ಬೆಂಗಳೂರು: ಕನ್ನಡದ ಬಿಗ್ ಬಾಸ್ ಮನೆಯಲ್ಲಿ 10ನೇ ದಿನವೂ ಗಲಾಟೆ ಮುಂದುವರಿದಿತ್ತು. ಕ್ವಾರಂಟೈನ್ ಅಥವಾ ವೈರಸ್ ಟಾಸ್ಕ್ ವೇಳೆ ಸ್ಪರ್ಧಿಗಳು ಪರಸ್ಪರ ಬೈದಾಟ, ಹೊಡೆಯುವ ಹಂತಕ್ಕೂ ಹೋಗಿದ್ದರು.
ಜುಟ್ಟಿಡಿದು ಹೊಡೆದ ವೈಷ್ಣವಿ: ವೈರಸ್ ಟಾಸ್ಕ್ ಎರಡನೇ ದಿನದಂದು ಮನುಷ್ಯರ ತಂಡವು ವೈರಸ್ ತಂಡಕ್ಕೆ ಲಸಿಕೆ ಹಾಕಬೇಕಿತ್ತು. ಈ ಸಂದರ್ಭ ಎರಡೂ ತಂಡಗಳು ಪೈಪೋಟಿಗೆ ಬಿದ್ದಿದ್ದವು. ಮನುಷ್ಯರ ತಂಡದ ಮಂಜು ಪಾವಗಡ ಅವರು ಸ್ವಲ್ಪ ಜೋರಾಗಿಯೇ ವೈರಸ್ ತಂಡದ ವೈಷ್ಣವಿ ಅವರನ್ನು ತಳ್ಳಿದರು. ಇದರಿಂದ ಸಿಟ್ಟಿಗೆದ್ದ ವೈಷ್ಣವಿ ಮಂಜು ಜುಟ್ಟಿಡಿದು ಕಪಾಳಕ್ಕೆ ಹೊಡೆದಿದ್ದಾರೆ. ಈ ಸಂದರ್ಭ ಬ್ರೋ ಗೌಡ ಅವರು ಪ್ರಶ್ನಿಸಿದ್ದಾರೆ. ಬಳಿಕ, ಬ್ರೋ ಗೌಡ ಹೊಡೆದನೆಂದು ಆರೋಪಿಸಿದ ವೈಷ್ಣವಿ ಮಾತಿನ ಚಕಮಕಿಗೆ ಇಳಿದರು. ಈ ಸಂದರ್ಭ ಮಧ್ಯಪ್ರವೇಶಿಸಿದ ಕ್ಯಾಪ್ಟನ್ ಮಂಜು ಅವರನ್ನು ಅವಾಚ್ಯ ಶಬ್ದದಿಂದ ವೈಷ್ಣವಿ ನಿಂದಿಸಿದರು.
ಬಳಿಕ, ಎರಡೂ ತಂಡಗಳಲ್ಲಿ ಆಟದ ನೈತಿಕತೆ ಮರೆತು ಆಡುತ್ತಿರುವ ಬಗ್ಗೆ ಚರ್ಚೆಯಾಯಿತು. ಅವರ ತಪ್ಪನ್ನು ಪ್ರಶ್ನಿಸಿದಾಗ ಉತ್ತರವೇ ಕೊಡಲಿಲ್ಲ. ಈಗ ನಾವೇಕೆ ಪ್ರತಿಕ್ರಿಯಿಸಬೇಕು ಎಂದು ಮನುಷ್ಯರ ತಂಡದಲ್ಲಿ ಮಾತುಗಳು ಕೇಳಿಬಂದವು. ಮನುಷ್ಯರ ತಂಡದಲ್ಲಿ ನಿಜಾಯಿತಿ ಇಲ್ಲ ಎಂದು ವೈರಸ್ ತಂಡದ ನಿಧಿ ಸುಬ್ಬಯ್ಯ ಮತ್ತಿತರರು ಕಿಡಿಕಾರಿದರು.
‘ಎಲ್ಲೆಲ್ಲೋ ಮುಟ್ಟುತ್ತಾನೆ ಮಂಜು’: ಟಾಸ್ಕ್ ನೆಪದಲ್ಲಿ ಮಂಜು ನನಗೆ ಎಲ್ಲೆಲ್ಲೋ ಮುಟ್ಟಿದ್ದಾನೆ ಎಂದು ವೈರಸ್ ತಂಡದ ನಟಿ ನಿಧಿ ಸುಬ್ಬಯ್ಯ ಆಕ್ರೋಶ ವ್ಯಕ್ತಪಡಿಸಿದರು. ಹಿಂದಿನಿಂದ ಬಂದು ಹಿಡಿದು ಹುಡುಗಿಯರನ್ನು ಎಲ್ಲೆಲ್ಲೋ ಟಚ್ ಮಾಡುತ್ತಿದ್ದಾನೆ. ನೀವು ಅವರ ಕಡೆಯ ಹುಡುಗಿಯರಿಗೆ ಹಾಗೆ ಮಾಡಿದ್ದೀರೇನು? ಇಲ್ಲ ತಾನೆ. ಅವನ ವರ್ತನೆ ಸರಿ ಇಲ್ಲ ಎಂದು ಅಲವತ್ತುಕೊಂಡರು. ಬಳಿಕ, ಬೇಕಂತಲೇ ಬ್ರೋ ಗೌಡ ಕಿರಿಕ್ ಮಾಡುತ್ತಿದ್ದಾನೆ ಎಂದು ಗದ್ಗದಿತರಾದರು.
