ADVERTISEMENT

ಇಡಗುಂಜಿ ಮೇಳಕ್ಕೆ ಯುನೆಸ್ಕೊ ಗರಿ! ಜಗದಗಲ ಯಕ್ಷ ಕಂಪು

ಮೂಲತತ್ವ ಮರೆಯದೆ ಚೌಕಟ್ಟು ಕಾಯ್ದುಕೊಂಡವರಿಗೆ ಯುನೆಸ್ಕೊ ಗರಿ

ಗಣಪತಿ ಹೆಗಡೆ
Published 10 ನವೆಂಬರ್ 2024, 1:04 IST
Last Updated 10 ನವೆಂಬರ್ 2024, 1:04 IST
ಉತ್ತರ ಕನ್ನಡ ಜಿಲ್ಲೆ ಇಡಗುಂಜಿಯ ಮಹಾಗಣಪತಿ ಯಕ್ಷಗಾನ ಮಂಡಳಿಯ ಕಲಾವಿದರು ಯಕ್ಷಗಾನ ಪ್ರದರ್ಶನದಲ್ಲಿ ತೊಡಗಿರುವುದು
ಉತ್ತರ ಕನ್ನಡ ಜಿಲ್ಲೆ ಇಡಗುಂಜಿಯ ಮಹಾಗಣಪತಿ ಯಕ್ಷಗಾನ ಮಂಡಳಿಯ ಕಲಾವಿದರು ಯಕ್ಷಗಾನ ಪ್ರದರ್ಶನದಲ್ಲಿ ತೊಡಗಿರುವುದು   

ಕಿರೀಟ, ಪ್ರಸಾದನ ಸಾಮಗ್ರಿಗಳನ್ನೆಲ್ಲ ಕಬ್ಬಿಣದ ಪೆಟ್ಟಿಗೆಯಲ್ಲಿ ಹೊತ್ತ ಊರೂರು ತಿರುಗುತ್ತ ಪೌರಾಣಿಕ ಪ್ರಸಂಗ ಪ್ರದರ್ಶಿಸುತ್ತಿದ್ದ ಕಾಲ... ತರುವಾಯ ಎತ್ತಿನಗಾಡಿಯಲ್ಲಿ ಸರಂಜಾಮು ಹೇರಿಕೊಂಡು ಸಾಗಿ ಪ್ರದರ್ಶನ ನೀಡುತ್ತಿದ್ದ ಸಮಯ... ಕಾಲ ಬದಲಾದಂತೆ ಡಾಂಬರು ರಸ್ತೆಯಲ್ಲಿ ಲಾರಿ, ಟೆಂಪೊ, ಜೀಪು ಹೀಗೆ ವಾಹನಗಳನ್ನೇರಿ ಕಲಾವಿದರೊಂದಿಗೆ ಟೆಂಟ್ ಹೂಡಿ ಯಕ್ಷಗಾನ ಆಡಿಸುತ್ತಿದ್ದ ಘಳಿಗೆ... ಮೊಬೈಲ್ ಯುಗದಲ್ಲಿ, ಕಾರ್ಪೊರೇಟ್ ಜಗತ್ತಿಗೆ ತಕ್ಕಂತೆಯೂ ಪ್ರದರ್ಶನಕ್ಕೆ ಕುಂದುಬಾರದಂತೆ ಕಲೆ ಪ್ರದರ್ಶಿಸುವ ಪರಿ... ಹೀಗೆ ಬದಲಾದ ಕಾಲಕ್ಕೆ ತಕ್ಕಂತೆ ವ್ಯವಸ್ಥೆಗಳನ್ನು ಬಳಸಿಕೊಳ್ಳುತ್ತಲೇ ಯಕ್ಷಗಾನ ಕಲೆಯ ಉಳಿವಿಗೆ ನಿರಂತರತೆ ಕಾದುಕೊಂಡು ಬಂದ ‘ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ’ಗೆ (‘ಶ್ರೀ ಇಡಗುಂಜಿ ಮೇಳ’ ಎಂಬುದಾಗಿ ಹೆಚ್ಚು ಚಾಲ್ತಿಯಲ್ಲಿದೆ) 91ರ ಹರೆಯ.

