ಬೆಂಗಳೂರು: ವೀಕ್ಷಕರು ಹಾಗೂ ಸ್ಪರ್ಧಿಗಳು ಕಾತುರದಿಂದ ಕಾಯುತ್ತಿದ್ದ ಬಿಗ್ಬಾಸ್ ಫಿನಾಲೆ ಬಂದೇ ಬಿಟ್ಟಿದೆ. ನಿನ್ನೆ (ಶನಿವಾರ) ಫಿನಾಲೆ ಪ್ರಾರಂಭಗೊಂಡಿದ್ದು, ಯಾರು ಬಿಗ್ಬಾಸ್ 10ನೇ ಆವೃತ್ತಿಯ ವಿಜೇತರಾಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ತುಕಾಲಿ ಸಂತೋಷ್ ಈ ಹೆಸರು ಕೇಳಿದರೆ ಸಾಕು ಒಮ್ಮೆ ಹುಬ್ಬು ಮೇಲೆರುತ್ತದೆ. ಮರುಗಳಿಗೆ ತುಟಿಗಳಲ್ಲಿ ನಗು ಮೂಡುತ್ತದೆ. ಹುಬ್ಬೇರಿಸುವ ಅಚ್ಚರಿ, ನಗುಮೂಡಿಸುವ ವೈಖರಿ ಇದು ತುಕಾಲಿ ಸಂತೋಷ್ ಅವರು ಬಿಗ್ಬಾಸ್ 10ನೇ ಆವೃತಿಯಲ್ಲಿ ಮೂಡಿಸಿರುವ ಹೆಜ್ಜೆಗುರುತಿಗೆ ಸಾಕ್ಷಿ. ಅಂತಿಮ ಹಂತಕ್ಕೆ ಇನ್ನೊಂದೇ ಹೆಜ್ಜೆ ಬಾಕಿ ಇರುವಾಗ ತುಕಾಲಿ ಸಂತೋಷ್ ಅವರು ಮನೆಯಿಂದ ಹೊರಗೆ ಬಂದಿದ್ದಾರೆ. ಮನೆಯಲ್ಲಿ ಇದ್ದಷ್ಟೂ ದಿನ ಎಲ್ಲರನ್ನೂ ನಗಿಸುತ್ತಲೇ ಇದ್ದ ತುಕಾಲಿ ಅವರು ನಗುನಗುತ್ತಲೇ ಹೊರಗೆ ಬಂದಿದ್ದಾರೆ. ತಮ್ಮ ಸಹಸ್ಪರ್ಧಿಗಳಿಗೆ ಶುಭಾಶಯ ಕೋರಿದ್ದಾರೆ. ಅವರ ಬಿಗ್ಬಾಸ್ ಪಯಣದ ಒಂದು ಕಿರುನೋಟ ಇಲ್ಲಿದೆ.
ತುಕಾಲಿ ಸಂತೋಷ್ ಮಾತಿಗೆ ನಿಂತರೆ ಮಲ್ಲರ ಮಲ್ಲ. ನೋಡನೋಡುತ್ತಿದ್ದ ಹಾಗೆಯೇ ಮಾತಿನಲ್ಲಿ ಮಹಡಿ ಮೇಲೆ ಮಹಡಿ ಕಟ್ಟಿ ಅದರ ಮೇಲಿಂದ ಕಾಗೆ ಹಾರಿಸುವ ಅವರ ಪ್ರತಿಭೆ ಆರಂಭದ ಕೆಲವು ದಿನಗಳಲ್ಲಿಯೇ ಮನೆಮಂದಿಗೆಲ್ಲ ಪರಿಚಯವಾಗಿತ್ತು. ಆದರೆ ಆರಂಭಿಕ ಹಂತದಲ್ಲಿ ತುಕಾಲಿ ಅವರು ಮನೆಯ ಸದಸ್ಯರನ್ನು ನಗಿಸಲು ಅನುಸರಿಸಿದ ದಾರಿ ಟೀಕೆಗೂ ಒಳಗಾಗಿತ್ತು. ಅವರು ಪ್ರತಾಪ್ ಅವರ ಬಗ್ಗೆ ಆಡಿದ ಮಾತುಗಳು, ಮನೆಯ ಉಳಿದ ಸದಸ್ಯರ ಬಗ್ಗೆ ಆಡಿದ ಮಾತುಗಳ ಬಗ್ಗೆ ವಾರಾಂತ್ಯದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ತರಾಟೆಗೆ ತೆಗೆದುಕೊಂಡಿದ್ದರು.
