ADVERTISEMENT

BBK 10 | ಕಾರ್ತಿಕ್‌ ಮೇಷ್ಟ್ರು ರಾಜಕೀಯ ಪಾಠ: ಪ್ರತಾಪ್‌ ಎದುರು ಸಂಗೀತಾ ಅಸಮಾಧಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಡಿಸೆಂಬರ್ 2023, 6:03 IST
Last Updated 14 ಡಿಸೆಂಬರ್ 2023, 6:03 IST
   

ಬೆಂಗಳೂರು: ಬಿಗ್‌ಬಾಸ್‌ ಮನೆಯಲ್ಲಿ ಈ ವಾರ ಪ್ರಾಥಮಿಕ ಶಾಲೆಯ ಟಾಸ್ಕ್‌ ಶುರುವಾಗಿದೆ. ಮಕ್ಕಳಂತೆ ಹಾಗೂ ಶಿಕ್ಷಕರಂತೆ ಕಾಣಿಸಿಕೊಳ್ಳುತ್ತಿರುವ ಸ್ಪರ್ಧಿಗಳು ಮನರಂಜನೆಯ ಜತೆಗೆ ತಮ್ಮೊಳಗಿನ ಅಸಮಾಧಾನವನ್ನು ಟಾಸ್ಕ್‌ ಮೂಲಕ ಹೊರ ಹಾಕುತ್ತಿದ್ದಾರೆ.

ಇದೀಗ ರಾಜಕೀಯದ ಮೇಷ್ಟ್ರು ಆಗಿರುವ ಕಾರ್ತಿಕ್‌ ಮನೆಯ ಇತರೆ ಸ್ಪರ್ಧಿಗಳಿಗೆ ರಾಜಕೀಯದ ಪಾಠ ಹೇಳಿಕೊಡುತ್ತಿದ್ದಾರೆ. ಚೇಷ್ಟೆಗಳು, ಆಟಗಳು, ಕಾಮಿಡಿಯಲ್ಲಿ ಮುಳುಗಿದ್ದ ವಿದ್ಯಾರ್ಥಿಗಳು ಇದೀಗ ಗಂಭೀರ ವಿಷಯಗಳ ಬಗ್ಗೆ ಗಮನಹರಿಸಿದ್ದಾರೆ.

ಕಾರ್ತಿಕ್ ರಾಜಕೀಯದ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಮಾಡ್ತಿದ್ದಾರೆ. ಅದರಲ್ಲಿಯೂ ಉತ್ತಮ ನಾಯಕತ್ವ ಹೇಗಿರಬೇಕು ಎಂಬುದರ ಕುರಿತು ಅವರು ಚರ್ಚೆ ಹುಟ್ಟುಹಾಕಿದ್ದಾರೆ. ಅದರಲ್ಲಿ ವಿದ್ಯಾರ್ಥಿಗಳೂ ಪಾಲ್ಗೊಳ್ಳುತ್ತಿದ್ದಾರೆ. ‘ಬಿಗ್‌ಬಾಸ್‌ ಮನೆಯಲ್ಲಿ ರಾಜಕೀಯ ನಡೆಯುತ್ತಿದೆ’ ಎಂದು ಹೇಳುವುದರ ಮೂಲಕ ಕಾರ್ತಿಕ್ ಮನೆಯೊಳಗಿನ ಪಾಲಿಟಿಕ್ಸ್ ಬಗ್ಗೆಯೇ ಮಾತನಾಡಲು ಪ್ರಾರಂಭಿಸಿದ್ದಾರೆ. ಈ ಎಲ್ಲಾ ವಿಷಯಗಳು ಇಂದು ಜಿಯೋ ಸಿನಿಮಾ ಬಿಡುಗಡೆ ಮಾಡಿದ ವಿಡಿಯೊದಲ್ಲಿದೆ.

ADVERTISEMENT

‘ಮನೆಯೊಳಗೆ ಯಾರಿಗೆ ಕೋಪ ನಿಯಂತ್ರಣ ಕೌಶಲಗಳನ್ನು ಕಲಿತುಕೊಳ್ಳುವ ಅಗತ್ಯವಿದೆ?’ ಎಂಬ ಪ್ರಶ್ನೆಗೆ ಸಂಗೀತಾ ತಾನಾಗೇ, ‘ನನ್ನ ಹೆಸರು ಬರೆಯಿರಿ’ ಎಂದು ಹೇಳಿದ್ದಾರೆ. ಅದಕ್ಕೆ ನಕ್ಕ ಕಾರ್ತಿಕ್, ‘ಏನಪ್ಪಾ ಈವತ್ತು ಸಂಗೀತಾ ಎಲ್ಲನೂ ಅವರಾಗೇ ಒಪ್ಕೋತಿದಾರೆ?’ ಎಂದು ನಕ್ಕಿದ್ದಾರೆ. ಮನೆಯೊಳಗೆ ಯಾರು ಕೆಟ್ಟ ರಾಜಕೀಯ ಮಾಡ್ತಾರೆ ಎಂದು ಕೇಳಿದ್ದಕ್ಕೆ ಸಂಗೀತಾ, ‘ವಿನಯ್’ ಎಂದು ಹೇಳಿದ್ದಾರೆ. ‘ಅದಕ್ಕೊಂದು ಉದಾಹರಣೆ ಕೊಡಿ’ ಎಂದು ಕೇಳಿದ್ದಾರೆ ಕಾರ್ತಿಕ್. ಇದು ಸಂಗೀತಾಗೆ ನೋವುಂಟುಮಾಡಿದೆ.

ಟಾಸ್ಕ್‌ ಮುಗಿದ ಮೇಲೆ ಬೆಡ್‌ರೂಮ್‌ನಲ್ಲಿ ಕಾರ್ತಿಕ್ ಜೊತೆಗೆ ಮಾತಾಡುತ್ತ, ‘ಕಾರ್ತಿಕ್ ಯಾಕೆ ಹೀಗೆ ಮಾಡುತ್ತಿದ್ದಾರೆ? ಅವರಿಗೆ ( ವಿನಯ್‌ ಗುಂಪು) ಬಕೆಟ್ ಹಿಡಿಯುತ್ತಿದ್ದಾರೆ ಅನಿಸ್ತಿಲ್ವಾ ನಿನಗೆ?’ ಎಂದು ಪ್ರತಾಪ್‌ಗೆ ಕೇಳಿದ್ದಾರೆ.

ಬಿಗ್‌ಬಾಸ್ ಮನೆಯೊಳಗಿನ ಶಾಲೆಯ ಟಾಸ್ಕ್‌ ಹಂತ ದಾಟಿ ಅಸಮಾಧಾನದ ಹೊಗೆ ನಿಧಾನಕ್ಕೆ ಏಳುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.