‘ಕೆರೆಮನೆ’ ಎಂಬ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಪುಟ್ಟ ಗ್ರಾಮವು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣವಾದ ಇಡಗುಂಜಿ ಮೇಳಕ್ಕೆ ಯುನೆಸ್ಕೊ ಮಾನ್ಯತೆ ಸಿಕ್ಕಿದೆ. ಪುಟ್ಟ ಗ್ರಾಮವನ್ನು ವಿಶ್ವಕ್ಕೆ ಪರಿಚಯಿಸಿದ್ದಲ್ಲದೆ, ಯಕ್ಷಗಾನ ಕಲೆಗೆ ವಿಶ್ವ ಮಾನ್ಯತೆ ದೊರಯಲು ಕಾರಣವಾಗಿದೆ. ರಾಜ್ಯ, ರಾಷ್ಟ್ರದ ಅತ್ಯಲ್ಪ ಭಾಗಕ್ಕೆ ಪರಿಚಿತವಾಗಿದ್ದ ‘ಯಕ್ಷಗಾನ ಕಲೆ’ ಜಗದಗಲಕ್ಕೆ ಪಸರಿಸಲು ನಾಂದಿ ಹಾಡಿದೆ.

ಯಕ್ಷಗಾನ ಕ್ಷೇತ್ರದ ಯುಗಪುರುಷ ಎಂದೇ ಖ್ಯಾತಿ ಪಡೆದಿದ್ದ ದಿವಂಗತ ಕೆರೆಮನೆ ಶಿವರಾಮ ಹೆಗಡೆ ಇಡಗುಂಜಿ ಮೇಳ ಕಟ್ಟಿದವರು. 1934ರಲ್ಲಿ ಯಕ್ಷಗಾನ ಕಲೆಯನ್ನು ಪೋಷಿಸಲು, ಕಲಾವಿದರನ್ನು ಬೆಳೆಸಲು ಅವರು ಆರಂಭಿಸಿದ ಮೇಳಕ್ಕೆ ಈಗ 91ರ ಹರೆಯ. ಒಂಬತ್ತು ದಶಕ ಕಳೆದರೂ ಮೇಳದ ಖ್ಯಾತಿ ಕುಗ್ಗಿಲ್ಲ, ಯಕ್ಷಗಾನ ಲೋಕಕ್ಕೆ ವರ್ಷದಿಂದ ವರ್ಷಕ್ಕೆ ಹೊಸತನವನ್ನು ಕಟ್ಟಿಕೊಡುತ್ತ, ಹಳೆತನವನ್ನು ಉಳಿಸಿಕೊಳ್ಳುತ್ತಲೇ ನವನವೀನ ಕಲಾವಿದರನ್ನು ಪರಿಚಯಿಸುತ್ತ ಸಾಗಿಬಂದ ಮೇಳದ ಸಾಧನೆ ಸೋಜಿಗವೇ ಸರಿ.

ADVERTISEMENT

ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದ ದಿನಗಳಲ್ಲಿ ಕಲೆಯೊಂದರ ಉಳಿವಿಗೆ ಶ್ರಮಿಸುತ್ತಲೇ ಸ್ವಾತಂತ್ರ್ಯ ಹೋರಾಟಕ್ಕೂ ಯಕ್ಷಗಾನದ ಮೂಲಕ ಬಲ ತುಂಬಿದ ಕೆರೆಮನೆ ಕುಟುಂಬ ಈ ಕ್ಷೇತ್ರದಲ್ಲಿ ಅಚ್ಚಳಿಯದ ಹೆಸರು ಮಾಡಿದೆ.

