ಮಾವಿನಕಟ್ಟೆ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಹದಿನಾಲ್ಕು ವರ್ಷಗಳಲ್ಲೇ ರಂಗ ಪ್ರಯೋಗಶಾಲೆಯನ್ನು ರೂಪಿಸಿ, ಅದಕ್ಕೆ ತಮ್ಮ ರಂಗಗುರುಗಳಾದ ಕೆ.ವಿ. ಸುಬ್ಬಣ್ಣ ಅವರ ಹೆಸರನ್ನು ಇಟ್ಟಿರುವುದು ಅಪರೂಪದ ವಿದ್ಯಮಾನ. ಇಂತಹ ರಂಗದೀವಿಗೆಗಳು ಇನ್ನಷ್ಟು ಹೆಚ್ಚಲಿ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಮಾವಿನಕಟ್ಟೆಯ ಸರ್ಕಾರಿ ಶಾಲೆ. ಅಲ್ಲಿ ‘ಕೆ.ವಿ. ಸುಬ್ಬಣ್ಣ ರಂಗ ಪ್ರಯೋಗಶಾಲೆ’ ಎನ್ನುವ ಪ್ರತ್ಯೇಕ ಕೋಣೆ. ನೀನಾಸಂನಲ್ಲಿ ಕಲಿತ ಮೇಷ್ಟರು ತಮ್ಮ ರಂಗಗುರುವಿನ ನೆನಪಿನಲ್ಲಿ ರೂಪಿಸಿರುವ ಪ್ರಯೋಗಶಾಲೆ ಇದೆನ್ನುವುದು ವಿಶೇಷ. ರಂಗಕಲಿಕೆಗೇ ಶಾಲೆಯೊಂದರಲ್ಲಿ ‘ಲ್ಯಾಬ್’ ರೂಪಿಸಿರುವುದು ವಿರಳಾತಿ ವಿರಳ.
ಬಹುತೇಕ ಕೃಷಿ ಕೂಲಿ ಕಾರ್ಮಿಕರ ಮಕ್ಕಳೇ ಓದುತ್ತಿರುವ ಈ ಶಾಲೆಯಲ್ಲಿ ರಂಗ ಶಿಕ್ಷಕ, ಪೆನ್ನಸಮುದ್ರದ ವೆಂಕಟೇಶ್ವರ ಕೆ. ಅವರು ವಿದ್ಯಾರ್ಥಿಗಳ ಕಲಿಕಾಸಕ್ತಿ ಹೆಚ್ಚಿಸಲು ರಂಗಕಲೆಯನ್ನು ಸಾಣೆಯಂತೆ ಮಾಡಿದ್ದಾರೆ. ಅವರ ಪ್ರಯೋಗ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೂ ದೀವಿಗೆಯಾಗುತ್ತಿರುವುದು ವಿಶೇಷ. ದಾವಣಗೆರೆ ಜಿಲ್ಲೆಯಲ್ಲಿ ರಂಗಶಿಕ್ಷಕ ಹುದ್ದೆ ಇರುವುದು ಈ ಶಾಲೆಯಲ್ಲಿ ಮಾತ್ರ ಎನ್ನುವುದಕ್ಕೂ ಅಡಿಗೆರೆ ಎಳೆಯಬೇಕು.
2009ರಲ್ಲಿ ರಂಗಶಿಕ್ಷಕರಾಗಿ ಈ ಶಾಲೆಯಿಂದಲೇ ಸೇವೆ ಆರಂಭಿಸಿರುವ ವೆಂಕಟೇಶ್ವರ, ಆಗ ರಾಜ್ಯದಲ್ಲಿ ನೇಮಕಗೊಂಡಿದ್ದ 47 ರಂಗ ಶಿಕ್ಷಕರ ಪೈಕಿ ಒಬ್ಬರು. ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿಯನ್ನೂ, ಬಿ.ಇಡಿ ಪದವಿಯನ್ನೂ ಪಡೆದಿರುವ ಇವರಿಗೆ ಇಂಗ್ಲಿಷ್ ಕಲಿಸುವ ಮತ್ತೊಂದು ಜವಾಬ್ದಾರಿಯೂ ಹೆಗಲೇರಿದಾಗ ಸಂತಸ ಆಗಿತ್ತು. ಗ್ರಾಮೀಣ ಮಕ್ಕಳಿಗೆ ಕಬ್ಬಿಣದ ಕಡಲೆಯಾಗಿರುವ ಇಂಗ್ಲಿಷ್ ಅನ್ನು ಸುಲಭವಾಗಿ ಕಲಿಸಲು, ರಂಗಕಲೆಯಲ್ಲಿನ ವಿವಿಧ ಆಯಾಮಗಳ ನೆರವು ಪಡೆದದ್ದು ಇವರ ಆಸಕ್ತಿಗೆ ಹಿಡಿದ ಕನ್ನಡಿ.
