ADVERTISEMENT

ತೀಂದಾರಿ ಪಾಚ

ಜ್ಯೋತಿ ಹಿಟ್ನಾಳ
Published 4 ಮಾರ್ಚ್ 2023, 19:30 IST
Last Updated 4 ಮಾರ್ಚ್ 2023, 19:30 IST
ವಿಭಿನ್ನವಾಗಿದ್ದ ವೇದಿಕೆಯಲ್ಲಿ ನಡೆದ ತೀಂದಾರಿ ಪಾಚ ನಾಟಕದ ದೃಶ್ಯಗಳು -ಚಿತ್ರಗಳು: ತಾಯಿಲೋಕೇಶ್‌
ವಿಭಿನ್ನವಾಗಿದ್ದ ವೇದಿಕೆಯಲ್ಲಿ ನಡೆದ ತೀಂದಾರಿ ಪಾಚ ನಾಟಕದ ದೃಶ್ಯಗಳು -ಚಿತ್ರಗಳು: ತಾಯಿಲೋಕೇಶ್‌   

ಒಂದು ಹುಡುಗಿ ಋತುಮತಿಯಾದ ತಕ್ಷಣ ಅವಳನ್ನು ಹೊರಗಡೆ ಕೂರಿಸುತ್ತಾರೆ. ನಂತರ ಅವಳಿಗೆ, ಇನ್ನುಮುಂದೆ ನೀನು ಹೊರಗಡೆ ಹೋಗುವ ಹಾಗಿಲ್ಲ, ಗಂಡುಹುಡುಗರ ಜೊತೆಗೆ ಆಟ ಆಡುವ ಹಾಗಿಲ್ಲ, ಅಲ್ಲದೆ ತಲೆ ತಗ್ಗಿಸಿಕೊಂಡು ಹೋಗಬೇಕು... ಹೀಗೆ ಅನೇಕ ಕಟ್ಟುಪಾಡುಗಳನ್ನು ಹಾಕಲಾಗುತ್ತದೆ. ಮುಟ್ಟಾದಾಗ ಕೆಲವೆಡೆ ಆಕೆ ಊರ ಹೊರಗೆ ಇರಬೇಕಾದುದರಿಂದ ಅಲ್ಲಿ ಅವಳಿಗಾಗುವ ಭಯ, ಗೊಂದಲ ಹಾಗೂ ಅನೇಕ ಶೋಷಣೆಗಳ ಬಗ್ಗೆ ವಿವರಣೆ ಕೊಡುತ್ತದೆ ‘ತೀಂದಾರಿ ಪಾಚ’. ಋತುಚಕ್ರದ ಸುತ್ತ ನಡೆಯುತ್ತಿರುವ ಆಚರಣೆಗಳು ಮತ್ತು ವಿಧಿನಿಷೇಧಗಳಿಂದ ಮಹಿಳೆಯರ ಮೇಲೆ ಆಗುವ ಪರಿಣಾಮಗಳನ್ನು ಒಳಗೊಂಡ ನಾಟಕ ಇದಾಗಿದೆ. ಕೇರಳದ ಕೊಲ್ಲಂನ ಪ್ರಕಾಶ್ ಕಲಾ ಕೇಂದ್ರದ ಕಲಾವಿದರು ಈ ನಾಟಕವನ್ನು ಇತ್ತೀಚೆಗೆ ಸಿಜಿಕೆ ರಂಗೋತ್ಸವದಲ್ಲಿ ಪ್ರದರ್ಶಿಸಿದರು. ಎಮಿಲ್ ಮಾಧವಿ ರಚನೆಯ ಈ ನಾಟಕವನ್ನು ನಿರ್ದೇಶಿಸಿದ್ದು ಶ್ರೀಜಿತ್ ರಮಣನ್.

