ADVERTISEMENT

ಡಿಜಿಟಲ್‌ ರೂಪದಲ್ಲಿ ರಂಗಶಂಕರ ‘ಮ್ಯಾಂಗೋ ಪಾರ್ಟಿ’

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 10:23 IST
Last Updated 13 ಜೂನ್ 2020, 10:23 IST
ರಂಗಶಂಕರದಲ್ಲಿ ಮ್ಯಾಂಗೊ ಪಾರ್ಟಿ– ಪ್ರಾತಿನಿಧಿಕ ಚಿತ್ರ
ರಂಗಶಂಕರದಲ್ಲಿ ಮ್ಯಾಂಗೊ ಪಾರ್ಟಿ– ಪ್ರಾತಿನಿಧಿಕ ಚಿತ್ರ   

ಕೊರೊನಾದಿಂದಾಗಿ ಜನಪ್ರಿಯವಾದ ಆನ್‌ಲೈನ್ ಕ್ಲಾಸ್, ಆನ್‌ಲೈನ್‌ ಸಂಗೀತ ಕಚೇರಿಗಳ ನಂತರ ಇದೇ ಮೊದಲ ಬಾರಿಗೆ ಬೆಂಗಳೂರು ಆನ್‌ಲೈನ್ ‘ಮ್ಯಾಂಗೊ ಪಾರ್ಟಿ’ಗೆ ಸಾಕ್ಷಿಯಾಗಲಿದೆ. ‌

ಕಳೆದ 18 ವರ್ಷಗಳಿಂದಜೆ.ಪಿ ನಗರದ ರಂಗಶಂಕರದಲ್ಲಿ ಆಯೋಜಿಸಲಾಗುತ್ತಿರುವ ‘ಮ್ಯಾಂಗೊ ಪಾರ್ಟಿ’ ಕೊರೊನಾ ಕಾರಣದಿಂದ ಈ ಬಾರಿ ಡಿಜಿಟಲ್‌ಗೆ ರೂಪಾಂತರಗೊಂಡಿದೆ.ಜೂನ್‌ 14ರಂದು ಮಧ್ಯಾಹ್ನ 2ರಿಂದ ಸಂಜೆ 5.30ರವರೆಗೆ ರಂಗಶಂಕರದ ಫೇಸ್‌ಬುಕ್‌‌ ಪುಟದ ಮೂಲಕ ಈ ಪಾರ್ಟಿಯಲ್ಲಿ ಆಸಕ್ತರು ಭಾಗವಹಿಸಬಹುದು.

‘ಈ ಬಾರಿ ಮನೆಯಲ್ಲೇ ಮಾವಿನ ಹಣ್ಣುಗಳನ್ನು ತಿನ್ನುತ್ತಾ, ಆನ್‌ಲೈನ್‌ ಮೂಲಕ ಎಲ್ಲರೂ ಪಾರ್ಟಿಗೆ ಸೇರೋಣ. ಆನ್‌ಲೈನ್‌ ಕಾರ್ಯಕ್ರಮಗಳಿಗೆ ಪ್ರವೇಶ ಪಡೆದುಕೊಳ್ಳಿ. ಸ್ನೇಹಿತರೂ, ಕುಟುಂಬ ಸದಸ್ಯರನ್ನು ಇದಕ್ಕೆ ಸೇರಲು ಪ್ರೋತ್ಸಾಹ ನೀಡಿ’ ಎಂದು ರಂಗಶಂಕರದ ಆರ್ಟಿಸ್ಟಿಕ್‌ ನಿರ್ದೇಶಕ ಸುರೇಂದ್ರನಾಥ್‌ ಎಸ್‌. ಹೇಳಿದ್ದಾರೆ.

ADVERTISEMENT

ಚಿತ್ರನಟಿ ಮತ್ತು ರಂಗಭೂಮಿ ಕಲಾವಿದೆ ಅರುಂಧತಿ ನಾಗ್ 2004ರಲ್ಲಿ ರಂಗಶಂಕರ ಆರಂಭಿಸಿದ ವರ್ಷದಿಂದಲೇ ಅಲ್ಲಿ ಈ ಮಾವು ಪಾರ್ಟಿ ಆರಂಭವಾಗಿದೆ. ಮಾವಿನ ಹಣ್ಣಿನ ಸೀಸನ್‌ನಲ್ಲಿ ಒಂದು ಭಾನುವಾರ ಈ ಪಾರ್ಟಿ ಆಯೋಜಿಸಲಾಗುತ್ತಿತ್ತು.ಈ ಪಾರ್ಟಿಯಲ್ಲಿ ಕುಟುಂಬ ಸದಸ್ಯರೊಂದಿಗೆ ಬೆರೆತು ಮಾವಿನ ಹಣ್ಣನ್ನು ಹಂಚಿ ತಿನ್ನುವ ವಿಶೇಷ ಅವಕಾಶ ದೊರೆಯುತ್ತಿತ್ತು.

2004ರಿಂದ ಮಾವು ಪಾರ್ಟಿ
ಹೊಸೂರು ಸಿಂಗಸಂದ್ರದ ಜಮೀನಿನಲ್ಲಿ ಶಂಕರ್‌ನಾಗ್‌ ಮಾವಿನ ಗಿಡಗಳನ್ನು ನೆಟ್ಟಿದ್ದರು. 2001ರಲ್ಲಿ ಆರಂಭವಾದ ರಂಗಶಂಕರದ ನಿರ್ಮಾಣ ಕಾರ್ಯ ಮೂರು ವರ್ಷ ನಡೆದಿತ್ತು. ಆಗ ತೋಟದ ಹಣ್ಣುಗಳನ್ನು ಅರುಂಧತಿ ನಾಗ್ ಕಾರ್ಮಿಕರಿಗೆ ‌ನೀಡುತ್ತಿದ್ದರು.