ಅದು 2012ನೇ ಶೈಕ್ಷಣಿಕ ವರ್ಷ. ಯಕ್ಷಗಾನ, ಮೂಡಲಪಾಯ, ದೊಡ್ಡಾಟ, ಸಣ್ಣಾಟಗಳ ಲವಲೇಷವೂ ಅಡಿಕೆ ನಾಡಿನ ಮಕ್ಕಳಿಗೆ ಗೊತ್ತಿರಲಿಲ್ಲ. ‘ಕಲೆ ಎಂದರೆ ಅದು ಸಿನಿಮಾ ಮತ್ತು ಟಿ.ವಿ.ಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಮಾತ್ರ’ ಎಂದು ಅರಿತಿದ್ದ ಆ ಮಕ್ಕಳನ್ನು ಪಠ್ಯದಲ್ಲಿನ ವಿಷಯಗಳತ್ತ ಆಕರ್ಷಿತರಾಗುವಂತೆ ಮಾಡಲು ಏನಾದರೂ ಮಾಡಬೇಕಾದ ಅಗತ್ಯ, ಅನಿವಾರ್ಯ ಇತ್ತು. ಶಿವಮೊಗ್ಗ ರಂಗಾಯಣದ ಸಹಕಾರದೊಂದಿಗೆ 20 ದಿನಗಳ ರಂಗ ತರಬೇತಿ ಶಿಬಿರಕ್ಕೆ ಆಯ್ದ ಮಕ್ಕಳನ್ನು ಕರೆದೊಯ್ಯಲಾಗಿತ್ತು. ಅಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಬ್ರೆಕ್ಟ್‌ನ ‘ಸುಣ್ಣದ ಸುತ್ತು’ (ಅನುವಾದ: ಎಚ್.ಎಸ್. ವೆಂಕಟೇಶಮೂರ್ತಿ) ನಾಟಕವನ್ನು ಗ್ರಾಮದ ಸಾವಿರಾರು ಜನರೆದುರು ಪ್ರದರ್ಶಿಸಿ ಅಚ್ಚರಿ ಮೂಡಿಸಿದರು. ಮಕ್ಕಳ ಹಿಂಜರಿಕೆಯನ್ನು ಹೊಡೆದೋಡಿಸಲು ರಂಗಕಲೆ ನೆರವಾದ ಆ ಸಂದರ್ಭವನ್ನು ವೆಂಕಟೇಶ್ವರ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ.
ಆಯಾ ವಿಷಯ ಶಿಕ್ಷಕರ ಸಮ್ಮುಖದಲ್ಲೇ, ಪಾಠ–ಪದ್ಯಗಳಲ್ಲಿನ ಅಂಶಗಳನ್ನು ರಂಗಕ್ಕೆ ತಂದು ವಿದ್ಯಾರ್ಥಿಗಳನ್ನೇ ಅದರಲ್ಲಿ ತೊಡಗಿಸಲಾಯಿತು. ಉದಾಹರಣೆಗೆ, ‘ಶಬರಿ’ಯ ಕುರಿತ ಪಾಠವನ್ನು ಓದುವುದರ ಜೊತೆಗೇ ವಿದ್ಯಾರ್ಥಿಗಳು ಕಂಠಪಾಠ ಮಾಡಿ, ಅಭಿನಯಿಸುವಂತೆ ಅಣಿಗೊಳಿಸಲಾಯಿತು.
