ಗಾಯಕ, ಸಂಗೀತ ನಿರ್ದೇಶಕ ಅನು ಮಲಿಕ್ ಅವರನ್ನು ಹಿಂದಿಯ ‘ಇಂಡಿಯನ್ ಐಡಲ್’ ರಿಯಾಲಿಟಿ ಶೋದಿಂದ ಭಾನುವಾರ ಹೊರದಬ್ಬಲಾಗಿದೆ ಎನ್ನಲಾಗಿದೆ. ಅವರ ವಿರುದ್ಧ ಕೇಳಿಬಂದಿದ್ದ ‘ಮಿ ಟೂ’ ಆರೋಪಕ್ಕೆ ಕೊನೆಗೂ ಮಲಿಕ್ ತಲೆದಂಡ ತೆತ್ತರು ಎಂದು ಹಿಂದಿ ಕಿರುತೆರೆ ಮತ್ತು ಸಂಗೀತ ಜಗತ್ತು ಮಾತನಾಡುತ್ತಿದೆ.
ಈ ರಿಯಾಲಿಟಿ ಶೋ ಆರಂಭವಾದ ವರ್ಷ ಅಂದರೆ 2004ರಿಂದಲೂ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದ ಮಲಿಕ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಕೇಳಿಬಂದಿದ್ದವು.ಶೋದಲ್ಲಿ ಹಿಂದಿನ ಸೀಸನ್‌ಗಳಲ್ಲಿಪಾಲ್ಗೊಂಡಿದ್ದ ಗಾಯಕರಾದ ಸೋನಾ ಮೊಹಾಪಾತ್ರ ಮತ್ತು ಶ್ವೇತಾ ಪಂಡಿತ್ ಕೆಲದಿನಗಳ ಹಿಂದೆ ಅನು ಮಲಿಕ್ ವಿರುದ್ಧ ದನಿ ಎತ್ತಿದ್ದರೂ ಮಲಿಕ್ ಅವುಗಳನ್ನು ಸಾರಾಸಗಟಾಗಿ ಅಲ್ಲಗಳೆದಿದ್ದರು. ಆದರೆ, 2010ರಲ್ಲಿ ‘ಇಂಡಿಯನ್ ಐಡಲ್’ನಲ್ಲಿ ನಿರ್ಮಾಪಕಲ್ಲೊಬ್ಬರಾಗಿದ್ದ ಡೆನ್ಸಿಯಾ ಡಿಸೋಜಾ ಎಂಬವರೂ ದನಿಗೂಡಿಸಿದ ಪರಿಣಾಮ ಪ್ರಕರಣ ಗಂಭೀರ ಸ್ವರೂಪ ಪಡೆದಿದ್ದು, ಮಲಿಕ್ ತಲೆದಂಡ ಪಡೆದಿದೆ ಎನ್ನಲಾಗಿದೆ.
‘ಸ್ಪರ್ಧಿಗಳು, ಅವರ ಜೊತೆಗಾರರು ಮತ್ತು ಶೋದ ಸಿಬ್ಬಂದಿಯೊಂದಿಗೆ ಆತ ಅಸಭ್ಯವಾಗಿ ವರ್ತಿಸುವುದು ಹೊಸ ಸಂಗತಿಯೇನಲ್ಲ. ಇದು ಶೋ ತಂಡಗಳಿಗೂ ಮತ್ತು ವಾಹಿನಿಯ ಮುಖ್ಯಸ್ಥರಿಗೆ ತಿಳಿದಿದ್ದರೂ ಎಲ್ಲರೂ ಸುಮ್ಮನಿರುತ್ತಿದ್ದರು’ ಎಂದು, ನ್ಯೂಯಾರ್ಕ್ ಮೂಲದ ಈ ನಿರ್ಮಾಪಕಿ ನೇರವಾಗಿ ಆರೋಪಿಸಿದ್ದಾರೆ.
‘ಶ್ವೇತಾ ಮತ್ತು ಸೋನಾ ಅವರ ಆರೋಪ ಸತ್ಯವಾದುದು. ಅವರಂತೆಯೇ ಮಲಿಕ್ ಅವರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಇನ್ನೂ ಇಬ್ಬರು ಮಹಿಳೆಯರ ಬಗ್ಗೆ ನನಗೆ ತಿಳಿದಿದೆ. ಆಗ ನಾನು ಇಂಡಿಯನ್ ಐಡಲ್ ಐದನೇ ಸೀಸನ್‌ಗಾಗಿ ಫ್ರೀಮ್ಯಾಂಟಲ್ ಮೀಡಿಯಾದಲ್ಲಿ ಕೆಲಸ ಮಾಡುತ್ತಿದ್ದೆ’ ಎಂಬುದು ಡಿಸೋಜಾ ವಿವರಣೆ.
