ADVERTISEMENT

ಜೀವನ ಸೌಂದರ್ಯದ ‘ಸ್ವಾತಿ ಮುತ್ತು ’

ಜಿ.ಕೆ.ಗೋವಿಂದ ರಾವ್‌
Published 3 ಏಪ್ರಿಲ್ 2014, 19:30 IST
Last Updated 3 ಏಪ್ರಿಲ್ 2014, 19:30 IST

ದಿನೇಶ್‌ಬಾಬು – ನಾನು ತುಂಬ ಮೆಚ್ಚುವ, ಗೌರವಿಸುವ ಚಲನಚಿತ್ರ ನಿರ್ದೇಶಕ. ಈಗ ಅವರು ಕಿರುತೆರೆಯನ್ನು ಪ್ರವೇಶ ಮಾಡಿದ್ದಾರೆ. ಇದೊಂದು ಸ್ವಾಗತಾರ್ಹ ಬೆಳವಣಿಗೆ. ಅವರ ನಿರ್ದೇಶನದ ‘ಸ್ವಾತಿ ಮುತ್ತು’ ಧಾರಾವಾಹಿಯನ್ನು ಗಮನಿಸುತ್ತಿರುವ ನನಗೆ, ದಿನೇಶ್‌ಬಾಬು ನಮ್ಮ ಧಾರಾವಾಹಿಗಳ ಲೋಕಕ್ಕೆ ಹೊಸ ಆಯಾಮ ನೀಡುತ್ತಿದ್ದಾರೆ ಹಾಗೂ ಬಹುಕಾವ್ಯಾತ್ಮಕ ತಿರುವು ದೊರಕಿಸುತ್ತಿದ್ದಾರೆ ಎಂದು ನನಗೆ ದೃಢವಾಗಿ ಅನ್ನಿಸುತ್ತಿದೆ.

ದಿನೇಶ್‌ಬಾಬು ನಿರ್ದೇಶನ ಮಾಡಿದ್ದಾರೆ ಎಂಬ ಒಂದೇ ಕಾರಣಕ್ಕೆ, ಕುತೂಹಲದಿಂದ, ಆಸಕ್ತಿಯಿಂದ ಸುವರ್ಣ ವಾಹಿನಿಯಲ್ಲಿನ ಈ ಧಾರಾವಾಹಿ ನೋಡಲಾರಂಬಿಸಿದೆ. ದಿನದಿಂದ ದಿನಕ್ಕೆ ‘ಸ್ವಾತಿ ಮುತ್ತು’ ಕುರಿತ ನನ್ನ ಮೆಚ್ಚುಗೆ ಇಮ್ಮಡಿಯಾಗುತ್ತಿದೆ. ‘ಸ್ವಾತಿ ಮುತ್ತು’ ಒಂದು ಅಪರೂಪದ ಮುತ್ತು. ‘ಮುತ್ತು’ ಈ ಕಾದಂಬರಿಯ ಮುಖ್ಯ ಪಾತ್ರವೂ ಹೌದು.

ದಿನೇಶ್‌ಬಾಬು ಅವರು ಈ ಕತೆ ಹೇಳುವುದಕ್ಕೆ ಆರಿಸಿಕೊಂಡಿರುವ ಪರಿಸರವೇ ವಿಶಿಷ್ಟ; ಅದು ಅನನ್ಯವೂ ಹೌದು. ಮಲೆನಾಡಿನ ಸುತ್ತಮುತ್ತಲ ಅದ್ಭುತ, ರಮ್ಯ ದೃಶ್ಯಾವಳಿಗಳ ಮಧ್ಯದಲ್ಲಿ ಅರಳುವ ಕತೆ ಇದು; ವಿಶೇಷವಾಗಿ ಚಿಕ್ಕಮಗಳೂರಿನ ಕಾಫಿ, ಟೀ, ತೆಂಗುಗಳ ಮಧ್ಯದಲ್ಲಿ ಬಿಡಿಸಿಕೊಳ್ಳುತ್ತ ಹೋಗುವ ಕಥಾನಕ. ಆದರೆ ಪ್ರಕೃತಿ ಮತ್ತು ಅದರ ಸೌಂದರ್ಯವನ್ನು ಕೇವಲ ಮಲೆನಾಡಿನ ಪರಿಚಯಕ್ಕಾಗಿ ಮಾತ್ರ ಧಾರಾವಾಹಿಯಲ್ಲಿ ಬಳಸಿಕೊಂಡಿಲ್ಲ.