‘ಅನ್ಯರನ್ನು ನೋಯಿಸಿ ಮತ್ಯಾರನ್ನೋ ನಗಿಸುವುದು ಹಾಸ್ಯನಟನ ಘನತೆಗೆ ತಕ್ಕದಲ್ಲ’ ಎಂಬ ಕಿಚ್ಚನ ಮಾತುಗಳನ್ನು ತುಕಾಲಿ ಗಂಭೀರವಾಗಿಯೇ ತೆಗೆದುಕೊಂಡರು. ಆದರೆ ಮನೆಯ ಸದಸ್ಯರು ಮಾತ್ರ ‘ಅವರು ಉಳಿದವರನ್ನು ನೋಯಿಸಿ ಹಾಸ್ಯ ಮಾಡುತ್ತಾರೆ’ ಎಂದು ಆರೋಪಿಸುವುದನ್ನು ನಿಲ್ಲಿಸಲಿಲ್ಲ. ಇದರಿಂದ ತುಕಾಲಿ ಅವರು ಕೆಲಕಾಲ ಕುಗ್ಗಿದ್ದು, ಮಾತಾಡಲೇ ಹಿಂಜರಿಯುವಂತಾಗಿದ್ದು ಸುಳ್ಳಲ್ಲ.
ಮನೆಯ ಕ್ಯಾಪ್ಟನ್ ಆಗಬೇಕು ಎಂಬುದು ಈ ಆವೃತ್ತಿಯ ಉದ್ದಕ್ಕೂ ತುಕಾಲಿ ಸಂತೋಷ್ ಕಂಡಂತ ಕನಸು. ಮೊದಲ ವಾರದಲ್ಲಿಯೇ ಆ ಕನಸು ಚಿಗುರಿತ್ತು. ಮೊದಲ ವಾರ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಸ್ನೇಹಿತ್ ಮತ್ತು ನಮ್ರತಾ ಅವರ ಜತೆಯಲ್ಲಿ ತುಕಾಲಿ ಅವರು ಕೂಡ ಓಟದಲ್ಲಿ ಇದ್ದರು. ತಿರುಗುವ ಚಕ್ರದ ಮೇಲೆ ಅತಿಹೆಚ್ಚು ಕಾಲ ನಿಲ್ಲುವ ಟಾಸ್ಕ್ನಲ್ಲಿ ಬರಿಗಾಲಿನಲ್ಲಿ ತುಕಾಲಿ ಅವರು ಕೂಡ ನಿಂತಿದ್ದರು ಆದರೆ ಎಲ್ಲರಿಗಿಂತ ಮೊದಲೇ ಕೆಳಗಿಳಿದರು. ಮೊದಲ ವಾರದ ಸೋಲು ಕೊನೆಯ ಹಂತದವರೆಗೂ ಬೆನ್ನುಬಿಡಲಿಲ್ಲ. ಹಲವು ಸಲ ಅವರು ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಭಾಗವಹಿಸಿ ಚೆನ್ನಾಗಿ ಆಡಿ ಗೆಲುವಿನ ಹೊಸ್ತಿಲವರೆಗೂ ಹೋಗಿ ಬಂದಿದ್ದಾರೆ. ಆದರೆ ಗೆದ್ದು ಕ್ಯಾಪ್ಟನ್ ಆಗುವ ಕನಸು ಮಾತ್ರ ನನಸಾಗಿಲ್ಲ. ಆದರೆ, ತುಕಾಲಿ ಅವರು ತಮ್ಮ ಆಸೆ ಈಡೇರಿಸಿಕೊಳ್ಳದೇ ಬಿಡಲೂ ಇಲ್ಲ. ಕಳೆದ ವಾರ ನಡುರಾತ್ರಿ ಬಿಗ್ಬಾಸ್ ಮನೆಯ ಕ್ಯಾಪ್ಟನ್ ರೂಮ್ ಹೊಕ್ಕು ಹಾಸಿಗೆ ಮೇಲೆ ಎರಡು ನಿಮಿಷ ಮಲಗಿ ಖುಷಿಪಟ್ಟರು.