ಡಿಸೋಜಾ ಹೇಳುವ ಪ್ರಕಾರ, ಕೋಲ್ಕತ್ತಾದಲ್ಲಿ ಈ ರಿಯಾಲಿಟಿ ಶೋದ ಚಿತ್ರೀಕರಣ ನಡೆಯುತ್ತಿದ್ದಾಗ ಅನು ಮಲಿಕ್ ಶೋ ತಂಡದ ಸದಸ್ಯೆಯೊಬ್ಬಳ ತೊಡೆ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದರು. ಕ್ಯಾಮರಾಮನ್ ಕಾರಿನ ಮುಂದಿನ ಆಸನದಲ್ಲಿ ಕುಳಿತಿದ್ದ ಕಾರಣ ಈ ಸಂಗತಿ ಗೊತ್ತಾಗಿರಲಿಲ್ಲ. ಈ ವಿಷಯವನ್ನು ಆಕೆ ತಮ್ಮೊಂದಿಗೆ ಹೇಳಿಕೊಂಡಾಗಲೇ ಮಲಿಕ್ ಸ್ವಭಾವದ ಅರಿವಾಗಿದ್ದು. ಈ ಬಗ್ಗೆ ಹಿರಿಯ ಮಹಿಳಾ ಸಹೋದ್ಯೋಗಿಗಳೊಂದಿಗೆ ಆಕೆ ಹೇಳಿಕೊಂಡರೂ ಯಾರೂ ಸ್ಪಂದಿಸಿರಲಿಲ್ಲ. ಮಲಿಕ್ ವಿರುದ್ಧ ಮಾತನಾಡಿದರೆ ಅವರು ಪ್ರಭಾವ ಬಳಸಿ ಪ್ರಕರಣವನ್ನು ತಣ್ಣಗಾಗಿಸುತ್ತಾರೆ ಎಂದು ಎಲ್ಲರಿಗೂ ಗೊತ್ತಿತ್ತು. ಹಾಗಾಗಿ ಮಲಿಕ್ ಅವರಿಂದ ದೂರವಿರುವುದೇ ಸೂಕ್ತ ಎಂದು ಎಲ್ಲ ಮಹಿಳಾ ಸಿಬ್ಬಂದಿ ತೀರ್ಮಾನಿಸಿದ್ದರಂತೆ.
ಮಲಿಕ್ ವಿರುದ್ಧ ಮೊದಲ ಬಾರಿಗೆ ದನಿ ಎತ್ತಿದ್ದ ಸೋನಾ ಮೊಹಾಪಾತ್ರ, ಹೇಳುವಂತೆ ಮಲಿಕ್ ಅಸಭ್ಯವಾಗಿ ವರ್ತಿಸಿದಾಗ ಆಕೆಗೆ ಇನ್ನೂ 15ರ ಹರೆಯ. ‘ನೀನು ನನಗೆ ಮುತ್ತು ಕೊಡಬೇಕು’ ಎಂದು ಮಲಿಕ್ ತಮಗೆ ಟ್ವೀಟ್ ಮಾಡಿದ್ದರು ಎಂದೂ ಸೋನಾ ಆರೋಪಿಸಿದ್ದರು. ಮಲಿಕ್ ವಿರುದ್ಧ ಸೋನಾ ಬಾಣ ಬಿಟ್ಟಿರುವುದೂ ಸಾಮಾಜಿಕ ಮಾಧ್ಯಮದ ಮೂಲಕವೇ. ಅಲ್ಲದೆ, ಯಾರಾದರೂ ಮಲಿಕ್ ಪರ ವಹಿಸಿದರೆ ಅವರೂ ತಪ್ಪಿತಸ್ಥರಾಗುತ್ತಾರೆ ಎಂದು ಸೋನಾ ಎಚ್ಚರಿಕೆಯನ್ನೂ ನೀಡಿದ್ದರು.
ಅಂದ ಹಾಗೆ, ಈಗ ನಡೆಯುತ್ತಿರುವುದು ಇಂಡಿಯನ್ ಐಡಲ್‌ನ ಹತ್ತನೇ ಸೀಸನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.