ಥಿಯೇಟರ್ ಆಫ್ ರೌಂಡ್ ಎಂಬ ಪರಿಕಲ್ಪನೆಯನ್ನು ಇಟ್ಟುಕೊಂಡು ಪ್ರೇಕ್ಷಕರ ಮಧ್ಯದಲ್ಲಿ ಈ ನಾಟಕವನ್ನು ಪ್ರಯೋಗಿಸಲಾಯಿತು. ಹಾಗಾಗಿಯೇ ಈ ನಾಟಕದಲ್ಲಿ ಗುಂಪು ದೃಶ್ಯಗಳಿಗೆ ಹೆಚ್ಚು ಪ್ರಾಮುಖ್ಯ ನೀಡಲಾಗಿತ್ತು. ಮುಟ್ಟಿನ ದೋಷದ ವಿಷಯವಸ್ತುವನ್ನು ಇಟ್ಟುಕೊಂಡು ಹಾವಿನ ನೃತ್ಯದ ಮೂಲಕ ನಾಟಕಕ್ಕೆ ಚಾಲನೆ ನೀಡಲಾಯಿತು. ಮುಟ್ಟಾದಾಗ ಹೊರಗಡೆ ಇರುವ ಮಹಿಳೆಯ ಅಂತರಾಳದ ದುಗುಡ, ಭಯ, ಹಿಂಜರಿಕೆ ಮತ್ತು ಶೋಷಣೆಯ ವಿವರಗಳು ಮುಂದೆ ಬಿಚ್ಚಿಕೊಳ್ಳುತ್ತಾ ಸಾಗಿದವು. ಮಹಿಳೆಯ ದೇಹದ ಚಿತ್ರಣವೇ ಒಂದು ಶಕ್ತಿ ಎಂಬಂತಹ ರೂಪಕವನ್ನು ಇಲ್ಲಿ ಮುಖ್ಯವಾಗಿ ಕಟ್ಟಿಕೊಡಲಾಯಿತು.

ಈ ನಾಟಕದ ಕಥಾವಸ್ತು ಬಹಳ ಸೂಕ್ಷ್ಮ ಹಾಗೂ ಸಮಾಜದಿಂದ ಹೊರಗಿಟ್ಟಂತಹ ವಿಷಯವಸ್ತುವಾದ್ದರಿಂದ ನಾಟಕದಲ್ಲಿ ಪರಿಕರಗಳನ್ನು ಇನ್ನೂ ಹೆಚ್ಚು ಬಳಸಬಹುದಿತ್ತು. ಹಾಗೆಯೇ ಮುಟ್ಟಿನ ಸಂದರ್ಭದಲ್ಲಿ ಬಳಸುವಂತಹ ಪ್ಯಾಡ್‌ಗಳ ವಿಲೇವಾರಿ ಮಾಡಲು ಸುಡುವ ಪರಿಹಾರವನ್ನು ಅಲ್ಲಿ ತೋರಿಸಿದ್ದು ಸರಿಯಾದ ಸಂದೇಶವಾಗಿರಲಿಲ್ಲ. ಆದಿಯಿಂದ ಅಂತ್ಯದವರೆಗೂ ಭಾವನೆಗಳ ಹಲವಾರು ಆಯಾಮಗಳನ್ನು ನಾಟಕ ಬಿಚ್ಚಿಡುತ್ತಲೇ ಹೋಯಿತು. ಮುಟ್ಟಾದ ಮಹಿಳೆಯರ ಮೇಲೆ ಆಗುವ ಮಾನಸಿಕ ಮತ್ತು ದೈಹಿಕ ಹಿಂಸೆಗಳನ್ನು ಹಲವು ಸನ್ನಿವೇಶಗಳ ಮೂಲಕ ತೆರೆಯ ಮುಂದೆ ತರಲಾಯಿತು. ಸಹಜವಾಗಿ ಆಗುವ ಮುಟ್ಟನ್ನು ಅಸಹಜವಾಗಿ ನೋಡುವ ಮತ್ತು ಮನುಷ್ಯನ ಹಲವು ನಂಬಿಕೆಗಳು ಹೇಗೆ ಮನುಷ್ಯನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಇಲ್ಲಿ ಪ್ರಸ್ತುತಪಡಿಸಲಾಯಿತು.