ದಿಗಂತದವರೆಗೆ ಚಾಚಿಕೊಂಡು ಆಕಾಶದ ನೀಲಿಯೊಡನೆ ಕರಗಿಹೋದಂತೆ ಕಾಣುವ ಹಸಿರು; ಪುಟ್ಟ ಪುಟ್ಟ ಗುಡ್ಡಗಳು, ಎತ್ತರದ ಮರಗಳು; ಎಲ್ಲದರ ಮಧ್ಯೆ ಹಾದುಹೋಗುವ ಕಿರುದಾರಿಗಳು– ಇಂಥ ಪರಿಸರದಲ್ಲಿ ಮನುಷ್ಯ ಹೇಗೆ ತಾನೆ ತನ್ನ ಅಹಮಿಕೆಯನ್ನು ಸ್ವಾರ್ಥ, ದುರಾಸೆಗಳನ್ನು ಬೆಳೆಯಬಿಡಲಿಕ್ಕೆ ಸಾಧ್ಯ ಎಂಬ ಅಚ್ಚರಿ ಮೂಡಿಸುವಂಥ ಒಂದು ದರ್ಶನ ಕಥನದಲ್ಲಿ ಇದ್ದಂತಿದೆ.

ಕಾಡು ಬೆಟ್ಟಗಳ ಮಧ್ಯೆ ‘ಹುಲಿಮನೆ’ ಇದೆ. ಅಣ್ಣ– ತಮ್ಮ ಹಾಗೂ ಒಬ್ಬ ಮೂಗ ಮಲತಮ್ಮ. ಅಜ್ಜಿ ಮನೆಯ ಹಿರಿಯಾಳು. ಮಲತಮ್ಮನೇ ಮುತ್ತು. ಆದರೆ ಮೂಗ. ಮಾತು ಬಾರದು ನಿಜ. ಆದರೆ ಅವನ ವಿಷಾದ ಮಾತ್ರ ಈ ಮಲೆನಾಡ ಮಧ್ಯದ ಒಂದು ಚಿಗುರಿನ ಹಾಗೆ, ಹೂವಿನ ಹಾಗೆ, ಹರಿಯುವ ತೊರೆಯ ಹಾಗೆ. ಅವನ ಮನಸ್ಸಿನ ಆಳದ ಭಾವನೆಗಳು, ತುಡಿತಗಳು, ಅವನ ಸ್ವಚ್ಛಂದತೆ ಮಲೆನಾಡ ತಂಗಾಳಿಯ ಹಾಗೆ. ಮುಗ್ಧ ಹೌದು, ಆದರೆ ಅತ್ಯಂತ ವೇಗದಲ್ಲಿ ಕೆಲಸ ಮಾಡುವ ಬುದ್ಧಿ ಮತ್ತು ಕಲ್ಪನಾಶೀಲತೆ, ತತ್‌ಕ್ಷಣದಲ್ಲಿ ತನ್ನ ಕಾರ್ಯವಿಧಾನವನ್ನು ನಿಶ್ಚಯಿಸುವಷ್ಟು ಸೂಕ್ಷ್ಮಮತಿ ಆತ.

ಅಣ್ಣಂದಿರಿಬ್ಬರು ಪ್ರಕೃತಿಯಿಂದ ದೂರವಾಗಿದ್ದು ಈ ತೋಟ, ಈ ಮನೆ, ಈ ಆಸ್ತಿ ತಮ್ಮ ಸ್ವಂತ ದುರಾಸೆಗಳಿಗೆ ಮಾತ್ರ ಪೂರಕವಾಗಿ ಕಾಣುವಂಥ ವಸ್ತುಗಳಾಗಿ ಮಾತ್ರ ಅವರಿಗೆ ಕಾಣುವಂತಾಗಿದೆ. ಅಜ್ಜಿ ಪ್ರಬುದ್ಧ ಮಹಿಳೆ; ಮನೆಯ ಪ್ರತಿಯೊಬ್ಬರ ಯೋಗ್ಯತೆಗಳನ್ನು ಗ್ರಹಿಸುವ ನಿಜಾರ್ಥದ ಯಜಮಾನಿ. ಈ ಮನೆಗೆ ಸಮಾನಾಂತರವಾಗಿ ಮತ್ತೊಂದು ಕುಟುಂಬ ಇದೆ. ಸಿರಿವಂತಿಕೆ ಅಷ್ಟಾಗಿ ಇಲ್ಲದಿದ್ದರೂ ಒಂದು ರೀತಿ ಮನತುಂಬುವಂಥ ಮನೆ. ಮನೆ ಮಂದಿ– ಅಣ್ಣ, ಇಬ್ಬರು ತಂಗಿಯರು (ಮತ್ತೂ ಒಬ್ಬಳು ನಿಗೂಢವಾಗಿ ಸಾವನ್ನಪ್ಪಿದ್ದಾಳೆ); ಅಣ್ಣನ ಹೆಂಡತಿ ಮತ್ತು ಅವಳ ತಮ್ಮ. ಇಲ್ಲಿ ಈ ಇಬ್ಬರು ತಂಗಿಯರದು ಪ್ರಧಾನ ಪಾತ್ರ– ರುಕ್ಮಿಣಿ, ಭಾಮಾ.

