ಮುಂದಿನ ಭಾನುವಾರ(ಸೆ.29ರ) ಸಂಜೆ 6ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್‌ಬಾಸ್ 11ನೇ ಆವೃತ್ತಿ ಆರಂಭವಾಗಲಿದ್ದು, ಇದೇ ಮೊದಲ ಬಾರಿಗೆ ಬಿಗ್‌ಬಾಸ್ ಆರಂಭಕ್ಕೂ ಮುನ್ನವೇ ಸ್ಪರ್ಧಿಗಳನ್ನು ವಾಹಿನಿ ಘೋಷಣೆ ಮಾಡುತ್ತಿದೆ.
ಈ ಕುರಿತು ಸೋಮವಾರ(ಸೆ.23) ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಾಹಿನಿಯ ಬಿಜಿನೆಸ್ ಹೆಡ್ ಪ್ರಶಾಂತ್ ನಾಯಕ್, ‘ಬಿಗ್‌ಬಾಸ್ ಆವೃತ್ತಿ ಆರಂಭಕ್ಕೂ ಮುನ್ನವೇ ಸ್ಪರ್ಧಿಗಳನ್ನು ನಾವು ಘೋಷಣೆ ಮಾಡಲಿದ್ದೇವೆ. ಶನಿವಾರ(ಸೆ.28) ಸಂಜೆಯಿಂದ ಆರಂಭವಾಗುವ ‘ರಾಜ–ರಾಣಿ’ ಫಿನಾಲೆಯಲ್ಲಿ ಕೆಲ ಸ್ಪರ್ಧಿಗಳ ಹೆಸರುಗಳು ಘೋಷಣೆಯಾಗಲಿವೆ. ಇವರನ್ನು ಮತದಾನದ ಮುಖಾಂತರವೇ ಬಿಗ್‌ಬಾಸ್ ಮನೆ ಒಳಗೆ ಕಳುಹಿಸಲಾಗುವುದು. ಗ್ರ್ಯಾಂಡ್ ಓಪನಿಂಗ್ ಮೊದಲೇ ಕೆಲ ಸ್ಪರ್ಧಿಗಳ ವಿವರ ಪ್ರೇಕ್ಷಕರಿಗೆ ತಿಳಿಯಲಿವೆ’ ಎಂದರು.
ಬಿಗ್‌ಬಾಸ್‌ನಲ್ಲಿ ಈ ಬಾರಿ ಇರುವ ‘ಸ್ವರ್ಗ–ನರಕ’ ಪರಿಕಲ್ಪನೆ ಬಗ್ಗೆ ಮಾತನಾಡಿದ ಸುದೀಪ್, ‘ಈಗ ಹೇಗಿದ್ದರೂ ಎರಡು ತಂಡ ಮಾಡಿಕೊಂಡು ಕಿತ್ತಾಡುತ್ತಿದ್ದಾರೆ. ಬರೀ ಸ್ವರ್ಗವಿದ್ದರೆ ನೋಡುತ್ತೀರಾ? ಒಳ್ಳೆಯದು ಯಾವತ್ತೂ ಸುದ್ದಿಯಾಗಲ್ಲ. ಸ್ವರ್ಗ ಮತ್ತು ನರಕದ ಪರಿಕಲ್ಪನೆ ಸುಲಭವಿಲ್ಲ. ಈ ಹಿಂದೆ ಸ್ಪರ್ಧೆ ಆರಂಭವಾಗಿ ಒಂದು ವಾರದ ಬಳಿಕ ಈ ಸ್ವರ್ಗ, ನರಕದ ಗುಂಪು ಆಗುತ್ತಿತ್ತು. ಇದೀಗ ಮೊದಲೇ ಆಗುತ್ತಿದೆ. ಮನೆ ವಿನ್ಯಾಸವೂ ಸ್ವರ್ಗ, ನರಕದ ರೀತಿಯೇ ಇದೆ’ ಎಂದರು.
‘ಬಿಗ್‌ಬಾಸ್‌ನ ಹತ್ತು ಆವೃತ್ತಿ ಆಯಿತು. ಒಂದು ಬ್ರೇಕ್ ತೆಗೆದುಕೊಳ್ಳೋಣ ಎಂಬ ಯೋಚನೆ ಇದ್ದಿದ್ದು ಹೌದು. ಇದರಲ್ಲಿ ಯಾವುದೇ ಗಿಮಿಕ್ ಇರಲಿಲ್ಲ. ಬೇರೆಯವರನ್ನು ಈ ಸ್ಥಾನಕ್ಕೆ ನೋಡಿ ಎಂದಿದ್ದೆ. ನನ್ನ ಈ ನಿರ್ಧಾರದ ಹಿಂದೆ ಹಣದ ವಿಚಾರ ಇರಲಿಲ್ಲ’ ಎಂದು ಸ್ಪಷ್ಟನೆ ನೀಡಿದರು ಸುದೀಪ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.