ADVERTISEMENT

BBK9: ರೂಪೇಶ್ ರಾಜಣ್ಣ ವಿಚಾರದಲ್ಲಿ ಕ್ಷಮೆ ಕೇಳಿ ಕಣ್ಣೀರಿಟ್ಟ ಪ್ರಶಾಂತ್ ಸಂಬರಗಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ನವೆಂಬರ್ 2022, 11:26 IST
Last Updated 5 ನವೆಂಬರ್ 2022, 11:26 IST
ಪ್ರಶಾಂತ್ ಸಂಬರಗಿ
ಪ್ರಶಾಂತ್ ಸಂಬರಗಿ   

ಬೆಂಗಳೂರು: ಬಿಗ್‌ಬಾಸ್ ರಿಯಾಲಿಟಿ ಶೋ 9ರಿಂದ ಪ್ರಶಾಂತ್‌ ಸಂಬರಗಿ ಅವರನ್ನು ಹೊರಗೆ ಹಾಕುವಂತೆ ಒತ್ತಾಯಿಸಿ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಸ್ಪರ್ಧಿ ಪ್ರಶಾಂತ್ ಸಂಬರಗಿ ಕ್ಷಮೆ ಕೇಳಿದ್ದಾರೆ.

ಬಿಗ್‌ಬಾಸ್ ಶೋನ ಕೋಣೆಯೊಳಗೆ ಹೋಗಿ ರೂಪೇಶ್ ರಾಜಣ್ಣ ವಿಷಯದಲ್ಲಿ ಕನ್ನಡ ಸಂಘಟನೆಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಸಂಬರಗಿ ಕ್ಷಮೆ ಕೇಳಿ ಕಣ್ಣೀರಿಟ್ಟಿದ್ದಾರೆ. ಇದು ಟಾಸ್ಕ್ ನಡೆಸುವ ಭರದಲ್ಲಿ ಆಗಿರುವಂತ ಘಟನೆ. ನನ್ನನ್ನು ಕ್ಷಮಿಸಿ ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಶೋನ ಚಿತ್ರೀಕರಣ ನಡೆದಿರುವ ಬಿಡದಿಯ ಇನೋವೇಟಿವ್‌ ಫಿಲ್ಮ್‌ ಸಿಟಿ ಮುಂಭಾಗ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು.

ADVERTISEMENT

ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಸಹ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ರಾಜಣ್ಣ ಅವರನ್ನು ನಿಂದಿಸಿರುವ ಪ್ರಶಾಂತ್‌, ಕನ್ನಡಪರ ಹೋರಾಟಗಾರರ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಹೀಗಾಗಿ ಕೂಡಲೇ ಅವರನ್ನು ಸ್ಪರ್ಧೆಯಿಂದ ಹೊರ ಹಾಕಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು.

ಪ್ರಶಾಂತ್‌ ಸಂಬರಗಿ ಎನ್ನುವ ವ್ಯಕ್ತಿ ಪ್ರಚಾರಕ್ಕೋಸ್ಕರ ಕನ್ನಡಿಗರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅವರನ್ನು ಶೋನಿಂದ ಹೊರಹಾಕುವ ಜೊತೆಗೆ ಇಲ್ಲಿಂದ ಗಡಿಪಾರು ಮಾಡಬೇಕು. ಇಲ್ಲವಾದಲ್ಲಿ ಸರ್ಕಾರವೇ ಬಿಗ್‌ಬಾಸ್ ಚಿತ್ರೀಕರಣಕ್ಕೆ ನಿಷೇಧ ಹೇರಬೇಕು ಎಂದು ಆಗ್ರಹಿಸಿದ್ದರು.

ಅಂದು ಆಗಿದ್ದೇನು?

ಕನ್ನಡದ ಬಿಗ್ ಬಾಸ್ ಮನೆಯಲ್ಲಿ ದೀಪಾವಳಿ ಹಬ್ಬದ ದಿನವೇ ಸದಸ್ಯರ ನಡುವೆ ಬೆಂಕಿ ಹೊತ್ತಿಕೊಂಡಿತ್ತು. ಅದು ಎಷ್ಟರಮಟ್ಟಿಗೆ ಎಂದರೆ ಒಬ್ಬರನ್ನೊಬ್ಬರು ಏಕವಚನದಲ್ಲಿ ಬೈದಾಡಿಕೊಂಡು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು.

