ಬೆಂಗಳೂರು: 45 ವರ್ಷಗಳಿಂದ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿರುವ ಬೆಂಗಳೂರಿನ ‘ಸಮುದಾಯ’ವು ಸಾಮಾಜಿಕ ಜಾಲತಾಣಗಳ ಮೂಲಕ ‘ರಂಗ ಚಿಂತನ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ನಿತ್ಯ ಸಂಜೆ 7 ಗಂಟೆಗೆ ಸಮುದಾಯದ ಫೇಸ್‌ಬುಕ್ ಪುಟ ಹಾಗೂ ಯೂಟ್ಯೂಬ್ ಮೂಲಕ ಈ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದೆ.
ರಾಜ್ಯದ ಹಾಗೂ ದೇಶದ ಹಲವಾರು ರಂಗ ತಜ್ಙರು, ರಂಗ ಚಿಂತಕರು, ರಂಗ ನಿರ್ದೇಶಕರು ಮತ್ತು ಸಾಹಿತಿಗಳು ಭಾಗವಹಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಒಬ್ಬರು ವಿಶೇಷ ಅತಿಥಿ ತಮ್ಮ ಚಿಂತನೆಗಳನ್ನು ವ್ಯಕ್ತಪಡಿಸಲಿದ್ದಾರೆ.
‘ಕಲೆ ಮತ್ತು ಸಾಹಿತ್ಯ ಹೊಸ ಜಗತ್ತನ್ನು ಸೃಷ್ಟಿಸುವ ಸಾಮರ್ಥ್ಯ ಉಳ್ಳವು.ವರ್ತಮಾನದ ಸ್ಥಿತಿ ನಿರ್ವಹಿಸಲು ಶಕ್ತಿ ಕೊಡೋದು ಕಲೆ ಮತ್ತು ಸಾಹಿತ್ಯ. ಇವುಗಳ ಮೂಲಕ ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳಲು ಹಾಗೂ ಆತ್ಮಾವಲೋಕನ ಮಾಡಿಕೊಳ್ಳಲು ಸಾಧ್ಯ ಇದೆ. ಆದ್ದರಿಂದ ಇಂದಿನ ದುರಿತ ಕಾಲದಲ್ಲಿ ಅತ್ಯಂತ ಅಗತ್ಯವಾದ ಮಾಧ್ಯಮಗಳಿವು. ನಮ್ಮನ್ನು ಬೇರೊಂದು ಸಮಾಜದ ಜೊತೆಗೆ ಸಂಪರ್ಕ ಕಲ್ಪಿಸಿಕೊಳ್ಳಬಹುದಾದ ಅಪರಿಮಿತ ಶಕ್ತಿ ಇವುಗಳಿಗಿದೆ. ಇವುಗಳ ಅಗತ್ಯ ಎಂದಿಗಿಂತ ಇಂದು ಹೆಚ್ಚು ಇದೆ’ ಎನ್ನುತ್ತಾರೆ ಸಮುದಾಯದ ಅಧ್ಯಕ್ಷ ಅಗ್ರಹಾರ ಕೃಷ್ಣಮೂರ್ತಿ.
‘ಮನುಷ್ಯರ ನಡುವಿನ ಭೌತಿಕ ಸಾಹಚರ್ಯವೇ ರಂಗಭೂಮಿಗೆ ಜೀವನಾಡಿ. ಆದರೆ ಈ ಹೊತ್ತು ಭೌತಿಕ ಅಂತರ ಕಾಪಾಡಿಕೊಳ್ಳಬೇಕಾದ ದುರಿತ ಕಾಲದಲ್ಲಿ ಹೆಚ್ಚು ತಲ್ಲಣಕ್ಕೊಳಗಾಗಿದೆ. ಈ ಸಂದರ್ಭವನ್ನು ಸೃಜನಾತ್ಮಕವಾಗಿ ಕಳೆಯಲು ರಂಗಚಿಂತನ ಸರಣಿ ಆರಂಭಿಸಿದ್ದೇವೆ. ನಾಡಿನ ಹಾಗೂ ಹೊರನಾಡಿದ 40 ರಂಗ ಕಲಾವಿದರಿಗೆ ಸಾಹಿತಿಗಳಿಗೆ ಚಿಂತಕರಿಗೆ ಕೆಲವು ಪ್ರಶ್ನೆಗಳನ್ನು ಕಳುಹಿಸಿಕೊಟ್ಟಿದ್ದೇವೆ. ಅದರ ಸುತ್ತ ಅವರು ಮಾತನಾಡಲಿದ್ದಾರೆ. ವರ್ತಮಾನದ ರಂಗಭೂಮಿ ಹಾಗೂ ರಂಗ ಸಂಸ್ಕೃತಿ ಕುರಿತು, ಸಿದ್ಧಾಂತ ಮತ್ತು ಕಲೆ ಸಂಬಂಧ ಮುಂತಾದ ವಿಚಾರಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ’ ಎಂದು ರಂಗ ತಜ್ಞ ಡಾ.ಶ್ರೀಪಾದ ಭಟ್ ತಿಳಿಸಿದರು.
ಸಮುದಾಯ ರಂಗ ಚಿಂತನ ಕಾರ್ಯಕ್ರಮದ ವಿಡಿಯೊಗಳನ್ನು ಹಾಗೂ ಕಂತುಗಳನ್ನು ಈ ಕೊಂಡಿಗಳಲ್ಲಿ ನೋಡಬಹುದು ಎಂದು ಕಾರ್ಯಕ್ರಮದ ಸಂಚಾಲಕ ಗುಂಡಣ್ಣ ಚಿಕ್ಕಮಗಳೂರು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
https://youtu.be/zOmB9eO32E0
https://youtu.be/3X99OllG69Q
https://www.facebook.com/Samudaya-Ranga-Chinthana-109030734174865/
ಸಂಪರ್ಕ: ಗುಂಡಣ್ಣ: 9448519079 ಅಥವಾ ಶಶಿಧರ್ ಜೆ.ಸಿ: 9901299228
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.