ADVERTISEMENT

ಮತ್ತೆ ಶುರುವಾಗಲಿದೆ ‘ಮಜಾ ಟಾಕೀಸ್’‌

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 8:58 IST
Last Updated 18 ಆಗಸ್ಟ್ 2020, 8:58 IST
ಸೃಜನ್‌ ಲೋಕೇಶ್‌
ಸೃಜನ್‌ ಲೋಕೇಶ್‌   

ನಟ, ಟಿ.ವಿ ನಿರೂಪಕ ಕಪಿಲ್‌ ಶರ್ಮಾಹಿಂದಿಯಲ್ಲಿ ‘ಕಪಿಲ್‌ ಶರ್ಮಾ ಶೋ’ ಮೂಲಕ ಭರಪೂರ ಮನರಂಜನೆ ನೀಡಿದಂತೆಯೇ ಕನ್ನಡ ಕಿರುತೆರೆ ಲೋಕದಲ್ಲಿ ವೀಕ್ಷಕರಿಗೆ ರಂಜನೆಯ ರಸದೌತಣ ನೀಡಿದವರು ‘ಟಾಕಿಂಗ್‌ ಸ್ಟಾರ್’ ಸೃಜನ್‌ ಲೋಕೇಶ್‌. ಇವರು ತಮ್ಮ ಲೋಕೇಶ್‌ ಪ್ರೊಡಕ್ಷನ್‌ ಮೂಲಕ ನಿರ್ಮಿಸಿ, ಕಲರ್ಸ್‌ ಕನ್ನಡ ವಾಹಿನಿಯಲ್ಲಿ ವಾರಾಂತ್ಯದ ಶನಿವಾರ ಮತ್ತು ಭಾನುವಾರ ಪ್ರಸಾರವಾಗುತ್ತಿದ್ದ ‘ಮಜಾ ಟಾಕೀಸ್‌’ ಕಾರ್ಯಕ್ರಮ ನೋಡಲುಬಹಳಷ್ಟು ವೀಕ್ಷಕರು ಕಾದುಕುಳಿತುಕೊಳ್ಳುತ್ತಿದ್ದರು.

ನಟ ಕಿಚ್ಚ ಸುದೀಪ್‌ ನಡೆಸಿಕೊಡುವ ಬಿಗ್‌ ಬಾಸ್‌ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡ ನಂತರ ಸೃಜನ್‌ ಲೋಕೇಶ್‌, 2015ರಲ್ಲಿ ‘ಮಜಾ ಟಾಕೀಸ್‌’ ಆರಂಭಿಸಿದರು. ಕೆಲವೇ ದಿನಗಳಲ್ಲಿ ಈ ಕಾರ್ಯಕ್ರಮ ಕನ್ನಡ ಕಿರುತೆರೆ ವೀಕ್ಷಕರ ನೆಚ್ಚಿನ ಕಾರ್ಯಕ್ರಮದ ಪಟ್ಟಿಗೆ ಸೇರಿ ಬಿಟ್ಟಿತು. ಸಿನಿಮಾಕ್ಕಿಂತಲೂ ಕಿರುತೆರೆಯ ಮೂಲಕವೇ ಸೃಜನ್‌ ಲೋಕೇಶ್‌ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡರು ಎನ್ನುವುದಕ್ಕೆ ‘ಮಜಾ ಟಾಕೀಸ್‌’ ಪಯಣ ಐದು ವರ್ಷ ಕಾಲ ನಡೆದಿದ್ದೇ ನಿದರ್ಶನ.

