ADVERTISEMENT

ವಿಜ್ಞಾನ ನಾಟಕೋತ್ಸವದ ಸ್ವಂತ ಪ್ರಯೋಗಗಳು

ಕೆ.ಎನ್‌.ನರಸಿಂಹಮೂರ್ತಿ
Published 29 ಜುಲೈ 2023, 23:30 IST
Last Updated 29 ಜುಲೈ 2023, 23:30 IST
ಮೇರಿ ಕ್ಯೂರಿ ಸಾಧನೆಗೆ ಕನ್ನಡಿ ಹಿಡಿದ ‘ಪ್ರಭಾಸ’ ನಾಟಕ
ಮೇರಿ ಕ್ಯೂರಿ ಸಾಧನೆಗೆ ಕನ್ನಡಿ ಹಿಡಿದ ‘ಪ್ರಭಾಸ’ ನಾಟಕ   

ವಿಜ್ಞಾನ ನಾಟಕಗಳ ಹೊಸ ಕಾಲಘಟ್ಟದಲ್ಲಿ ಕನ್ನಡ ರಂಗಭೂಮಿಯು ಹೊಸ ಸೃಜನಶೀಲ ದಿಕ್ಕಿನೆಡೆಗೆ ತಿರುಗಿಕೊಳ್ಳುತ್ತಿದೆ ಎಂದು ಪ್ರತಿಪಾದಿಸುತ್ತಿರುವ ಮೈಸೂರಿನ ಈ ಹವ್ಯಾಸಿಗಳ ಎದುರು ಹೊಸ ದಿಗಂತಗಳು ತೆರೆದುಕೊಳ್ಳುತ್ತಿವೆ. ಸಸ್ಯವಿಜ್ಞಾನ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿರುವ ಬಿಜಿಎಲ್‌ ಸ್ವಾಮಿ ಹಾಗೂ ವಿಶ್ವವಿಖ್ಯಾತ ಭಾರತೀಯ ಭೌತಶಾಸ್ತ್ರಜ್ಞ ಸರ್‌.ಸಿ.ವಿ.ರಾಮನ್‌ ಜೀವನ ಸಾಧನೆ ಕುರಿತ ನಾಟಕ ರಚನೆಯ ಕಲ್ಪನೆ ಮೊಳಕೆಯೊಡೆದಿದೆ.

ಭ್ರೂಣಗಳ ಕ್ಲೋನಿಂಗ್‌ ಕುರಿತ ಕೊರಿಯಾದ ಜೆನೆಟಿಕ್ಸ್‌ ವಿಜ್ಞಾನಿ ಹ್ವಾಂಗ್‌ ವೂ ಸುಕ್‌ನ ವಿವಾದಿತ ಸಂಶೋಧನೆಯನ್ನೇ ಆಧಾರವಾಗಿಸಿಕೊಂಡು 2084ರಲ್ಲಿ ಇಬ್ಬರು ಭಾರತೀಯ ಸಂಶೋಧಕರು ಮತ್ತೆ ಸಂಶೋಧನೆ ನಡೆಸಿದರೆ ಏನಾಗಬಹುದು? ಈ ಕಲ್ಪನೆಯು ನಾಟಕ ರೂಪ ತಾಳಿದರೆ ಹೇಗಿರಬಹುದು?

ಇಂಥದ್ದೊಂದು ಕುತೂಹಲವನ್ನಿಟ್ಟುಕೊಂಡು, ಮೈಸೂರಿನ ‘ವರ್ಕ್‌ಶಾಪ್‌ ಇನ್‌ ಮೈಸೂರು... ಫಾರ್‌ ಥಿಯೇಟರ್‌’ ತಂಡದ ಯತೀಶ್‌ ಎನ್‌. ಕೊಳ್ಳೇಗಾಲ ಅವರು ರಚಿಸಿದ ‘ಮಿಲನಸಾಕ್ಷಿ’/ ‘ಅಸ್ಮಿತಾ’ ನಾಟಕವು, ಈ ಬಾರಿಯ (ಜುಲೈ 6–9) ಮೈಸೂರು ವಿಜ್ಞಾನ ನಾಟಕೋತ್ಸವಕ್ಕೆ ಸ್ವಂತ ವಿಜ್ಞಾನ ನಾಟಕಗಳ ಸೆಲೆಯೂ ದೊರಕಿದೆ ಎಂಬುದಕ್ಕೆ ಸಾಕ್ಷಿಯಾಗಿ ಕಂಡಿತು.