ADVERTISEMENT
ತೀಂದಾರಿ ಪಾಚ ನಾಟಕದ ದೃಶ್ಯ

ಇನ್ನು ಮುಂದೆ ಮನುಷ್ಯರು ಮನುಷ್ಯರ ಮೇಲೆ ಮಾಡುವ ತಾರತಮ್ಯ, ಹಿಂಸೆ, ಅವಮಾನ ಎಲ್ಲವುಗಳನ್ನೂ ಹೋಗಲಾಡಿಸಿ ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವಂತಹ ಹಾಗೂ ಮನುಷ್ಯರನ್ನು ಮನುಷ್ಯರಂತೆ ನೋಡುವಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕೆಂಬ ಆಶಯವನ್ನು ಈ ನಾಟಕ ಅಭಿವ್ಯಕ್ತಿಸಿತು.

ನಾಟಕದ ನಿರ್ದೇಶಕ ಶ್ರೀಜಿತ್‌ ರಮಣನ್‌ ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ...

* ನಾಟಕಕ್ಕೆ ಈ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡ ಹಿನ್ನೆಲೆ ಏನು?

ನಾನು ಈ ನಾಟಕದ ತಯಾರಿಯನ್ನು ಕೋವಿಡ್‌ಗಿಂತ ಸುಮಾರು 2 ವರ್ಷಗಳ ಹಿಂದೆಯೇ ಪ್ರಾರಂಭಿಸಿದ್ದೆ. ಮೊದಲ ಬಾರಿಗೆ ಮಹಿಳೆಯರೊಂದಿಗೆ ನಾಟಕ ನಿರ್ದೇಶನ ಮಾಡುವಾಗ ಸ್ವಲ್ಪ ಗೊಂದಲಕ್ಕೊಳಗಾಗಿದ್ದೆ. ಈ ನಾಟಕದಲ್ಲಿ ಎಲ್ಲರೂ ಸ್ತ್ರೀ ಪಾತ್ರಧಾರಿಗಳು. ಅದರಲ್ಲೂ ಮುಟ್ಟಿನ ಕುರಿತ ಕಥಾವಸ್ತು. ಈ ಕಥಾವಸ್ತುವನ್ನು ಹೇಗೆ ನಿಭಾಯಿಸಬೇಕೆಂಬ ಯೋಚನೆಯಲ್ಲಿ ನನ್ನ ಹೆಂಡತಿಯೊಂದಿಗೆ ಮಾತನಾಡಿದೆ. ಮುಟ್ಟಿನ ಕುರಿತು ಹಲವು ಗೊತ್ತಿರದ ಸಂಗತಿಗಳು ಅರಿವಿಗೆ ಬಂದವು. ಸಾರ್ವಜನಿಕ ಸ್ಥಳಗಳು ಮಹಿಳೆಯರಿಗೆ ಮುಟ್ಟಿನಸ್ನೇಹಿ ಆಗಿಲ್ಲ ಎನ್ನುವುದೂ ಮನದಟ್ಟಾಯಿತು.

ನಾವು ಸಮಾನತೆಯ ಬಗ್ಗೆ ಮಾತನಾಡುತ್ತೇವೆ. ಆದರೆ, ಹೆಣ್ಣಿಗೆ ಸರಿಯಾದ ವಾತಾವರಣವನ್ನು ಕಲ್ಪಿಸದೆ ಸಮಾನತೆಯ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ. ಈ ನಾಟಕವನ್ನು ರಂಗದ ಮೇಲೆ ತರಲು ಈ ಯೋಚನೆಯೂ ಒಂದು ಮುಖ್ಯ ಕಾರಣ. ಶಬರಿಮಲೆ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸುವಂತಿಲ್ಲ ಎಂಬ ನಿಯಮ ಇತ್ತಲ್ಲ? ಕೋರ್ಟ್‌ ಅವಕಾಶ ಕೊಟ್ಟರೂ ಮಹಿಳೆಯರ ದೇವಾಲಯ ಪ್ರವೇಶದ ವಿರುದ್ಧ ಪ್ರತಿಭಟನೆಗಳು ನಡೆದವು. ಅವರು ಹೇಳಿದ ಮುಖ್ಯ ಕಾರಣವೆಂದರೆ, ಮುಟ್ಟು ಅಶುದ್ಧ. ಇಂತಹ ಮೂಢನಂಬಿಕೆಗಳು ಈ ನಾಟಕವನ್ನು ಮಾಡಲೇಬೇಕು ಎಂದು ನನ್ನನ್ನು ಮತ್ತಷ್ಟು ಪ್ರೇರೇಪಿಸಿದವು.

