ಬೆಂಗಳೂರು: ಜೀವನದ ಯಾವುದೋ ಸನ್ನಿವೇಶದಲ್ಲಿ ಯಾರೋ ಮಾಡಿದ ಸಹಾಯ ನಮ್ಮ ಜೀವನದ ದಿಕ್ಕನ್ನೇ ಬದಲಿಸಿರುತ್ತದೆ. ಜೀವನದಲ್ಲಿ ಕಷ್ಟ ಮತ್ತು ಸಂಧಿಗ್ಧ ಸಂದರ್ಭದಲ್ಲಿದ್ದಾಗ ಜೊತೆಗಿದ್ದು, ಸಹಾಯ ಮಾಡಿದವ್ಯಕ್ತಿಯನ್ನು ಮತ್ತು ಆ ಘಟನೆಯನ್ನು ನೆನಪು ಮಾಡಿಕೊಂಡು ಮಾತನಾಡಲು ಬಿಗ್ ಬಾಸ್ ಸ್ಪರ್ಧಿಗಳಿಗೆ ಅವಕಾಶ ಮಾಡಿಕೊಟ್ಟಿದ್ದರು.
ಮನೆಯ ಕ್ಯಾಪ್ಟನ್ ಅರವಿಂದ್ ಅವರು ಶಂಕರ್ ಅಶ್ವತ್ಥ್ ಅವರಿಗೆ ಮೊದಲ ಅವಕಾಶ ಕೊಟ್ಟರು. ಈ ವೇಳೆ ಮಾತನಾಡಿದ ಹಿರಿಯ ನಟ ಶಂಕರ್ ಅಶ್ವತ್ಥ್ ಅವರು ತಮ್ಮ ತಂದೆ 370ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಕೆ.ಎಸ್. ಅಶ್ವತ್ಥ್ ಅವರು ತನ್ನ ಜೀವನವನ್ನು ಬದಲಿಸಿದ ರೀತಿ ಬಗ್ಗೆ ಹೇಳಿಕೊಂಡರು.
ನನಗೆ ಜೀವ ಕೊಟ್ಟವರು, ಜೀವನ ಕೊಟ್ಟವರು. ಮಾರ್ಗವನ್ನು ತೋರಿಸಿದವರು ನನ್ನ ತಂದೆ. ನಾನು ಹುಟ್ಟುವ ಸಂದರ್ಭದಲ್ಲಿ ನನ್ನ ತಂದೆ ತಾಯಿ ಬಹಳ ಬಡತನದಲ್ಲಿದ್ದರು. ನಾನು ಹುಟ್ಟುವುದೇ ಬೇಡವೆಂದು ತಾಯಿ ಗರ್ಭಪಾತಕ್ಕೆ ಯತ್ನಿಸಿದರಂತೆ. ಆಗಿದ್ದರೂ ನಾನು ಹುಟ್ಟಿದೆ. ಬೆಳೆದು ದೊಡ್ಡವನಾದ ಬಳಿಕ ಅನೇಕ ಒತ್ತಡಗಳಿಗೆ ಸಿಲುಕಿ ಜೀವ ಕಳೆದುಕೊಳ್ಳುವ ಹಂತಕ್ಕೆ ಹೋದಾಗ ನನ್ನನ್ನು ಕಾಪಾಡಿದ್ದು ನನ್ನಪ್ಪ. ಅವತ್ತಿನಿಂದ ನನ್ನಪ್ಪ ಹಾಕಿಕೊಟ್ಟ ಮಾರ್ಗದಲ್ಲೇ ನಡೆದಿದ್ದೇನೆ ಎಂದರು.