ಅಕ್ಕನನ್ನು ಕೊಂದವರ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವ ವಿಷಯದಲ್ಲಿ ಡೋಲಾಯಮಾನದಲ್ಲಿರುವ ಹೆಣ್ಣು ರುಕ್ಮಿಣಿ. ಅವಳ ತಂಗಿ ಭಾಮಾಳದು ಮತ್ತೊಂದು ಅದ್ಭುತ ಪಾತ್ರ ಸೃಷ್ಟಿ. ಯಾವ ನಿರ್ಬಂಧವನ್ನೂ ಎಳ್ಳಷ್ಟೂ ಗಣನೆಗೆ ತೆಗೆದುಕೊಳ್ಳದೆ ನುಗ್ಗಿಹರಿಯುವ ನದಿಯ ನೀರಿನ ಹಾಗೆ. ಇಲ್ಲಿ ರಭಸದಿಂದ ನುಗ್ಗಿ, ಅಲ್ಲಿ ಲಾವಣ್ಯವತಿಯಾಗಿ, ಪ್ರಶಾಂತವಾಗಿ ನಿಂತೇ ಬಿಟ್ಟ ಕೊಳದಂತೆ ಕಂಡು ಮರುಕ್ಷಣ ಕೊರಕಲುಗಳಲ್ಲಿ ಜುಳು ಜುಳು ಹರಿಯುವಂತೆಯೇ ಕಾಣುವ ಭಾಮಾ, ದಿನೇಶ್‌ಬಾಬು ಅವರ ಅದ್ಭುತ ಸೃಷ್ಟಿ. ಭಾಮಾ ಹಾಗೂ ಮುತ್ತು ಇವರುಗಳ ಮಧ್ಯೆ ಪಾರಿವಾಳದ ಹಾಗೆ ಹಾರಿಕೊಂಡಿರುವ ಪಾರಿ ಇದ್ದಾಳೆ.

ಮುತ್ತು, ಭಾಮಾಳಿಗೆ ಸ್ನಾನಕ್ಕೆ ನೀರು ಒದಗಿಸುವ ಚಾಕಚಕ್ಯದ ದೃಶ್ಯ, ಅವಳಿಗೆ ಗುಟ್ಟಾಗಿ ಕಾಫಿ, ತಿಂಡಿ ಸರಬರಾಜು ಮಾಡುವ ದೃಶ್ಯ. ರಮಣೀಯ ತೋಟಗಳ ಮಧ್ಯದಲ್ಲಿ ಹಕ್ಕಿಗಳೆರಡರಂತೆ ಮಾಡುವ ಸೈಕಲ್‌ ಸವಾರಿ  (ಇದು ರುಕ್ಮಿಣಿಯೊಂದಿಗಿನ ಸವಾರಿಗೂ ಅನ್ವಯಿಸುತ್ತದೆ) ಮತ್ತು ಭಾಮಾಳ ಜೀವನಪ್ರೇಮ ಬಲಗೊಳ್ಳುತ್ತ ಹೋಗುವ ವ್ಯಕ್ತಿತ್ವ ವೀಕ್ಷಕರನ್ನು ಮುಗ್ಧಗೊಳಿಸಿಬಿಡುತ್ತದೆ. ಒಟ್ಟಿನಲ್ಲಿ ‘ಸ್ವಾತಿ ಮುತ್ತು’ ನೋಡಿಯೇ ಅನುಭವಿಸಬೇಕಾದ ದೃಶ್ಯಕಾವ್ಯ.