ತುಕಾಲಿ ಸಂತೋಷ್ ಅವರ ಬಿಗ್ಬಾಸ್ ಪಯಣದಲ್ಲಿ ನಗುವಿನ ಪ್ರಸಂಗಗಳು ಸಾಕಷ್ಟಿವೆ. ತಾನು ಸದಾ ಎಲ್ಲರನ್ನೂ ನಗಿಸುತ್ತ ಇರುತ್ತೇನೆ ಎಂದು ಹೇಳುವ ತುಕಾಲಿ ಅವರು ಕೆಲವು ಸಲ ತಾಳ್ಮೆ ಕಳೆದುಕೊಂಡಿರುವುದು ಇದೆ. ಆರಂಭಿಕ ವಾರದಲ್ಲಿ ತಮ್ಮ ನೆಚ್ಚಿನ ಸ್ಪರ್ಧಿಯನ್ನು ನಾಮಿನೇಷನ್ನಿಂದ ಕಾಪಾಡುವ ಟಾಸ್ಕ್ನಲ್ಲಿ ಇಶಾನಿ ಜೊತೆಗೆ ಮಾತಿಗೆ ಮಾತು ಬೆಳೆದು ಅದು ದೊಡ್ಡ ಜಗಳವಾಗಿಬಿಟ್ಟಿತ್ತು. ಹಾಗೆಯೇ ಸಂಗೀತಾ ಜೊತೆಗೂ ಅವರಿಗೆ ಹಲವು ಬಾರಿ ಮಾತಿನ ಚಕಮಕಿ ನಡೆದಿದೆ. ಕಳೆದ ವಾರವಷ್ಟೇ ಟಾಸ್ಕ್ ವೋಟಿಂಗ್ ಸಂದರ್ಭದಲ್ಲಿ ವಿನಯ್ ಜೊತೆಗೆ ಜೋರಾಗಿಯೇ ಮಾತಿನ ಚಕಮಕಿ ನಡೆಯಿತು. ಆದರೆ ಈ ಜಗಳದ ಕಿಡಿ ನಂದಿದ ನಂತರ ಅವರು ಮತ್ತೆ ಆ ಸ್ಪರ್ಧಿಯ ಜೊತೆಗೆ ಕೈ ಜೊಡಿಸುತ್ತಾರೆ. ಅದು ಅವರ ಸ್ವಭಾವ.
‘ಮತ್ಯಾರಲ್ಲೂ ನೋಡದ, ನಿಷ್ಕಳಂಕವಾದ ಸ್ನೇಹವನ್ನು ನಿಮ್ಮಿಬ್ಬರಲ್ಲಿ ನೋಡಿದ್ದೀನಿ’ ಎಂದು ವಾರಾಂತ್ಯದ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಅವರು ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಅವರ ಸ್ನೇಹದ ಬಗ್ಗೆ ಹೇಳಿದ್ದರು. ಎಲಿಮಿನೇಷನ್ ಸಂದರ್ಭದಲ್ಲಿ ಇಬ್ಬರಲ್ಲಿ ಒಬ್ಬರು ಹೊರಗೆ ಹೋಗುತ್ತಾರೆ ಎಂಬ ಹಂತದಲ್ಲೂ ಅವರಿಬ್ಬರೂ ಒಬ್ಬರಿಗೊಬ್ಬರು ಬೆಂಬಲವಾಗಿಯೇ ಮಾತಾಡಿದ್ದರು.
ಸಂತು – ಪಂತು ಜೋಡಿಯಾದ ಇಬ್ಬರೂ ಆಡಿದ ಮಾತುಗಳಿಗೆ, ಆಡಿದ ಆಟಗಳಿಗೆ ಲೆಕ್ಕವೇ ಇಲ್ಲ. ಎಷ್ಟೇ ಮಾತುಗಳು ಕೇಳಿ ಬಂದರೂ ಅವರ ಸ್ನೇಹದಲ್ಲಿ ಬಿರುಕು ಬರಲೇ ಇಲ್ಲ. ಹಾಗೆಂದು ಭಿನ್ನಾಭಿಪ್ರಾಯಗಳಿಲ್ಲ ಎಂದಲ್ಲ. ಒಬ್ಬರಿಗೊಬ್ಬರು ಮಾತುಗಳಲ್ಲಿ ತಿವಿದುಕೊಂಡಿದ್ದು ಇದೆ, ಮುನಿಸಿಕೊಂಡಿದ್ದು ಇದೆ. ಆದರೆ ಮರುಕ್ಷಣದಲ್ಲಿಯೇ ಅದು ಸರಿಹೋಗಿ ಬೀನ್ಬ್ಯಾಗ್ ಮೇಲೆ ಕೂತು ಹರಟಿದ್ದಾರೆ. ಈ ಬೀನ್ಬ್ಯಾಗ್ ಕಥೆ ಮನೆಯೊಳಗೂ ಹೊರಗೂ ಸಾಕಷ್ಟು ಸದ್ದು ಮಾಡಿತು. ತುಕಾಲಿ ಅವರ ತಂತ್ರಗಾರಿಕೆ ರೂಪುಗೊಳ್ಳುತ್ತಿದ್ದದ್ದೇ ಈ ಬೀನ್ಬ್ಯಾಗ್ ಮೇಲೆ.