ಎಮಿಲ್ ಮಾಧವಿ ನಾಟಕ ಬರೆದರು. ಈ ನಾಟಕದಲ್ಲಿ ಪಾತ್ರ ಮಾಡುವವರೆಲ್ಲ ವೃತ್ತಿಪರ ಕಲಾವಿದರಲ್ಲ. ಅವರಿಗೆ ಯಾವುದೇ ನಾಟಕದ ಅನುಭವವಿಲ್ಲ. ಹೆಚ್ಚಿನವರು ಗೃಹಿಣಿಯರು, ಸರ್ಕಾರಿ ನೌಕರರು, ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರು. ಇದು ಸಾಂಪ್ರದಾಯಿಕ ವೇದಿಕೆಯ ಮೇಲೆ ನಡೆಯುವಂತಹ ನಾಟಕವಲ್ಲ. ಪ್ರೇಕ್ಷಕರ ನಡುವೆ ವೃತ್ತಾಕಾರದ ರಂಗಮಂಚದ ಮೇಲೆ ಪ್ರಯೋಗಿಸುತ್ತಿದ್ದೇವೆ. ಹೀಗೆ ಮಾಡುವುದರಿಂದ ಇದು ಪ್ರೇಕ್ಷಕ ಸ್ನೇಹಿಯಾಗಿರುತ್ತದೆ.

ತೀಂದಾರಿ ಪಾಚ ನಾಟಕದ ದೃಶ್ಯ

* ಈ ನಾಟಕವನ್ನು ಮಾಡುವಾಗ ನೀವು ಎದುರಿಸಿದ ಸವಾಲುಗಳು ಯಾವುವು?

ಮೊದಲ ಬಾರಿಗೆ ಒಂದು ಹಳ್ಳಿಯಲ್ಲಿ ಸುಮಾರು 45-50 ಜನರು ಈ ನಾಟಕವನ್ನು ನೋಡಲು ಸೇರಿದ್ದರು. ಆಗ ನಾನು ಮುಟ್ಟಿನ ಕುರಿತು ಇರುವ ನಾಟಕದ ವಿಷಯವನ್ನು ಪರಿಚಯಿಸಿದಾಗ, ಮೈದಾನದಿಂದ ಸ್ವಲ್ಪ ಜನ ಹೋಗಿಬಿಟ್ಟರು. ಇನ್ನೂ ಸಾಕಷ್ಟು ಜನರು ಉಳಿದುಕೊಂಡಿರುವುದನ್ನು ನಾನು ಗಮನಿಸಿದೆ. ಇದು ಅವರ ಸಮಸ್ಯೆಯಲ್ಲ, ಇದು ನಮ್ಮ ಸಮಾಜದ ವ್ಯವಸ್ಥೆಯ ಸಮಸ್ಯೆ. ಹಾಗಾಗಿಯೇ ಈ ನಿರ್ದಿಷ್ಟ ವಿಷಯದ ಬಗ್ಗೆ ಗಟ್ಟಿಯಾಗಿ ಮಾತನಾಡಲು ಅವರು ಸಿದ್ಧರಿಲ್ಲ. ಅಲ್ಲಿ ಕೆಲವು ಹುಡುಗಿಯರು ಇದ್ದರು. ಒಬ್ಬರಿಗೊಬ್ಬರು ಅಂಟಿಕೊಂಡು ನಾಟಕವನ್ನು ನೋಡುತ್ತಿದ್ದರು. ಆದರೆ, ಯಾರೂ ಮಾತನಾಡಲು ಸಿದ್ಧರಿರಲಿಲ್ಲ.

