ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಮೂರನೇ ವಾರ ಅಂತ್ಯಗೊಂಡಿದೆ. ಎಲ್ಲರ ಊಹೆಗಳನ್ನು ಮೀರಿ ಶಮಂತ್ ಸೇಫ್ ಆಗಿ ಮನೆಯಲ್ಲಿ ಮುಂದುವರಿದಿದ್ದು, ಗೀತಾ ಮನೆಯಿಂದ ಹೊರಬಂದಿದ್ದಾರೆ.
ಮೊದಲೆರಡು ವಾರ ಅಷ್ಟಾಗಿ ಗುರುತಿಸಿಕೊಳ್ಳದ ಗೀತಾ ಮೂರನೇ ವಾರ ಜೋಡಿ ಟಾಸ್ಕ್‌ನಲ್ಲಿ ಅತ್ಯಂತ ಗಮನ ಸೆಳೆದಿದ್ದರು. ಮಂಜು ಪಾವಗಡ ಜೊತೆ ಮೊಟ್ಟೆ ಟಾಸ್ಕ್ ಗೆದ್ದು, ಚಾರ್ಜಿಂಗ್ ಯಂತ್ರ ಪಡೆದಿದ್ದರು. ಬಳಿಕ, ಚಾರ್ಜಿಂಗ್ ಯಂತ್ರ ಹಿಂದಿರುಗಿಸಿ ಮನೆಯವರಿಗೆ ಬೆಡ್ ರೂಮ್ ಕೊಡಿಸಿದ್ದರು. ಆದರೆ, ವೀಕ್ಷಕ ಪ್ರಭುಗಳ ಲೆಕ್ಕಾಚಾರವೆ ಬೇರೆ ಆಗಿತ್ತು.
ಶಮಂತ್ ಸೇಫ್ ಆಗಿದ್ದೇ ಅಚ್ಚರಿ: ಸ್ವತಃ ಶಮಂತ್ ಸೇರಿ ಬಿಗ್ ಬಾಸ್ ಮನೆಯ ಬಹುತೇಕ ಮಂದಿ ಶಮಂತ್ ಈ ವಾರ ಮನೆಯಿಂದ ಹೊರಹೋಗುತ್ತಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಮಂಜು ತುಲಾಭಾರದ ವೇಳೆ ಶಮಂತ್‌ನನ್ನು ಎತ್ತಿ ಹಾಕಲು ದಿವ್ಯಾ ಸುರೇಶ್ ಮನಸ್ಸು ಮಾಡಿದ್ದರು. ಅಷ್ಟರಮಟ್ಟಿಗೆ, ಇಡೀ ಮನೆಯ ಸದಸ್ಯರು ಶಮಂತ್ ಹೊರ ಹೋಗುತ್ತಾನೆ ಎಂದು ನಿರೀಕ್ಷಿಸಿದ್ದರು. ಎರಡನೇ ವಾರ ಶಮಂತ್ ಕಿವಿಯಲ್ಲಿ ಮಾತಾಡಿದ ತಪ್ಪಿಗೆ ಬೆಡ್ ರೂಮ್ ಅಥವಾ ಶಮಂತ್ ನೇರ ನಾಮಿನೇಶನ್ ಆಯ್ಕೆಯನ್ನು ಸುದೀಪ್ ಮುಂದಿಟ್ಟಾಗ ತಂಡದ ಸದಸ್ಯರೆಲ್ಲ ಬೆಡ್ ರೂಮ್ ತ್ಯಾಗ ಮಾಡಿ ನಿದ್ರೆ ಇಲ್ಲದೆ ಪರದಾಡಿದ್ದರು. ಈ ಸಂದರ್ಭ, ಹೇಗೂ ನಾಮಿನೇಟ್ ಆಗುತ್ತಿದ್ದ ಶಮಂತ್ ಬೆಡ್ ರೂಮ್ ಬದಲಿಗೆ ಸ್ವತಃ ನಾಮಿನೇಟ್ ಆಗುವ ನಿರ್ಧಾರ ಕೈಗೊಳ್ಳಲಿಲ್ಲವೆಂಬ ಅಸಮಾಧಾನ ಮನೆಯ ಸದಸ್ಯರಲ್ಲಿತ್ತು.ಆದರೆ, ವೀಕ್ಷಕರ ಅಭಿಪ್ರಾಯವೇ ಬೇರೆ ಆಗಿತ್ತು.
ಭಾನುವಾರ,ಎಲಿಮಿನೇಶನ್ ಕೊನೆಯ ಹಂತದಲ್ಲಿ ಶಮಂತ್, ಗೀತಾ ಮತ್ತು ವಿಶ್ವನಾಥ್ ಉಳಿದಿದ್ದರು. ಈ ಸಂದರ್ಭವೂ ಎಲ್ಲರೂ ಶಮಂತ್ ಹೋಗುತ್ತಾನೆ ಎಂದರು. ಆದರೆ, ಕಿಚ್ಚ ಸುದೀಪ್ ಶಮಂತ್ ಸೇಫ್ ಆಗಿದ್ದಾರೆ ಎಂದು ಘೋಷಿಸುತ್ತಿದ್ದಂತೆ ಎಲ್ಲರ ಮುಖದಲ್ಲೂ ಅಚ್ಚರಿ. ಸ್ವತಃ ಶಮಂತ್‌ರಿಂದಲೂ ನಂಬಲಾಗಲಿಲ್ಲ. ಹೌದಾ ಸಾರ್? ಇದು ನಿಜವೇ? ಎಂದು ಪ್ರಶ್ನಿಸಿದರು. ಇದು ನನ್ನ ಅಭಿಪ್ರಾಯವಲ್ಲ. ವೀಕ್ಷಕರು ನಿಮ್ಮನ್ನು ಉಳಿಸಿದ್ದಾರೆ. ಇನ್ನುಮುಂದೆಯಾದರೂ ಬದಲಾಗುವಂತೆ ಸುದೀಪ್ ಸಲಹೆ ನೀಡಿದರು.
ಮೊದಲೆರಡು ವಾರ ಕ್ಯಾಪ್ಟನ್ ಆಗಿದ್ದ ಶಮಂತ್ ಮೂರನೇ ವಾರವು ಅಷ್ಟಾಗಿ ಟಾಸ್ಕ್‌ಗಳಲ್ಲಿ ಪರಿಣಾಮಕಾರಿಯಾಗಲಿಲ್ಲ ಮತ್ತು ಉದಾರತೆ ಪ್ರದರ್ಶಿಸಲಿಲ್ಲ. ಹಾಗಾಗಿ, ಎಲ್ಲರ ಕಣ್ಣು ಶಮಂತ್ ಮೇಲಿತ್ತು. ಆದರೆ, ಕ್ಯಾಪ್ಟನ್ ಜವಾಬ್ದಾರಿ ಬಿಟ್ಟು ಹೊರಬಂದ ಬಳಿಕ ಮನೆಯವರಿಗೆ ಬೆಡ್ ರೂಮ್ ತಪ್ಪಿಸಿದ ಪಾಪ ಪ್ರಜ್ಞೆ ಕಾಡುತ್ತಿತ್ತು. ಹಾಗಾಗಿ, ಕ್ರಿಯಾಶೀಲವಾಗಿ ಭಾಗವಹಿಸಲು ಆಗಲಿಲ್ಲ ಎಂದು ಸುದೀಪ್ ಎದುರು ಶಮಂತ್ ಹೇಳಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.