ತುಕಾಲಿ ಸಂತೋಷ್ ಅವರ ರಂಜನೀಯ ಪ್ರತಿಭೆ ಹೊರಗೆ ಬಂದಿದ್ದು ಸ್ಕೂಲ್ ಟಾಸ್ಕ್ನಲ್ಲಿ. ಉಳಿದವರು ತಮ್ಮ ಎದುರಾಳಿಗಳನ್ನು ತಿವಿಯಲು, ದೂರಲು ಈ ಅವಕಾಶವನ್ನು ಬಳಸಿಕೊಂಡರೆ, ತುಕಾಲಿ ಸಂತೋಷ್ ಮಾತ್ರ ಬಾಲ್ಯದೊಳಗೆ ಹೋಗಿ ಬಂದಂತಿದ್ದರು. ‘ಹೊಡಿತೀನಿ’ ಎಂದು ಅವರು ಆಡುತ್ತಿದ್ದ ರೀತಿ ಹಲವು ವಾರಗಳ ಕಾಲ ಆಗಾಗ ಮನೆಯೊಳಗೆ ಪ್ರತಿಧ್ವನಿಸುತ್ತಲೇ ಇತ್ತು. ಇದೇ ವಾರ ಅವರು ತೆಗೆದುಕೊಂಡ ಇಂಗ್ಲಿಷ್ ಕ್ಲಾಸ್ ಅಂತೂ ಮನೆಯ ಉಳಿದ ಸದಸ್ಯರಿಗೆ ಇಂಗ್ಲಿಷ್ ಕಲಿಸುವ ಬದಲು ಬರುವ ಇಂಗ್ಲಿಷ್ ಅನ್ನೂ ಮರೆಸುವಂತೆ ಮಾಡಿತ್ತು. ವಾರಾಂತ್ಯದಲ್ಲಿಯೂ ಕಿಚ್ಚ ಸುದೀಪ್ ಅವರು ತುಕಾಲಿ ಬಾಯಲ್ಲಿ ಇಂಗ್ಲಿಷ್ ಕೇಳಲು ಇಷ್ಟಪಡುತ್ತಿದ್ದರು.
ಬರೀ ನಗಿಸುವುದನ್ನೇ ನೆಚ್ಚಿಕೊಂಡಿದ್ದರೆ ತುಕಾಲಿ ಸಂತೋಷ್ ಅವರು ಇಷ್ಟು ದಿನಗಳ ಕಾಲ ಮನೆಯೊಳಗೆ ಇರಲು ಸಾಧ್ಯವೇ ಇರಲಿಲ್ಲವೇನೋ. ಆದರೆ ತುಕಾಲಿ ಅವರ ವ್ಯಕ್ತಿತ್ವ ಅಷ್ಟಕ್ಕೇ ಸೀಮಿತವಾಗಿರಲಿಲ್ಲ. ಅವರಲ್ಲಿ ಒಬ್ಬ ತಂತ್ರಗಾರನೂ ಇದ್ದ. ಗಾಸಿಪ್ ಮಾಡುತ್ತೇನೆ ಎಂದು ಹೇಳಿಕೊಂಡೇ ಅವರು ಆಡಿದ ಗಾಳಿಸುದ್ದಿಗಳು ಮನೆಯೊಳಗೆ ಬೆಂಕಿ ಹಚ್ಚಿದ್ದೂ ಇದೆ. ಅದರಲ್ಲಿಯೂ ಕಳೆದ ಕೆಲವು ವಾರಗಳಿಂದ ಅವರು ವರ್ತೂರು ಸಂತೋಷ್ ಅವರೊಂದಿಗೆ ಸೇರಿ ಮಾಡಿದ ತಂತ್ರಗಾರಿಕೆಗೆ ಉಳಿದ ಸದಸ್ಯರೆಲ್ಲ ಬೆಕ್ಕಸ ಬೆರಗಾಗಿದ್ದಂತೂ ಹೌದು.
