ಬೆಂಗಳೂರು: ಪ್ರಾಥಮಿಕ ಶಾಲೆಯಾದ ಬಿಗ್‌ಬಾಸ್ ಮನೆಯಲ್ಲಿ ಇಡೀ ವಾರ ಎಲ್ಲಾ ಸದಸ್ಯರು ಮಕ್ಕಳಾಗಿ ನಲಿದರು. ಕಳೆದ ವಾರಕ್ಕೆ ಹೋಲಿಸಿದರೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿದರೆ, ಯಾವುದೇ ಜಗಳಗಳಿಲ್ಲದೆ, ಅವಘಡಗಳು ನಡೆಯದೆ ಸುವ್ಯವಸ್ಥಿತವಾಗಿ ಕಳೆಯಿತು. ಇದೇ ರೀತಿ ಈ ವಾರ ಸುಖಾಂತ್ಯವಾಗಲಿದೆ ಎನ್ನುವ ಹೊತ್ತಿಗೆ ಬಿಗ್‌ಬಾಸ್ ಮನೆಯಲ್ಲಿ ಕೋಲಾಹಲ ಎದ್ದಿದೆ.
ರಾಗಿ ಮುದ್ದೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಗ್‌ಬಾಸ್ ಮನೆಯಲ್ಲಿ ಸದಸ್ಯರ ನಡುವೆ ಕೋಲಾಹಲ ಪ್ರಾರಂಭಗೊಂಡಿದೆ. ಪ್ರತಾಪ್ ಯಾರಿಗೆಲ್ಲ ಮುದ್ದೆ ಬೇಕು ಎಂದು ಮನೆಯ ಸದಸ್ಯರನ್ನು ಕೇಳಿದ್ದಾರೆ. ಇದಕ್ಕೆ, ಕಾರ್ತಿಕ್, ತಿಂತೀನಿ ಕಣೋ ಮಾಡೋ ಎಂದು ಪ್ರತಾಪ್‌ಗೆ ಪ್ರೋತ್ಸಾಹ ಕೊಟ್ಟಿದ್ದಾರೆ. ಪ್ರತಾಪ್ ಉತ್ಸಾಹದಿಂದಲೇ ಎಲ್ಲರಿಗೂ ರಾಗಿ ಮುದ್ದೆ ಮಾಡಿ ಬಡಿಸಿದ್ದಾರೆ. ಎಲ್ಲರೂ ಖುಷಿಯಿಂದಲೇ ತಿಂದಿದ್ದಾರೆ.
ಆದರೆ, ಮುದ್ದೆ ಮಾಡಿ ತಿಂದ ನಂತರ ಮನೆಯ ಗ್ಯಾಸ್ ನಿಂತುಹೋಗಿದೆ. ಇದಕ್ಕೆ ಮುದ್ದೆ ಮಾಡಿರೋ ಜವಾಬ್ದಾರಿ ನಾನು ಹೊತ್ಕೋತೀನಿ ಎಂದು ಪ್ರತಾಪ್ ಹೇಳಿದರೂ, ನಮ್ರತಾ ಮನೆಗೆ ಶಿಕ್ಷೆಯಾದ್ರೆ ನೀನೇನ್ ಮಾಡ್ತೀಯಾ ಎಂದು ಪ್ರಶ್ನಿಸಿದ್ದಾರೆ. ಅತ್ತ ವಿನಯ್ ಕೋಪದಿಂದ, ಈವಾಗ ಊಟ ಬರ್ಬೇಕು ಅಷ್ಟೆ. ರಾತ್ರಿ ಊಟ ಆಗ್ಲಿಲ್ಲ ಅಂದ್ರೆ ದೇವಾಣ್ರೆ ನಾನು ಸುಮ್ನಿರಲ್ಲ ಎಂದು ಆವಾಜ್ ಹಾಕಿದ್ದಾರೆ. ಇದರ ನಡುವೆ ಪ್ರತಾಪ್ ಕ್ಯಾಮೆರಾ ಎದುರಿಗೆ ಹೋಗಿ, ಬಿಗ್‌ಬಾಸ್ ದಯವಿಟ್ಟು ಗ್ಯಾಸ್ ಕೊಟ್ಬಿಡಿ ಬಿಗ್‌ಬಾಸ್ ಎಂದು ಕೇಳಿಕೊಳ್ಳುತ್ತಿದ್ದಾರೆ.
ಹಾಗಿದ್ದರೆ, ಬಿಗ್‌ಬಾಸ್ ಮನೆಯೊಳಗೆ ನಿಜವಾಗಿಯೂ ನಡೆದಿದ್ದು ಏನು, ರಾಗಿ ಮುದ್ದೆ ಮಾಡಿದ್ದೇ ಅಪರಾಧವಾಯಿತೇ ಅಥವಾ ಮುದ್ದೆ ಮಾಡುವ ಹಂತದಲ್ಲಿ ಏನಾದರೂ ಪ್ರಮಾದವಾಗಿದೆಯಾ, ಮನೆಮಂದಿ ಉಪವಾಸದಲ್ಲಿಯೇ ಮಲಗಬೇಕೇ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲು ಇಂದಿನ ಬಿಗ್‌ಬಾಸ್ ನೋಡಬೇಕಷ್ಟೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.