ಶಿವರಾಮ ಹೆಗಡೆ ನಂತರ ಅವರ ಮಗ ಕೆರೆಮನೆ ಶಂಭು ಹೆಗಡೆ ಹಲವು ದಶಕ ಮೇಳವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಈಗ ಅವರ ಮಗ ಕೆರೆಮನೆ ಶಿವಾನಂದ ಹೆಗಡೆ ಮೇಳದ ಸಾರಥಿಯಾಗಿದ್ದಾರೆ. ಅವರ ಮಗ ಕೆರೆಮನೆ ಶ್ರೀಧರ ಹೆಗಡೆ ಕೂಡ ಉನ್ನತ ವ್ಯಾಸಂಗ ಮುಗಿಸಿ, ಊರಿಗೆ ಮರಳಿ ಯಕ್ಷ ಕೈಂಕರ್ಯಕ್ಕೆ ದುಡಿಯುತ್ತಿದ್ದಾರೆ.

ಒಂಬತ್ತು ದಶಕಗಳಲ್ಲಿ 9,000ಕ್ಕಿಂತ ಹೆಚ್ಚು ಯಕ್ಷಗಾನ ಪ್ರದರ್ಶನ ನೀಡಿರುವ ಮೇಳವು ನೂರಾರು ಕಲಾವಿದರನ್ನು ಪೋಷಿಸಿದೆ. ಕನ್ನಡನಾಡಿನ, ಬಡಗು ತಿಟ್ಟಿನ ಕಲೆಯನ್ನು ದೇಶದ ವಿವಿಧೆಡೆ ಹಾಗೂ ವಿದೇಶಗಳಲ್ಲಿಯೂ ಪ್ರದರ್ಶಿಸಿದ್ದು ಮೇಳದ ಸಾಧನೆ.

15ಕ್ಕೂ ಹೆಚ್ಚು ಕಲಾವಿದರು ಮೇಳದಲ್ಲಿ ದುಡಿಯುತ್ತಿದ್ದಾರೆ. ವರ್ಷದ ಬಹುಪಾಲು ದಿನವೂ ಒಂದಲ್ಲ ಒಂದು ವೇದಿಕೆಯಲ್ಲಿ ಯಕ್ಷ ವೇಷ ಧರಿಸಿ, ಕುಣಿಯುತ್ತಲೇ ಇರುವುದು ಇವರ ಕಾಯಕ. ದುಡಿಮೆಯ ಜೊತೆ ಜೊತೆಗೆ ಯಕ್ಷಗಾನ ಕಲೆಯನ್ನು ಪೋಷಿಸುತ್ತ ಮೇಳಕ್ಕೆ ಬಲ ತುಂಬುತ್ತಿದ್ದಾರೆ. ಇನ್ನೊಂದರ್ಥದಲ್ಲಿ ಮೇಳ ಇವರಿಗೆ ಜೀವನಾಡಿಯಾಗಿದೆ.

‘ಯಕ್ಷಗಾನ ಕ್ಷೇತ್ರಕ್ಕೆ ನಮ್ಮ ಕುಟುಂಬದ ನಾಲ್ಕು ತಲೆಮಾರು ಸಂಪೂರ್ಣ ಜೀವನ ಅರ್ಪಿಸಿದೆ. ಕುಟುಂಬ ಅಂದರೆ ಕೇವಲ ಅಜ್ಜ, ಅಪ್ಪ, ಮಗ ಅಲ್ಲ. ಕ್ಷೇತ್ರದಲ್ಲಿ ದುಡಿಯುವ ಕಲಾವಿದರೆಲ್ಲರೂ ಕುಟುಂಬದ ಸದಸ್ಯರೆಂದು ಭಾವಿಸುತ್ತೇವೆ. ಇದನ್ನೇ ನಮ್ಮ ಪೂರ್ವಜರು ಕಲಿಸಿಕೊಟ್ಟಿದ್ದು. ಇಡಗುಂಜಿ ಮೇಳದ ಯಶಸ್ಸಿಗೆ ಈ ಆಶಯವೇ ಮುಖ್ಯ ಕಾರಣ’ ಎನ್ನುತ್ತಾರೆ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮೇಳದ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ.