ಆರಂಭದಲ್ಲಿ 16 ವಾರಗಳ ಎಪಿಸೋಡ್‌ಗಾಗಿ ಮಾಡಿದ್ದ ಈ ಕಾರ್ಯಕ್ರಮವನ್ನು ಅವರು 500 ಎಪಿಸೋಡ್‌ವರೆಗೆ ನಡೆಸಿದರು. ಕೊನೆಗೂ 2019ರ ಸೆಪ್ಟೆಂಬರ್‌ ವೇಳೆಗೆ ‘ಮಜಾ ಟಾಕೀಸ್‌’ ಪಯಣಕ್ಕೆ ಬ್ರೇಕ್‌ ಹಾಕಿದ್ದರು. ಈ ಕಾರ್ಯಕ್ರಮವನ್ನು ನಿಲ್ಲಿಸಿದಾಗ ಬಹಳಷ್ಟು ವೀಕ್ಷಕರು ನಿರಾಸೆಗೊಂಡಿದ್ದರು. ಕೊರೊನಾ ಲಾಕ್‌ಡೌನ್‌ ವೇಳೆಯಂತೂ ಕಿರುತೆರೆ ವೀಕ್ಷಕರು ತಮ್ಮ ನೆಚ್ಚಿನ ‘ಮಜಾಟಾಕೀಸ್‌’ ಕಾರ್ಯಕ್ರಮದ ಹಳೆಯ ಎಪಿಸೋಡ್‌ಗಳನ್ನೇ ನೋಡಿಕೊಂಡು ಸಮಯ ಕಳೆದು, ಮನಸು ಹಗುರ ಮಾಡಿಕೊಂಡಿರುವುದು ಉಂಟು.

ADVERTISEMENT

ವೀಕ್ಷಕರನ್ನು ರಂಜಿಸಲು ಮತ್ತೆ ‘ಮಜಾ ಟಾಕೀಸ್’‌ ಮೂಲಕ ಸೃಜನ್‌ ಲೋಕೇಶ್‌ ಕಿರುತೆರೆ ಲೋಕಕ್ಕೆ ಎಂಟ್ರಿಕೊಡುತ್ತಿದ್ದಾರೆ. ಇದೇ 29ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ ‘ಮಜಾ ಟಾಕೀಸ್‌’ ಪ್ರಸಾರವಾಗಲಿದೆ.

‘ಕೋವಿಡ್–19‌ ಕಾಲದಲ್ಲಿ ನಾವು ಮಜಾ ಟಾಕೀಸ್‌ ಪರಿಕಲ್ಪನೆಯನ್ನು ಬದಲಿಸಿಲ್ಲ. ಹಳೆಯ ಪರಿಕಲ್ಪನೆಯನ್ನೇ ಉಳಿಸಿಕೊಂಡಿದ್ದೇವೆ. ಪ್ರತಿ ಕಂತುಗಳ ವಿಷಯಗಳು ಮಾತ್ರ ವಿಭಿನ್ನವಾಗಿರಲಿವೆ. ಇನ್ನು ಮಜಾ ಟಾಕೀಸ್‌ನಲ್ಲಿ ಈ ಹಿಂದೆ ಇದ್ದ ಹಳೆಯ ಕಲಾವಿದರ ತಂಡವೇಇರಲಿದೆ. ಶ್ವೇತಾ ಚೆಂಗಪ್ಪ ಮಾತ್ರ ತಾಯ್ತನಕ್ಕಾಗಿ ಬಿಡುವು ತೆಗೆದುಕೊಂಡಿದ್ದಾರೆ.ಇನ್ನೊಂದಿಷ್ಟು ಹೊಸ ಕಲಾವಿದರು ಸೇರ್ಪಡೆಯಾಗಿದ್ದಾರೆ. ಯಾರೆಲ್ಲಾ ಇದ್ದೀವಿ ಮತ್ತು ನಮ್ಮ ಈ ಕಾರ್ಯಕ್ರಮ ಹೇಗಿರಲಿದೆ ಎನ್ನುವುದು ಆರಂಭದ ಎಪಿಸೋಡ್‌ನಲ್ಲಿ ರಿವೀಲ್‌ ಮಾಡಲಿದ್ದೇವೆ’ ಎನ್ನುತ್ತಾರೆ ನಟ ಸೃಜನ್‌ ಲೋಕೇಶ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.