ಇತ್ತೀಚೆಗೆ ಕೂಡ, ಫಿನಾಲೆಯಲ್ಲಿ ನಿಮ್ಮ ಜೊತೆ ಇರಬೇಕಾದ ಇನ್ನೊಂದು ಕೈ ಯಾರದು ಎಂಬ ಪ್ರಶ್ನೆಗೆ ತುಕಾಲಿ ಅವರು, ‘ಸಂಗೀತಾ’ ಎಂದಿದ್ದರು. ಆದರೆ ಮುಂದಿನ ವಾರವೇ ಅವರು ಸಂಗೀತಾ ವಿರುದ್ಧ ಕಾರ್ತಿಕ್ ಅವರಿಗೆ ಬೆಂಬಲ ನೀಡಿ ಮುಂದೆ ಬಿಟ್ಟರು. ಹೀಗೆ ಕಾಲಕ್ಕೆ ತಕ್ಕ ಹಾಗೆ ತಮ್ಮ ತಂತ್ರಗಾರಿಕೆ ಬದಲಿಸುತ್ತ, ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ವಾತಾವರಣ ರೂಪಿಸಿಕೊಳ್ಳುವ ಚಾಣಕ್ಯ ಜಾಣತನವೇ ಅವರನ್ನು ಇಲ್ಲಿಯವರೆಗೆ ತಂದಿದೆ.
ಆರಂಭಿಕ ದಿನಗಳಲ್ಲಿ ವಿನಯ್ ಅವರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ತುಕಾಲಿ ಅವರು, ಹಳ್ಳಿ ಟಾಸ್ಕ್ನಲ್ಲಿ ಅವರ ತಂಡಕ್ಕೆ ಬೆಂಬಲ ನೀಡಿ ಸಂಗೀತಾ ಅವರ ತಂಡ ಸೋಲುವಂತೆ ಮಾಡಿದ್ದರು. ನಂತರದ ದಿನಗಳಲ್ಲಿ ವಿನಯ್ ತಂಡದಿಂದ ಒಬ್ಬೊಬ್ಬರಾಗಿ ಎಲಿಮಿನೇಟ್ ಆಗಿ ಮನೆಯಿಂದ ಹೊರಬೀಳ ತೊಡಗಿದರು. ಆಗ ತುಕಾಲಿ ಅವರು ತಂಡದಿಂದ ಹೊರಬಿದ್ದು ಸಂಗೀತಾ ಅವರಿಗೆ ಹತ್ತಿರವಾದರು. ಆದರೆ ಎಂಟನೇ ವಾರದಲ್ಲಿ ಸಂಗೀತಾ, ವಿನಯ್ ತಂಡವನ್ನು ಸೇರಿಕೊಂಡಾಗ ತುಕಾಲಿ ಅವರಿಗೆ ಎದುರಾಳಿಯಾದರು. ‘ನಿಮ್ಮ ತಂಡದಿಂದ ಕಾರ್ತಿಕ್ ಮತ್ತು ತುಕಾಲಿ ತಲೆ ಬೋಳಿಸಿಕೊಳ್ಳಬೇಕು’ ಎಂದು ಸಂಗೀತಾ ಸವಾಲು ಹಾಕಿದಾಗ ಕೊಂಚವೂ ಯೋಚಿಸದೆ ತಲೆಯನ್ನು ಬೋಳಿಸಿಕೊಂಡು ಟಾಸ್ಕ್ ಮೇಲಿನ ತಮ್ಮ ಬದ್ಧತೆಯನ್ನು ಮೆರೆದರು.