ADVERTISEMENT

ವಿಜ್ಞಾನ ಮತ್ತು ಫಿಕ್ಷನ್‌ ಎರಡೂ ಸೇರಿ ನಾಟಕವಾದ ಬಗೆಯಂತೂ ಇನ್ನೂ ರೋಚಕ. ಈ ನಾಟಕ ರಚನೆಯ ಕಲ್ಪನೆ, ಸಿದ್ಧತೆ, ಹಿಂದಿನ ವರ್ಷದ ಉತ್ಸವದ ಸಂದರ್ಭದಲ್ಲೇ ಶುರುವಾಗಿತ್ತು! ಉತ್ಸವವೆಂದರೆ ವರ್ಷದ ಸಿದ್ಧತೆಯೇ ಹೌದಲ್ಲವೇ.

‌‘ಅಸ್ಮಿತಾ’ ನಾಟಕದಂತೆಯೇ, ‘C ವಾರ್ಡ್‌, ಕ್ಯಾನ್ಸರ್‌ ಕಥಾನಕಗಳು’ ನಾಟಕವೂ ಡಾ.ಸಿದ್ಧಾರ್ಥ್‌ ಮುಖರ್ಜಿ ಅವರ ’ದಿ ಎಂಪರರ್ ಆಫ್‌ ಆಲ್ ಮೆಲಡೀಸ್‌’ ಕೃತಿಯನ್ನು ಆಧರಿಸಿದ ಮನೋಜ್ಞ ನಾಟಕ. ಕ್ಯಾನ್ಸರ್‌ ಕುರಿತ ಈ ಜೀವನಚರಿತ್ರೆಯನ್ನೇ ನಾಟಕ ಮಾಡಿ, ನಿರ್ದೇಶಿಸಿದವರು ಮೈಸೂರಿನ ಎಸ್‌.ಆರ್‌.ರಮೇಶ್‌. ಅದನ್ನು ವೇದಿಕೆಗೆ ತಂದಿದ್ದು, ಅವರದ್ದೇ ‘ಪರಿವರ್ತನ ರಂಗ ಸಮಾಜ’ ತಂಡ.

ಭಾರತದ ಪಕ್ಷಿಲೋಕದ ಪಿತಾಮಹ ಡಾ.ಸಲೀಂ ಅಲಿ ಕುರಿತ, ‘ಸಲೀಂ ಅಲಿ; ಪಕ್ಷಿ ಲೋಕದ ಬೆರಗು’ ನಾಟಕವೂ ಅಲಿ ಅವರ ಜೀವನ ಚರಿತ್ರೆಯನ್ನು ಕನ್ನಡದಲ್ಲಿ ತಾಜಾ ಆಗಿ ಗ್ರಹಿಸಿ ಮಂಡಿಸಿದ ವಿಶೇಷ ನಾಟಕ. ‌