ಅವರಿಗೆ ಮಾವಿನ ಸಾಸಿವೆ, ರಸಾಯನ ಮಾಡಿಕೊಡುತ್ತಿದ್ದರು. ರಂಗಶಂಕರ ಆರಂಭವಾದ ನಂತರವೂ ಈ ಪದ್ಧತಿಯನ್ನು ಪಾರ್ಟಿ ಆಯೋಜಿಸುವ ಮೂಲಕ ಮುಂದುವರಿಸಿದರು. ಪಾರ್ಟಿಯಲ್ಲಿ ಬೇರೆ ಬೇರೆ ಕಡೆಗಳಿಂದ ಖರೀದಿಸಿದ ನೂರಕ್ಕೂ ಹೆಚ್ಚು ಬಗೆಯ ಮಾವುಗಳನ್ನು ಪ್ರದರ್ಶನಕ್ಕಿಡಲಾಗುತ್ತದೆ.

ನಂತರ ದೊಡ್ಡ ಉರುಳಿಯಲ್ಲಿ ಎಲ್ಲ ಜನರು ತಾವು ತೆಗೆದುಕೊಂಡ ಹೋದ ಹಣ್ಣುಗಳನ್ನು ಹಾಕಿ, ತಮ್ಮಿಷ್ಟದ ಮಾವುಗಳನ್ನು ಮನಸೋ ಇಚ್ಛೆ ತಿನ್ನಬಹುದು. ಅದರೊಂದಿಗೆ ಸಾಂಸ್ಕೃತಿಕ ಸ್ಪರ್ಧೆಗಳೂ ನಡೆಯುತ್ತವೆ.

ಈ ಬಾರಿ ವಿಶೇಷತೆಗಳು ಏನು?
ಪಾರ್ಟಿಯಲ್ಲಿ ಮಾವಿನ ಹಣ್ಣುಗಳಿಗೆ ಸಂಬಂಧಿಸಿದ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ. ನಟಿ ಅರುಂಧತಿ ನಾಗ್‌, ಗಾಯಕಿ ಎಂ.ಡಿ. ಪಲ್ಲವಿ, ನಟ ಸಿಹಿ ಕಹಿ ಚಂದ್ರು ಹಾಗೂ ವಿವೇಕ್‌ ಮದನ್‌ ಆನ್‌ಲೈನ್‌ನಲ್ಲಿ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.ಒಂದು ತಾಸು ಈ ರಸಪ್ರಶ್ನೆ ಕಾರ್ಯಕ್ರಮ 4 ಸುತ್ತುಗಳಲ್ಲಿ ನಡೆಯಲಿದೆ.

ಗೀತ ಸಾಹಿತಿ ಜಯಂತ ಕಾಯ್ಕಿಣಿ, ದುಂಡಿರಾಜ್‌, ಅಪಾರ, ಜೋಗಿ ಮೊದಲಾದವರು ಡಿಜಿಟಲ್‌ ಮ್ಯಾಂಗೊ ಪಾರ್ಟಿಗಾಗಿ ಕವನಗಳನ್ನು ರಚಿಸಿದ್ದು, ಅವುಗಳನ್ನು ಪಾರ್ಟಿಯಲ್ಲಿವಾಚಿಸಲಿದ್ದಾರೆ. ಇದೇ ವೇಳೆ 18 ವರ್ಷ ಪಾರ್ಟಿ ನಡೆದ ಬಂದ ದಾರಿಯಟ್ರೇಲರ್‌ ಪ್ರದರ್ಶಿಸಲಾಗುವುದು.

ಕತೆ, ಅಡುಗೆ ಸ್ಪರ್ಧೆ
5 ಮತ್ತು 6 ವಯಸ್ಸಿನ ಮಕ್ಕಳಿಗೆ ಕತೆ ಹೇಳುವ ಸ್ಪರ್ಧೆ ಆಯೋಜಿಸಲಾಗಿದೆ. ಅಡುಗೆ ಹೊಸ ರೆಸಿಪಿ ಸ್ಪರ್ಧೆಯಲ್ಲಿ ಎಲ್ಲರೂ ಭಾಗವಹಿಸಬಹುದು. ಮಕ್ಕಳಿಂದಮಾವಿನ ಹಣ್ಣಿನ ಕುರಿತಾದ ಕತೆ ಹಾಗೂ ಮಾವಿನ ಹೊಸ ಅಡುಗೆ ರೆಸಿಪಿಯ ಸ್ಪರ್ಧಾ ವಿಜೇತರನ್ನುಘೋಷಣೆ ಮಾಡಲಾಗುತ್ತದೆ. ಹಾಗೆಯೇ ವಿಜೇತರ ವಿಡಿಯೊಗಳನ್ನು ಪ್ರಸಾರ ಮಾಡಲಾಗುತ್ತದೆ. ಇನ್ನು ರಂಗಶಂಕರ ಕೆಫೆಯ ಅಂಜು ಹೊಸ ರೆಸಿಪಿ ತೀರ್ಪುಗಾರರಾಗಿದ್ದಾರೆ.

ಮಾಹಿತಿಗೆ ರಂಗಶಂಕರದ ಫೇಸ್‌ಬುಕ್‌ ಪುಟ ನೋಡಿ: https://www.facebook.com/rangashankara/

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.