ದಿನೇಶ್‌ಬಾಬು ನಿರ್ದೇಶನದ ಜೊತೆಗೆ, ತಮ್ಮ  ಛಾಯಾಗ್ರಹಣದ ಅನುಭವವನ್ನು ಸಂಪೂರ್ಣವಾಗಿ ಇಲ್ಲಿ ಬಳಸಿಕೊಂಡಿದ್ದಾರೆ. ಕಥನದ ನಡುವೆ ‘ಸ್ವಾತಿ ಮುತ್ತು’ ಗೀತೆ ಮನಸ್ಸಿನ ಆಳಕ್ಕೆ ಇಳಿದು ಕಲಕಿಬಿಡುತ್ತದೆ. ಕಲಾತ್ಮಕ ಬಂಧಕ್ಕೆ ಅಲಂಕಾರಿಕ ಚೌಕಟ್ಟಿನ ಹಾಗೆ ಬಾಬು ಅವರಿಗೆ ಮಾತ್ರ ಸಾಧ್ಯವಾಗುವಂಥ ಸನ್ನಿವೇಶಗಳಲ್ಲಿ, ಅಲ್ಲಲ್ಲಿ ಪಾತ್ರಗಳ ಸಂಭಾಷಣೆಗಳಲ್ಲಿ ಕಾಣಿಸುವ ಲವಲವಿಕೆಯ ಸಹಜ ಹಾಸ್ಯ ಮನಮೋಹಕವಾಗಿದೆ.

ಇಷ್ಟು ಹೇಳಿದ ಮೇಲೆ ಒಂದೆರಡು ಮಾತು ನನಗೆ ಸಮರ್ಪಕವೆನ್ನಿಸದೇ ಹೋದದ್ದರ ಬಗ್ಗೆಯೂ ಹೇಳಬೇಕು. ಹಿನ್ನೆಲೆ ಸಂಗೀತ ತುಂಬ ಲೌಡ್ ಆಗಿದೆ– ಕೆಲವೊಮ್ಮೆ ಮಾತುಗಳನ್ನೇ ಕೊಚ್ಚಿಕೊಂಡು ಹೋಗಿಬಿಡುವಷ್ಟು. ದೃಶ್ಯಾವಳಿಗಳೇ ಒಂದು ಪ್ರಮಾಣದಲ್ಲಿ ಸಂಗೀತವೆನಿಸಿದಂತೆ ಇರುವಾಗ ಕೇವಲ ಅನವಶ್ಯಕ ಸದ್ದು ಅನ್ನಿಸಿಬಿಡುವ ಈ ಸಂಗೀತವೇಕೆ?
ಕಳೆದ ಸಂಚಿಕೆಯನ್ನು ಇಂದು ಪುನರವಲೋಕನ ಮಾಡುವುದು, ನಾಳಿನ ಸಂಚಿಕೆಯ ಕಿರುನೋಟ– ಇದು ಕೂಡ ಇಂದಿನ ಸಂಚಿಕೆಯ ಒತ್ತನ್ನು ಅನವಶ್ಯಕ ಕಬಳಿಸುತ್ತಿದೆ ಅನ್ನಿಸುತ್ತದೆ.

ಪಾತ್ರಧಾರಿಗಳ ಬಗ್ಗೆ ನಾನು ವಿಶೇಷವಾಗಿ ಹೇಳಲೇಬೇಕಾಗಿಲ್ಲ. ಪ್ರತಿಯೊಬ್ಬರೂ ಸಮರ್ಥವಾಗಿ ಅಭಿನಯಿಸಿದ್ದಾರೆ. ಆದರೆ ವಿಶೇಷವಾಗಿ ಹೆಸರಿಸಲೇಬೇಕಾದದ್ದು ಭಾಮಾ, ಮುತ್ತು, ರುಕ್ಮಿಣಿ ಮತ್ತು ಪಾರಿ. ಒಟ್ಟಿನಲ್ಲಿ ನಿತ್ಯದ ಸಂಜೆ 7.30ಕ್ಕೆ ಕಾವ್ಯದೂಟ ನೀಡಿದ ದಿನೇಶ್‌ಬಾಬು ಮತ್ತು ಅವರ ಸಮಸ್ತ ತಂಡಕ್ಕೆ ನಾನು ಪ್ರೀತಿಯಿಂದ ಅಭಿನಂದಿಸುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.