‘ಮಾಂಸಾಹಾರಿಯಾಗಿದ್ದ ಸಲೀಂ ಅಲಿ ಅವರು, ಅದು ಹೇಗೆ ಪಕ್ಷಿಗಳನ್ನು ತಂದು ಸಾಕುತ್ತಿದ್ದರು ಎಂಬ ಪ್ರಶ್ನೆಯು ನಾಟಕದ ರಚನೆಯ ಸಂದರ್ಭದಲ್ಲಿ ಮೂಡಿಬಂದಿತ್ತು. ಆಗ, ನಾನು ಕೂಡ ಮಾಂಸಾಹಾರಿಯೇ ಎಂದು ಉತ್ತರಿಸಿದ್ದೆ’ ಎಂದು ಸ್ಮರಿಸುತ್ತಾರೆ ನಾಟಕದ ನಿರ್ದೇಶಕ ಬರ್ಟಿ ಒಲಿವೆರಾ. ಇದು ವಿಜ್ಞಾನದ ತರ್ಕ ಮತ್ತು ಮನುಷ್ಯ ಭಾವನೆಗಳ ನಡುವಿನ ತಾಕಲಾಟ. ‘ಈ ತಾಕಲಾಟವಿರುವ ಕಾರಣಕ್ಕೇ ಸಲೀಂ ಅಲಿ ನಮ್ಮ ಪಕ್ಕದ ಮನೆ ತಾತನ ರೀತಿ ಕಾಣುತ್ತಿದ್ದರು’ ಎನ್ನುತ್ತಾರೆ ಒಲಿವೆರಾ.

ಈ ನಾಟಕದ ಕಲ್ಪನೆಗೂ ಒಂದು ವರ್ಷದ ಚರಿತ್ರೆ ಇದೆ. ನಾಟಕವನ್ನು ರಚಿಸಿದ, ಅರಿವು ರಂಗ ಸಂಸ್ಥೆಯ ಡಾ.ಎಂ.ಸಿ.ಮನೋಹರ್, ಉತ್ಸವಕ್ಕೂ ಮೂರು ತಿಂಗಳು ಮೊದಲೇ ಮೈಸೂರಿನ ರಮಾಬಾಯಿ ಗೋವಿಂದ ರಂಗಮಂದಿರದಲ್ಲಿ ಏರ್ಪಡಿಸಿದ್ದ ಮೊದಲ ಪ್ರದರ್ಶನಕ್ಕೆ ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲೇ ನೆರೆದಿದ್ದರು.

‘ಕನ್ನಡದಲ್ಲಿ ವಿಜ್ಞಾನ ನಾಟಕಗಳು ಹೆಚ್ಚಿಲ್ಲ’ ಎಂಬ ಕೊರತೆಯ ಮಾತನ್ನು ನೀಗಿಸುವತ್ತ ಈ ಮೂರೂ ನಾಟಕಗಳು ಮಹತ್ವದ ಹೆಜ್ಜೆ ಎನ್ನಬೇಕು. ಹೀಗೆ ಉತ್ಸವವು ವಿಜ್ಞಾನ ನಾಟಕಗಳ ಲೋಕದಲ್ಲಿ ಕನ್ನಡದ ಅಸ್ಮಿತೆಯನ್ನು ಹೊಳೆಯುವಂತೆ ಮಾಡಿತು. ಐದು ಉತ್ಸವಗಳಲ್ಲೂ ಅನುವಾದಿತ ವಿಜ್ಞಾನ ನಾಟಕಗಳೇ ಹೆಚ್ಚಿದ್ದವು. ಈ ಬಾರಿ ಕನ್ನಡದ್ದೇ ಎನ್ನುವ ವಿಜ್ಞಾನದ ನಾಟಕಗಳನ್ನು ಮೈಸೂರಿಗರೇ ಬರೆದು ಅಭಿನಯಿಸಿದರು. ನಿರ್ದೇಶಿಸಿದರು.

ಈ ನಾಟಕಗಳೊಂದಿಗೆ ಗಮನ ಸೆಳೆದಿದ್ದು, ಶಿಕ್ಷಕಿ ಸುಮನಾ ಡಿ. ಮತ್ತು ಶಶಿಧರ ಡೋಂಗ್ರೆ ಅವರು ಅನುವಾದಿಸಿದ, ಅಲನ್‌ ಅಲ್ಡಾ ಅವರ, ಮೇರಿ ಕ್ಯೂರಿ ಜೀವನ–ಸಾಧನೆ ಆಧಾರಿತ ನಾಟಕ ‘ಪ್ರಭಾಸ’. ನಾಲ್ಕು ನಾಟಕಗಳ ಪೈಕಿ ಎರಡು ಸಿದ್ಧಾಂತ ಕೇಂದ್ರಿತವಾದರೆ, ಇನ್ನೆರಡು ವ್ಯಕ್ತಿ ಕೇಂದ್ರಿತ.