ಇತ್ತ, ವೈರಸ್ ತಂಡದವರುಹೊಡೆದರು ಎಂದು ಮನುಷ್ಯರ ತಂಡದ ಗೀತಾ ಆರೋಪ ಮಾಡಿದರು. ನಿಧಿ ಸುಬ್ಬಯ್ಯ ಉಗುರು ಕತ್ತರಿಸಿ ಎಂದು ಚಂದ್ರಕಲಾ ಸಲಹೆ ನೀಡಿದರು. ಅಯ್ಯೋ ನನಗೆಉಗುರೇ ಇಲ್ಲ ಎಂದು ನಿಧಿ ಗೊಣಗಾಡಿದರು.
ಕಾಂಪ್ರಮೈಸ್: ಮನುಷ್ಯರ ಮತ್ತು ವೈರಸ್ ತಂಡದವರ ನಡುವೆ ಕಿತ್ತಾಟ, ಹೊಡೆದಾಟ, ಬೈಗುಳಗಳ ನಡುವೆ ಎರಡೂ ತಂಡಗಳ ನಾಯಕರು ಒಂದು ಒಪ್ಪಂದಕ್ಕೆ ಬಂದರು. ಟಾಸ್ಕ್‌ನಲ್ಲಿ ಪೈಪೋಟಿಗೆ ಬಿದ್ದಾಗ ಒಬ್ಬರನ್ನೊಬ್ಬರು ತಡೆಯಬಹುದು. ಆದರೆ, ಯಾರನ್ನೂ ಹಿಡಿದುಕೊಳ್ಳುವಂತಿಲ್ಲ. ಹೊಡೆಯುವಂತಿಲ್ಲ ಎಂಬ ಮಾತಿಗೆ ಎರಡೂ ತಂಡಗಳು ಒಪ್ಪಿಗೆ ಸೂಚಿಸಿದವು.
ಆಟದ ಸ್ಫೂರ್ತಿ ಮರೆತಿದ್ದಕ್ಕೆ ಟಾಸ್ಕ್ ರದ್ದು: ಎರಡೂ ತಂಡಗಳು ಒಪ್ಪಂದಕ್ಕೆ ಬಂದ ಬಳಿಕ ಮನುಷ್ಯರ ತಂಡ ಮೈಲುಗೈ ಸಾಧಿಸಿತು. ಮೊದಲಿಗೆ ವೈರಸ್ ತಂಡದ ಬಲಿಷ್ಠ ಆಟಗಾರ ರಾಜೀವ್ ಅವರಿಗೆ ಲಸಿಕೆ ಹಾಕಲು ಮುಂದಾದರು. ರಾಜೀವ್ ಡಂಬಲ್ಸ್ ತೂಕ ತಡೆಯಲಾರದೇ ಕೈಬಿಟ್ಟು ಹೊರ ನಡೆದರು. ಬಳಿಕ ನಾಯಕ ಪ್ರಶಾಂತ್ ಸಂಬರಗಿ, ನಿಧಿ ಸುಬ್ಬಯ್ಯ ಅವರನ್ನು ಲಸಿಕೆ ಹಾಕಲು ಕರೆಯಲಾಯಿತು. ಆದರೆ, ಈ ಇಬ್ಬರೂ ಲಸಿಕೆ ಉಸಾಬರಿಯೆ ಬೇಡ ಅಂತಾ ಮನುಷ್ಯರ ತಂಡ ಭಾರ ಹೊರಿಸುವ ಮೊದಲೇ ಕೈಚೆಲ್ಲಿದರು.
ಇದಾದ ಸ್ವಲ್ಪ ಹೊತ್ತಿನಲ್ಲೇ ಎಂಟ್ರಿ ಕೊಟ್ಟ ಬಿಗ್ ಬಾಸ್, ಆಟಗಾರರು ಆಟದ ಸ್ಫೂರ್ತಿ, ಗೆಲ್ಲಬೇಕೆಂಬ ಛಲ ಮರೆತಿರುವುದರಿಂದ ಟಾಸ್ಕ್ ರದ್ದು ಮಾಡುತ್ತಿರುವುದಾಗಿ ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.