ದೀಪಾವಳಿ ಗಿಫ್ಟ್ ವಿಚಾರವಾಗಿ ಪ್ರಶಾಂತ್ ಸಂಬರಗಿ ಮತ್ತು ಅಮೂಲ್ಯ ಪರವಾಗಿ ದೀಪಿಕಾ ದಾಸ್ಟಾಸ್ಕ್ ಆಡಿದ್ದರು. ಆದರೆ, ಈ ಇಬ್ಬರೂ ಆಟದಲ್ಲಿ ಗೆಲುವು ಸಾಧಿಸಲಿಲ್ಲ. ಹೀಗಾಗಿ, ಅಮೂಲ್ಯ ಮತ್ತು ಸಂಬರಗಿಗೆ ಭಾರಿ ನಿರಾಸೆಯಾಗಿತ್ತು.

ಈ ಮಧ್ಯೆ, ರೂಪೇಶ್ ರಾಜಣ್ಣ ಪರ ಆಡಿದ ಅನುಪಮಾ ಗೌಡ ಮತ್ತು ನೇಹಾ ಗೌಡ ಅವರು ದಿವ್ಯಾ ಉರುಡುಗ ಪರ ಆಡಿ ಗೆದ್ದು ಗಿಫ್ಟ್ ಪಡೆಯುವಂತೆ ಮಾಡಿದ್ದರು.

ಈ ಸಂದರ್ಭ ತಮ್ಮ ಆಟವನ್ನು ತಾವೇ ಆಡಿ ಗೆದ್ದು ಗಿಫ್ಟ್ ಪಡೆಯೋಣ ಎಂಬ ಚರ್ಚೆ ಆರಂಭವಾಯಿತು. ನಮ್ಮ ಟಾಸ್ಕ್ ಬೇರೆಯವರು ಆಡಬೇಕೆಂದು ಬಿಗ್ ಬಾಸ್ ಹೇಳಿಲ್ಲ ಎಂಬ ವಾದ ಮುಂದಿಟ್ಟರು. ಈ ಸಂದರ್ಭ ರಾಜಣ್ಣ ನನ್ನ ಟಾಸ್ಕ್ ಬೇರೆಯವರಿಗೆ ಬಿಟ್ಟುಕೊಟ್ಟಿದ್ದೆ. ಹೀಗಾಗಿ, ನನಗೆ ಎರಡನೇ ಅವಕಾಶ ಕೊಡಿ. ಇಲ್ಲವಾದರೆ ಕ್ಯಾಪ್ಟನ್ಸಿ ಟಾಸ್ಕ್ ಆಡುವ ಅವಕಾಶ ಸಿಗುವುದಿಲ್ಲ ಎಂದು ಹೇಳಿದ್ದರು.

ಈ ಮಾತನ್ನು ಕೇಳಿದ ಅರುಣ್ ಸಾಗರ್, ನೀನು ಮನೆಯಿಂದ ಬಂದ ಗಿಫ್ಟ್ ಪಡೆದಿದ್ದೀಯಾ.. ಕ್ಯಾಪ್ಟನ್ಸಿ ಟಾಸ್ಕ್ ಸಹ ಆಡಬೇಕೆಂಬ ದುರಾಸೆ ಏಕೆ ಎಂದು ಕೇಳಿದರು. ಇದು ದುರಾಸೆ ಅಲ್ಲ ನಾನು ನಾಮಿನೇಟ್ ಆಗಿದ್ದೇನೆ. ಕ್ಯಾಪ್ಟನ್ ಆದರೆ ಇಮ್ಯುನಿಟಿ ಸಿಗುತ್ತೆ ಎಂದು ಹೇಳಿದರು. ಇದಕ್ಕೊಪ್ಪದ ಸಂಬರಗಿ, ನನಗೆ ಮನೆಯ ಗಿಫ್ಟ್ ಸಹ ಸಿಕ್ಕಿಲ್ಲ. 3ಅವಕಾಶ ಕೊಡಿ ಎಂದು ಆಗ್ರಹಿಸಿದರು. ತನ್ನ ತಪ್ಪು ಒಪ್ಪಿಕೊಂಡ ಕ್ಯಾಪ್ಟನ್ ಸಾನ್ಯಾ ನನ್ನ ಟಾಸ್ಕ್ ಬೇರೆಯವರಿಗೆ ಬಿಟ್ಟುಕೊಡುವುದಾಗಿ ಘೋಷಿಸಿದ್ದರು.

ಆದರೂ ಮನೆಯಲ್ಲಿ ಗೊಂದಲ ಮುಂದುವರಿದಿತ್ತು. ಮಾತಿನ ಚಕಮಕಿ ತೀವ್ರಗೊಂಡಿದೆ. ಒಂದು ಹಂತದಲ್ಲಿ ರಾಜಣ್ಣ ಮತ್ತು ಸಂಬರಗಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಲೇ ರಾಜಣ್ಣ ಎಂದು ಕರೆದ ಸಂಬರಗಿ ವಿರುದ್ಧ ರೂಪೇಶ್ ರಾಜಣ್ಣ ಮುಗಿಬಿದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.