಳ ಈ ರಂಗಮಂದಿರವು ನಾಟಕಗಳಿಗೆ ಹೇಳಿ ಮಾಡಿಸಿದಂತಿದೆ. ನೃತ್ಯ, ಸಂಗೀತಕ್ಕೂ ಬಳಸಿಕೊಳ್ಳಬಹುದಾದ ವಿಶಾಲ ವೇದಿಕೆಗೆ ಎಲ್‌ಇಡಿ, ಸ್ಪಾಟ್ ಲೈಟ್, ಫೋಕಸ್ ಲೈಟುಗಳಿವೆ. 64 ದೀಪಗಳನ್ನು ಹಾಕಬಹುದಾದ ವ್ಯವಸ್ಥೆಯೂ ಇದೆ. ನಾಲ್ಕು ಲೈಟಿಂಗ್ ಕಂಟ್ರೋಲ್‌ಗಳೂ ಇವೆ. ಬ್ಯಾರಿಂಜರ್ ಸೌಂಡ್ ಸಿಸ್ಟಂನ 32 ಮೈಕ್‌ಗಳ ಕಾರ್ಯವೈಖರಿಯನ್ನು ಕೇಳಿಯೇ ಆನಂದಿಸಬೇಕು. ರಂಗದ ಮೇಲೆ ಹಾಕಲು ಡಯಾಸ್‌ಗಳೂ, ಪೋಡಿಯಂಗಳು, ಸ್ಟೆಪ್ ಲಾಡರ್‌ಗಳೂ ಸಿದ್ಧವಾಗಿವೆ. ಬೆಳಕಿನ ಸಮಸ್ಯೆ ಉಂಟಾದಲ್ಲಿ, ಕ್ಯಾಟ್ ವಾಕ್ ಮೂಲಕ ಪರಿಹರಿಸಿಕೊಳ್ಳುವ ವ್ಯವಸ್ಥೆಯೂ ಇದೆ. ವೇದಿಕೆಯ ಹಿಂದೆ ಎರಡು ಸುಸಜ್ಜಿತ ಗ್ರೀನ್ ರೂಂಗಳು ಮತ್ತು ಒಂದು ಚೇಂಜ್ ರೂಂ ಲಭ್ಯ. ರಂಗದ ಮಗ್ಗುಲಲ್ಲಿ ‘ವಾಲ್ರ‍್ಯಾಕ್ ಡಿಮ್ಮರ್’ ಸಹ ಇದೆ.

ADVERTISEMENT

ಪ್ರೇಕ್ಷಕರ ಹಿಂದೆ ಮೇಲ್ಭಾಗದಲ್ಲಿ ಕಟ್ಟಿರುವ ಕಂಟ್ರೋಲ್ ರೂಮಿನಲ್ಲಿ ಧ್ವನಿ-ಬೆಳಕುಗಳ ಅತ್ಯಾಧುನಿಕ ಪರಿಕರಗಳು ಲಭ್ಯ. 32 ಚಾನೆಲ್ಲುಗಳ 64 ಲೈಟುಗಳನ್ನು ಆ ಕ್ಷಣದಲ್ಲೇ ಬಳಸಬಹುದು. ಇಲ್ಲಿಂದಲೇ 32 ಮೈಕುಗಳನ್ನೂ ನಿಯಂತ್ರಿಸಬಹುದು. ಮತ್ತೊಂದು ಚಿಕ್ಕ ಸಭಾಂಗಣವೂ ಇಲ್ಲಿದೆ. 50 ಆಸನಗಳ ವ್ಯವಸ್ಥೆಯ ಈ ಸಭಾಂಗಣವು ಪುಸ್ತಕ ಬಿಡುಗಡೆ ಮುಂತಾದ ಚಿಕ್ಕ ಸಮಾರಂಭಗಳಿಗೆ ಹೇಳಿ ಮಾಡಿಸಿದಂತಿದೆ. ಶೆಣೈಯವರು ನೇಮಿಸಿರುವ ಮಧುಸೂದನ್ ಈ ಎಲ್ಲ ವ್ಯವಸ್ಥೆಗಳ ಮೇಲ್ವಿಚಾರಕರಾಗಿದ್ದಾರೆ. ಒಟ್ಟಾರೆ ಸಾಂಸ್ಕೃತಿಕ ನಗರಿಯ ತುರಾಯಿಗೆ ಸೇರಿದ ಮತ್ತೊಂದು ಗರಿ ಇದೆನ್ನಲು ಯಾವ ಸಂಶಯವೂ ಇಲ್ಲ. ಕಲಾವಿದರು ಇದರ ಸದುಪಯೋಗ ಪಡೆಯಬೇಕಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.