ಸದಾ ನಗುತ್ತ, ನಗಿಸುತ್ತ ಇರುವ ತುಕಾಲಿ ಸಂತೋಷ್ ಅವರು ಮನೆಮಂದಿಯನ್ನೆಲ್ಲ ಭಾವುಕತೆಯಲ್ಲಿ ಮುಳುಗಿಸಿದ್ದೂ ಇದೆ. ಬಿಗ್ಬಾಸ್ ಮನೆಯ ಸದಸ್ಯರ ಕುಟುಂಬದವರು ಮನೆಗೆ ಭೇಟಿ ಕೊಡುವ ವಾರದಲ್ಲಿ ತುಕಾಲಿ ಅವರ ಹೆಂಡತಿಯ ಆಗಮನ ಮಾತ್ರ ತುಂಬ ವಿಚಿತ್ರವಾಗಿತ್ತು. ಎಲ್ಲರೂ ಕೈಯಲ್ಲಿ ತಿನಿಸಿನ ಡಬ್ಬ ಹಿಡಿದು ಬಂದರೆ ಅವರು ಬೆತ್ತ ಹಿಡಿದು ಬಂದಿದ್ದರು. ಎಲ್ಲ ಮನೆಯವರ ಮಂದಿ ಬರುವಾಗ, ‘ಬಿಗ್ಬಾಸ್ ದಯವಿಟ್ಟು ನನ್ ಹೆಂಡ್ತಿನ ಮಾತ್ರ ಇಲ್ಲಿಗೆ ಕರೆಸಬೇಡಿ’ ಎಂದು ತುಕಾಲಿ ಅವರು ಬೇಡಿಕೊಳ್ಳುತ್ತಿದ್ದರು. ಇದನ್ನೇ ಇಟ್ಟುಕೊಂಡು ತುಕಾಲಿ ಹೆಂಡತಿ ಮನೆಯನ್ನೆಲ್ಲ ಅಟ್ಟಾಡಿಸಿಕೊಂಡು ಹೊಡೆದಿದ್ದರು.
ಅವರನ್ನು ನೋಡಿ ಮನೆಯ ಸದಸ್ಯರೆಲ್ಲ ನಕ್ಕು ನಕ್ಕು ಸುಸ್ತಾಗಿದ್ದರು. ಆದರೆ ತುಕಾಲಿ ಅವರ ಹೆಂಡತಿ, ತುಕಾಲಿ ಅವರ ಒಳ್ಳೆಯ ಗುಣಗಳ ಬಗ್ಗೆ ಹೇಳುತ್ತ, ತಮ್ಮ ಕುಟುಂಬದ ಕಷ್ಟಕ್ಕೆ ಅವರು ಒದಗಿದ ರೀತಿ, ಕಷ್ಟದ ದಿನಗಳನ್ನು ನೆನಪಿಸಿಕೊಂಡಾಗ ಕ್ಷಣಕಾಲದ ಹಿಂದೆ ನಕ್ಕವರೇ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು.
ಬಿಗ್ಬಾಸ್ ಮನೆಯೊಳಗೆ ಉಳಿದ ಎಲ್ಲ ಸದಸ್ಯರಿಗಿಂತಲೂ ತುಂಬ ಭಿನ್ನವಾದ ವ್ಯಕ್ತಿತ್ವ ಹೊಂದಿರುವ ತುಕಾಲಿ ಸಂತೋಷ್, ತಂತ್ರಗಾರಿಕೆ ಮತ್ತು ಮನರಂಜನೆಯ ವಿಶಿಷ್ಟ ಮಿಶ್ರಣ. ಕ್ಯಾಪ್ಟನ್ ಆಗುವ ಕನಸು ನನಸಾಗುವುದಿಲ್ಲ ಎಂಬುದು ಖಚಿತವಾಗುತ್ತಿದ್ದ ಹಾಗೆಯೇ ನಡುರಾತ್ರಿ ಕ್ಯಾಪ್ಟನ್ ಕೋಣೆಯ ಒಳಹೊಕ್ಕು, ಹಾಸಿಗೆಯಲ್ಲಿ ಮಲಗಿ ಹೊರಳಾಡಿ, ಆಮೇಲೆ ಕ್ಷಮೆ ಕೇಳುವ ಮುಗ್ಧ ಕೂಡ ಹೌದು. ಹೀಗೆ ಹಲವು ಗುಣಗಳು ಸೇರಿ ರೂಪುಗೊಂಡಿರುವ ತುಕಾಲಿ ಸಂತೋಷ್ ಅವರು ಬಿಗ್ ಬಾಸ್ನ ಈ ಆವೃತ್ತಿಯ ಯಶಸ್ಸಿಗೆ ಕೊಟ್ಟಿರುವ ಕೊಡುಗೆ ಖಂಡಿತ ಗಮನಾರ್ಹವಾದದ್ದು. ಅವರು ಮಾಡಿದ ಕಾಮಿಡಿಯ ತುಣುಕುಗಳು, ಅವರ ತಂತ್ರಗಾರಿಕೆ, ಬೀನ್ಬ್ಯಾಗ್ ಕಥನಗಳು ನೆನಪಿಸಿಕೊಳ್ಳುವಂತಹದ್ದು.
ಎಪಿಸೋಡ್ಗಳಿಗಾಗಿ ಜಿಯೊ ಸಿನಿಮಾದ ಲೈವ್ ವೀಕ್ಷಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.