‘ಆ ವರ್ಷ ನಾವು ಪಠ್ಯವನ್ನು ರಂಗಕ್ಕೆ ತಂದು ಕಲಿಸಿದ ವಿಷಯದಲ್ಲಿ ವಿದ್ಯಾರ್ಥಿಗಳ ಸಾಧನೆ ನಿಜಕ್ಕೂ ಅಚ್ಚರಿ ಮೂಡಿಸಿತ್ತು. ಅದು ಕನ್ನಡ ಮಾತ್ರವಲ್ಲದೆ ಇಂಗ್ಲಿಷ್, ವಿಜ್ಞಾನ, ಸಮಾಜ ಅಧ್ಯಯನ, ಹಿಂದಿ ಮತ್ತು ಗಣಿತ ವಿಷಯಗಳ ಪಠ್ಯವನ್ನೂ ಒಳಗೊಂಡಿದೆ. ‘ಪಾಠನಾಟಕ’ ಮತ್ತು ‘ಗೀತನಾಟಕ’ ಪ್ರಕಾರವು ಮಕ್ಕಳನ್ನು ಆಕರ್ಷಿಸಲು ಹೆಚ್ಚು ಸಮಯವನ್ನೇನೂ ತೆಗೆದುಕೊಳ್ಳಲಿಲ್ಲ’ ಎಂದು ವೆಂಕಟೇಶ್ವರ ರಂಗ ಪ್ರಯೋಗದ ಇನ್ನೊಂದು ಅನುಭವ ಹಂಚಿಕೊಂಡರು.
ಈ ಶಾಲೆಯಲ್ಲೀಗ ಪ್ರತಿ ವಾರ ಇರುವ ಆಯಾ ವಿಷಯಗಳ ಆರು ಪೀರಿಯಡ್‌ಗಳ ಪೈಕಿ ಒಂದು ಪೀರಿಯಡ್ ರಂಗಕಲೆ ಕಲಿಸುವುದಕ್ಕೆ ಮೀಸಲು. ಒಂದು ಪಾಠ ಅಥವಾ ಪದ್ಯದ ಬೋಧನೆ ಪೂರ್ಣಗೊಳ್ಳಲು ನಾಲ್ಕು ಅಥವಾ ಐದು ಪೀರಿಯಡ್‌ಗಳು ಬೇಕು. ಆ ಪಾಠ–ಪದ್ಯ ಪೂರ್ಣಗೊಂಡ ನಂತರದ ಪೀರಿಯಡ್ ರಂಗಸಜ್ಜಿಕೆಯಲ್ಲಿ ನಡೆಯುತ್ತದೆ. ಬೋಧನೆಯ ಮೂಲಕ ಕಲಿತದ್ದನ್ನು ಅವರು ಅಭಿನಯಿಸಿ ಒಪ್ಪಿಸುವುದು ಮುಂದುವರಿದ ಅವಧಿಯ ಕಲಿಕೆಯ ಸಾರಾಂಶ.
ಗೈರಾಗುವ ಸಮಸ್ಯೆಗೆ ಪರಿಹಾರ: ಕೃಷಿ ಚಟುವಟಿಕೆಯಲ್ಲಿ ಪಾಲಕರಿಗೆ ನೆರವು ನೀಡಲೋ, ತಮ್ಮ ತಂಗಿಯರನ್ನು ನೋಡಿಕೊಳ್ಳಲೋ ಶಾಲೆ ತಪ್ಪಿಸುವುದನ್ನು ರೂಢಿಸಿಕೊಂಡಿದ್ದ ಈ ಶಾಲೆಯ ಮಕ್ಕಳು ಬರಬರುತ್ತ ‘ಗೀತನಾಟಕ’ದಂಥ ಅನೌಪಚಾರಿಕ ಬೋಧನೆಯ ಕ್ರಮಕ್ಕೆ ಮನಸೋತರು. ಒಂದೇ ಒಂದು ದಿನ ಶಾಲೆ ತಪ್ಪಿಸಿಕೊಂಡರೂ ಏನನ್ನೋ ಕಳೆದುಕೊಂಡ ಭಾವ ಅವರಲ್ಲಿ ಆವರಿಸುತ್ತಾ ಹೋಯಿತು. ಹೀಗೆ ಅವರ ‘ಶಾಲಾ ಗೈರು’ ಸಮಸ್ಯೆಗೆ ಪರಿಹಾರ ದೊರೆತಿರುವುದು ಅವರ ಕಲಿಕೆಯ ಮೊದಲ ಗೆಲುವೂ ಹೌದು.
ಮಾವಿನಕಟ್ಟೆ ಶಾಲೆಯ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟವನ್ನು ಅಕ್ಕಪಕ್ಕದ ಗ್ರಾಮಗಳ ಇತರ ಪ್ರೌಢಶಾಲೆಗಳ ವಿದ್ಯಾರ್ಥಿಗಳೊಂದಿಗೆ ಹೋಲಿಕೆ ಮಾಡುವುದಾದರೆ, ಅಲ್ಲಿ ಅಜಗಜಾಂತರ ಇರುವುದು ಎದ್ದುಕಾಣುತ್ತದೆ. ಸಂವಹನ ಕಲೆಯಲ್ಲಿ ಈ ವಿದ್ಯಾರ್ಥಿಗಳ ಸಾಧನೆ ಎಂಥವರಲ್ಲೂ ಅಚ್ಚರಿ ಮೂಡಿಸುತ್ತದೆ.