ಹವ್ಯಾಸಿ ರಂಗಾಭ್ಯಾಸಿಗಳೊಳಗೆ ವಿಜ್ಞಾನಾಸಕ್ತರು, ಲೇಖಕರು, ಅನುವಾದಕರು, ಶಿಕ್ಷಕರು, ವೈದ್ಯರು ಸಮಾನ ಮನಸ್ಸಿನಿಂದ ಸೇರಿಕೊಂಡು ಆದ ಉತ್ಸವ ಇದು. ನಟನೆ, ನಾಟಕ ರಚನೆಯ ಪಾಠಗಳನ್ನು ಕಲಿಯುತ್ತಲೇ, ವೈಜ್ಞಾನಿಕ ಸಿದ್ಧಾಂತ, ಅದರ ಪರಿಭಾಷೆಗಳನ್ನು ಅರಿಯುತ್ತಲೇ ಅದನ್ನು ಸೃಜನಶೀಲ ರೂಪಕ್ಕೆ ತಂದು ರಂಗವೇರಿಸುವ ಪ್ರಯತ್ನವೇ ವಿಜ್ಞಾನ ನಾಟಕೋತ್ಸವ.

ಈ ವರ್ಷದ್ದು ಆರನೇ ಸಂಚಿಕೆ. ಧಾರವಾಡದ ಅಭಿನಯ ಭಾರತಿ ತಂಡವೂ ‌ಎರಡನೇ ಬಾರಿಗೆ ಬಂದು, ‘ಪ್ರಭಾಸ’ ನಾಟಕವನ್ನು ಅಭಿನಯಿಸಿದ್ದು ವಿಶೇಷ. ಹೀಗೆ ಮೈಸೂರಿನಿಂದ ಧಾರವಾಡದವರೆಗೆ ಉತ್ಸಾಹ– ಉಮ್ಮೇದು ತುಯ್ದಾಡುತ್ತಿದೆ. ಈ ಎರಡೂ ಸಾಂಸ್ಕೃತಿಕ ನಗರಗಳ ನಡುವೆ ರಂಗ–ವಿಜ್ಞಾನದ ಬೆಸುಗೆ ಏರ್ಪಟ್ಟಿದೆ. ಹಿಂದಿನ ವರ್ಷ ಮೈಸೂರಿನ ಬಳಿಕ, ಧಾರವಾಡದಲ್ಲೂ ನಡೆದಿತ್ತು. ಈಗ ಮೈಸೂರಿನಲ್ಲಿ ಮುಗಿದಿದೆ. ಧಾರವಾಡದಲ್ಲೂ ಸಿದ್ಧತೆ ನಡೆದಿದೆ.

ನಾಟಕವಷ್ಟೇ ಅಲ್ಲ..

ವಿಜ್ಞಾನ ನಾಟಕಗಳ ಕುರಿತ ಕಾರ್ಯಾಗಾರವೂ ಉತ್ಸವದ ಗರಿಮೆಯನ್ನು ಹೆಚ್ಚಿಸಿತು. ‘ವಿಜ್ಞಾನಿಗಳ ಜೀವನ ಚರಿತ್ರೆ ಮತ್ತು ನಾಟಕ’ ಕುರಿತು ಡಾ.ಎಂ.ಸಿ.ಮನೋಹರ, ‘ನಾಟಕಗಳಲ್ಲಿ ವಿಜ್ಞಾನದ ಪ್ರಗತಿ ಮತ್ತು ವೈಯಕ್ತಿಕ ಪ್ರತಿಷ್ಠೆಯ ಚಿತ್ರಣ’ ಕುರಿತು ಅಜಯ್ ಸ್ವರೂಪ್ ಮಂಡಿಸಿದ ವಿಚಾರಗಳ ಮೇಲೆ ನಡೆದ ಚರ್ಚೆಯೂ ಕುತೂಹಲಕಾರಿಯಾಗಿತ್ತು.