‘ಅಜ್ಜ ಶಿವರಾಮ ಹೆಗಡೆ ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದ ದಿನಗಳಲ್ಲಿ ಬಡಗು ತಿಟ್ಟಿನ ಯಕ್ಷಗಾನ ಕಲೆಯನ್ನು ಪೋಷಿಸಲು ಸಮಾನ ಮನಸ್ಕ ಕಲಾವಿದರನ್ನು ಸೇರಿಸಿಕೊಂಡು ಮೇಳ ಕಟ್ಟಿದರು. ಅವರೇ ರಚಿಸಿದ ಹಲವು ಯಕ್ಷ ಪ್ರಸಂಗಗಳನ್ನು ಪ್ರದರ್ಶಿಸುತ್ತ, ಹಲವು ಕಲಾವಿದರನ್ನು ಬೆಳೆಸಿದರು. ಅವರ ಬಳಿಕ ತಂದೆ ಶಂಭು ಹೆಗಡೆ ಮೇಳವನ್ನು ಬ್ರ್ಯಾಂಡ್ ಆಗಿಸಿದರು. ಅವರ ಕಲಾಸಕ್ತಿ, ಪ್ರತಿಭೆ ಯಕ್ಷಗಾನ ಕ್ಷೇತ್ರವನ್ನು ದೇಶದ ಉದ್ದಗಲಕ್ಕೆ ಪರಿಚಯಿಸಲು ನೆರವಾಯಿತು’ ಎನ್ನುತ್ತ ಮೇಳದ ಯಶೋಗಾಥೆ ವಿವರಿಸಿದರು.

‘ಚಲನಚಿತ್ರದಲ್ಲಿ, ಕ್ರಿಕೆಟ್ ಅಂಗಳದಲ್ಲಿ ಖ್ಯಾತನಾಮ ಜೋಡಿ ಸೆಲೆಬ್ರೆಟಿಗಳು, ಆಟಗಾರರಿದ್ದರೆ ಪ್ರೇಕ್ಷಕ ಎವೆಯಿಕ್ಕದೆ ನೋಡುತ್ತಾನೆ. ಆಗ ನನ್ನಜ್ಜ ಕೆರೆಮನೆ ಶಿವರಾಮ ಹೆಗಡೆ ಕುಣಿತ, ಮಾವಿನಕೆರೆಯ ಯಾಜಿ ಭಾಗವತರ ಕಂಠಸಿರಿಗೆ, ಅಪ್ಪ ಕೆರೆಮನೆ ಶಂಭು ಹೆಗಡೆ ಕುಣಿತ ಮತ್ತು ನೆಬ್ಬೂರು ನಾರಾಯಣ ಭಾಗವತರ ಕಂಠ ಮಾಧುರ್ಯಕ್ಕೆ ಪ್ರೇಕ್ಷಕ ಮನಸೋಲುತ್ತಿದ್ದ. ಈಗಲೂ ಮೇಳದಲ್ಲಿ ಪ್ರೇಕ್ಷಕ ವರ್ಗ ಸೆಳೆಯಬಲ್ಲ ಕಲಾವಿದರಿದ್ದಾರೆ. ಆದರೆ, ಕಳೆದ ನಾಲ್ಕು ದಶಕಗಳಿಂದ ಈಚೆಗೆ ಯಕ್ಷಗಾನ ಮಿತಿ ಮೀರಿದ ವಿಕೃತಿ ಕಂಡಿದೆ. ಪೌರಾಣಿಕ ಕಥೆಗಳ ಹೊರತಾಗಿ ಹೊಸ ಪ್ರಸಂಗಗಳ ಹಾವಳಿ ಆಘಾತವನ್ನೇ ಉಂಟುಮಾಡಿದವು. ಇವುಗಳ ನಡುವೆಯೂ ಇಡಗುಂಜಿ ಮೇಳವು ದೀರ್ಘ ಪರಂಪರೆಗೆ ಧಕ್ಕೆ ತರಲು ಅವಕಾಶ ಕೊಡಲಿಲ್ಲ. ಪೌರಾಣಿಕ ಚೌಕಟ್ಟಿನ ಆಖ್ಯಾನಗಳೇ ಮೇಳ ಉಳಿಸಿದವು, ಕಲೆಯ ಮೂಲಸತ್ವವನ್ನೂ ಜೀವಂತವಿರಿಸುವ ಪ್ರಯತ್ನಕ್ಕೆ ಕುಂದು ಬರಲಿಲ್ಲ. ಇದನ್ನೇ ಯುನೆಸ್ಕೊ ಗುರುತಿಸಿತು’ ಎನ್ನುತ್ತ ಮಾತಿಗೆ ವಿರಾಮ ನೀಡಿದರು.     