ಧಾರಾವಾಹಿ ಮುಹೂರ್ತದ ದಿನವೇ ತಂದೆಗೆಪಾರ್ಶ್ವವಾಯು: ನನ್ನ ತಂದೆ ಮತ್ತು ಲೀಲಾವತಿಯವರ ಕಾಂಬಿನೇಶನ್ನಿನಲ್ಲಿ ಒಂದು ಧಾರಾವಾಹಿ ಮಾಡಲು ಉದ್ದೇಶಿಸಿದ್ದೆ. ಬಲವಂತವಾಗಿ ತಂದೆಯನ್ನು ಒಪ್ಪಿಸಿದೆ. ಮುಹೂರ್ತದ ದಿನ ಮೊದಲ ಶಾಟ್ ತೆಗೆಯಲು ತಂದೆಯನ್ನು ಕರೆಯಲು ಹೋದಾಗ ಅವರ ಎಡಗೈ ಮತ್ತು ಎಡಗಾಲಿಗೆ ಪಾರ್ಶ್ವವಾಯು ಹೊಡೆದಿತ್ತು. ಬಲವಂತವಾಗಿ ಅವರನ್ನು ಕರೆದು ತಂದು ಮುಹೂರ್ತದ ಶಾಟ್ ತೆಗೆಸಿದೆವು. ಬಳಿಕ, ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಐಸಿಯೂಗೆ ಅಡ್ಮಿಟ್ ಮಾಡಬೇಕೆಂದು ಹೇಳಿದರು. ಈ ಸಂದರ್ಭ ನನ್ನ ತಂದೆ ಹೇಳಿದ ಮಾತು ನನಗೆ ಬಲ ಎಂದು ಶಂಕರ್ ಅಶ್ವತ್ಥ್ ಕಣ್ಣೀರು ಹಾಕಿದರು.
’ನನ್ನ ಮಗನ ಜೀವನಕ್ಕೆ ಕಲ್ಲಾಕಿಬಿಟ್ಟೆನೆ’: ಎಂಥೆಂಥವರಿಗೆ ಏನೇನೋ ಮಾಡಿದೆ ಕಣೋ. ನನ್ನ ಮಗನ ಭವಿಷ್ಯಕ್ಕೆ ನಾನೆ ಕಲ್ಲಾಕಿಬಿಟ್ಟೆ ಎಂದು ಗೊಳೋ ಎಂದು ಅತ್ತುಬಿಟ್ಟರು. ನಾನು ಸಾಯುತ್ತೀನಿ ಅಂತಾ ನನಗೆ ಭಯ ಇಲ್ಲ. ಆದರೆ, ನನ್ನ ಮಗನ ಭವಿಷ್ಯಕ್ಕೆ ನಾನು ಕಲ್ಲಾಕಿಬಿಟ್ಟೆನಲ್ಲ ಎಂದರು. ಆದರೆ, ನಾನು ಭಯಪಡಲಿಲ್ಲ. ಸಾವು ಎಲ್ಲರಿಗೂ ಬರುತ್ತೆ. ಆದರೆ, ನೀವು ಈ ರೀತಿ ನರಳಿ ಸಾಯಬಾರದು ಎಂದಿದ್ದೆ ಎಂದು ಶಂಕರ್ ಅಶ್ವತ್ಥ್ ಹೇಳಿದರು. ಅದಾದ ಕೆಲ ವಾರಗಳ ಬಳಿಕ ಚೇತರಿಸಿಕೊಂಡು ಅಶ್ವತ್ಥ್ ಅವರು ಧಾರಾವಾಹಿ ಮಾಡಿದರು. ಆದರೆ, ನನ್ನ ನತದೃಷ್ಟತನದಿಂದ ಸರಿಯಾಗಿ ಮಾಡಲಾಗಲಿಲ್ಲ. ಬಳಿಕ ಮೆಡಿಕಲ್ ಸ್ಟೋರ್ ಇಟ್ಟು ನಷ್ಟ ಮಾಡಿಕೊಂಡಾಗ ಇವನಿಗೆ ವ್ಯಾಪಾರ ಬರುವುದಿಲ್ಲ ಎಂದು ಎಲ್ಲರೂ ಅವಮಾನ ಮಾಡಿದರು. ಆದರೆ, ನನ್ನ ತಂದೆ ಒಂದು ಮಾತನ್ನೂ ಆಡಲಿಲ್ಲ. ಇವತ್ತಿಗೂ ನನಗೆ ಉತ್ತೇಜನ ಕೊಡುತ್ತಿರುವ ಶಕ್ತಿ ನನ್ನಪ್ಪ ಎಂದು ಶಂಕರ್ ಅಶ್ವತ್ಥ್ ಹೇಳಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.