‘2016ರಲ್ಲಿ ಮೊದಲ ಉತ್ಸವ ನಡೆದಾಗ, ವಿಜ್ಞಾನ ನಾಟಕ ಹೇಗೋ ಏನೋ ಎಂದು ಜನ ಅನುಮಾನದಿಂದ ಬರುತ್ತಿದ್ದರು. ಈ ಬಾರಿ ಸಭಾಂಗಣ ಭರ್ತಿಯಾಗಿ ಜನ ನಿರಾಶರಾಗಿ ವಾಪಸು ಹೋದರು. ಇದು ನಮ್ಮ ಯಶಸ್ಸು’ ಎನ್ನುತ್ತಾರೆ ಶಶಿಧರ ಡೋಂಗ್ರೆ.

ಜ್ಞಾನ ಮತ್ತು ತಂತ್ರಜ್ಞಾನವನ್ನು ಭಾರತೀಯ ಭಾಷೆಗಳಲ್ಲಿ ಸಂವಹನ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆ ‘ವಿಜ್ಞಾನ ಪ್ರಸಾರ್‌’ನ ‘ಸ್ಕೋಪ್‌’ ಯೋಜನೆ ಅಡಿ ಕರ್ನಾಟಕದಲ್ಲಿ ವಿಜ್ಞಾನ–ತಂತ್ರಜ್ಞಾನದ ಸಂವಹನ, ಜನಪ್ರಿಯ ವಿಜ್ಞಾನ ಹಾಗೂ ವಿಸ್ತರಣೆಯ ಕಾರ್ಯಕ್ರಮ ‘ಕುತೂಹಲಿ’ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಉತ್ಸವಕ್ಕೆ ಎಂದಿನಂತೆ ಬೆಂಬಲ ನೀಡಿದೆ. ಈ ಬೆಂಬಲದೊಂದಿಗೆ ಪರಿವರ್ತನ ರಂಗ ಸಮಾಜ, ಕಲಾಸುರುಚಿ ಮತ್ತು ಅರಿವು ಸಂಸ್ಥೆ ಉತ್ಸಾಹದಲ್ಲಿ ಮುನ್ನಡೆದಿವೆ.

ವಿಜ್ಞಾನಿಗಳ ಆತ್ಮಕಥೆ ಆಧಾರಿತ ವಿಜ್ಞಾನ ನಾಟಕಗಳ ಹೊಸ ಕಾಲಘಟ್ಟದಲ್ಲಿ ಕನ್ನಡ ರಂಗಭೂಮಿಯು ಹೊಸ ಸೃಜನಶೀಲ ದಿಕ್ಕಿನೆಡೆಗೆ ತಿರುಗಿಕೊಳ್ಳುತ್ತಿದೆ ಎಂದು ಪ್ರತಿಪಾದಿಸುತ್ತಿರುವ ಈ ಹವ್ಯಾಸಿಗಳ ಎದುರು ಹೊಸ ದಿಗಂತಗಳು ತೆರೆದುಕೊಳ್ಳುತ್ತಿವೆ. ಸಸ್ಯವಿಜ್ಞಾನ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿರುವ ಬಿಜಿಎಲ್‌ ಸ್ವಾಮಿ ಹಾಗೂ ವಿಶ್ವವಿಖ್ಯಾತ ಭಾರತೀಯ ಭೌತಶಾಸ್ತ್ರಜ್ಞ ಸರ್‌.ಸಿ.ವಿ.ರಾಮನ್‌ ಜೀವನ ಸಾಧನೆ ಕುರಿತ ನಾಟಕ ರಚನೆಯ ಕಲ್ಪನೆ ಮೊಳಕೆಯೊಡೆದಿದೆ.

‘ಸಲೀಂ ಅಲಿ; ಪಕ್ಷಿ ಲೋಕದ ಬೆರಗು’ ನಾಟಕದ ದೃಶ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.