ಕೆರೆಮನೆ ಶಿವಾನಂದ ಹೆಗಡೆ
ಯಕ್ಷಗಾನ ಪ್ರಸಂಗವೊಂದರಲ್ಲಿ ಭಾವಾಭಿನಯದಲ್ಲಿ ತಲ್ಲೀನರಾದ ಕಲಾವಿದರು
ಯಕ್ಷಗಾನ ಪ್ರಸಂಗವೊಂದರಲ್ಲಿ ಭಾವಾಭಿನಯದಲ್ಲಿ ತಲ್ಲೀನರಾದ ಕಲಾವಿದರು
ಕೆರೆಮನೆ ಶಿವಾನಂದ ಹೆಗಡೆ

ಜಾಗತಿಕ ವೇದಿಕೆ ಸಿಗುವ ನಿರೀಕ್ಷೆ

‘ಇಡಗುಂಜಿ ಮೇಳಕ್ಕೆ ಯುನೆಸ್ಕೊ ಮಾನ್ಯತೆ ಸಿಕ್ಕಿರುವುದು ಕೇವಲ ಒಂದು ಮೇಳಕ್ಕೆ ಸಿಕ್ಕ ಶ್ರೇಯ ಎಂದು ಭಾವಿಸುವುದು ತಪ್ಪಾಗುತ್ತದೆ. ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿದ್ದ ಯಕ್ಷಗಾನ ಕಲೆಯನ್ನು ಜಾಗತಿಕ ಮಟ್ಟದಲ್ಲಿಯೂ ಗುರುತಿಸಿದರಲ್ಲ ಎಂಬ ಸಮಾಧಾನದೊಂದಿಗೆ ಕಲೆಗೆ ವಿಶ್ವ ಮಟ್ಟದಲ್ಲಿ ಗೌರವ ಸಿಕ್ಕಿತಲ್ಲ ಎಂಬ ಹೆಮ್ಮೆ ಪ್ರತಿಯೊಬ್ಬ ಯಕ್ಷಗಾನ ಕಲಾವಿದ ಯಕ್ಷಪ್ರೇಮಿಯ ಎದೆಯಲ್ಲಿ ಮೂಡಬೇಕು. ಯುನೆಸ್ಕೊ ಮಾನ್ಯತೆಯಿಂದ ಮೇಳಕ್ಕೆ ವಿದೇಶದಿಂದಲೋ ಸರ್ಕಾರದಿಂದಲೋ ಅನುದಾನ ಸಿಗಬಹುದು ಎಂಬ ಭಾವನೆ ಇದ್ದರೆ ತಪ್ಪು. ಆದರೆ ಜಾಗತಿಕ ಮಟ್ಟದಲ್ಲಿ ಸಾಂಸ್ಕೃತಿಕ ಕ್ಷೇತ್ರದ ಕುರಿತಾಗಿನ ಚರ್ಚೆಗಳು ನಡೆದಾಗ ಯಕ್ಷಗಾನ ಕ್ಷೇತ್ರಕ್ಕೂ ವಿಷಯ ಮಂಡನೆಗೆ ಅವಕಾಶ ಆಗುತ್ತದೆ. ಯಕ್ಷಗಾನಕ್ಕೆ ಜಾಗತಿಕ ವೇದಿಕೆಯಲ್ಲೂ ಸ್ಥಾನಮಾನ ಸಿಗುತ್ತದೆ ಎಂಬ ವಿಶ್ವಾಸ ದೃಢವಾಗಿದೆ’ ಎಂದು ಇಡಗುಂಜಿ ಮೇಳದ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.