ಜೀವನಕ್ಕೆ ಹತ್ತಿರವಾದ, ಭವಿಷ್ಯ ರೂಪಿಸಿಕೊಳ್ಳಲು ಪೂರಕವಾದ ಅನೇಕ ಅಂಶಗಳ ಅವಲೋಕನವು ರಂಗಶಿಕ್ಷಣದ ಮೂಲಕ ಕಲಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಸಾಧ್ಯವಾಗಿದೆ. ಆಹಾರ ಭದ್ರತೆ ಕುರಿತು ಅವರಲ್ಲಿ ಅರಿವು ಮೂಡಿಸುವ ಪ್ರಯತ್ನಕ್ಕೆ ಜೇಡರ ದಾಸಿಮಯ್ಯನ ‘ಒಡಲುಗೊಂಡವಾ ಹಸಿವಾ’ ಎಂಬ ವಚನವು ಪೂರಕವಾಗಿ ಒದಗಿಬಂದಿದೆ. ಹೊಟ್ಟೆಯ ಹಸಿವನ್ನು ಪರಿಪೂರ್ಣವಾಗಿ ಅನುಭವಿಸುತ್ತಲೇ ಬಂದಿರುವ ಈ ಮಕ್ಕಳಿಂದ ಅಭಿನಯ ತೆಗೆಸಿ, ಆಹಾರದ ಮಹತ್ವ ಸಾರುವ ಈ ಕ್ರಮವೇ ಅನನ್ಯ.
ಸಣ್ಣಪುಟ್ಟ ಪರಿಕರಗಳನ್ನು ಹೊಂದಿಸಿಕೊಳ್ಳಲು ಪೋಷಕರ, ಊರಿನವರ ಮನ ಒಲಿಸುತ್ತಾ ಬಂದ ವೆಂಕಟೇಶ್ವರ ಕೆಲವೇ ವರ್ಷಗಳಲ್ಲಿ ರಂಗ ಪ್ರಯೋಗಶಾಲೆ ರೂಪಿಸಿರುವುದು ಅನುಕರಣೀಯ. ಶಾಲೆಯಲ್ಲಿ ಅದಕ್ಕೊಂದು ಕೊಠಡಿಯನ್ನು ಮಂಜೂರು ಮಾಡಿಸಿಕೊಂಡು, ಮುಖ್ಯ ಶಿಕ್ಷಕರು, ವಿಷಯ ಶಿಕ್ಷಕರ ಮನವೊಲಿಸಿ ‘ಗೀತನಾಟಕ’, ‘ಪಾಠನಾಟಕ’ ಪ್ರಕ್ರಿಯೆ ಯಶಸ್ವಿಯಾಗುವಂತೆ ನೋಡಿಕೊಂಡಿದ್ದಾರೆ.
ಪ್ರಶಸ್ತಿಗಳ ಒಡೆಯರು
ಪ್ರತಿಭಾ ಕಾರಂಜಿ’, ‘ವಿಜ್ಞಾನ ನಾಟಕ’, ‘ಕಲಿಕಾ ನಾಟಕ’ ಸ್ಪರ್ಧಾ ವಿಭಾಗದ ವಿವಿಧ ಪ್ರಶಸ್ತಿಗಳ ಮೇಲೆ ಈ ವಿದ್ಯಾರ್ಥಿಗಳು ಪ್ರತಿವರ್ಷ ತಮ್ಮ ಪಾರಮ್ಯ ಸಾಧಿಸಲು ನೆರವಾಗಿದೆ. ಮಾವಿನಕಟ್ಟೆ ಶಾಲೆಗೆ ರಂಗ ಶಿಕ್ಷಕರ ಹುದ್ದೆ ಭರ್ತಿಯಾಗಿದ್ದರಿಂದ ಆ ಶಾಲೆಯ ಶೈಕ್ಷಣಿಕ ಪ್ರಗತಿಯು ಗೋಡೆಯ ಮೇಲಿನ ಸುಣ್ಣದಂತೆ ಕಂಗೊಳಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.