ಒಟ್ಟು 12 ಜನ ಪಾತ್ರಧಾರಿಗಳು. ಅವರಲ್ಲಿ ಒಬ್ಬಳ ಊರಲ್ಲಿ ಯಾವುದೇ ಹುಡುಗಿಗೆ ಮೊದಲ ಬಾರಿಗೆ ಋತುಸ್ರಾವ ಆದಾಗ, ಬಹಳ ಸಾಂಪ್ರದಾಯಿಕ ಆಚರಣೆಗಳನ್ನು ಮಾಡುತ್ತಿದ್ದರು. ನಾಟಕದ ಮೊದಲ ದೃಶ್ಯದಲ್ಲಿ ಅವಳ ಬಾಲ್ಯದ ನೆನಪುಗಳನ್ನು ವಿವರಿಸಲು ಪ್ರಾರಂಭಿಸಿದಳು. ಆ ಸನ್ನಿವೇಶದ ದೃಶ್ಯದಿಂದ ಭಾಷೆಯನ್ನು ವಿಭಿನ್ನ ರೀತಿಯಲ್ಲಿ ರಚಿಸಲು ಸಾಧ್ಯವಾಯಿತು.

ಮೊದಲ ಪ್ರದರ್ಶನದ ನಂತರ ಸಣ್ಣ ಟೀಕೆಗಳು ಬಂದವು, ಕೆಲವು ಹಿರಿಯ ರಂಗಕರ್ಮಿಗಳು ಮತ್ತು ಕೆಲವು ಹಿರಿಯರು, ಈ ವಿಷಯದ ಬಗ್ಗೆ ಈಗ ಏಕೆ ಮಾತನಾಡುತ್ತಿದ್ದೀರಿ ಎಂದು ಕೇಳಿದರು. ಆದರೆ, ನಾವು ಯಾವುದೇ ಉತ್ತರವನ್ನು ನೀಡಲಿಲ್ಲ. ಕಾರ್ಯಕ್ರಮದ ನಂತರ, ಸಾರ್ವಜನಿಕರಲ್ಲಿ ಮಹಿಳಾ ಪ್ರೇಕ್ಷಕರು, ಪ್ರತಿಕ್ರಿಯಿಸಲು ಪ್ರಾರಂಭಿಸಿದರು.

ನಾಟಕ ರಚನೆಗೆ ಮುಖ್ಯ ವಿಷಯವೆಂದರೆ ಮೆಡಿಕಲ್ ಸ್ಟೋರ್‌ನಿಂದ ಸ್ಯಾನಿಟರಿ ಪ್ಯಾಡ್‌ಗಳನ್ನು ಖರೀದಿಸಲು ಹೋದಾಗ, ನೀವು ಅದನ್ನು ಮುಚ್ಚುವ ಅಗತ್ಯವಿಲ್ಲ ಎನ್ನುವುದು. ಆ ಬದಲಾವಣೆ ತರುವಲ್ಲಿ ನಮ್ಮ ನಾಟಕ ಯಶಸ್ವಿಯಾಗಿದೆ. ಮಹಿಳೆಯರು ಅಳುಕದೆ ಪ್ಯಾಡ್‌ ಖರೀದಿಸಿ ಮನೆಗಳಿಗೆ ತೆಗೆದುಕೊಂಡು ಹೋಗುವ ಧೈರ್ಯದ ಮನೋಭಾವವನ್ನು ಬೆಳೆಸಿಕೊಂಡಿದ್ದಾರೆ. ನಮ್ಮ ನಾಟಕದ ಪಾತ್ರಧಾರಿಗಳೂ ಅವರ ಜೀವನಶೈಲಿಯಲ್ಲಿ ಬಹಳಷ್ಟು ಬದಲಾವಣೆಯನ್ನು ಮಾಡಿಕೊಂಡಿದ್ದಾರೆ. ಈ ನಾಟಕದ ಕಾರಣದಿಂದಾಗಿ ನಮ್ಮ ಸರ್ಕಾರದವರು ಇತ್ತೀಚೆಗೆ ಕಾಲೇಜು ವಿದ್ಯಾರ್ಥಿನಿಯರಿಗೆ ಅವರ ಮುಟ್ಟಿನ ಸಮಯದಲ್ಲಿ ಹಾಜರಾತಿ ನೀಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.